ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಸಿ. ವ್ಯಾಲಿ ಯೋಜನೆಗೆ ಜಲಮಂಡಳಿ ಅಸಹಕಾರ

ವಿಧಾನ ಪರಿಷತ್‌ನಲ್ಲಿ ಶಾಸಕರು, ಸಚಿವರ ಅಸಮಾಧಾನ
Last Updated 9 ಮಾರ್ಚ್ 2021, 16:36 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯ ಕೊಳಚೆ ನೀರನ್ನು ಸಂಸ್ಕರಿಸಿ ಕೋಲಾರ ಜಿಲ್ಲೆಯ ಕೆರೆಗಳಿಗೆ ಹರಿಸುವ ಕೋರಮಂಗಲ– ಚಲ್ಲಘಟ್ಟ (ಕೆ.ಸಿ.) ವ್ಯಾಲಿ ಯೋಜನೆಗೆ ಬೆಂಗಳೂರು ಜಲಂಮಡಳಿ ಸಹಕಾರ ನೀಡುತ್ತಿಲ್ಲ ಎಂದು ಬಿಜೆಪಿ ಸದಸ್ಯ ವೈ.ಎ. ನಾರಾಯಣಸ್ವಾಮಿ ವಿಧಾನ ಪರಿಷತ್ತಿನಲ್ಲಿ ಮಂಗಳವಾರ ಆರೋಪಿಸಿದರು.

ನಿಯಮ 330ರ ಅಡಿಯಲ್ಲಿ ವಿಷಯ ಪ್ರಸ್ತಾಪಿಸಿದ ನಾರಾಯಣ ಸ್ವಾಮಿ, ‘ಸಣ್ಣ ನೀರಾವರಿ ಇಲಾಖೆ ಸರಿಯಾಗಿ ಕೆಲಸ ಮಾಡುತ್ತಿದೆ. ಆದರೆ, ಜಲಮಂಡಳಿ ಭಂಡ ಬಿದ್ದಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಂತರ ಉತ್ತರ ನೀಡಿದ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಕೂಡ ಜಲಮಂಡಳಿಯಿಂದ ಅಗತ್ಯ ಸಹಕಾರ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕೆ.ಸಿ. ವ್ಯಾಲಿ ಯೋಜನೆಗೆ ಈ ಬಜೆಟ್‌ನಲ್ಲೂ ₹ 500 ಕೋಟಿ ಒದಗಿಸಿರುವುದು ಸ್ವಾಗತಾರ್ಹ. ಮೊದಲ ಹಂತದಲ್ಲಿ ನಿತ್ಯ 400 ದಶಲಕ್ಷ ಲೀಟರ್‌ ನೀರನ್ನು ಹರಿಸಿ, ಕೋಲಾರ ಜಿಲ್ಲೆಯ 126 ಕೆರೆಗಳನ್ನು ಭರ್ತಿ ಮಾಡಲು ಯೋಜನೆ ರೂಪಿಸಲಾಗಿತ್ತು. ಆದರೆ, 83 ಕೆರೆಗಳಿಗೆ ಮಾತ್ರ ನೀರು ಹರಿದಿದೆ. ಇನ್ನೂ 43 ಕೆರೆಗಳಿಗೆ ನೀರು ಬರಬೇಕಿದೆ. ಜಲಮಂಡಳಿ ಸರಿಯಾಗಿ ಸಹಕಾರ ನೀಡದಿರುವುದೇ ಕಾರಣ’ ಎಂದು ನಾರಾಯಣಸ್ವಾಮಿ ದೂರಿದರು.

‘ಬೆಂಗಳೂರಿನ ಜನರು ಬಳಸಿ ಬಿಟ್ಟಿರುವ ಕೊಳಚೆ ನೀರನ್ನು ಸಂಸ್ಕರಿಸಿ ನಮಗೆ ನೀಡಲಾಗುತ್ತಿದೆ. ಅದರಲ್ಲೂ ಈ ರೀತಿ ಮಾಡುವುದು ಸರಿಯೆ? 13 ತಿಂಗಳಿನಿಂದಲೂ 292 ದಶಲಕ್ಷ ಲೀಟರ್‌ ನೀರು ಮಾತ್ರ ಹರಿಯುತ್ತಿದೆ. ಎಲ್ಲ ಕೆರೆಗಳು ಭರ್ತಿ ಆಗುವುದು ಯಾವಾಗ’ ಎಂದು ಪ್ರಶ್ನಿಸಿದರು.

ಉತ್ತರ ನೀಡಿದ ಸಚಿವ ಮಾಧುಸ್ವಾಮಿ, ‘ಸದ್ಯ ಕೆ.ಸಿ. ವ್ಯಾಲಿ ಯೋಜನೆಯ ಕಾಲುವೆಯಲ್ಲಿ 300 ದಶಲಕ್ಷ ಲೀಟರ್‌ ನೀರು ಮಾತ್ರ ಹರಿಯುತ್ತಿದೆ. ಆದರೆ, ಜಲಮಂಡಳಿಯು 382 ದಶಲಕ್ಷ ಲೀಟರ್‌ ನೀರು ಹರಿಯುತ್ತಿದೆ ಎಂದು ಹೇಳುತ್ತಿದೆ. ಮಾರ್ಗ ಮಧ್ಯದಲ್ಲಿ ರೈತರೂ ನೀರು ಬಳಕೆ ಮಾಡುತ್ತಿದ್ದಾರೆ. ಇದರಿಂದಾಗಿ ಎಲ್ಲ ಕೆರೆಗಳನ್ನೂ ಭರ್ತಿ ಮಾಡಲು ಸಾಧ್ಯವಾಗಿಲ್ಲ’ ಎಂದರು.

ಯೋಜನೆಯಡಿ ಪೂರ್ಣ ಪ್ರಮಾಣದಲ್ಲಿ ಸಂಸ್ಕರಿಸಿದ ನೀರನ್ನು ಕೋಲಾರ ಜಿಲ್ಲೆಯ ಕೆರೆಗಳಿಗೆ ಹರಿಸುವ ಸಂಬಂಧ ಶೀಘ್ರದಲ್ಲಿ ಸಭೆ ನಡೆಸಲಾಗುವುದು. ಶಾಸಕರು, ಅಧಿಕಾರಿಗಳ ಜತೆ ಚರ್ಚಿಸಿ ಯೋಜನೆಗೆ ವೇಗ ನೀಡಲಾಗುವುದು ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT