ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ರಾಜ್ಯಕ್ಕೆ ಅರುಣ್‌ಸಿಂಗ್‌: ಬಿಜೆಪಿ ಬಣಗಳ ಗುದ್ದಾಟಕ್ಕೆ ಬೀಳುತ್ತಾ ಬ್ರೇಕ್ ?

ಮೂರು ದಿನಗಳ ಭೇಟಿಗಾಗಿ ಅರುಣ್ ಸಿಂಗ್‌ ರಾಜ್ಯಕ್ಕೆ l ಪರ–ವಿರೋಧದ ಅಹವಾಲು ಆಲಿಕೆ
Last Updated 15 ಜೂನ್ 2021, 20:20 IST
ಅಕ್ಷರ ಗಾತ್ರ

ಬೆಂಗಳೂರು: ನಾಯಕತ್ವ ಬದಲಾವಣೆ, ಆಡಳಿತದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಮಗನ ಹಸ್ತಕ್ಷೇಪ, ಸರ್ಕಾರದ ಕಾರ್ಯವೈಖರಿ ಕುರಿತ ಅಸಮಾಧಾನಕ್ಕೆ ಸಂಬಂಧಿಸಿ ಬಿಜೆಪಿಯ ಎರಡು ಬಣಗಳ ಮಧ್ಯೆ ನಡೆದಿರುವ ಗುದ್ದಾಟದ ಬಗ್ಗೆ ಇಬ್ಬಣಗಳ ಅಹವಾಲು ಆಲಿಕೆಗೆ ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್‌ ರಾಜ್ಯಕ್ಕೆ ಬರಲಿದ್ದು, ಮುಂದೇನಾಗುವುದೆಂಬ ಕುತೂಹಲ ಆಡಳಿತ ಪಕ್ಷದ ಪಾಳೆಯದಲ್ಲಿ ಮನೆ ಮಾಡಿದೆ.

ಬುಧವಾರದಿಂದ (ಜೂ.16) ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಬೀಡು ಬಿಡಲಿರುವ ಅರುಣ್ ಸಿಂಗ್, ಸಚಿವರು, ಶಾಸಕರು ಮತ್ತು ಸಂಸದರ ಅಹವಾಲುಗಳನ್ನು ಆಲಿಸಿ, ವರಿಷ್ಠರಿಗೆ ಮಾಹಿತಿ ನೀಡಲು ನಿರ್ಧರಿಸಿದ್ದಾರೆ. ಈ ಮಧ್ಯೆ, ನಾಯಕತ್ವದ ಬದಲಾವಣೆಯ ಪರ ಮತ್ತು ವಿರುದ್ಧ ಇರುವವರೂ ದೂರುಗಳನ್ನು ಸಲ್ಲಿಸಲು ತಯಾರಿ ನಡೆಸಿದ್ದಾರೆ.

ಕಳೆದ ಎರಡು ತಿಂಗಳಿಂದ ಕೆಲವು ಬಿಜೆಪಿ ಶಾಸಕರು ಮತ್ತು ಸಚಿವರು ದೆಹಲಿಗೆ ಭೇಟಿ ನೀಡಿ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಅಹವಾಲು ಸಲ್ಲಿಸಲು ಪ್ರಯತ್ನಿಸಿದ್ದರು. ಯಾರಿಗೂ ವರಿಷ್ಠರ ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ‘ವರಿಷ್ಠರು ಬಯಸಿದರೆ ತಾವು ರಾಜೀನಾಮೆ ನೀಡಲು ಸಿದ್ಧ’ ಎಂದು ಹೇಳಿದ್ದು, ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಈ ಎಲ್ಲ ಬೆಳವಣಿಗೆಯಿಂದಾಗಿ ಅರುಣ್‌ಸಿಂಗ್ ಭೇಟಿ ನಿಗದಿಯಾಗಿದೆ.

‘ಅರುಣ್‌ಸಿಂಗ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪರ ಇದ್ದಾರೆ. ಆದ್ದರಿಂದ ಅವರ ಜತೆಗೆ ಯಾರಾದರೂ ಒಬ್ಬ ವೀಕ್ಷಕರನ್ನುಕಳಿಸಬೇಕು’ ಎಂದು ವಿರೋಧಿ ಬಣ ವರಿಷ್ಠರ ಮೇಲೆ ಒತ್ತಡ ಹೇರಿತ್ತು. ಅದನ್ನು ವರಿಷ್ಠರು ಒಪ್ಪಿಲ್ಲಎಂದು ಯಡಿಯೂರಪ್ಪ ಬಣದ ಮೂಲಗಳು ಹೇಳಿವೆ.

ನಾಯಕತ್ವ ಬದಲಿಸಬೇಕು ಎಂದು ಪಟ್ಟು ಹಿಡಿದಿರುವ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಅರವಿಂದ್‌ ಬೆಲ್ಲದ ಅವರ ಗುಂಪು ಅದಕ್ಕೆ ಪೂರಕವಾಗಿ ವಾದ ಮುಂದಿಡಲಿದೆ. ಯಾವುದೇ ಕಾರಣಕ್ಕೂ ನಾಯಕತ್ವ ಬದಲಿಸಬಾರದು ಎಂದು ಯಡಿಯೂರಪ್ಪ ಬೆಂಬಲಿಗರ ಗುಂಪು ಒತ್ತಡ ಹೇರಲಿದೆ. ಆದರೆ, ಪಕ್ಷದಲ್ಲಿ ಮೌನವಾಗಿರುವ ನಿಷ್ಠಾವಂತರ ಮಾತುಗಳಿಗೂ ಬೆಲೆ ಕೊಡಬೇಕು ಎಂದು ಮುಖ್ಯ ಸಚೇತಕ ವಿ.ಸುನಿಲ್‌ಕುಮಾರ್‌ ಮತ್ತು ಸಮಾನಮನಸ್ಕರು ತಮ್ಮ ವಿಚಾರಗಳನ್ನು ಹೇಳಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ.

ಕಾರ್ಯವೈಖರಿ ಬಗ್ಗೆ ಮಾಹಿತಿ: ಪ್ರತಿಯೊಬ್ಬ ಸಚಿವರ ಕಾರ್ಯ ವೈಖರಿ, ಆಡಳಿತ, ಸಾಧನೆಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಸಚಿವರ ಕ್ರಿಯಾಶೀಲತೆ ಜತೆಗೆ ಅವರು ಪಕ್ಷವನ್ನು ಬಲಪಡಿಸುವಲ್ಲಿ ಎಷ್ಟರ ಮಟ್ಟಿಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂಬ ಮಾಹಿತಿಯನ್ನೂ ಅರುಣ್ ಸಿಂಗ್‌ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಮತ್ತು ಸಚಿವರು, ಸಚಿವರು ಮತ್ತು ಶಾಸಕರು, ಸಚಿವರು ಮತ್ತು ಸಂಪುಟ ಸಹೋದ್ಯೋಗಿಗಳ ನಡುವೆ ಸಂಬಂಧ ಮತ್ತು ವಿಶ್ವಾಸಗಳ ಬಗ್ಗೆ ಮಾಹಿತಿ ಕಲೆ ಹಾಕುವುದರ ಜತೆಗೆ ಮುಖ್ಯಮಂತ್ರಿಯವರ ಬಗ್ಗೆಯೂ ಅಭಿಪ್ರಾಯ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಾಸಕರಿಗಾಗಿ ಒಂದು ದಿನ ಮೀಸಲು: ಎಲ್ಲ ಶಾಸಕರು, ಸಂಸದರು ಮತ್ತು ವಿಧಾನಪರಿಷತ್‌ ಸದಸ್ಯರಿಂದ ಅಹವಾಲು ಕೇಳಲು ಇದೇ 17 ರಂದು ಪೂರ್ತಿ ದಿನ ಮೀಸಲಿಟ್ಟಿದ್ದಾರೆ.

ರಾಜ್ಯದ ಮಾಹಿತಿ ಪಡೆದ ಮೋದಿ?:

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಬಿ.ಎಲ್‌.ಸಂತೋಷ್ ಅವರು ಮಂಗಳವಾರ ಸಭೆ ನಡೆಸಿದ್ದು, ಉತ್ತರಪ್ರದೇಶ ಬೆಳವಣಿಗೆಯ ಜತೆಗೆ, ಕರ್ನಾಟಕದ ಪಕ್ಷದ ಬೆಳವಣಿಗೆಯ ಬಗ್ಗೆಯೂ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.

ಬಲ ಪ್ರದರ್ಶನಕ್ಕೆ ಅವಕಾಶ ಇಲ್ಲ:

ಶಾಸಕರು ಗುಂಪಿನಲ್ಲಿ ಬಂದು ಬಲ ಪ್ರದರ್ಶನಕ್ಕೆ ಪ್ರಯತ್ನ ನಡೆಸಬಾರದು ಎಂದು ಅರುಣ್‌ಸಿಂಗ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ಕೆಲವು ಶಾಸಕರ ಗುಂಪಿನೊಂದಿಗೆ ಭೇಟಿ ಮಾಡಲು ಉದ್ದೇಶಿಸಿದ್ದರು, ಅದಕ್ಕೆ ಅವಕಾಶ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎನ್ನಲಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಕೂಡ ರೇಣುಕಾಚಾರ್ಯ ಮತ್ತು ಇತರರು ಯಾವುದೇ ಅಹವಾಲು ಸಲ್ಲಿಸಬಾರದು ಎಂದು ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ.

‘ನಾಯಕತ್ವದ ಬಗ್ಗೆ ಗೊಂದಲ ಇಲ್ಲ’:

‘ನಾಯಕತ್ವದ ಬಗ್ಗೆ ಯಾವುದೇ ಗೊಂದಲ ಇಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ. ಸಣ್ಣಪುಟ್ಟ ಗೊಂದಲಗಳನ್ನು ಅರುಣ್‌ಸಿಂಗ್ ಬಗೆಹರಿಸುತ್ತಾರೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ‘ಅರುಣ್‌ಸಿಂಗ್‌ ಅವರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ. ಯಾರೋ ಒಂದಿಬ್ಬರಿಗೆ ಬೇಸರ ಆಗಿರಬಹುದು. ಅವರನ್ನು ಮಾತನಾಡಿಸಿ ಸರಿಪಡಿಸಲಾಗುವುದು’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಅರುಣ್ ಸಿಂಗ್ ಸಭೆಗಳು:

ಜೂ.16: ಸಚಿವರ ಜತೆ ಸಭೆ, ಜಗನ್ನಾಥ ಭವನ, ಸಂಜೆ 5

ಜೂ.17: ಶಾಸಕರು, ಸಂಸದರು, ವಿಧಾನಪರಿಷತ್‌ ಸದಸ್ಯರ ಜತೆ ಭೇಟಿ, ಕುಮಾರಕೃಪಾ ಅತಿಥಿ ಗೃಹ, ಬೆಳಿಗ್ಗೆ 9 ರಿಂದ

ಜೂ.18: ಪದಾಧಿಕಾರಿಗಳ
ಸಭೆ, ಜಗನ್ನಾಥ ಭವನ,
ಬೆಳಿಗ್ಗೆ 9

l ಪಕ್ಷದ ಪ್ರಮುಖ ನಾಯಕರ ಸಭೆ(ಕೋರ್‌ ಕಮಿಟಿ), ಸಂಜೆ 5

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT