ಮಂಗಳವಾರ, ಸೆಪ್ಟೆಂಬರ್ 21, 2021
22 °C

ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ: ಶಾಸಕರ ಅಭಿಮಾನಿಗಳಿಂದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜಭವನದ ಒಳಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಸೇರುವ
ಸಚಿವರು ಒಬ್ಬೊಬ್ಬರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಹೊರಗೆ ಅವರ ಬೆಂಬಲಿಗರ ಸಂಭ್ರಮ ಮುಗಿಲು ಮುಟ್ಟಿತ್ತು. ಮತ್ತೊಂದೆಡೆ, ಸಚಿವ ಸ್ಥಾನ ಕೈತಪ್ಪಿದ ಶಾಸಕರ ಅಭಿಮಾನಿಗಳು, ಹಿತೈಷಿಗಳ ಆಕ್ರೋಶದ ಕಟ್ಟೆಯೂ ಒಡೆದಿತ್ತು.

ಈ ವಾತಾವರಣವನ್ನು ಮೊದಲೇ ಅರಿತಿದ್ದ ಪೊಲೀಸರು, ರಾಜಭವನದ ಪ್ರವೇಶದ್ವಾರದ ಬಳಿ ಭಾರಿ ಬಂದೋಬಸ್ತ್ ಏರ್ಪಡಿಸಿದ್ದರು. ಪಾಸ್‌ ಇದ್ದವರಿಗೆ ಮಾತ್ರ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗಿತ್ತು.

ಯಾವುದೇ ಪರಿಸ್ಥಿತಿ ನಿಭಾಯಿಸಲು ಸಿದ್ಧರಾಗಿ ಹಿರಿಯ ಪೊಲೀಸ್‌ ಅಧಿಕಾರಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ಕೂಡಾ ಸ್ಥಳಕ್ಕೆ ಭೇಟಿ ನೀಡಿದರು.

ರಾಜಭವನದ ಗಾಜಿನ ಮನೆಯಲ್ಲಿ ಬುಧವಾರ ಮಧ್ಯಾಹ್ನ 2.15ಕ್ಕೆ ನೂತನ ಸಚಿವರ ಪ್ರತಿಜ್ಞಾ ವಿಧಿ ನಿಗದಿಯಾಗಿತ್ತು. ಅದಾಗಲೇ ಸಂಪುಟ ಸೇರುವ ಭಾಗ್ಯ ಗಿಟ್ಟಿಸಿಕೊಂಡವರ ಪಟ್ಟಿ ಬಹಿರಂಗಗೊಂಡಿದ್ದರಿಂದ, ಮಧ್ಯಾಹ್ನ 12 ಗಂಟೆ
ಯಿಂದಲೇ ರಾಜಭವನದ ಸುತ್ತ ಅವರೆಲ್ಲರ ಬೆಂಬಲಿಗರು ಜಮಾಯಿಸಿ
ದ್ದರು.

ಶಾಸಕರ ಜೊತೆ ಅವರ ಕುಟುಂಬ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದುದರಿಂದ ರಾಜಭವನದ ಪ್ರವೇಶದ್ವಾರದ ಬಳಿ ದಟ್ಟಣೆ ಉಂಟಾಯಿತು.

ಅದೇ ವೇಳೆ, ತಮ್ಮ ನಾಯಕನಿಗೆ ಸಚಿವ ಸ್ಥಾನ ಖಚಿತವೆಂದು ನಂಬಿದ್ದ ಕೆಲವು ಶಾಸಕರ ಬೆಂಬಲಿಗರು, ಶುಭ ಕೋರುವ ಬ್ಯಾನರ್‌ಗಳ ಸಹಿತ ಅಲ್ಲಿಗೆ ಬಂದಿದ್ದರು. ಸಂಪುಟ ಸೇರುವವರ ಪಟ್ಟಿ ಅಧಿಕೃತವಾಗಿ ಬಿಡುಗಡೆ ಆಗುತ್ತಿದ್ದಂತೆ, ಸಚಿವ ಸ್ಥಾನ ವಂಚಿತರ ಬೆಂಬಲಿಗರು ಸರ್ಕಾರದ ವಿರುದ್ಧ ಆಕ್ರೋಶ
ವ್ಯಕ್ತಪಡಿಸಿದರು.

ಶಾಸಕರಾದ ರಾಜೂಗೌಡ, ರೇಣುಕಾಚಾರ್ಯ, ಅರವಿಂದ ಬೆಲ್ಲದ ಅವರ ಬೆಂಬಲಿಗರು, ತಮ್ಮ ನಾಯಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಘೋಷಣೆ ಕೂಗಿದರು.

‘ಝೀರೋ ಟ್ರಾಫಿಕ್‌’ನಲ್ಲಿ ದೌಡಾಯಿಸಿದ ಜೊಲ್ಲೆ!: ದೆಹಲಿಯಿಂದ ವಿಮಾನದಲ್ಲಿ ಬರುವುದು ವಿಳಂಬವಾಗಿದ್ದರಿಂದ ಶಶಿಕಲಾ ಜೊಲ್ಲೆ ಅವರು ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜಭವನದವರೆಗೂ ‘ಝೀರೋ ಟ್ರಾಫಿಕ್‌’ (ತಡೆರಹಿತ ಸಂಚಾರ) ಸೌಲಭ್ಯದಲ್ಲಿ ದೌಡಾಯಿಸಿ ಬಂದು ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಬುಧವಾರ ಮಧ್ಯಾಹ್ನ 2.15ರಿಂದ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ನಿಗದಿಯಾಗಿದ್ದು. ದೆಹಲಿಯಲ್ಲಿದ್ದ ಶಶಿಕಲಾ ಜೊಲ್ಲೆ, ಸಂಪುಟದಲ್ಲಿ ಸ್ಥಾನ ಖಾತರಿಯಾದ ಬಳಿಕ ವಿಮಾನದಲ್ಲಿ ಬೆಂಗಳೂರಿನತ್ತ ಹೊರಟಿದ್ದರು. ಮಧ್ಯಾಹ್ನ 1.30ಕ್ಕೆ ಬೆಂಗಳೂರು ತಲುಪಬೇಕಿದ್ದ ವಿಮಾನ ಅರ್ಧ ಗಂಟೆಗೂ ಹೆಚ್ಚು ತಡವಾಗಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು.

ತಾವು ಬರುವುದು ವಿಳಂಬವಾಗುತ್ತಿರುವ ಕುರಿತು ಶಶಿಕಲಾ ಜೊಲ್ಲೆ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸುದ್ದಿ ಮುಟ್ಟಿಸಿದ್ದರು. ತಕ್ಷಣವೇ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದ ಮುಖ್ಯಮಂತ್ರಿ, ಜೊಲ್ಲೆ ಅವರ ಸಂಚಾರಕ್ಕೆ ‘ಝೀರೋ ಟ್ರಾಫಿಕ್‌’ ವ್ಯವಸ್ಥೆ ಮಾಡುವಂತೆ ತಿಳಿಸಿದ್ದರು.

ದೆಹಲಿಯಿಂದ ಹೊರಟ ವಿಮಾನ ಬಂದಿಳಿಯುವಷ್ಟರಲ್ಲಿ ಪೊಲೀಸರು ಬೆಂಗಾವಲು ವಾಹನಗಳೊಂದಿಗೆ ಸಿದ್ದವಾಗಿದ್ದರು.

ಕೆಂಪೇಗೌಡ ವಿಮಾನ ನಿಲ್ದಾಣ ತಲುಪಿದ ಶಶಿಕಲಾ ಅವರನ್ನು ತಡೆರಹಿತ ಸಂಚಾರ ವ್ಯವಸ್ಥೆಯಡಿ ಕೆಲವೇ ನಿಮಿಷಗಳಲ್ಲಿ ರಾಜಭವನಕ್ಕೆ ಕರೆತರಲಾಯಿತು.

ವಾಹನ ಇಳಿದು ಓಡೋಡಿ ರಾಜಭವನದ ಗಾಜಿನಮನೆಗೆ ಹೋದ ಶಾಸಕಿ, ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಿದರು.

***
‘ಮುಖ್ಯಮಂತ್ರಿ ಮೋಸ ಮಾಡಿದ್ದಾರೆ’

ಪಕ್ಷಕ್ಕಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಸಚಿವ ಸ್ಥಾನ ಕೊಡುವುದಾಗಿ ಹೇಳಿ ಮುಖ್ಯ ಮಂತ್ರಿ ಮೋಸ ಮಾಡಿದ್ದಾರೆ. ಪಟ್ಟಿ ಸಿದ್ಧಪಡಿಸಿದ ಮುಖ್ಯಮಂತ್ರಿಯೇ ನಮ್ಮ ವಿರುದ್ಧವಾಗಿ ಕೆಲಸ ಮಾಡಿ ದ್ದಾರೆ. ನಮ್ಮ ವಿನಂತಿ ಕಡೆಗಣಿಸಿದ್ದಾರೆ. ಕಾರ್ಯಕರ್ತರ ಜತೆ ಚರ್ಚಿಸಿ ಮುಂದಿನ ನಿರ್ಣಯ
ಕೈಗೊಳ್ಳುತ್ತೇನೆ.

–ನೆಹರು ಓಲೇಕಾರ್, ಹಾವೇರಿ ಶಾಸಕ

***

‘ನಮ್ಮ ನಸೀಬು ಚೆನ್ನಾಗಿಲ್ಲ’

ನಮ್ಮಂತವರು ಲೆಕ್ಕಕ್ಕೇ ಇಲ್ಲ. ನಮಗಿಂತ ಕಿರಿಯರಿಗೆ, ನಾನೇ ಪಕ್ಷಕ್ಕೆ ಕರೆತಂದವರಿಗೆ ಮಂತ್ರಿ ಸ್ಥಾನ ನೀಡಲಾಗಿದೆ. ನಮ್ಮಲ್ಲಿ ಕೊರತೆ ಏನಿದೆ ಎಂಬುದನ್ನು ಹೈಕಮಾಂಡ್‌ ಬಳಿಯೇ ಕೇಳಬೇಕು. ಮೌನವಾಗಿ, ಪಕ್ಷಕ್ಕೆ ನಿಷ್ಠರಾಗಿ ಇದ್ದವರಿಗೆ ಅವಕಾಶ ಸಿಗಲ್ಲ. ಪಕ್ಷಕ್ಕೆ ದ್ರೋಹ ಮಾಡುವವರಿಗೆ, ಬೆನ್ನಿಗೆ ಚೂರಿ ಹಾಕುವವರಿಗೇ ಅವಕಾಶ ನೀಡಲಾಗುತ್ತಿದೆ. ನಮ್ಮ ನಸೀಬು ಚೆನ್ನಾಗಿಲ್ಲ, ದೇವರೇನು ಮಾಡುತ್ತಾನೆ. ಲಾಬಿ ಮಾಡುವುದಿಲ್ಲ, ‍ಪಕ್ಷದ ವಿರುದ್ಧ ನಡೆದುಕೊಳ್ಳುವುದಿಲ್ಲ. ಪಕ್ಷವೇ ಉಚ್ಛಾಟನೆ ಮಾಡಿದರೂ ಬಿಜೆಪಿಗೇ ಮತ ಹಾಕುತ್ತೇನೆ.

–ಸಿದ್ದು ಸವದಿ, ತೇರದಾಳ ಶಾಸಕ

***

‘ಮಂತ್ರಿ ಸ್ಥಾನಕ್ಕೆ ಭಿಕ್ಷೆ ಬೇಡುವುದಿಲ್ಲ’

ಭಿಕ್ಷೆ ಬೇಡಿ ಮಂತ್ರಿ ಸ್ಥಾನ ಪಡೆಯುವಂತ ಪರಿಸ್ಥಿತಿ ನನಗೆ ಬಂದಿಲ್ಲ. ಬಕೆಟ್ ಹಿಡಿದು ಸಚಿವ ಆಗುವ ಅವಶ್ಯಕತೆ ಇಲ್ಲ. ಸಚಿವರ ಪಟ್ಟಿಯಲ್ಲಿ ಹೆಸರು ಪದೇ ಪದೇ ಕೈತಪ್ಪುತ್ತಿದೆ. ಪಕ್ಷ ತಾಯಿ ಇದ್ದಂತೆ, ತಾಯಿಗೆ ದ್ರೋಹ ಮಾಡುವ ಪ್ರಶ್ನೆ ಇಲ್ಲ. ಮಾತನಾಡದೆ ಇರುವುದೇ ನನ್ನ ವೈಫಲ್ಯ ಇರಬಹುದು. ಯಡಿಯೂರಪ್ಪ ಅವರು ನನಗೆ ಸಚಿವ ಸ್ಥಾನ ಸಿಗಲಿಲ್ಲ ಎಂದು ಕಣ್ಣೀರು ಹಾಕಿದರು. ಅವರ ಕಣ್ಣಲ್ಲಿ ನೀರು ತರಿಸಿದ ಕೊರಗು ಸದಾ ನನ್ನನ್ನು ಕಾಡುತ್ತದೆ.  

– ರಾಜುಗೌಡ, ಸುರಪುರ ಶಾಸಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು