ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ ಅನುಷ್ಠಾನಕ್ಕೆ ವೇಳಾಪಟ್ಟಿ: ಬಸವರಾಜ ಬೊಮ್ಮಾಯಿ

Last Updated 4 ಮೇ 2022, 19:32 IST
ಅಕ್ಷರ ಗಾತ್ರ

ಬೆಂಗಳೂರು: ಬಜೆಟ್‌ ಘೋಷಣೆಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಕ್ಕೆ ತಂದು, ಫಲಾನುಭವಿಗಳಿಗೆ ತ್ವರಿತವಾಗಿ ಸೌಲಭ್ಯ ಒದಗಿಸುವುದಕ್ಕಾಗಿ ಎಲ್ಲ ಇಲಾಖೆಗಳಿಗೂ ವೇಳಾಪಟ್ಟಿ ನಿಗದಿ‍ಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಪ್ರಸಕ್ತ ವರ್ಷದ ಬಜೆಟ್‌ ಘೋಷಣೆಗಳ ಅನುಷ್ಠಾನದ ಕುರಿತು ಪ್ರಮುಖ ಇಲಾಖೆಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಅವರು ಬುಧವಾರ ಇಡೀ ದಿನ ಪರಿಶೀಲನಾ ಸಭೆಗಳನ್ನು ನಡೆಸಿದರು. ಸಭೆಗೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ, ‘ವೇಳಾಪಟ್ಟಿಯ ಪ್ರಕಾರವೇ ಬಜೆಟ್‌ ಅನುಷ್ಠಾನಕ್ಕೆ ಬರಲಿದೆ’ ಎಂದರು.

ಬಜೆಟ್‌ನಲ್ಲಿ ಪ್ರಕಟಿಸಿದ್ದ ಘೋಷಣೆಗಳ ಪೈಕಿ ಶೇಕಡ 80ರಷ್ಟು ಆದೇಶಗಳಾಗಿವೆ. ಕಾನೂನು ಮತ್ತು ತಾಂತ್ರಿಕ ತೊಡಕುಗಳಿರುವ ಶೇ 20ರಷ್ಟು ಘೋಷಣೆಗಳ ಅನುಷ್ಠಾನಕ್ಕೆ ಸಿದ್ಧತೆ ನಡೆದಿದೆ. ಶೀಘ್ರದಲ್ಲಿ ಆದೇಶ ಹೊರಡಿಸಲಾಗುವುದು. ಮೊದಲ ಹಂತದಲ್ಲಿ ಕಾರ್ಯಕಾರಿ ಆದೇಶ ಹೊರಡಿಸಲಾಗುವುದು. ಎರಡನೇ ಹಂತದಲ್ಲಿ ಅನುಷ್ಠಾನ ಆರಂಭಿಸಲಾಗುವುದು. ಆರಂಭದಲ್ಲಿ ಪ್ರಮುಖ ಇಲಾಖೆಗಳಿಗೆ ವೇಳಾಪಟ್ಟಿ ನೀಡಲಾಗುವುದು. ನಂತರ ಎಲ್ಲ ಇಲಾಖೆಗಳಿಗೂ ವಿಸ್ತರಿಸಲಾಗುವುದು ಎಂದು ಹೇಳಿದರು.

ರಾಜ್ಯ ಮಟ್ಟದಲ್ಲಿ ಮಾತ್ರವಲ್ಲ, ಕೆಳಹಂತದವರೆಗೂ ನಿಗಾ ಇರಿಸಲಾಗುವುದು. ಫಲಾನುಭವಿಗಳ ಆಯ್ಕೆ ಹಾಗೂ ಸ್ಥಳೀಯವಾಗಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮುಂದಿನ ವಾರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದರು.

ಸರಣಿ ಸಭೆ: ವೈದ್ಯಕೀಯ ಶಿಕ್ಷಣ, ಜಲ ಸಂಪನ್ಮೂಲ, ಲೋಕೋಪಯೋಗಿ, ಸಮಾಜ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗಳಲ್ಲಿ ಬಜೆಟ್‌ ಘೋಷಣೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸರಣಿ ಸಭೆಗಳನ್ನು ನಡೆಸಿದರು.

ಹುಬ್ಬಳ್ಳಿಯಲ್ಲಿ ₹ 250 ಕೋಟಿ ವೆಚ್ಚದಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಪ್ರಾದೇಶಿಕ ಕೇಂದ್ರ ನಿರ್ಮಾಣಕ್ಕೆ ಆಗಸ್ಟ್‌ 15ರೊಳಗೆ ಭೂಮಿಪೂಜೆ ನೆರವೇರಿಸಬೇಕು. ರಾಮನಗರ ಜಿಲ್ಲೆಯ ಅರ್ಚಕರಹಳ್ಳಿಯಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕ್ಯಾಂಪಸ್‌ ನಿರ್ಮಾಣ ಕಾಮಗಾರಿಗೆ ಜೂನ್‌ ಅಂತ್ಯದೊಳಗೆ ಚಾಲನೆ ನೀಡಬೇಕು ಎಂದು ನಿರ್ದೇಶನ ನೀಡಿದರು.

ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ನೆರವಿನಲ್ಲಿ 1,000 ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಿಸುವ ಯೋಜನೆಗೆ ವೇಗ ನೀಡಬೇಕು ಎಂದು ಮುಖ್ಯಮಂತ್ರಿ ಗಡುವು ನೀಡಿದರು.

ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮ, ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್‌.ಎನ್‌. ಪ್ರಸಾದ್‌, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ್‌ ಪ್ರಸಾದ್‌ ಹಾಗೂ ಆಯಾ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT