ಬುಧವಾರ, ಜನವರಿ 20, 2021
29 °C

‘ಬುರೇವಿ’ ಚಂಡಮಾರುತ: ರಾಜ್ಯದಲ್ಲಿ ಮಳೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಶ್ರೀಲಂಕಾ ಹಾಗೂ ತಮಿಳುನಾಡು ಭಾಗಗಳಲ್ಲಿ ಡಿ. 2ರಂದು ‘ಬುರೇವಿ’ ಚಂಡಮಾರುತ ಅಪ್ಪಳಿಸಲಿದ್ದು, ಇದರಿಂದ ರಾಜ್ಯಕ್ಕೆ ಹೆಚ್ಚು ಪ್ರಭಾವ ಬೀರುವ ಮುನ್ಸೂಚನೆಗಳಿಲ್ಲ. ಆದರೆ, ದಕ್ಷಿಣ ಒಳನಾಡಿನಲ್ಲಿ ಕೆಲವೆಡೆ ಮಳೆಯಾಗಬಹುದು’ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಂಗಾಳ ಕೊಲ್ಲಿಯ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತದಿಂದ ಈ ಚಂಡಮಾರುತ ಸಂಭವಿಸಲಿದೆ. ಈಗಿನ ಮಾಹಿತಿಯಂತೆ ಈ ಚಂಡಮಾರುತ ದುರ್ಬಲವಾಗಿದ್ದರೂ ತಮಿಳುನಾಡು ಹಾಗೂ ಶ್ರೀಲಂಕಾ ಕರಾವಳಿ ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ’ ಎಂದರು.

‘ಚಂಡಮಾರುತವು ಡಿ.2ರಂದು ಶ್ರೀಲಂಕಾ ಕರಾವಳಿ ದಾಟಲಿದೆ. ಇದರಿಂದ ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಕೆಲವು ಭಾಗಗಳಲ್ಲಿ ಹೆಚ್ಚು ಮಳೆ ತರಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅಲ್ಲಿ ಅಲರ್ಟ್ ಸಹ ನೀಡಲಾಗಿದೆ. ಡಿ.4ರವರೆಗೆ ಚಂಡಮಾರುತ ಇರಲಿದೆ’ ಎಂದು ವಿವರಿಸಿದರು.

‘ಚಂಡಮಾರುತದ ಪ್ರಭಾವ ರಾಜ್ಯದ ದಕ್ಷಿಣ ಒಳನಾಡಿನ ಚಾಮರಾಜನಗರ, ಕೊಡಗು, ಮಂಡ್ಯ, ಮೈಸೂರು ಜಿಲ್ಲೆಗ
ಳಲ್ಲಿ ಡಿ.3 ಮತ್ತು 4ರಂದು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇರುವುದರಿಂದ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಉತ್ತರ ಒಳನಾಡು ಹಾಗೂ ಕರಾವಳಿ ಭಾಗಗಳಲ್ಲಿ ಒಣಹವೆ ಮುಂದುವರಿಯಲಿದೆ. ಪೂರ್ವ ದಿಕ್ಕಿನಿಂದ ಗಾಳಿ ಬೀಸುತ್ತಿರುವುದರಿಂದ ಚಳಿಯೂ ಯಥಾಸ್ಥಿತಿ ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ.

ದಾವಣಗೆರೆಯಲ್ಲಿ 14 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ಹಾಗೂ ಕಾರವಾರದಲ್ಲಿ 35 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.