ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಗಭದ್ರಾ ಆರತಿ ಯೋಗ ಮಂಟಪಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಮುಖ್ಯಮಂತ್ರಿ

Last Updated 20 ಫೆಬ್ರುವರಿ 2022, 19:53 IST
ಅಕ್ಷರ ಗಾತ್ರ

ಹರಿಹರ (ದಾವಣಗೆರೆ ಜಿಲ್ಲೆ): ‘ದಕ್ಷಿಣ ಕಾಶಿ’ ಎಂದು ಖ್ಯಾತಿ ಪಡೆರುವ ಹರಿಹರದ ತುಂಗಭದ್ರಾ ನದಿಯ ತಟದಲ್ಲಿ ತುಂಗಭದ್ರಾ ಆರತಿ ಯೋಗ ಮಂಟಪ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದರು.

ಹರಿಹರ ನಗರದ ಹಳೆ ಸೇತುವೆ ಸಮೀಪ ರಾಘವೇಂದ್ರ ಸ್ವಾಮಿ ಮಠದ ಹಿಂಭಾಗದಲ್ಲಿ ತುಂಗಭದ್ರಾ ನದಿ ತೀರದಲ್ಲಿ ಮೊದಲು ಗಂಗಾಪೂಜೆ ಸಲ್ಲಿಸಲಾಯಿತು. ಬಳಿಕ 108 ಆರತಿ ಮಂಟಪಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಕೆಲ ಕಾಲ ಧ್ಯಾನ ಮಾಡಿದ ಮುಖ್ಯಮಂತ್ರಿ, ವಿಭೂತಿ ಧರಿಸಿ ಕೇಸರಿ ವಸ್ತ್ರದೊಂದಿಗೆ ಪೂಜಾ ಕಾರ್ಯಗಳನ್ನು ನೆರವೇರಿಸಿದರು.

ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರಾದ ಮುರುಗೇಶ ನಿರಾಣಿ, ಶಂಕರ ಪಾಟೀಲ್ ಮುನೇನಕೊಪ್ಪ, ಬೈರತಿ ಬಸವರಾಜ, ಸಂಸದ ಜಿ.ಎಂ.ಸಿದ್ದೇಶ್ವರ ಅವರೂ ಭಾಗಿಯಾಗಿದ್ದರು. ₹30 ಕೋಟಿ ವೆಚ್ಚದ ಈ ಯೋಜನೆಗೆ ಆರಂಭಿಕ ಹಂತದಲ್ಲಿ ರಾಜ್ಯ ಸರ್ಕಾರವು ₹ 10 ಕೋಟಿ ಬಿಡುಗಡೆ ಮಾಡಿದೆ.

ಕಾಶಿ ವಿಶ್ವನಾಥ ಕಾರಿಡಾರ್ ಮಾದರಿಯಲ್ಲಿ ದಕ್ಷಿಣ ಕಾಶಿ ಹರಿಹರದ ಹರಿಹರೇಶ್ವರ ದೇವಸ್ಥಾನ ಹಾಗೂ ತುಂಗಭದ್ರಾ ನದಿತೀರದ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಈ ಹಿಂದೆ ಕಾಶಿಯಲ್ಲಿ ವಿಶ್ವನಾಥ ದೇವಸ್ಥಾನವನ್ನು ಹುಡುಕುವ ಪರಿಸ್ಥಿತಿ ಇತ್ತು. ದೇವಸ್ಥಾನದ ಸುತ್ತಮುತ್ತ ಅಂಗಡಿಗಳೇ ತುಂಬಿ ಹೋಗಿದ್ದವು. ಪ್ರಧಾನಿ ನರೇಂದ್ರ ಮೋದಿ ಅವರು ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ಕೈಗೊಂಡು, ಇಡೀ ಪ್ರದೇಶವನ್ನು ಅಚ್ಚರಿಯ ರೀತಿಯಲ್ಲಿ ಅಭಿವೃದ್ಧಿ ಪಡಿಸಿದ್ದಾರೆ. ಅದೇ ಮಾದರಿಯಲ್ಲಿ ಹರಿಹರದಲ್ಲೂ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಉದ್ಘಾಟನೆಗೆ ಪ್ರಧಾನಿ ಬರಲಿ: ‘ತುಂಗಭದ್ರಾ ಆರತಿ 108 ಯೋಗಮಂಟಪ ನಿರ್ಮಾಣಕ್ಕೆ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಕಾಮಗಾರಿ ಮುಗಿದು ಉದ್ಘಾಟನೆಗೆ ತಯಾರಾದಾಗ ಚಾಲನೆ ನೀಡಲು ಪ್ರಧಾನಿ ಮೋದಿ ಅವರನ್ನೇ ಕರೆಸಬೇಕು. ಅದಕ್ಕೆ ಮುಖ್ಯಮಂತ್ರಿ ಮತ್ತು ಇತರ ಸಚಿವರು ಪ್ರಯತ್ನಿಸಬೇಕು’ ಎಂದು ವಚನಾನಂದ ಸ್ವಾಮೀಜಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT