ಶನಿವಾರ, ಮೇ 28, 2022
31 °C

ಸಂಘ ಪರಿವಾರಕ್ಕೆ ದೇಗುಲ ಹಸ್ತಾಂತರಿಸಿದರೆ ಸರ್ಕಾರ ಸುಟ್ಟು ಭಸ್ಮವಾಗಲಿದೆ: ಡಿಕೆಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದ ಜನರ ಆಸ್ತಿಯಾಗಿರುವ ದೇವಾಲಯಗಳನ್ನು ಬಿಜೆಪಿ ಸರ್ಕಾರ, ತಮ್ಮ ಪಕ್ಷ ಹಾಗೂ ಸಂಘ ಪರಿವಾರದ ಕಾರ್ಯಕರ್ತರಿಗೆ ಹಂಚಲು ಮುಂದಾಗಿದ್ದು, ಇಂತಹ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಸರ್ಕಾರ ಸುಟ್ಟು ಭಸ್ಮವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ಇದು ಹಿಂದೂ ವಿರೋಧಿ ನೀತಿಯಾಗಿದ್ದು ರಾಜ್ಯದ ಜನರು ಹಾಗೂ ಆ ದೇವರು ಬಿಜೆಪಿಯನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದರು. 

‘ನಾವು ಕೂಡ ಹಿಂದೂಗಳಾಗಿದ್ದು, ಧರ್ಮ ಹಾಗೂ ಸಂಸ್ಕೃತಿಯಲ್ಲಿ ನಂಬಿಕೆ ಇಟ್ಟಿದ್ದೇವೆ. ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಒಂದೇ ಒಂದು  ಜನಪರ ಯೋಜನೆ ನೀಡಲಿಲ್ಲ. ಚುನಾವಣೆಯಲ್ಲಿ ಸೋಲುವ ಭಯದಿಂದ ಗೋಹತ್ಯೆ ಹಾಗೂ ಮತಾಂತರ ನಿಷೇಧ, ದೇವಾಲಯಗಳಿಗೆ ಸ್ವಾಯತ್ತತೆ ನೀಡುವ ಕಾನೂನು ತರುತ್ತಿದ್ದಾರೆ. ಚುನಾವಣೆ ಸೋಲನ್ನು ಮರೆಮಾಚಲು, ಜನರನ್ನು ಭಾವನಾತ್ಮಕವಾಗಿ ಹಿಡಿದಿಡಲು ಪ್ರಯತ್ನಿಸುತ್ತಿದ್ದು, ನಾವು ಇದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಹೇಳಿದರು.

‘ಇಂತಹ ಕ್ರಮಗಳಿಂದ ಜನ ಮತ ಹಾಕುತ್ತಾರೆ ಎಂಬ ಭ್ರಮೆಯಿಂದ ಮುಖ್ಯಮಂತ್ರಿ ಹೊರಬರಬೇಕು. ದೇವಾಲಯಗಳಲ್ಲಿ ಈಗಿರುವ ವ್ಯವಸ್ಥೆ ಮುಂದುವರಿಸಲು ಬಿಡಬೇಕು’ ಎಂದು ಆಗ್ರಹಿಸಿದ ಅವರು, ‘ದೇವರು, ದೇವಾಲಯಗಳನ್ನೇ ಮಾರಲು ಕ್ರೂರ ಕೃತ್ಯಕ್ಕೆ ಕೈ ಹಾಕಿರುವುದು ಸರಿಯಲ್ಲ. ಜನವರಿ 4ರಂದು ಸಭೆ ನಡೆಸಿ ಮುಂದಿನ ಹೋರಾಟ ನಡೆಸುವ ಬಗ್ಗೆ ತೀರ್ಮಾನ ಮಾಡು ತ್ತೇವೆ’ ಎಂದು ಅವರು ಹೇಳಿದರು.

ಭಕ್ತರು ಎಂದೆ ಸಂಘ-ಸಂಸ್ಥೆ ಅಲ್ಲ 

‘ದೇವಸ್ಥಾನಗಳನ್ನು ಭಕ್ತರಿಗೆ ನೀಡುವುದೆಂದರೆ ಯಾವುದೇ ಸಂಘ– ಸಂಸ್ಥೆಗಳಿಗೆ ಒಪ್ಪಿಸುತ್ತೇವೆ ಎಂಬ ಅರ್ಥವಲ್ಲ’ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸಪೂಜಾರಿ ಹೇಳಿದರು.

ದೇವಾಲಯಗಳನ್ನು ಸಂಘ ಪರಿವಾರದ ಸಂಸ್ಥೆಗಳಿಗೆ ನೀಡಲು ಹೊರಟಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಟೀಕೆಗೆ ಪ್ರತಿಕ್ರಿಯಿಸಿದ ಅವರು, ‘ಭಕ್ತರು ಎಂದರೆ ಅದು ಶಿವಕುಮಾರ್ ಆಗಿರಬಹುದು, ಆರ್‌ಎಸ್‌ಎಸ್, ಬಿಜೆಪಿಯೂ ಆಗಿರಬಹುದು. ಒಟ್ಟಿನಲ್ಲಿ ಸರ್ಕಾರದ ಹಿಡಿತದಿಂದ ತಪ್ಪಿಸಿ ಭಕ್ತರಿಗೆ ನೀಡಬೇಕು, ಅವರಿಂದಲೇ ನಿರ್ವಹಣೆ ಆಗಬೇಕು ಎಂಬುದು ನಮ್ಮ ಚಿಂತನೆ. ದೇವಾಲಯಗಳಲ್ಲಿ ಸಂಗ್ರಹವಾಗುವ ಹಣ ದೇವಾಲಯಗಳ ಅಭಿವೃದ್ಧಿಗೆ ಮತ್ತು ಭಕ್ತರ ಅನುಕೂಲಕ್ಕಾಗಿ ಬಳಸಲಾಗುವುದು’ ಎಂದು ವಿವರಿಸಿದರು.

‘ಹಿಂದೂ ದೇವಾಲಯಗಳ ನಿರ್ವಹಣೆಯನ್ನು ಭಕ್ತರ ಕೈಗೆ ನೀಡುವುದಕ್ಕೆ ಪೂರಕವಾಗಿ ವಿಶೇಷ ಕಾನೂನು ಜಾರಿಗೆ ತರುತ್ತೇವೆ’ ಎಂದೂ ಅವರು ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು