ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯೇಂದ್ರ ಮಠ ಸುತ್ತಾಟ ಗುಟ್ಟು?

ಮಠಾಧೀಶರ ಮನಃ ಪರಿವರ್ತನೆಯ ದಾರಿ ಹಿಡಿದ ಬಿಎಸ್‌ವೈ ಪುತ್ರ?
Last Updated 10 ಜೂನ್ 2021, 20:04 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪನವರ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಪಕ್ಷದ ವರಿಷ್ಠರು ಭರವಸೆ ನೀಡಿದ್ದಾರೆ ಎಂದು ಸಚಿವರು, ಬಿಜೆಪಿ ನಾಯಕರು ಬಲವಾಗಿ ಪ್ರತಿಪಾದಿಸಿದ್ದರೂ ಪಕ್ಷದ ರಾಜ್ಯ ಉಪಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಪುತ್ರ ಬಿ.ವೈ.ವಿಜಯೇಂದ್ರ ಅವರು ಮಠಗಳನ್ನು ಸುತ್ತಲಾರಂಭಿಸಿರುವುದು ರಾಜಕೀಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ.

ಯಡಿಯೂರಪ್ಪನವರ ವಿರೋಧಿ ಎಂದೇ ಗುರುತಿಸಿಕೊಂಡಿರುವ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಅವರು ಇತ್ತೀಚೆಗೆ ಹಲವು ಮಠಗಳಿಗೆ ಭೇಟಿ ಕೊಟ್ಟಿದ್ದರು. ದೆಹಲಿ ಮಟ್ಟದಲ್ಲಿ ಬಿಜೆಪಿಯೊಳಗೆ ‘ಹಿಡಿತ’ ಹೊಂದಿರುವ ಕರ್ನಾಟಕದ ‘ಪ್ರಭಾವಿ’ ಯೊಬ್ಬರ ಸಂದೇಶವನ್ನು ರವಾನಿಸುವ ಜತೆಗೆ, ಮಠಾಧೀಶರ ಮನವೊಲಿಸುವ ಕಸರತ್ತನ್ನು ಯೋಗೇಶ್ವರ್ ನಡೆಸಿದ್ದರು ಎಂದೂ ಹೇಳಲಾಗಿತ್ತು. ಈ ಬೆಳವಣಿಗೆ ಬೆನ್ನಲ್ಲೇ, ವಿಜಯೇಂದ್ರ ಮಠ ಸುತ್ತಾಟ ಆರಂಭಿಸಿರುವುದು ವಿವಿಧ ರೀತಿಯ ವಿಶ್ಲೇಷಣೆಗಳಿಗೆ ದಾರಿ ಮಾಡಿಕೊಟ್ಟಿದೆ.

ಎರಡು ದಿನಗಳಿಂದ ವಿವಿಧ ಮಠಗಳಿಗೆ ಭೇಟಿ ನೀಡಿದ ವಿಜಯೇಂದ್ರ ಮಠಾಧೀಶರ ಜತೆ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ಸುತ್ತೂರು, ಸಿದ್ದಗಂಗಾ, ಹಿರಿಯೂರು, ಚಿತ್ರದುರ್ಗದಲ್ಲಿರುವ ಪ್ರಮುಖ ವೀರಶೈವ– ಲಿಂಗಾಯತ ಮಠಗಳ ಪೀಠಾಧ್ಯಕ್ಷರನ್ನು ಭೇಟಿ ಮಾಡಿದ್ದಾರೆ.

‘ಇದು ವೈಯಕ್ತಿಕ ಭೇಟಿ’ ಎಂದು ವಿಜಯೇಂದ್ರ ಆಪ್ತರು ಹೇಳಿದರೂ, ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಈ ಸಂದರ್ಭದಲ್ಲಿ ಚರ್ಚೆ ನಡೆದಿದೆ ಎನ್ನುತ್ತವೆ ಮೂಲಗಳು.

ಚಿತ್ರದುರ್ಗದ ಮುರುಘಾ ಶರಣರ ಜತೆ ನಡೆಸಿದ ಭೇಟಿಯ ಸಂದರ್ಭದಲ್ಲಿ ವಿಜಯೇಂದ್ರ ಅವರು ‘ತಮ್ಮ ತಂದೆಯವರ ಬೆಂಬಲಕ್ಕೆ ಮಠಗಳು ನಿಲ್ಲಬೇಕು’ ಎಂದು ಮನವಿ ಮಾಡಿದ್ದಾರೆಂದು ಗೊತ್ತಾಗಿದೆ.

ಈ ಸಂದರ್ಭದಲ್ಲಿ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು, ಮಾದಾರ ಚೆನ್ನಯ್ಯ ಸ್ವಾಮೀಜಿ, ವಾಲ್ಮೀಕಿ ಪೀಠದ ಪುರುಷೋತ್ತಮಾನಂದ ಸ್ವಾಮೀಜಿ, ಶಿರಸಿ ರುದ್ರದೇವರ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಹಾವೇರಿ ಹೊಸಮಠದ ಶಾಂತಲಿಂಗ ಸ್ವಾಮೀಜಿ, ಚಳ್ಳಕೆರೆಯ ವಿರಕ್ತ ಮಠದ ಬಸವ ಕಿರಣ ಸ್ವಾಮೀಜಿ, ದಾವಣಗೆರೆಯ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಚಿತ್ರದುರ್ಗದ ಭೋವಿಮಠದ ಇಮ್ಮಡಿ ಸಿದ್ದರಾಮ ಸ್ವಾಮೀಜಿ, ಮೇದಾರ ಪೀಠದ ಕೇತೇಶ್ವರ ಸ್ವಾಮೀಜಿ ಇದ್ದರು.

ಮಠಾಧೀಶರಿಗೆ ಮನವರಿಕೆ: ಯಡಿಯೂರಪ್ಪನವರ ಬೆನ್ನಿಗೆ ನಿಲ್ಲುವಂತೆ ಮಠಾಧೀಶರ ಮನವೊಲಿಸುವುದು ವಿಜಯೇಂದ್ರ ಮಠ ಸುತ್ತಾಟದ ಪ್ರಮುಖ ಉದ್ದೇಶ ಎನ್ನಲಾಗಿದೆ.

ಆದರೆ, ವಿಜಯೇಂದ್ರ ಭೇಟಿಗೆ ಮುನ್ನವೇ ಆರೆಸ್ಸೆಸ್‌ ನಿಷ್ಠರಾದ ಕೆಲವು ಬಿಜೆಪಿ ನಾಯಕರು ಮಠಾಧೀಶರನ್ನು ಭೇಟಿ ಮಾಡಿ ರಾಜ್ಯದ ರಾಜಕೀಯ ಪರಿಸ್ಥಿತಿಯನ್ನು ಅವರಿಗೆ ವಿವರಿಸಿ, ಮನವರಿಕೆ ಮಾಡಿಕೊಡುವ ಯತ್ನ ನಡೆಸಿದ್ದಾರೆ. ಈ ವೇಳೆ, ನಾಯಕತ್ವ ಬದಲಾವಣೆ ಕುರಿತಂತೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಂತೆ ಮಠಾಧೀಶರ ಮನವೊಲಿಸುವ ಯತ್ನವನ್ನು ಈ ನಾಯಕರು ಮಾಡಿ
ದ್ದರು. ಅದನ್ನು, ಬದಲಿಸಿ, ತಮ್ಮ ಪರ ನಿಲುವು ವ್ಯಕ್ತಪಡಿಸುವಂತೆ ಬಲ ಕ್ರೋಡೀಕರಣ ಮಾಡುವುದು ವಿಜಯೇಂದ್ರ ಉದ್ದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT