ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆಯ ಅಭಿವೃದ್ಧಿಗೆ ದುಡಿದಿದ್ದ ಭಟ್ಟಾರಕ ಶ್ರೀಗಳು: ದೇವೇಗೌಡ

Last Updated 23 ಮಾರ್ಚ್ 2023, 8:15 IST
ಅಕ್ಷರ ಗಾತ್ರ

ಹಾಸನ: ಶ್ರವಣಬೆಳಗೊಳ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ವಿಧಿವಶರಾಗಿರುವುದಕ್ಕೆ ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡರು ಸಂತಾಪ ವ್ಯಕ್ತಪಡಿಸಿದ್ದಾರೆ.


1970 ರಲ್ಲಿ ಶ್ರವಣಬೆಳಗೊಳ ಜೈನ ಮಠದ ಪೀಠವೇರಿದ್ದರು. ಅಲ್ಲಿಂದ ಇಲ್ಲಿಯವರೆಗೆ ಶ್ರೀಮಠದ ಏಳಿಗೆಗೆ ತಮ್ಮದೇ ಆದ ಅಮೂಲ್ಯ ಕೊಡುಗೆ ನೀಡಿದ್ದರು. ಇತಿಹಾಸ ತಜ್ಞ, ತತ್ವಜ್ಞಾನಿ, ಇತಿಹಾಸ, ಕನ್ನಡ, ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಶ್ರೀಗಳು, ಪ್ರಾಕೃತ ಭಾಷೆಯಲ್ಲೂ ಸ್ನಾತಕೋತ್ತರ ಪದವಿ ಪಡೆದು, ಈ ಭಾಷೆಯ ಅಭಿವೃದ್ಧಿಗೆ ಅಹರ್ನಿಶಿ ದುಡಿದಿದ್ದರು ಎಂದು ಸ್ಮರಿಸಿದ್ದಾರೆ.


ನೂರಾರು ಜೈನ ದೇವಾಲಯಗಳನ್ನು ಪುನರುಜ್ಜೀವನಗೊಳಿಸಿದ ಕಾಯಕಯೋಗಿ, ಶಿಕ್ಷಣಕ್ಕೆ ಆದ್ಯತೆ ನೀಡಿದ್ದ ಶ್ರೀಗಳು, ಪಾಲಿಟೆಕ್ನಿಕ್, ಎಂಜಿನಿಯರಿಂಗ್, ನರ್ಸಿಂಗ್, ಪ್ರಾಕೃತ ವಿವಿ ಸ್ಥಾಪನೆ ಮಾಡಿದ್ದರು. ಇವರ ನಿಧನದಿಂದ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದಿದ್ದಾರೆ.


ಜೈನಧರ್ಮದ ಪ್ರತಿಪಾದಕರಲ್ಲಿ ಪ್ರಮುಖರಾಗಿದ್ದ ಶ್ರೀಗಳು, 24 ತೀರ್ಥಂಕರರ ಸಂದೇಶಗಳನ್ನು ಜನಮಾನಸಕ್ಕೆ ತಲುಪಿಸುವಲ್ಲಿ ಶ್ರಮಿಸಿದ್ದರು. 12 ವರ್ಷ ವಾಹನ ಸಂಚಾರವನ್ನೇ ಮಾಡದೇ ಧವಳ ಮತ್ತು ಜಯಧವಳ ಆಗಮ ಗ್ರಂಥ ರಚನೆ ಮಾಡಿದ್ದು, ಇವರ ಕಾಯಕನಿಷ್ಠೆ, ಧರ್ಮಶ್ರದ್ಧೆಗೆ ಹಿಡಿದ ಕನ್ನಡಿ. 1981, 1993, 2006 ಹಾಗೂ 2018 ರ ಮಹಾಮಸ್ತಾಭಿಷೇಕವನ್ನು ಯಶಸ್ವಿಯಾಗಿ ನೆರವೇರಿಸುವ ಮೂಲಕ ಜಿಲ್ಲೆ, ರಾಜ್ಯ, ದೇಶ ಮಾತ್ರವಲ್ಲ ವಿಶ್ವದಲ್ಲೇ ಮೆಚ್ಚುಗೆ ಪಡೆದಿದ್ದರು ಎಂದು ಹೇಳಿದ್ದಾರೆ.


ಶ್ರವಣಬೆಳಗೊಳ ಮಠದ ಸರ್ವಾಂಗೀಣ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ್ದ ಶ್ರೀಗಳ ಆತ್ಮಕ್ಕೆ, ಅವರು ಅತಿಯಾಗಿ ನಂಬಿದ್ದ, ಆರಾಧಿಸುತ್ತಿದ್ದ ಭಗವಾನ್ ಬಾಹುಬಲಿ ಸ್ವಾಮಿ ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುವೆ ಎಂದಿದ್ದಾರೆ.

ಅತೀವ ನೋವು: ಶಂಭುನಾಥ ಸ್ವಾಮೀಜಿ
ಶ್ರೀಕ್ಷೇತ್ರ ಶ್ರವಣಬೆಳಗೊಳದ ಜೈನ ಮಠದ ಪೀಠಾಧ್ಯಕ್ಷ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ನಿಧನದ ಸುದ್ದಿ ಅತೀವ ನೋವು ತಂದಿದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಶಾಖಾಮಠದ ಶಂಭುನಾಥ ಸ್ವಾಮೀಜಿ ತಿಳಿಸಿದ್ದಾರೆ.

ಸಾಮಾಜಿಕವಾಗಿ ಅಪಾರ ಕೊಡುಗೆ ನೀಡಿರುವ ಶ್ರೀಗಳು, ಶ್ರವಣಬೆಳಗೊಳದಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕವನ್ನು ನಾಲ್ಕು ಬಾರಿ ಹಾಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಎರಡು ಬಾರಿ ಯಶಸ್ವಿಯಾಗಿ ನಡೆಸಿದ ಕೀರ್ತಿ ಹೊಂದಿದ್ದಾರೆ. ಪೀಠಾಧ್ಯಕ್ಷರಾದ ನಂತರ ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ, ‌ಬಹುವಿಧ ದಾಸೋಹಿಗಳಾಗಿ ಸಮಾಜ ಸುಧಾರಣೆಗೆಂದು ಟೊಂಕ ಕಟ್ಟಿ ದುಡಿಯುತ್ತಿದ್ದ ಶ್ರೀಗಳ ನಿಧನದಿಂದ ಶ್ರೀ ಕ್ಷೇತ್ರ ಮತ್ತು ಸಮಾಜ ಬಡವಾಗಿದೆ ಎಂದು ಹೇಳಿದ್ದಾರೆ.

ಚಾರುಕೀರ್ತಿ ಶ್ರೀಗಳು, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಪ್ರಸ್ತುತ ಜಗದ್ಗುರು ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರೊಂದಿಗೂ ಬಾಂಧವ್ಯ ಮುಂದುವರಿಸಿಕೊಂಡು ಬಂದಿದ್ದರು. ಹಾಸನ ಶಾಖಾ ಮಠದೂಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಅವರು, ಮಠದ ಸತ್ಕಾರ್ಯಗಳನ್ನು ಮುಕ್ತ ಕಂಠದಿಂದ ಶ್ಲಾಘಿಸುತ್ತಿದ್ದರು ಎಂದು ಸ್ಮರಿಸಿದ್ದಾರೆ.


ಪೀಠಾಧ್ಯಕ್ಷರಾಗಿ 50 ಸಂವತ್ಸರ ಪೂರೈಸಿ, ಸರಳತೆಯ ಸಾಕಾರ ಮೂರ್ತಿಯಾಗಿ ಅನನ್ಯ ಸಂತರ ನಡುವೆ ಅಪರೂಪದಂತಿದ್ದ ಪೂಜ್ಯರ ಅಗಲಿಕೆಯು ಅತೀವ ನೋವು ತಂದಿದೆ. ನಾಡು, ನುಡಿಗೆ ಅಪಾರ ನಷ್ಟವಾಗಿದೆ. ಅವರ ಅಪಾರ ಭಕ್ತಗಣಕ್ಕೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT