ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷ್ಕರಣೆಯಾಗದ ದರ: ಸಂಕಷ್ಟದಲ್ಲಿ ಪುಸ್ತಕೋದ್ಯಮ

Last Updated 24 ಡಿಸೆಂಬರ್ 2022, 22:15 IST
ಅಕ್ಷರ ಗಾತ್ರ

ಬೆಂಗಳೂರು: ಸಾರ್ವಜನಿಕ ಗ್ರಂಥಾಲಯ ಇಲಾಖೆ ಖರೀದಿ ಮಾಡುವ ಪುಸ್ತಕಗಳ ಪುಟದ ದರವನ್ನು ಐದು ವರ್ಷಗಳಿಂದ ‍ಪರಿಷ್ಕರಿಸದ ಸರ್ಕಾರ,ಏಕಗವಾಕ್ಷಿ ಯೋಜನೆಯಡಿ ಖರೀದಿಸಲ್ಪಟ್ಟ 2019ನೇ ಸಾಲಿನ ಪುಸ್ತಕಗಳ ಪೂರ್ಣ ಹಣವನ್ನು ಪಾವತಿಸಿಲ್ಲ. ಇದರಿಂದಾಗಿ ಪುಸ್ತಕೋದ್ಯಮಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಾಗದ ಹಾಗೂ ಮುದ್ರಣದ ದರ ಏರಿಕೆಯ ಕಾರಣ ಪ್ರಕಾಶಕರು, ಗ್ರಂಥಾಲಯ ಇಲಾಖೆ ಖರೀದಿಸುವ ಪುಸ್ತಕಗಳ ಪುಟದ ಬೆಲೆ ಪರಿಷ್ಕರಿಸುವಂತೆ ಸರ್ಕಾರಕ್ಕೆ ಆಗ್ರಹಿಸುತ್ತಾ ಬಂದಿದ್ದಾರೆ. ಸದ್ಯ ಪುಟವೊಂದಕ್ಕೆ 70 ಪೈಸೆಯಿದ್ದು, 30 ಪೈಸೆ ಹೆಚ್ಚಿಸಬೇಕು ಎನ್ನುವುದು ಪ್ರಕಾಶಕರ ಒತ್ತಾಯ. ಆಗ ಪುಟವೊಂದಕ್ಕೆ ₹ 1 ನಿಗದಿಯಾಗಲಿದೆ. ಆದರೆ, ಸರ್ಕಾರವು ಈ ಪ್ರಸ್ತಾವವನ್ನು ತಿರಸ್ಕರಿಸಿದೆ. ಇನ್ನೊಂದೆಡೆಏಕಗವಾಕ್ಷಿ ಯೋಜನೆಯಡಿ 2019ನೇ ಸಾಲಿನ ಪುಸ್ತಕ ಖರೀದಿಗೆ ಸಂಬಂಧಿಸಿದಂತೆ ಗ್ರಂಥಾಲಯ ಇಲಾಖೆಯು ₹ 8.40 ಕೋಟಿ ಬಾಕಿ ಉಳಿಸಿಕೊಂಡಿದೆ. ಇದು ಪ್ರಕಾಶಕರ ಅಸಮಾಧಾನಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಸುಮಾರು 500 ಪ್ರಕಾಶನ ಸಂಸ್ಥೆಗಳಿವೆ. ಕೆಲವು ಲೇಖಕರು ಕೂಡ ಪ್ರಕಾಶನ ಕಾರ್ಯದಲ್ಲಿ ನಿರತರಾಗಿದ್ದಾರೆ. ಪ್ರತಿ ವರ್ಷ ಸುಮಾರು 8 ಸಾವಿರ ಪುಸ್ತಕಗಳು ಪ್ರಕಟವಾಗುತ್ತಿವೆ. ಬಹುತೇಕ ಪ್ರಕಾಶಕರು ಗ್ರಂಥಾಲಯ ಇಲಾಖೆಯ ಸಗಟು ಖರೀದಿಯನ್ನೇ ಅವಲಂಬಿಸಿದ್ದಾರೆ. ‌ಏಕಗವಾಕ್ಷಿ ಯೋಜನೆಯಡಿ ಆಯ್ಕೆಯಾದ ಪ್ರತಿ ಶೀರ್ಷಿಕೆಯ 300 ಪ್ರತಿಗಳನ್ನು ಇಲಾಖೆಯು ಖರೀದಿಸಲಿದೆ. ಇದಕ್ಕಾಗಿ ಪ್ರತಿವರ್ಷ ₹ 15 ಕೋಟಿ ವೆಚ್ಚ ಮಾಡಲಾಗುತ್ತಿದೆ. ಸರ್ಕಾರವು 2017ರಲ್ಲಿ ಪುಸ್ತಕಗಳ ಪುಟದ ಬೆಲೆಯನ್ನು ಪರಿಷ್ಕರಿಸಿ, 20 ಪೈಸೆ ಹೆಚ್ಚಳ ಮಾಡಿತ್ತು. ಬಳಿಕ ಪುಟಗಳ ದರವನ್ನು ಪರಿಷ್ಕರಿಸಿಲ್ಲ.

ಅರ್ಧದಷ್ಟು ಹಣ: ಏಕಗವಾಕ್ಷಿ ಯೋಜನೆಯಡಿ 2019ರಲ್ಲಿ ಪ್ರಕಟವಾದ 3,704 ಪುಸ್ತಕಗಳನ್ನು ತಲಾ 300 ಪ್ರತಿಗಳಂತೆ ಖರೀದಿಸಲಾಗಿದೆ. ಈ ಪುಸ್ತಕಗಳ ಒಟ್ಟು ಮೊತ್ತದಲ್ಲಿ ₹ 8 ಕೋಟಿಯನ್ನು ಮಾತ್ರ ಪಾವತಿಸಲಾಗಿದೆ. ಇನ್ನುಳಿದ ಮೊತ್ತವನ್ನು ಹಾಗೇ ಉಳಿಸಿಕೊಂಡಿದೆ. ಈಗ 2020ನೇ ಸಾಲಿನ ಪುಸ್ತಕಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಪೂರ್ಣ ಅನುದಾನ ಬಿಡುಗಡೆಯಾಗುವ ಬಗ್ಗೆ ಪ್ರಕಾಶಕರಿಗೆ ಖಚಿತತೆ ಇಲ್ಲವಾಗಿದೆ.

‘ಸರ್ಕಾರದಿಂದ ನಾವು ವಿಶೇಷ ಸೌಲಭ್ಯ, ನೆರವನ್ನು ಕೇಳುತ್ತಿಲ್ಲ. ಮುದ್ರಣ ಸಾಮಗ್ರಿಗಳ ವೆಚ್ಚ ಶೇ 70 ರಷ್ಟು ಹೆಚ್ಚಳವಾಗಿದೆ. ಆದ್ದರಿಂದ ಏಕಗವಾಕ್ಷಿ ಯೋಜನೆಯಡಿ ಖರೀದಿಸುವ ಪುಸ್ತಕಗಳ ಪುಟದ ದರವನ್ನು ಪರಿಷ್ಕರಿಸಬೇಕು. ಕನಿಷ್ಠ 30 ಪೈಸೆಯಾದರೂ ಹೆಚ್ಚಿಸಬೇಕು. ಪುಸ್ತಕೋದ್ಯಮವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.ಈಗಾಗಲೇ ಇರುವ ಯೋಜನೆಯಡಿ ಪುಸ್ತಕಗಳ ಖರೀದಿಗೆ ನಿಯಮಿತ
ವಾಗಿ ಅನುದಾನ ಬಿಡುಗಡೆ ಮಾಡಬೇಕು’ ಎಂದು ಸೃಷ್ಟಿ ಪ್ರಕಾಶನದ ಸೃಷ್ಟಿ ನಾಗೇಶ್ ತಿಳಿಸಿದರು.

₹ 4 ಕೋಟಿ ಅನುದಾನ ಅಗತ್ಯ

‘ಸರ್ಕಾರವು ಪುಸ್ತಕಗಳ ಪುಟದ ದರವನ್ನು ಪರಿಷ್ಕರಿಸಿ, 30 ಪೈಸೆ ಹೆಚ್ಚಿಸಿದಲ್ಲಿ ಹೆಚ್ಚುವರಿಯಾಗಿ ₹ 4 ಕೋಟಿ ಅನುದಾನ ಬೇಕಾಗುತ್ತದೆ. ವಿವಿಧ ಯೋಜನೆಗಳಿಗೆ ನೂರಾರು ಕೋಟಿ ರೂಪಾಯಿ ಹಂಚಿಕೆ ಮಾಡುವ ಸರ್ಕಾರ, ಪುಸ್ತಕೋದ್ಯಮವನ್ನು ಕಡೆಗಣಿಸಿದೆ.ಮುದ್ರಣ ಕಾಗದದ ಮೇಲಿನ ಜಿಎಸ್‌ಟಿ ಶೇ 5 ರಿಂದ ಶೇ 18 ಕ್ಕೆ ಏರಿಕೆ ಆಗಿದೆ. ಕಾಗದದ ದರವೂ ಹೆಚ್ಚಳವಾಗಿದೆ. ಆದ್ದರಿಂದ ದರ ಪರಿಷ್ಕರಿಸಬೇಕು’ ಎಂದು ಪ್ರಕಾಶ್ ಕಂಬತ್ತಳ್ಳಿ ಆಗ್ರಹಿಸಿದರು.

‘ಸಾರ್ವಜನಿಕರಿಂದ ವಸೂಲಿ ಆಗುವ ಗ್ರಂಥಾಲಯ ಕರದಿಂದ ಇಲಾಖೆಯ ಆರ್ಥಿಕ ವ್ಯವಹಾರಗಳು ನಡೆಯುತ್ತವೆ. ಆದರೆ ಈವರೆಗೂ ಬಿಬಿಎಂಪಿ, ನಗರಸಭೆ ಹಾಗೂ ಪುರಸಭೆಗಳು ಸಂಗ್ರಹವಾದ ಕರವನ್ನು ಇಲಾಖೆಗೆ ನೀಡಿಲ್ಲ. ಇದರಿಂದಾಗಿ ಪುಸ್ತಕ ಖರೀದಿ ಹಾಗೂ ಇತರೇ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗಿದೆ. ಬಿಬಿಎಂಪಿಯೇ ಸುಮಾರು ₹ 500 ಕೋಟಿ ಗ್ರಂಥಾಲಯ ಕರವನ್ನು ಬಾಕಿ ಉಳಿಸಿಕೊಂಡಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

****

ಪುಸ್ತಕಗಳನ್ನು ಸರಕಿನಂತೆ ನೋಡದೆ, ಸಂಸ್ಕೃತಿಯೆಂದು ಅರಿತು ಪ್ರೋತ್ಸಾಹಿಸಬೇಕು. ತುರ್ತಾಗಿ ಪುಟಗಳ ದರವನ್ನು ಸರ್ಕಾರ ಪರಿಷ್ಕರಿಸಬೇಕು.

-ಪ್ರಕಾಶ್ ಕಂಬತ್ತಳ್ಳಿ, ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷ

****
ಪುಟಗಳ ದರ ಪರಿಷ್ಕರಣೆ ಸರ್ಕಾರದ ಮಟ್ಟದಲ್ಲಿದೆ. ಪುಸ್ತಕ ಖರೀದಿಯ ಬಾಕಿ ಅನುದಾನ ಬಿಡುಗಡೆಯ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

-ಸತೀಶ್ ಕುಮಾರ್ ಹೊಸಮನಿ, ಗ್ರಂಥಾಲಯ ಇಲಾಖೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT