ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಂ ನೌಕರರ ಸೇವೆಗೂ ಕುತ್ತು

ಹತ್ತು ದಿನ ಪೂರೈಸಿದ ಮುಷ್ಕರ * ಹಲವೆಡೆ ಶಾಸಕರ ಮನೆ ಎದುರು ಧರಣಿ
Last Updated 16 ಏಪ್ರಿಲ್ 2021, 15:50 IST
ಅಕ್ಷರ ಗಾತ್ರ

ಬೆಂಗಳೂರು: ವೇತನ ಪರಿಷ್ಕರಣೆಗೆ ಆಗ್ರಹಿಸಿ ನಾಲ್ಕು ಸಾರಿಗೆ ನಿಗಮಗಳ ನೌಕರರು ನಡೆಸುತ್ತಿರುವ ಮುಷ್ಕರ ಹತ್ತು ದಿನಗಳನ್ನು ಪೂರೈಸಿದೆ. ಸರ್ಕಾರವೂ ಮತ್ತಷ್ಟು ಕಠಿಣ ಕ್ರಮಗಳತ್ತ ಹೆಜ್ಜೆ ಇರಿಸಿದ್ದು, ಮುಷ್ಕರದಲ್ಲಿ ಭಾಗಿಯಾಗಿರುವ ಕಾಯಂ ನೌಕರರನ್ನೂ ಸೇವೆಯಿಂದ ವಜಾಗೊಳಿಸುವ ಪ್ರಕ್ರಿಯೆಯನ್ನು ಶುಕ್ರವಾರದಿಂದ ಆರಂಭಿಸಿದೆ.

ಬಿಎಂಟಿಸಿ 240 ಕಾಯಂ ನೌಕರರನ್ನು ಸೇವೆಯಿಂದ ವಜಾಗೊಳಿಸಿ ಶುಕ್ರವಾರ ಆದೇಶ ಹೊರಡಿಸಿದೆ. ಈ ನೌಕರರನ್ನು ಅಮಾನತುಗೊಳಿಸಿ ಸೋಮವಾರ ಆದೇಶ ಹೊರಡಿಸಲಾಗಿತ್ತು. ತರಬೇತಿ ಮತ್ತು ಪ್ರೊಬೇಷನರಿ ಅವಧಿಯಲ್ಲಿದ್ದ 580 ನೌಕರರನ್ನು ಈ ಹಿಂದೆಯೇ ವಜಾ ಮಾಡಲಾಗಿತ್ತು. ಬಿಎಂಟಿಸಿಯಿಂದ ವಜಾಗೊಂಡ ಕಾರ್ಮಿಕರ ಸಂಖ್ಯೆ 820ಕ್ಕೆ ಏರಿದೆ. 727 ಮಂದಿ ಅಮಾನತಿನಲ್ಲಿದ್ದಾರೆ.

ಕೆಎಸ್‌ಆರ್‌ಟಿಸಿಯಲ್ಲಿ ತರಬೇತಿಯಲ್ಲಿರುವ ಸುಮಾರು 500 ನೌಕರರಿಗೆ ಶನಿವಾರ ಬೆಳಿಗ್ಗೆ 11.30ರೊಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ಗಡುವು ವಿಧಿಸಿದೆ. ಶನಿವಾರವೂ ಕರ್ತವ್ಯಕ್ಕೆ ಹಾಜರಾಗದವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

‘ತರಬೇತಿಯಲ್ಲಿರುವ ನೌಕರರಿಗೆ ವಾರದ ಹಿಂದೆಯೇ ನೋಟಿಸ್‌ ಜಾರಿ ಮಾಡಲಾಗಿತ್ತು. ಸುಮಾರು 500 ನೌಕರರು ಕಾಲಾವಕಾಶ ಕೋರಿದ್ದರು. ಶನಿವಾರ ಬೆಳಿಗ್ಗೆಯವರೆಗೂ ಗಡುವು ವಿಸ್ತರಿಸಲಾಗಿದೆ. ಇನ್ನೂ ಹೆಚ್ಚಿನ ಕಾಲಾವಕಾಶ ನೀಡುವುದಿಲ್ಲ’ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ತಿಳಿಸಿದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಶುಕ್ರವಾರ ನಾಲ್ವರು ನೌಕರರನ್ನು ವಜಾ ಮಾಡಿದೆ. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಶುಕ್ರವಾರ 10 ನೌಕರರನ್ನು ವಜಾಗೊಳಿಸಲಾಗಿದೆ. ಕಾಯಂ ನೌಕರರಿಗೆ ಕೊನೆಯ ಹಂತದ ನೋಟಿಸ್‌ ಜಾರಿಗೆ ಎಲ್ಲ ನಿಗಮಗಳೂ ಸಿದ್ಧತೆ ಮಾಡಿಕೊಂಡಿವೆ.

177 ಎಫ್‌ಐಆರ್‌ ದಾಖಲು: ಸರ್ಕಾರಿ ಬಸ್‌ಗಳಿಗೆ ಹಾನಿ ಮಾಡಿದವರು ಹಾಗೂ ಮುಷ್ಕರದ ನಾಯಕತ್ವ ವಹಿಸಿರುವ ನೌಕರರ ವಿರುದ್ಧ ಎಫ್‌ಐಆರ್‌ ದಾಖಲಿಸುವ ಪ್ರಕ್ರಿಯೆ ಮುಂದುವರಿದಿದೆ. ಶುಕ್ರವಾರದವರೆಗೆ ಒಟ್ಟು 453 ಮಂದಿ ವಿರುದ್ಧ 177 ಎಫ್‌ಐಆರ್‌ ದಾಖಲಿಸಲಾಗಿದೆ.

80 ಬಸ್‌ಗಳಿಗೆ ಹಾನಿಯಾಗಿದ್ದು, ಈವರೆಗೆ 312 ಜನರ ವಿರುದ್ಧ 142 ಎಫ್‌ಐಆರ್‌ ದಾಖಲಿಸಲಾಗಿದೆ. ಅಗತ್ಯ ಸೇವೆಗಳಿಗೆ ಅಡ್ಡಿಪಡಿಸುತ್ತಿರುವ ಆರೋಪದ ಮೇಲೆ ‘ಎಸ್ಮಾ’ ಕಾಯ್ದೆಯಡಿ 141 ಮಂದಿ ವಿರುದ್ಧ 35 ಎಫ್‌ಐಆರ್‌ ದಾಖಲಿಸಲಾಗಿದೆ. ಈ ಪೈಕಿ 47 ಜನರನ್ನು ಬಂಧಿಸಲಾಗಿದೆ.

ಹೆಚ್ಚಿದ ಬಸ್‌ ಸಂಚಾರ

‘ಗುರುವಾರಕ್ಕೆ ಹೋಲಿಸಿದರೆ ಶುಕ್ರವಾರ ಸಂಚಾರ ನಡೆಸಿರುವ ಬಸ್‌ಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ರಾತ್ರಿ 8 ಗಂಟೆಯವರೆಗೆ ನಿಗದಿಯಾಗಿದ್ದ 16,700 ಬಸ್‌ಗಳ ಪೈಕಿ 5,547 ಬಸ್‌ಗಳು ಸಂಚಾರ ನಡೆಸಿವೆ’ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ಕಾರ್ಯಾಚರಣೆ ನಡೆಸಿದ ಬಸ್‌ಗಳ ವಿವರ (ರಾತ್ರಿ 8ರವರೆಗೆ)

ಕೆಎಸ್‌ಆರ್‌ಟಿಸಿ– 2,567

ಬಿಎಂಟಿಸಿ– 873

ಎನ್‌ಇಕೆಆರ್‌ಟಿಸಿ– 1,142

ಎನ್‌ಡಬ್ಲ್ಯುಕೆಆರ್‌ಟಿಸಿ– 965

ಒಟ್ಟು– 5,547

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT