ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ ನಾಲ್ಕು ಕಂಟೇನರ್‌ ದ್ರವೀಕೃತ ಆಮ್ಲಜನಕ ರಾಜ್ಯಕ್ಕೆ ಬರಲಿದೆ: ಶೆಟ್ಟರ್‌

ಜಿಲ್ಲೆಗಳಿಗೆ ಆಮ್ಲಜನಕ ಪೂರೈಕೆಗೆ ಗಮನ ಕೊಡಿ: ಅಧಿಕಾರಿಗಳಿಗೆ ಸೂಚನೆ
Last Updated 11 ಮೇ 2021, 16:34 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಜಿಲ್ಲೆಗಳಲ್ಲಿ ಆಮ್ಲಜನಕದ ಬೇಡಿಕೆಯ ಅನುಗುಣವಾಗಿ ಅದನ್ನು ಪೂರೈಸುವುದರ ಮೇಲೆ ಹೆಚ್ಚಿನ ಗಮನ ನೀಡುವ ಮೂಲಕ ಸಮರ್ಪಕ ಸರಬರಾಜು ಆಗುವಂತೆ ನೋಡಿಕೊಳ್ಳಬೇಕು ಎಂದು ಕೈಗಾರಿಕೆ ಸಚಿವ ಜಗದೀಶ್‌ ಶೆಟ್ಟರ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

’ರಾಜ್ಯಕ್ಕೆ ಮಂಗಳವಾರ 6 ಕಂಟೇನರ್‌ ಆಮ್ಲಜನಕ ಬಂದಿದೆ. ಮುಂದಿನ ದಿನಗಳಲ್ಲಿ ಇನ್ನೂ 4 ಕಂಟೇನರ್‌ ಆಮ್ಲಜನಕ ಸರಬರಾಜು ಆಗಲಿದೆ’ ಎಂದೂ ಅವರು ತಿಳಿಸಿದರು.

ರಾಜ್ಯದಲ್ಲಿ ಆಕ್ಸಿಜನ್ ಪೂರೈಕೆ ಮತ್ತು ಸರಬರಾಜು ಕುರಿತಂತೆ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ರಾಜ್ಯದಲ್ಲಿನ ಆಮ್ಲಜನಕ ಉತ್ಪಾದನೆ ಹಾಗೂ ಸರಬರಾಜಿನ ಕುರಿತ ಸಮಗ್ರ ಮಾಹಿತಿ ಪಡೆದುಕೊಂಡರು.

‘ರಾಜ್ಯಕ್ಕೆ ಇದುವರೆಗೆ ಸರಾಸರಿ 1,015 ಟನ್‌ನಷ್ಟು ಆಮ್ಲಜನಕ ಬಳಕೆ ಮಾಡಲಾಗಿದೆ. ರಾಜ್ಯಕ್ಕೆ ವಿವಿಧ ಮೂಲಗಳಿಂದ ಅಗತ್ಯವಿರುಷ್ಟು ಪ್ರಮಾಣದ ಆಮ್ಲಜನಕ ಪೂರೈಕೆ ಆಗುತ್ತಿದೆ. ಆದರೆ, ಅದೇ ರೀತಿಯಲ್ಲಿ ಬೇಡಿಕೆಯೂ ಹೆಚ್ಚಾಗುತ್ತಿದೆ. ಹೀಗಾಗಿ ಸರಬರಾಜನ್ನು ಕ್ರಮಬದ್ದಗೊಳಿಸಬೇಕು’ ಎಂದು ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

‘ರಾಜ್ಯದ ಜಿಲ್ಲೆಗಳಿಗೆ ಅವುಗಳ ಬೇಡಿಕೆಯ ಅನುಗುಣವಾಗಿ ಸರಬರಾಜು ಆಗುವುದನ್ನು ನೋಡಿಕೊಳ್ಳಬೇಕು 24 ಗಂಟೆ ಕೂಡಾಮಾಹಿತಿಯನ್ನು ತರಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳಬೇಕು. ಯಾವುದೇ ಗೊಂದಲ ಅಥವಾ ಸಮಸ್ಯೆಗೆ ಎಡೆ ಮಾಡಿಕೊಡಬಾರದು’ ಎಂದೂ ಸೂಚನೆ ನೀಡಿದರು.

ಸಮಾಲೋಚನೆ ಫಲಪ್ರದ: ‘ಕೇಂದ್ರ ಸಚಿವರಾದ ಪೀಯೂಷ್‌ ಗೋಯೆಲ್‌, ಪ್ರಲ್ಹಾದ ಜೋಷಿ ಮತ್ತು ಸದಾನಂದ ಗೌಡ ಅವರೊಂದಿಗೆ ನಡೆಸಿದ ನಿರಂತರ ಸಮಾಲೋಚನೆಯಿಂದ ಕೇಂದ್ರ ಸರ್ಕಾರ 6 ಕಂಟೇನರ್‌ಗಳಲ್ಲಿ 120 ಟನ್‌ ದ್ರವೀಕೃತ ಆಮ್ಲಜನಕ ಪೂರೈಸಿದೆ’ ಎಂದರು.

ಬಫರ್‌ ಸ್ಟೋರೇಜ್‌– ಕ್ರಮ ಕೈಗೊಳ್ಳಿ: ‘ರಾಜ್ಯದಲ್ಲಿ ಅನಿವಾರ್ಯ ಸಂದರ್ಭಗಳಲ್ಲಿ ಉಪಯೋಗಿಸಿಕೊಳ್ಳಲು ಅನುಕೂಲವಾಗುವಂತೆ ಬಫರ್‌ ಸ್ಟೋರೇಜ್‌ ಹೊಂದುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮಕೈಗೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.

‘ರಾಜ್ಯಕ್ಕೆ ಈಗ ಇನ್ನೂ ಹೆಚ್ಚಿನ ಸಿಲಿಂಡರ್‌ಗಳು ಹಾಗೂ ಆಮ್ಲಜನಕ ಕಾನ್ಸನ್‌ಟ್ರೇಟರ್‌ಗಳ ಅವಶ್ಯಕತೆ ಇದೆ. ಇದುವರೆಗೂ ಕೇಂದ್ರ ಸರ್ಕಾರದಿಂದ 320 ಸಿಲಿಂಡರ್‌ ಹಾಗೂ 400 ಆಮ್ಲಜನಕ ಕಾನ್ಸನ್‌ಟ್ರೇಟರ್‌ ನೀಡಿದ್ದಾರೆ. ನಾವು 7700 ಸಿಲಿಂಡರ್‌ ಹಾಗೂ 1000 ಆಮ್ಲಜನಕ ಕಾನ್ಸನ್‌ಟ್ರೇಟರ್‌ ಗೆ ಬೇಡಿಕೆ ಇಟ್ಟಿದ್ದು, ಕೇಂದ್ರ ಸರ್ಕಾರದ ಜೊತೆ ಈ ಬಗ್ಗೆ ಸಮಾಲೋಚನೆ ನಡೆಸಲಾಗುವುದು’ ಎಂದರು.

ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜ್‌ ಕುಮಾರ್ ಖತ್ರಿ, ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಆಖ್ತರ್‌, ಗಣಿ ಮತ್ತು ಎಂಎಸ್‌ಎಂಇ ಪ್ರಧಾನ ಕಾರ್ಯದರ್ಶಿ ಪಂಕಜ್‌ ಕುಮಾರ್‌ ಪಾಂಡೆ, ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಗುಂಜನ್ ಕೃಷ್ಣಾ, ಆಮ್ಲಜನಕ ಸರಬರಾಜು ಸಮಿತಿಯ ನೇತೃತ್ವ ವಹಿಸಿರುವ ಐಪಿಎಸ್ ಅಧಿಕಾರಿ ಪ್ರತಾಪ್ ರೆಡ್ಡಿ, ಕೆಐಎಡಿಬಿ ಸಿಇಒ ಶಿವಶಂಕರ್, ಡ್ರಗ್ಸ್ ಕಂಟ್ರೋಲರ್ ಅಮರೇಶ್ ತುಂಬರಗಿ, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ರೇವಣ್ಣ ಗೌಡ ಇದ್ದರು.

‘ಐಎನ್‌ಎಸ್‌ ತಬರ್‌’ ಹಡಗು ಹೊತ್ತು ತಂದ ಆಮ್ಲಜನಕದ ಸಿಲಿಂಡರ್‌ಗಳನ್ನು ಲಾರಿ ಮೂಲಕ ಸಾಗಿಸಲಾಯಿತು.
‘ಐಎನ್‌ಎಸ್‌ ತಬರ್‌’ ಹಡಗು ಹೊತ್ತು ತಂದ ಆಮ್ಲಜನಕದ ಸಿಲಿಂಡರ್‌ಗಳನ್ನು ಲಾರಿ ಮೂಲಕ ಸಾಗಿಸಲಾಯಿತು.

100 ಟನ್‌ ಆಮ್ಲಜನಕ ತಂದ ಮತ್ತೆರಡು ಹಡಗು
ಮಂಗಳೂರು:
ಸಮುದ್ರ ಸೇತು–2 ಯೋಜನೆಯಡಿ ಮಂಗಳವಾರ ನೌಕಾಪಡೆಯ ಎರಡು ಹಡಗುಗಳು ಇಲ್ಲಿನ ಎನ್‌ಎಂಪಿಟಿಗೆ ಬಂದಿವೆ. ತಲಾ 20 ಟನ್‌ ಸಾಮರ್ಥ್ಯದ 5 ಟ್ಯಾಂಕ್‌ಗಳಲ್ಲಿ 100 ಟನ್‌ ದ್ರವೀಕೃತ ಆಮ್ಲಜನಕವನ್ನು ಕುವೈತ್‌ನಿಂದ ಹೊತ್ತು ತಂದಿವೆ.

‘ಐಎನ್‌ಎಸ್‌ ತಬರ್‌’ ಹಡಗು 40 ಟನ್‌ ಆಮ್ಲಜನಕ, 30 ಟನ್ ಆಮ್ಲಜನಕದ ಸಿಲಿಂಡರ್‌ಗಳನ್ನು ತಂದಿದ್ದು, ‘ಐಎನ್‌ಎಸ್‌ ಕೊಚ್ಚಿ’ ಹಡಗು 60 ಟನ್‌ ಆಮ್ಲಜನಕ ಹಾಗೂ 40 ಟನ್‌ ಆಮ್ಲಜನಕ ಸಿಲಿಂಡರ್‌ಗಳನ್ನು ತಂದಿದೆ.

ವಾರದಲ್ಲಿ ನಾಲ್ಕು ಹಡಗುಗಳು ಎನ್‌ಎಂಪಿಟಿಗೆ ಬಂದಿದ್ದು, ಒಟ್ಟು 180 ಟನ್‌ ದ್ರವೀಕೃತ ಆಮ್ಲಜನಕ, ಸಿಲಿಂಡರ್‌ಗಳು, ಕಾನ್‌ಸ್ಟ್ರೇಟರ್‌ಗಳನ್ನು ತಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT