ಗುರುವಾರ , ಫೆಬ್ರವರಿ 9, 2023
30 °C
ಸಿ–ಡಾಕ್‌ನಿಂದ ಅಭಿವೃದ್ಧಿ: ಸಮಗ್ರ ಮಾಹಿತಿ ಪಡೆಯಲು ಅನುಕೂಲ

Bengaluru Tech Summit | ವಿದ್ಯುತ್‌ ಬಳಕೆ: ಬರಲಿದೆ ಸ್ಮಾರ್ಟ್‌ ಮೀಟರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಿದ್ಯುತ್‌ ಬಳಕೆ ಅಳೆಯುವ ಡಿಜಿಟಲ್‌ ಮೀಟರ್‌ ಈಗ ಮತ್ತಷ್ಟು ಸ್ಮಾರ್ಟ್‌ ಆಗಲಿದೆ.

ಕೇಂದ್ರ ಸರ್ಕಾರದ ಸೆಂಟರ್‌ ಫಾರ್‌ ಡೆವಲಪ್‌ಮೆಂಟ್ ಆಫ್‌ ಅಡ್ವಾನ್ಸ್‌ಡ್‌ ಕಂಪ್ಯೂಟಿಂಗ್‌(ಸಿ–ಡಾಕ್‌) ಈ ‘ಸ್ಮಾರ್ಟ್‌ ಎನರ್ಜಿ ಮೀಟರ್‌’ ಅನ್ನು ಅಭಿವೃದ್ಧಿಪಡಿಸಿದ್ದು, ಭಾರತ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಲ್‌) ತಯಾರಿಸಲಿದೆ.

ಈಗಿರುವ ಡಿಜಿಟಲ್‌ ಮೀಟರ್‌ ಸರ್ವರ್‌ ಜತೆ ಸಂಪರ್ಕ ಹೊಂದಿಲ್ಲ. ಆದರೆ, ಸ್ಮಾರ್ಟ್‌ ಮೀಟರ್‌ ನೇರವಾಗಿ ಸಂಬಂಧಪಟ್ಟ ವಿದ್ಯುತ್‌ ಸರಬರಾಜು ಕಂಪನಿಗಳ ಸರ್ವರ್‌ ಜತೆ ಸಂಪರ್ಕ ಹೊಂದಿರುತ್ತದೆ. ಇದರಿಂದ, ಸಮಗ್ರ ವಿವರಗಳು ಲಭ್ಯವಾಗಲಿವೆ.

ಈ ಮೀಟರ್‌ ಸಂಪೂರ್ಣ ಸುರಕ್ಷಿತವಾಗಿರಲಿದ್ದು, ವಿದ್ಯುತ್‌ ಕಳ್ಳತನ ತಡೆಗಟ್ಟಲು ಸಹ ಸಹಕಾರಿಯಾಗಲಿದೆ. ಮೀಟರ್‌ಗೆ ಯಾವುದೇ ರೀತಿ ಧಕ್ಕೆ ಮಾಡಿದರೆ ತಕ್ಷಣವೇ ಸರ್ವರ್‌ಗೆ ಸಂದೇಶ ತಲುಪಲಿದೆ. ಜತೆಗೆ, ಪ್ರತಿ ದಿನ ಯಾರು ಎಷ್ಟು ವಿದ್ಯುತ್‌ ಬಳಸುತ್ತಾರೆ ಎಂಬ ಮಾಹಿತಿಯೂ ಕ್ಷಣಾರ್ಧದಲ್ಲಿ ಗ್ರಾಹಕರಿಗೆ ಮತ್ತು ಎಸ್ಕಾಂಗಳಿಗೆ ಲಭ್ಯವಾಗಲಿದೆ. ಎಂದು ಸಿ–ಡಾಕ್‌ನ ಪ್ರೊಜೆಕ್ಟ್‌ ಅಸೋಸಿಯೇಟ್‌ ರೋಹಿತ್‌ ರೆಡ್ಡಿ ವಿವರಿಸಿದರು.

ಅತಿ ಕಡಿಮೆ ಮತ್ತು ಹೆಚ್ಚು ವೋಲ್ಟೇಜ್‌ ಬಗ್ಗೆಯೂ ಈ ಮೀಟರ್‌ ಗ್ರಾಹಕರಿಗೆ ಎಚ್ಚರಿಕೆ ನೀಡಲಿದೆ. ಬ್ಲೂಟೂಥ್‌ ಮೂಲಕ ಸಂಪರ್ಕ ಪಡೆಯುವ ಅವಕಾಶ ಕಲ್ಪಿಸಿರುವುದರಿಂದ ಮೊಬೈಲ್‌ನಲ್ಲೇ ವಿದ್ಯುತ್‌ ಬಳಕೆಯ ಮಾಹಿತಿ ಲಭ್ಯವಾಗಲಿದೆ. ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಈ ಮೀಟರ್‌ ಮತ್ತಷ್ಟು ಸುಧಾರಣೆ ಕಾಣಬಹುದು ಎಂದು ಮಾಹಿತಿ ನೀಡಿದರು.

ಸಿ–ಡಾಕ್‌ ದೇಶಿಯವಾಗಿ ಕೃಷಿ ಕ್ಷೇತ್ರ, ಸಮೀಕ್ಷೆಗಾಗಿ ಮತ್ತು ಬೇಹುಗಾರಿಕೆ ಅನುಕೂಲವಾಗಿ ಡ್ರೋನ್‌ಗಳನ್ನು ಸಹ ಅಭಿವೃದ್ಧಿಪಡಿಸಿದೆ.

ಕೃತಕ ಬುದ್ಧಿಮತ್ತೆಯ ರೋಬೊ
ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವನ್ನು ಬಳಸಿ ದೆಹಲಿಯ ಮ್ಯಾಜಿಕ್‌ಟ್ಯಾಪ್‌ ಕಂಪನಿ ವಿಶೇಷ ರೋಬೊ ಅನ್ನು ಅಭಿವೃದ್ಧಿಪಡಿಸಿದೆ. ವ್ಯಕ್ತಿಗಳ ಸ್ಥಳ ಮತ್ತು ಚಲನವನ್ನು ಗುರುತಿಸಿ ಹಿಂಬಾಲಿಸುವ ತಂತ್ರಜ್ಞಾನವನ್ನು ಇದು ಒಳಗೊಂಡಿದೆ. ಇದನ್ನು ಗಡಿ ಪ್ರದೇಶ ಹಾಗೂ ವಿವಿಧ ಸಂದರ್ಭಗಳಲ್ಲಿ ಗಸ್ತು ಕಾರ್ಯಕ್ಕೂ ನಿಯೋಜಿಸಬಹುದಾಗಿದೆ. ಆಸ್ಪತ್ರೆಯಲ್ಲೂ ರೋಗಿಯ ಬಳಿ ಔಷಧವನ್ನು ಕೊಂಡೊಯ್ಯಲು ಬಳಸಬಹುದಾಗಿದೆ. ಈ ರೋಬೊಗೆ ಸಾಧ್ಯವಾದಷ್ಟು ಮಾಹಿತಿ ನೀಡಿದಂತೆ ವಿವಿಧ ಕಾರ್ಯಗಳಿಗೆ ಬಳಸಲು ಸಾಧ್ಯವಿದೆ. ಛಾಯಾಚಿತ್ರಗಳನ್ನು ಸಹ ಇದನ್ನು ಬಳಸಬಹುದಾಗಿದೆ. ಈ ರೋಬೊ ಬೆಲೆ ₹6ಲಕ್ಷ’  ಎಂದು ಕಂಪನಿಯ ಶ್ರೀಧರ್‌ ತಿಳಿಸಿದರು.

ಪಾರ್ಶ್ವವಾಯು ರೋಗಿಗಳಿಗೆ ವಿಶೇಷ ಕುರ್ಚಿ
‘ಇಂಟರ್‌ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇನ್‌ಫರ್ಮೇಷನ್‌ ಟೆಕ್ನಾಲಜಿ– ಬೆಂಗಳೂರು’ (ಐಐಐಟಿ–ಬಿ) ವಿದ್ಯಾರ್ಥಿ ಜಗನ್‌, ಪಾರ್ಶ್ವವಾಯು ರೋಗಿಗಳಿಗೆ ತಂತ್ರಜ್ಞಾನ ಅಳವಡಿಸಿದ ವಿಶೇಷ ಕುರ್ಚಿಯನ್ನು ಅಭಿವೃದ್ಧಿಪಡಿಸಿರುವುದು ಗಮನಸೆಳೆಯಿತು.

ಪ್ರೊ. ಮಾಧವ್‌ರಾವ್‌ ಅವರ ಮಾರ್ಗದರ್ಶನದಲ್ಲಿ ಈ ಕುರ್ಚಿ ತಯಾರಿಸಲಾಗಿದೆ. ಈ ಕುರ್ಚಿಯು ಲ್ಯಾಪ್‌ಟಾಪ್‌ ಜತೆ ಸಂಪರ್ಕ ಹೊಂದಿರುತ್ತದೆ. ಇದರಿಂದ, ರೋಗಿಯ ವಿವರವಾದ ಮಾಹಿತಿಯನ್ನು ಮನೆಯಿಂದಲೇ ವೈದ್ಯರಿಗೆ ರವಾನಿಸಲು ಸಾಧ್ಯವಾಗಲಿದೆ. ಈ ಕುರ್ಚಿಯ ಕೆಳಭಾಗದಲ್ಲಿ ನಿಯಂತ್ರಿತ ಉಪಕರಣಗಳನ್ನು ಅಳವಡಿಸಲಾಗಿದ್ದು, ರೋಗಿಯ ವಿವರಗಳನ್ನು ಪಡೆಯಲು ಇದರಿಂದ
ಸಹಕಾರಿಯಾಗಲಿದೆ. ಈ ಕುರ್ಚಿ ತಯಾರಿಸಲು ಸದ್ಯ ₹80 ಸಾವಿರ ವೆಚ್ಚವಾಗಿದೆ. 

‘ನಿಮ್ಹಾನ್ಸ್‌ ಸಹಯೋಗದೊಂದಿಗೆ ಈ ಕುರ್ಚಿಯನ್ನು ಅಭಿವೃದ್ಧಿಪಡಿಸುವ ಸಂಶೋಧನೆ ಕಾರ್ಯವನ್ನು ಕೈಗೊಳ್ಳಲಾಗಿದೆ. ರೋಗಿಗಳ ಅಗತ್ಯತೆ ಬಗ್ಗೆ ನಿಮ್ಹಾನ್ಸ್‌ ನೀಡಿದ ಸಲಹೆಯಂತೆ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಈ ಕುರ್ಚಿಯ ಕ್ಲಿನಿಕಲ್‌ ಪ್ರಯೋಗವನ್ನು ಕೈಗೊಂಡು ಯಶಸ್ವಿಯಾದ ಬಳಿಕ ರೋಗಿಗಳ ಬಳಕೆಗೆ ನೀಡಲಾಗುವುದು’ ಎಂದು ಜಗನ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು