ಗುರುವಾರ , ಆಗಸ್ಟ್ 5, 2021
28 °C
ಶಾಸಕ ಅರವಿಂದ ಬೆಲ್ಲದ ಕರೆ ಕದ್ದಾಲಿಕೆ ಪ್ರಕರಣ l ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ ಎಸಿಪಿ

ಕಸ್ಟಡಿಯಲ್ಲೇ ಯುವರಾಜ್ ಮೊಬೈಲ್ ಬಳಕೆ?

ಸಂತೋಷ ಜಿಗಳಿಕೊಪ್ಪ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅವರಿಗೆ ಕರೆ ಮಾಡಿದ್ದ ಎನ್ನಲಾದ ಯುವರಾಜ್ ಅಲಿಯಾಸ್ ಸೇವಾಲಾಲ್ ಸ್ವಾಮೀಜಿ, ಪೊಲೀಸ್ ಕಸ್ಟಡಿಯಲ್ಲಿದ್ದಾಗ ಹೆಚ್ಚು ಬಾರಿ ಮೊಬೈಲ್ ಬಳಸಿ ಹಲವರಿಗೆ ಕರೆ ಮಾಡಿದ್ದ ಸಂಗತಿ ತನಿಖೆಯಿಂದ ಹೊರಬಿದ್ದಿರುವುದಾಗಿ ಗೊತ್ತಾಗಿದೆ. ಈ ಆಯಾಮದಲ್ಲೂ ಎಸಿಪಿ ನೇತೃತ್ವದ ತಂಡ ತನಿಖೆ ಮುಂದುವರಿಸಿದೆ.

‘ಯುವರಾಜ್ ಎಂಬಾತನಿಂದ ಜೈಲಿನಿಂದ ಎರಡು– ಮೂರು ಬಾರಿ ಕರೆಗಳು ಬಂದಿದ್ದವು. ಜೊತೆಗೆ, ಅಪರಿಚಿತರು ನನ್ನ ಮೊಬೈಲ್ ಕದ್ದಾಲಿಕೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ಅರವಿಂದ ಬೆಲ್ಲದ ಇತ್ತೀಚೆಗಷ್ಟೇ ದೂರು ನೀಡಿದ್ದಾರೆ. ಅದರ ವಿಚಾರಣೆ ಚುರುಕುಗೊಳಿಸಿರುವ ಕಬ್ಬನ್‌ ಪಾರ್ಕ್ ಉಪವಿಭಾಗ ಎಸಿಪಿ ನೇತೃತ್ವದ ತಂಡ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭಾನುವಾರ ಭೇಟಿ ನೀಡಿತು.

ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಮುಖಂಡರು ಪರಿಚಯಸ್ಥರೆಂದು ಹೇಳಿಕೊಂಡು ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ್ದ ಪ್ರಕರಣದಲ್ಲಿ ಯುವರಾಜ್‌ನನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದರು. ಸದ್ಯ ಆತ ನ್ಯಾಯಾಂಗ ಬಂಧನದಲ್ಲಿದ್ದು, ಕೇಂದ್ರ ಕಾರಾಗೃಹದ ವಾಸದಲ್ಲಿದ್ದಾನೆ.

ಅದೇ ಕಾರಣಕ್ಕೆ ಕಾರಾಗೃಹಕ್ಕೆ ತೆರಳಿದ್ದ ತಂಡ, ವಿಶೇಷ ಕೊಠಡಿಯಲ್ಲಿ ಯುವರಾಜ್‌ನನ್ನು ವಿಚಾರಣೆ ನಡೆಸಿತು. ಇದೇ ಸಂದರ್ಭದಲ್ಲಿ ಕಾರಾಗೃಹದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಕೊಠಡಿಯಿಂದ ಹೊರಗೆ ಕಳುಹಿಸಲಾಗಿತ್ತು.

‘ಎಸಿಪಿ ನೇತೃತ್ವದ ತಂಡವು ಯುವರಾಜ್‌ನನ್ನು ಒಂದೂವರೆ ಗಂಟೆಗಳವರೆಗೆ ವಿಚಾರಣೆ ನಡೆಸಿ ಹೇಳಿಕೆ ಪಡೆಯಿತು. ಪ್ರಕರಣಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ಕಲೆ ಹಾಕಿತು’ ಎಂದು ಮೂಲಗಳು ಹೇಳಿವೆ.

ಪ್ರಕರಣಕ್ಕೆ ತಿರುವು ಕೊಟ್ಟ ಹೇಳಿಕೆ:
ಅರವಿಂದ ಬೆಲ್ಲದ ಅವರಿಗೆ ಕರೆ ಮಾಡಿರುವ ಬಗ್ಗೆ ಯುವರಾಜ್ ನೇರವಾದ ಹೇಳಿಕೆ ನೀಡಿದ್ದು, ಅದು ಪ್ರಕರಣಕ್ಕೆ ಹೊಸ ತಿರುವು ನೀಡಿರುವುದಾಗಿ ಗೊತ್ತಾಗಿದೆ.

‘2020ರ ಡಿಸೆಂಬರ್‌ನಲ್ಲಿ ಯುವರಾಜ್‌ನನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು, ವಿಚಾರಣೆಗಾಗಿ ಹಲವು ಬಾರಿ ಕಸ್ಟಡಿಗೆ ಪಡೆದುಕೊಂಡಿದ್ದರು. ಹೈಗ್ರೌಂಡ್ಸ್ ಠಾಣೆ ಹಾಗೂ ವಿವಿಧ ಠಾಣೆಗಳಲ್ಲೂ ಯುವರಾಜ್ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಎಲ್ಲ ಪ್ರಕರಣದಲ್ಲೂ ಆತನನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದರು. ಅದೇ ಅವಧಿಯಲ್ಲಿ ಆತ ಮೊಬೈಲ್ ಬಳಸಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ’ ಎಂದು ಮೂಲಗಳು ಹೇಳಿವೆ.

‘ನನ್ನನ್ನು ಪೊಲೀಸರು ಬಂಧಿಸಿದ್ದಾರೆ. ಕಾಪಾಡಿ’ ಎಂದು ಕೋರಿ ಆರೋಪಿ ಯುವರಾಜ್, ಅರವಿಂದ ಬೆಲ್ಲದ ಅವರಿಗೆ ಕರೆ ಮಾಡಿದ್ದನೆಂಬ ಮಾಹಿತಿ ಇದೀಗ ಸಿಕ್ಕಿದೆ. ಬೆಲ್ಲದ ಮಾತ್ರವಲ್ಲದೇ ಹಲವು ಆಪ್ತರು ಹಾಗೂ ರಾಜಕಾರಣಿಗಳಿಗೂ ಯುವರಾಜ್ ಕರೆ ಮಾಡಿದ್ದಾನೆ. ಆ ಬಗ್ಗೆಯೂ ವಿಚಾರಣೆ ನಡೆಸಲಾಗುತ್ತಿದೆ’ ಎಂದೂ ಮೂಲಗಳು ತಿಳಿಸಿವೆ.

ಕಾರಾಗೃಹ ಸಿಬ್ಬಂದಿ ಮೇಲೂ ಅನುಮಾನ:
‘ಆರೋಪಿಗೆ ಕೇಂದ್ರ ಕಾರಾಗೃಹದ ಸಿಬ್ಬಂದಿಯೂ ಮೊಬೈಲ್ ಕೊಟ್ಟಿರುವ ಅನುಮಾನವಿದೆ. ಆದರೆ, ಈ ಆರೋಪವನ್ನು ಜೈಲಿನ ಅಧಿಕಾರಿಗಳು ತಳ್ಳಿಹಾಕಿದ್ದಾರೆ. ಜೈಲಿನಲ್ಲಿ ಜಾಮರ್ ಅಳವಡಿಸಲಾಗಿದ್ದು, ಪ್ರಿಸನ್ ಕಾಲ್ ಬಿಟ್ಟರೆ ಯಾವುದೇ ಮೊಬೈಲ್ ಬಳಸಲು ಆಗುವುದಿಲ್ಲವೆಂದು ಉತ್ತರಿಸಿದ್ದಾರೆ’ ಎಂಬುದಾಗಿಯೂ ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು