ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮೀಕ್ಷೆಯಲ್ಲಿ ಮೂರಂಕಿ ಮೀರದ ಬಿಜೆಪಿಯಿಂದ ರಕ್ತಪಾತ ಸೃಷ್ಟಿ: ಕುಮಾರಸ್ವಾಮಿ

Last Updated 2 ಆಗಸ್ಟ್ 2022, 12:14 IST
ಅಕ್ಷರ ಗಾತ್ರ

ಬೆಂಗಳೂರು: ಮುಂದಿನ ಚುನಾವಣೆಯಲ್ಲಿ ಕಣ್ಣೀರಿನ ಮೂಲಕವಾದರೂ ಇರುವ 30 ಸೀಟುಉಳಿಸಿಕೊಳ್ಳಲು ಜೆಡಿಎಸ್‌ ಹೆಣಗಾಡುತ್ತಿದೆ ಎಂಬ ಬಿಜೆಪಿ ಟೀಕೆಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕಎಚ್‌.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

30 ಸೀಟು ಉಳಿಸಿಕೊಳ್ಳಲು ನಾವು ಹೆಣಗುತ್ತಿದ್ದೇವೆ ಎನ್ನುತ್ತೀರಿ. ಅಧಿಕಾರಕ್ಕಾಗಿ ಇದೇ 30 ಸೀಟಿನ ಪಕ್ಷದ ಬಾಗಿಲಿಗೆ ಬಂದು ನಿಂತಿದ್ದನ್ನು ಮರೆತುಬಿಟ್ಟಿರಾ? ಇಡೀ ದೇಶದ ತುಂಬೆಲ್ಲ ʼಆಪರೇಷನ್‌ ಕಮಲʼದ ಗಬ್ಬುನಾತ ಹಬ್ಬಿದೆ. ಅಸಹ್ಯ ಎನಿಸುವುದಿಲ್ಲವೇ ನಿಮಗೆ? ಎಂದು ಅವರು ಟ್ವೀಟ್ ಮೂಲಕ ಕಿಡಿ ಕಾರಿದ್ದಾರೆ.

ಮುಂದಿನ ಚುನಾವಣೆಯ ಹವಾಮಾನ ಹೇಗಿರುತ್ತದೆ ಎಂಬುದು ನಿಮಗೂ ಚೆನ್ನಾಗಿ ಗೊತ್ತು. ಎಷ್ಟು ಸಮೀಕ್ಷೆ ಮಾಡಿಸಿದ್ದೀರಿ ಅನ್ನುವುದು ನನಗೂ ಗೊತ್ತು. ಮೂರಂಕಿ ಮೀರದ ನೀವು ವಿಕೃತಿ ಮೆರೆದು ರಕ್ತಪಾತ ಸೃಷ್ಟಿಸುತ್ತಿದ್ದೀರಿ. ಪ್ರತಿಕೂಲಕರ ವಾತಾವರಣ ಯಾರಿಗೆ ಸೃಷ್ಟಿಯಾಗುತ್ತದೋ ಕಾದು ನೋಡುವಿರಂತೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

#ವಿಕೃತಿಯೇ_ಬಿಜೆಪಿ_ಧರ್ಮ #ಭೀಭತ್ಸ_ಬಿಜೆಪಿ ಎಂದು ಹ್ಯಾಷ್‌ಟ್ಯಾಗ್ ಕೊಟ್ಟಿದ್ದಾರೆ.

ಬಿಜೆಪಿ ವಿಲಕ್ಷಣ, ವಿಕೃತ ಪಕ್ಷ. ಭೀಭತ್ಸ ಬಿಜೆಪಿ. ಅಪರೇಷನ್‌ ಕಮಲವನ್ನೇ ನೆಚ್ಚಿಕೊಂಡ ವಿನಾಶಕಾರಿ ಪಕ್ಷ.ಕಗ್ಗೊಲೆಗಳೇ ಅದರ ಕಸುಬು, ಬಡ ಯುವಕರ ರಕ್ತವೇ ಅದರ ಪಾಲಿನ ʼಅಧಿಕಾರಾಮೃತʼ. ಅದೆಷ್ಟು ಹೆತ್ತ ಕರುಳುಗಳು ಕಣ್ಣೀರಿಡುತ್ತಿವೆ. ಅದಕ್ಕೆ ಉತ್ತರ ಕೊಡುವ ನೈತಿಕತೆ ಇದೆಯಾ? ಆಮೇಲೆ ನನ್ನ ಕಣ್ಣೀರ ಬಗ್ಗೆ ಮಾತನಾಡಿ.

ನಾನು ಇನ್ನೊಬ್ಬರ ಕಣ್ಣೀರಿನ ಬಗ್ಗೆ, ಭಾವೋದ್ವೇಗದ ಕುರಿತು ಲಘುವಾಗಿ ಮಾತನಾಡಲಾರೆ. ಆದರೂ ವಿಕೃತಿ ಬಿಜೆಪಿಗೆ ನೆನಪು ಮಾಡಿಕೊಡಲು ಬಯಸುತ್ತೇನೆ. ಅಧಿಕಾರ ಹೋಗುತ್ತದೆ ಎಂದು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ʼನಲ್ಲಿ ವಿದಾಯ ಭಾಷಣ ಮಾಡುತ್ತಾ ವೇದಿಕೆಯ ಮೇಲೆಯೇ ಕಣ್ಣೀರಧಾರೆ ಹರಿಸಿದವರು ಯಾವ ಪಕ್ಷದವರು? ಪ್ರವಾಹಕ್ಕೆ ತುತ್ತಾಗಿ ಸತ್ತವರ ಬಗ್ಗೆ ಹನಿ ಕಂಬನಿ ಇಲ್ಲ, ಪಾತಕ ರಾಜಕೀಯಕ್ಕೆ ನಡುರಸ್ತೆಗಳಲ್ಲಿ ಕೊಲೆಯಾದ ಯುವಕರ ಬಗ್ಗೆ ಎಳ್ಳಷ್ಟು ಕರುಣೆ ಇಲ್ಲ. ಬಣ್ಣದ ಮಾತು, ಕೃತಕ ಸಾಂತ್ವನ!! ಆದರೂ, ಸಿನಿಮಾದಲ್ಲಿ ನಾಯಿ ಸತ್ತ ದೃಶ್ಯ ನೋಡಿ ಮಾಧ್ಯಮಗಳ ಮುಂದೆ ಗಳಗಳನೇ ಕಣ್ಣೀರಕೋಡಿ ಹರಿಸಿದ ಮಹಾಶಯರು ಯಾವ ಪಕ್ಷದ ಮುಖ್ಯಮಂತ್ರಿಗಳು? ಸ್ವಲ್ಪ ಹೇಳಿ? ಎಂದು ಪ್ರಶ್ನಿಸಿದ್ದಾರೆ.

ಹೌದು. ಅಳುವೇ ನಮ್ಮ ಸಹಜ ಧರ್ಮ. ಆದರೆ ನಿಮ್ಮಂತೆ ಇನ್ನೊಬ್ಬರನ್ನು ಅಳಿಸುವ ರಾವಣ ಸಂಸ್ಕೃತಿಯಲ್ಲ. ಬದುಕಿಗೆ ಬೆಂಕಿ ಇಡಲ್ಲ. ಮತ್ತೊಬ್ಬರ ಮಕ್ಕಳ ಸಾವಿನಿಂದ ಉನ್ಮಾದಗೊಂಡು ರಣಕೇಕೆ ಹಾಕುತ್ತಿಲ್ಲ.
ಹಿಂಸೆ, ಕಗ್ಗೊಲೆಯೇ ನಿಮ್ಮ ಧರ್ಮ, ಹೌದಲ್ಲವೇ? ಕೊಲೆಗಳನ್ನೇ ಸೋಪಾನ ಮಾಡಿಕೊಂಡು ʼಕಾಶಿ ಕಾರಿಡಾರುʼ ಮಾಡಿ ಮೆರೆದರೆ ಆ ಶಿವ ಮೆಚ್ಚಾನೆಯೇ?

ನಮ್ಮ #ಜನತಾ_ಜಲಧಾರೆ ನಿಮ್ಮನ್ನು ವಿಚಲಿತಗೊಳಿಸಿದೆ ಎನ್ನುವುದಕ್ಕೆ ನಿಮ್ಮ ಈ ವ್ಯರ್ಥ ಪ್ರಲಾಪವೇ ಸಾಕ್ಷಿ. ಇಡೀ ರಾಜ್ಯವೇ ಕಣ್ಣೀರಧಾರೆಯಲ್ಲಿ ಕೈತೊಳೆಯುತ್ತಿದೆ. ಮಾಧ್ಯಮಗಳಲ್ಲಿ ಕರ್ನಾಟಕವೇ ತೇಲುತ್ತಿರುವ ದೃಶ್ಯಗಳು ಕಣ್ಣಿಗೆ ಕಾಣುತ್ತಿಲ್ಲವೇ? ನೆರೆ ಸೃಷ್ಟಿಸಿದ ಭೀಭತ್ಸತೆ ಬಿಜೆಪಿಗೆ ಕಾಣುತ್ತಿಲ್ಲವೇಕೆ? ಸಾಯಿ ಲೇಔಟ್‌ ಪುನಾ ತೇಲುತ್ತಿದೆ. ಅರ್ಕಾವತಿ ಲೇಔಟ್‌ ಪಕ್ಕದ ಆರ್ತನಾದ ಕೇಳುತ್ತಿಲ್ಲವೆ ಬಿಜೆಪಿಗರೇ? ಬೆಂಗಳೂರಿನ ಬಹುತೇಕ ಪ್ರದೇಶಗಳು ಜಲಾವೃತವಾಗಿ ದ್ವೀಪಗಳಾಗಿವೆ. ಅಲ್ಲಿ ಹರಿಯುತ್ತಿರುವುದು ನಿಜಕ್ಕೂ ಜನರ ಕಣ್ಣೀರಧಾರೆ. ʼಕೊಮುಪೊರೆʼಯ ಅಮಲಿನಲ್ಲಿ ಮುಚ್ಚಿಹೋಗಿರುವ ನಿಮ್ಮ ಕಣ್ಣುಗಳಿಗೆ ಜನರ ಕಣ್ಣೀರು ಕಾಣುವುದಿಲ್ಲ, ಅಲ್ಲವೇ?
ಸರಣಿ ಕಗ್ಗೊಲೆಗಳು,ಆಚಾರ,ವಿಚಾರ,ವ್ಯಾಪಾರ,ಉಡುಗೆ-ತೊಡುಗೆ; ಅಷ್ಟೇ ಏಕೆ? ತಿನ್ನುವ ಅನ್ನದಲ್ಲೂ ನಿಮ್ಮ ವಿಕೃತಿ ಮೆರೆದಿದೆ. ತಂದೆ-ಮಕ್ಕಳ ಬಾಂಧವ್ಯದ ಬಗ್ಗೆ ವಿಕೃತಿ ತೋರುವ ನಿಮಗೆ, ಬಾಂಧವ್ಯಗಳ ಬಗ್ಗೆ ಜನರೇ ಪಾಠ ಕಲಿಸುವ ದಿನ ಹತ್ತಿರದಲ್ಲಿದೆ. ನಾವು ಮುಳುಗುವುದು, ತೇಲುವುದು ಆಮೇಲೆ. ನಿಮ್ಮನ್ನು ಜನ ಮುಳುಗಿಸಿಬಿಟ್ಟಾರು! ಎಚ್ಚರಿಕೆ!! ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಟ್ವಿಟರ್ ಖಾತೆಯಲ್ಲಿ ಟೀಕೆ

ತನ್ನ ಟ್ವಿಟರ್ ಖಾತೆಯಲ್ಲಿ ಜೆಡಿಎಸ್ ಜನತಾ ಜಲಧಾರೆ ಕಾರ್ಯಕ್ರಮ ಮತ್ತು ಕುಮಾರಸ್ವಾಮಿ ಕಣ್ಣೀರು ಹಾಕಿದ್ದನ್ನು ಟೀಕಿಸಿದ್ದ ಬಿಜೆಪಿ, ಒಂದೆಡೆ ಜನತಾ ಜಲಧಾರೆ ಮತ್ತೊಂದೆಡೆ ಕಣ್ಣೀರಧಾರೆ ಎಂದು ಮೂದಲಿಸಿತ್ತು.

ಒಟ್ಟಿನಲ್ಲಿ ನೀರೋ, ನೀರು! ಮುಂದಿನ ಚುನಾವಣೆಯ ನಂತರ ಜೆಡಿಎಸ್‌ ಪಕ್ಷ ಮುಳುಗಲಿದೆ ಎಂಬುದರ ಸೂಚನೆಯಿದು. ಜೆಡಿಎಸ್ ದೋಣಿಯಲ್ಲಿ ಅಪ್ಪ, ಮಕ್ಕಳು, ಮೊಮ್ಮಕ್ಕಳಷ್ಟೇ ದಡ ಸೇರಬಹುದು, ಮಿಕ್ಕವರು ಮುಳುಗುವುದು ಪಕ್ಕಾ! ಮುಂದಿನ ಚುನಾವಣೆಯಲ್ಲಿ ಕಣ್ಣೀರಿನ ಮೂಲಕವಾದರೂ ಇರುವ 30 ಉಳಿಸಿಕೊಳ್ಳಲು ಜೆಡಿಎಸ್‌ ಹೆಣಗಾಡುತ್ತಿದೆ. ಹವಾಮಾನ ಇಲಾಖೆ ನೀಡುವ ಮಳೆಯ ಲೆಕ್ಕವಾದರೂ ತಪ್ಪಬಹುದು ಆದರೆ ಚುನಾವಣೆ ಹತ್ತಿರದಲ್ಲಿರುವಾಗ ಜೆಡಿಎಸ್‌ ನಾಯಕರ ಕಣ್ಣೀರಿನ ಮಳೆಯ ಲೆಕ್ಕ ಎಂದಿಗೂ ತಪ್ಪದು ಎಂದು ಟೀಕಿಸಿತ್ತು.

ಇಲ್ಲದ ಕಣ್ಣೀರು ಒತ್ತರಿಸಿ ಬರುವುದು ಇಲ್ಲಿ ಸಾಮಾನ್ಯ! #ಜೆಡಿಎಸ್‌ಕಣ್ಣೀರೋತ್ಸವ ಎಂಬ ಹ್ಯಾಷ್‌ಟ್ಯಾಗ್ ಕೊಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT