ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2040ಕ್ಕೆ ಭಾರತ ಸೂಪರ್‌ ಪವರ್‌ ದೇಶ

ಕೇಂದ್ರ ಸರ್ಕಾರದಿಂದ ಸಮತೋಲನದ ನಡೆ– ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅಭಿಮತ
Last Updated 26 ಸೆಪ್ಟೆಂಬರ್ 2021, 3:53 IST
ಅಕ್ಷರ ಗಾತ್ರ

ಗದಗ: ‘ದೇಶಕ್ಕೆ ಸ್ವಾತಂತ್ರ್ಯ ಬಂದು 100 ವರ್ಷದ ತುಂಬಿದ ಸಂದರ್ಭದಲ್ಲಿ ನಮ್ಮ ಭಾರತ ಹೇಗಿರಬೇಕು ಎಂಬ ಕಲ್ಪನೆಯನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಗಾಗಲೇ ಮಾಡಿದ್ದು, ಅದಕ್ಕೆ ತಕ್ಕಂತೆ ಈಗಿನಿಂದಲೇ ಅಭಿವೃದ್ಧಿ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದಲ್ಲಿ ಶನಿವಾರ ನಡೆದ ಉತ್ತರ ಕರ್ನಾಟಕ ವಾಣಿಜ್ಯೋದ್ಯಮಿಗಳ ಸಮ್ಮೇಳನ–2021 ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದಲ್ಲಿ ಬೃಹತ್ ಹಾಗೂ ಸಣ್ಣ ಪ್ರಮಾಣದ ಉದ್ದಿಮೆಗಳು ಹಾಗೂ ಕಾರ್ಪೋರೆಟ್‌ ಕಂಪನಿಗಳನ್ನು ಬೆಳೆಸಿ, ಪ್ರೋತ್ಸಾಹಿಸುವುದರ ಜತೆಗೆ ಅವರಿಂದ ತೆರಿಗೆ ಸಂಗ್ರಹಿಸಿ ಆ ಹಣದಿಂದ ದೇಶದ ಬಡಜನರ ಸೇವೆ ಮಾಡುವ
ಸ್ಪಷ್ಟ ಉದ್ದೇಶವನ್ನು ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಹೊಂದಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಕಲ್ಲಿದ್ದಲು ಹೊಂದಿರುವ 4ನೇ ದೊಡ್ಡ ದೇಶವಾದರೂ ಸಹ ಇತ್ತೀಚಿನವರೆಗೂ ಭಾರತ ದೊಡ್ಡ ಪ್ರಮಾಣದಲ್ಲಿ ಕಲ್ಲಿದ್ದಲು ಆಮದು ಮಾಡಿಕೊಳ್ಳುತ್ತಿತ್ತು. ಕಮರ್ಷಿಯಲ್‌ ಮೈನಿಂಗ್‌ಗೆ ಅವಕಾಶ ಕೊಟ್ಟ ನಂತರ ಈಗ ಏಳು ವರ್ಷಗಳಿಂದೀಚೆಗೆ ಅದರ ಪ್ರಮಾಣ ಬಹಳ ಕಡಿಮೆ ಆಗಿದೆ. 2024–25ರ ವೇಳೆಗೆ ಕಲ್ಲಿದ್ದಲು ಆಮದು
ಸಂಪೂರ್ಣ ನಿಲ್ಲಲಿದೆ’ ಎಂದು ಹೇಳಿದರು.

‘2040ರ ವೇಳೆಗೆ ವಿದ್ಯುತ್‌ ಬೇಡಿಕೆ ದ್ವಿಗುಣಗೊಳ್ಳಲಿದ್ದು, ಅದಕ್ಕಾಗಿ ಶೇ 30ರಷ್ಟುನ್ನು ನವೀಕರಿಸಬಹುದಾದ ಸಂಪನ್ಮೂಲದಿಂದ ಹಾಗೂ ಶೇ 60ರಷ್ಟನ್ನು ಹೈಡ್ರೋ ಮತ್ತು ಥರ್ಮಲ್‌ನಿಂದ ಉತ್ಪಾದಿಸುವ ಯೋಜನೆ ರೂಪಿಸಲಾಗಿದೆ. 2016–17ರಲ್ಲಿ ಆರಂಭಿಸಿದ ಸ್ಟಾರ್ಟ್‌ಅಪ್‌ ಯೋಜನೆಯಿಂದಾಗಿ ದೇಶದಲ್ಲಿ 50 ಸಾವಿರಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಹುಟ್ಟಿಕೊಂಡವು. ಅದರಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗಾಗಿ ₹100 ಲಕ್ಷ ಕೋಟಿ ವಿನಿಯೋಗಿಸಲಾಗುತ್ತಿದೆ. ದೇಶದ 2.50 ಲಕ್ಷ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ 3.25 ಲಕ್ಷ ಕಿ.ಮೀ. ಫೈಬರ್‌ ಅಳವಡಿಸಲಾಗಿದೆ’ ಎಂದು ಹೇಳಿದರು.

‘ದೇಶದಲ್ಲಿ ಹೈ ಸ್ಪೀಡ್‌ ಬ್ರಾಡ್‌ ಬ್ಯಾಂಡ್‌ ಸಂಪರ್ಕಕ್ಕಾಗಿ ₹34 ಸಾವಿರ ಕೋಟಿ ವಿನಿಯೋಗಿಸಲಾಗಿದ್ದು, ಇದರಿಂದಾಗಿ ಫಲಾನುಭವಿಗಳಿಗೆ ತಲುಪಬೇಕಿದ್ದ ಸಬ್ಸಿಡಿ ಹಾಗೂ ಸರ್ಕಾರಿ ಯೋಜನೆಗಳ ಸಾವಿರಾರು ಕೋಟಿಯಷ್ಟು ಹಣ ಸೋರಿಕೆ ಕಡಿಮೆ ಆಗಿದೆ. ರೈಲ್ವೆ ಮಾರ್ಗಗಳ ಉನ್ನತೀಕರಣ ನಡೆಯುತ್ತಿದ್ದು, ಸಂಪರ್ಕ ಕ್ಷೇತ್ರದಲ್ಲೂ ಕ್ರಾಂತಿ ಉಂಟಾಗಲಿದೆ’ ಎಂದು ಹೇಳಿದರು.

ಉತ್ತರ ಕರ್ನಾಟಕದ ಜಿಲ್ಲೆಗಳು ಕೈಗಾರಿಕೆ ಕ್ಷೇತ್ರದಲ್ಲಿ ಹಿಂದುಳಿಯಲು ಹಲವು ಕಾರಣಗಳಿವೆ. ಮೂಲಸೌಕರ್ಯಗಳು, ಸುಸಜ್ಜಿತ ರಸ್ತೆಗಳು, ನೀರು, ವಿದ್ಯುತ್ ವ್ಯವಸ್ಥೆ ಸರಿಯಾಗಿ ಕಲ್ಪಿಸಬೇಕು. ಆಗ ಮಾತ್ರ ಕೈಗಾರಿಕಾ ಕ್ಷೇತ್ರ ಬೆಳೆಯಲು ಸಾಧ್ಯ. ಬಡವರ ಸೇವೆ ಮಾಡುವ ಗುರಿ ಹಾಗೂ ಕೈಗಾರಿಕೆಗಳನ್ನು ಬೆಳೆಸುವ ಸಮತೋಲನದ ನಡೆಯೊಂದಿಗೆ ಭಾರತವನ್ನು ಸೂಪರ್‌ ಪವರ್‌ ಆಗಿಸುವ ನಿಟ್ಟಿನಲ್ಲಿ ಈ ಎಲ್ಲ ಹೆಜ್ಜೆಗಳನ್ನು ಕೇಂದ್ರ ಸರ್ಕಾರ ದೃಢವಾಗಿ ಇರಿಸಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT