ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಕ್ಷಣದಿಂದ ರಾಜ್ ಕುಟುಂಬದ ಜತೆ ಸಿಎಂ ಬಸವರಾಜ ಬೊಮ್ಮಾಯಿ

Last Updated 30 ಅಕ್ಟೋಬರ್ 2021, 20:39 IST
ಅಕ್ಷರ ಗಾತ್ರ

ಬೆಂಗಳೂರು: ಪುನೀತ್‌ ರಾಜ್‌ಕುಮಾರ್‌ ‘ಇನ್ನಿಲ್ಲ’ವಾದ ಕ್ಷಣದಿಂದ ರಾಜ್‌ಕುಮಾರ್‌ ಕುಟುಂಬದ ಸದಸ್ಯರ ಜೊತೆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಎಲ್ಲವನ್ನೂ ತಾವೇ ಮುಂದೆ ನಿಂತು ನಿಭಾಯಿಸುತ್ತಿದ್ದಾರೆ.

ಅಮೆರಿಕದಲ್ಲಿದ್ದ ಪುನೀತ್‌ ಪುತ್ರಿ ಧೃತಿ ಅವರನ್ನು ತವರಿಗೆ ಕರೆದುಕೊಂಡು ಬರಲು ತುರ್ತು ಕ್ರಮ ತೆಗೆದುಕೊಳ್ಳುವಂತೆ ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಜೊತೆ ಶುಕ್ರವಾರವೇ ಬೊಮ್ಮಾಯಿ ಮಾತುಕತೆ ನಡೆಸಿದ್ದರು. ಅಲ್ಲದೆ, ಶನಿವಾರ ಮಧ್ಯಾಹ್ನ ದೆಹಲಿಗೆ ಬಂದಿಳಿದ ಅವರನ್ನು ಯಾವುದೇ ವಿಳಂಬ ಆಗದಂತೆ ವಿಶೇಷ ವಿಮಾನದಲ್ಲಿ ಕರೆದುಕೊಂಡು ಬರಲೂ ವ್ಯವಸ್ಥೆ ಮಾಡಿದ್ದರು.

ಕಂಠೀರವ ಸ್ಟುಡಿಯೋದ ಆವರಣದಲ್ಲಿ ರಾಜ್‌ಕುಮಾರ್‌– ಪಾರ್ವತಮ್ಮ ರಾಜ್‌ಕುಮಾರ್‌ ಸಮಾಧಿಯ ಪಕ್ಕದಲ್ಲಿಯೇ ಪುನೀತ್‌ ಅಂತ್ಯಕ್ರಿಯೆ ಭಾನುವಾರ ಬೆಳಿಗ್ಗೆ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಲಿದೆ. ಈ ಬಗ್ಗೆ ಕುಟುಂಬ ಸದಸ್ಯರ ಜೊತೆ ಸಮಾಲೋಚನೆ ನಡೆಸಿರುವ ಬೊಮ್ಮಾಯಿ, ಆ ಹೊಣೆಯನ್ನೂ ತಾವೇ ವಹಿಸಿಕೊಂಡಿದ್ದಾರೆ.

ಪುನೀತ್‌ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಟ್ಟಿದ್ದ ಕಂಠೀರವ ಕ್ರೀಡಾಂಗಣದಲ್ಲಿ ಸಂಪುಟದ ಕೆಲವು ಸಹೋದ್ಯೋಗಿಗಳೊಂದಿಗೆ ಶುಕ್ರವಾರ ತಡರಾತ್ರಿವರೆಗೂ ಬೊಮ್ಮಾಯಿ ಇದ್ದರು.

ತಮ್ಮ ನೆಚ್ಚಿನ ನಟನನ್ನು ಕೊನೆಯದಾಗಿ ನೋಡಬೇಕೆಂಬ ಕಾತುರದಿಂದ ರಾಜ್ಯದ ಮೂಲೆ ಮೂಲೆಗಳಿಂದ ಬಂದ ಅಭಿಮಾನಿಗಳು, ಗಣ್ಯರಿಗೆ ಪಾರ್ಥಿವ ಶರೀರದ ದರ್ಶನದ ವ್ಯವಸ್ಥೆ, ಅಂತ್ಯಕ್ರಿಯೆಗೂ ಮೊದಲು ನಡೆಯಲಿರುವ ಮೆರವಣಿಗೆ ಸೇರಿದಂತೆ ಒಟ್ಟು ಪೊಲೀಸ್‌ ಭದ್ರತೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ಮುಖ್ಯಮಂತ್ರಿಯವರೇ ಸಂಪರ್ಕದಲ್ಲಿದ್ದಾರೆ.

ಶನಿವಾರ ಬೆಳಿಗ್ಗೆ ಕಂಠೀರವ ಕ್ರೀಡಾಂಗಣಕ್ಕೆ ಬಂದ ಬೊಮ್ಮಾಯಿ, ಪುನೀತ್ ಅವರ ಪುತ್ರಿ ಸಂಜೆಯೇ ನಗರಕ್ಕೆ ಬರುವುದು ಖಚಿತವಾಗಿದ್ದರಿಂದ, ಕುಟುಂಬ ಸದಸ್ಯರ ಜೊತೆ ಮತ್ತು ಕಂದಾಯ ಸಚಿವ ಆರ್‌. ಅಶೋಕ ಜೊತೆ ಚರ್ಚಿಸಿ ಶನಿವಾರವೇ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಿದ್ದರು. ಆದರೆ, ಮಧ್ಯಾಹ್ನವಾದರೂ ಅಭಿಮಾನಿಗಳ ಸಂಖ್ಯೆ ಕಡಿಮೆ ಆಗದ ಕಾರಣ, ಮತ್ತೊಮ್ಮೆ ಚರ್ಚಿಸಿ ಅಂತ್ಯಕ್ರಿಯೆಯನ್ನು ಭಾನುವಾರ ಬೆಳಿಗ್ಗೆ ನಡೆಸಲು ತೀರ್ಮಾನಿಸಿದರು.

ಬಳಿಕ ಈ ವಿಷಯ ಪ್ರಕಟಿಸಿದ ಅವರು, ‘ಪುನೀತ್ ಪುತ್ರಿ ಸಂಜೆ 6 ಗಂಟೆಯ ವೇಳೆಗೆ ಬಂದರೂ ಆ ನಂತರ ಅಂತ್ಯಸಂಸ್ಕಾರ ಮಾಡುವುದು ಸವಾಲಿನ ಸಂಗತಿ. ಅಲ್ಲದೆ, ಅಪ್ಪು ಅವರ ಅಂತಿಮ ದರ್ಶನಕ್ಕೆ ಹೆಚ್ಚಿನ ಜನರು ಬರುತ್ತಿದ್ದಾರೆ. ಭಾನುವಾರದವರೆಗೂ ದರ್ಶನಕ್ಕೆ ಅವಕಾಶ ಇರುವುದರಿಂದ ಜನರು ಸಮಾಧಾನದಿಂದ ಬರಬಹುದು. ಪುನೀತ್ ರಾಜ್‌ಕುಮಾರ್ ಅಗಲಿಕೆ ಎಲ್ಲರಿಗೂ ದುಃಖ ತಂದಿದೆ. ಅವರನ್ನು ಗೌರವದಿಂದ ಶಾಂತಿಯುತವಾಗಿ ಬೀಳ್ಕೊಡಬೇಕಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಜನರು ಸಹಕರಿಸಬೇಕು’ ಎಂದು ಮನವಿ ಮಾಡಿದರು.

‘ಈ ಸಮಯ- ಈ ಸಂದರ್ಭದಲ್ಲಿ ಸಂಯಮ, ಜವಾಬ್ದಾರಿಯಿಂದ ವರ್ತಿಸಬೇಕಾಗಿದೆ. ‌ನಮ್ಮ ಜವಾಬ್ದಾರಿಯುತ ನಡವಳಿಕೆ ಡಾ. ರಾಜ್‌ಕುಮಾರ್ ಹಾಗೂ ಪುನೀತ್ ಅವರಿಗೆ ಗೌರವ ಸಲ್ಲಿಸಿದಂತೆ. ಶಾಂತಿ, ಸ್ನೇಹದಿಂದ ಇರುವುದು ಕನ್ನಡಿಗರ ಸಂಸ್ಕೃತಿ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT