ಸೋಮವಾರ, ಜೂನ್ 14, 2021
23 °C

ರಾಜ್ಯದ 97 ಜನರಲ್ಲಿ ಕಪ್ಪು ಶಿಲೀಂಧ್ರ ರೋಗ ಪತ್ತೆ, ನಾಲ್ವರ ಸಾವು: ಸಚಿವ ಸುಧಾಕರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರಾಜ್ಯದಲ್ಲಿ ಈವರೆಗೆ 97 ಜನರಿಗೆ ಕಪ್ಪು ಶಿಲೀಂಧ್ರ ರೋಗ ಬಂದಿದೆ. ಈ ರೋಗ ಕಾಣಿಸಿಕೊಂಡ ನಾಲ್ವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಆ ಪೈಕಿ, ಮೂವರು ಬೆಂಗಳೂರಿನವರು. ಒಬ್ಬರು ಕೋಲಾರ ಜಿಲ್ಲೆಯವರು’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.

ಆರೋಗ್ಯ ಸೌಧದಲ್ಲಿ ಕಪ್ಪು ಶಿಲೀಂಧ್ರ ರೋಗದ ಬಗ್ಗೆ ನೇತ್ರ ತಜ್ಞ ಭುಜಂಗ ಶೆಟ್ಟಿ ಮತ್ತು ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಬೆಂಗಳೂರು ಹೊರತುಪಡಿಸಿ ಮೈಸೂರು, ಶಿವಮೊಗ್ಗ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು, ಜಿಮ್ಸ್, ಕಿಮ್ಸ್, ಕೆಎಂಸಿ ಹಾಗೂ ವೆನ್‌ಲಾಕ್ ಆಸ್ಪತ್ರೆಗಳಲ್ಲಿ ಈ ರೋಗಕ್ಕೆ ಚಿಕಿತ್ಸೆ ನೀಡಲು ಸೂಚಿಸಲಾಗಿದೆ’ ಎಂದರು.

‘ಕಪ್ಪು ಶಿಲೀಂಧ್ರ ರೋಗ ಚಿಕಿತ್ಸೆಗಾಗಿ 40-60 ವಯಲ್ಸ್ ಬೇಕಿದೆ. ನಮಗೆ 1,050 ರಷ್ಟು ವಯಲ್ಸ್‌ ನೀಡಲು ಕೇಂದ್ರ ಮಂಜೂರಾತಿ ನೀಡಿದೆ. ಐಸೋಕೋನೋಸೋಲ್, ಫೋಸೋಕೋನೋಸೋಲ್ ಗೆ 20 ಸಾವಿರ ವಯಲ್ಸ್‌ಗೆ ನಾವು ಬೇಡಿಕೆ ಇಟ್ಟಿದ್ದೇವೆ. ಇನ್ನು ಮುಂದೆ ವೈದ್ಯೆರು ಹೇಳದೆ ಸ್ಟಿರಾಯಿಡ್ಸ್‌ಗಳನ್ನು ಯಾರೂ ನೀಡುವಂತಿಲ್ಲ. ಬಿಬಿಎಂಪಿ ಕೊಟ್ಟಿರುವ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಾಯುಕ್ತರ ಜೊತೆ ಮಾತನಾಡುತ್ತೇನೆ’ ಎಂದರು.

‘ಇದು ಅಧಿಸೂಚಿತ ರೋಗ ಆಗಿದ್ದು, ಇದಕ್ಕೆ ಖಾಸಗಿಯಾಗಿ ಚಿಕಿತ್ಸೆ ನೀಡುವಂತೆ ಇಲ್ಲ. ರೋಗ ಪತ್ತೆಯಾದರೆ ಸರ್ಕಾರದ ಗಮನಕ್ಕೆ ತರುವಂತೆ ಆದೇಶ ಹೊರಡಿಸಲಾಗಿದೆ. ಆರಂಭದಲ್ಲೇ ಮೂಗು, ಗಂಟಲು, ಕಿವಿಯನ್ನು ತೋರಿಸಿಕೊಳ್ಳಬೇಕು. ನಳ್ಳಿ ನೀರು ಬಳಸುವುದರಿಂದ ಕಪ್ಪು ಶಿಲೀಂಧ್ರ ಬರುತ್ತೆಯೇ ಎಂಬ ಅನುಮಾನ ನಮಗೂ ಇದೆ. ಈ ಬಗ್ಗೆ ಪತ್ತೆ ಹಚ್ಚುವ ಕಾರ್ಯವನ್ನು ಮಾಡುತ್ತಿದ್ದೇವೆ. ಇನ್ನು ಈ ಕಾಯಿಲೆ ಗಾಳಿಯಲ್ಲಿ ಹರಡುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ಕಪ್ಪು ಶಿಲೀಂಧ್ರ ಕಾಯಿಲೆಯನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರ ತಿಳಿಸಿದೆ. ಆದರೆ, ಈ ಬಗ್ಗೆ ಜನರು ಆತಂಕಪಡುವ ಅಗತ್ಯವಿಲ್ಲ. ಕೋವಿಡ್‌ನಷ್ಟು ಈ ರೋಗ ಭೀಕರವಲ್ಲ. ಕೇಂದ್ರ ಸರ್ಕಾರದಿಂದ ಈ ಕಾಯಿಲೆ ಬಗ್ಗೆ ಮಾರ್ಗಸೂಚಿನೀಡಲಾಗಿದೆ. ಕೆಲವು ರಾಜ್ಯಗಳಲ್ಲಿ ಪ್ರೋಟೋಕಾಲ್ ಜಾರಿಯಲ್ಲಿದೆ’ ಎಂದರು.

‘ಯಾರಿಗೆ ಮಿತಿಮೀರಿದ ಮಧುಮೇಹ ಇರುತ್ತದೆಯೋ ಅವರಿಗೆ ಕೊರೊನಾ ಬಂದು ಅತಿಯಾದ ಸ್ಟಿರಾಯಿಡ್ಸ್ ಬಳಸಿದರೆ ಈ ರೋಗ ಬರುವ ಸಾಧ್ಯತೆಗಳು ಹೆಚ್ಚು.  ಹೈ ಶುಗರ್ ಇರುವವರು ಸೋಂಕಿನಿಂದ ಗುಣಮುಖರಾದ ಬಳಿಕ ನಿಯಂತ್ರಣದಲ್ಲಿ ಇರಬೇಕು. ಕ್ಯಾನ್ಸರ್ ಇರುವವರು, ಅಂಗಾಂಗ ಕಸಿ ಮಾಡಿಸಿಕೊಂಡಿರುವವರಿಗೆ, ಎಚ್‌ಐವಿ ಸೋಂಕು ಇರುವವರಿಗೂ ಕಪ್ಪು ಶಿಲೀಂಧ್ರ ರೋಗ ಬರುವ ಸಾಧ್ಯತೆ ಇದೆ’ ಎಂದೂ ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು