ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ಕುರ್ಚಿ ಅಲುಗಾಟ: ಶಾಸಕರ ಸಹಿ ಸಂಗ್ರಹಕ್ಕೆ ಮುಂದಾದ ರೇಣುಕಾಚಾರ್ಯ

ಆರ್‌ ಅಶೋಕ್ ಕಿಡಿ
Last Updated 7 ಜೂನ್ 2021, 12:14 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿಯಾಗಿ ಬಿ.ಎಸ್‌.ಯಡಿಯೂರಪ್ಪ ಅವರೇ ಮುಂದುವರಿಯಬೇಕು ಎಂದು ಪಕ್ಷದ ವರಿಷ್ಠರನ್ನು ಒತ್ತಾಯಿಸಲು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ಸಹಿ ಸಂಗ್ರಹ ಆರಂಭಿಸಿದ್ದಾರೆ.

ಈ ಬಗ್ಗೆಸುದ್ದಿಗಾರರ ಜತೆ ಮಾತನಾಡಿದ ಅವರು, ನನ್ನ ಬಳಿ 65 ಕ್ಕೂ ಹೆಚ್ಚು ಶಾಸಕರ ಸಹಿ ಸಂಗ್ರಹದ ಪತ್ರವಿದೆ. ಕೋವಿಡ್‌ ಸಂಕಷ್ಟ ಮುಗಿದ ಬಳಿಕ ಆ ಪತ್ರವನ್ನು ವರಿಷ್ಠರಿಗೆ ನೀಡಲಾಗುವುದು ಎಂದು ಹೇಳಿದರು.

ರಾಜ್ಯ ಕೋವಿಡ್‌ ಸಂಕಷ್ಟದಲ್ಲಿ ಇರುವಾಗಲೂ ಕೆಲವು ದೆಹಲಿಗೆ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಅಂತಹ ನಡವಳಿಕೆ ಸರಿಯಲ್ಲ. ಕೊರೊನಾ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಿರುವಾಗ ದೆಹಲಿಯಲ್ಲಿ ಅವರ ವಿರುದ್ಧ ದೂರು ನೀಡುವುದು ಸರಿಯಲ್ಲ. ಮುಖ್ಯಮಂತ್ರಿ ವಿರುದ್ಧ ಮಾತನಾಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಈ ವಿಚಾರಗಳನ್ನು ಪತ್ರದಲ್ಲಿ ಪ್ರಸ್ತಾಪಿಸಿದ್ದೇವೆ ಎಂದು ಅವರು ಹೇಳಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ನಿತ್ಯವೂ ಹುಚ್ಚು ಹುಚ್ಚಾಗಿ ಮಾತನಾಡುತ್ತಾರೆ. ಇದನ್ನು ಪ್ರತಿಪಕ್ಷಗಳು ಅಸ್ತ್ರವಾಗಿ ಬಳಸಿಕೊಳ್ಳುತ್ತಿವೆ. ಕೆಲವು ನಾಯಕರು ಪಕ್ಕದ ಕ್ಷೇತ್ರವನ್ನು ಗೆಲ್ಲಿಸಿಕೊಳ್ಳುವ ಸಾಮರ್ಥ್ಯ ಇಲ್ಲದೇ ಇದ್ದರೂ, ಯಡಿಯೂರಪ್ಪ ಅವರ ಬಗ್ಗೆ ಮಾತನಾಡುತ್ತಾರೆ. ನಾವು ಯಡಿಯೂರಪ್ಪ ಅವರ ಜತೆಗಿದ್ದೇವೆ. ಅವರು ರಾಜೀನಾಮೆ ನೀಡಬೇಕಾಗಿಲ್ಲ ಎಂದು ರೇಣುಕಾಚಾರ್ಯ ತಿಳಿಸಿದರು.

ಯಡಿಯೂರಪ್ಪ ಅವರ ವಿರುದ್ಧ ಮಾತನಾಡುವವರಿಂದ ಪಕ್ಷ ಮತ್ತು ಸರ್ಕಾರದ ವರ್ಚಸ್ಸಿಗೆ ಧಕ್ಕೆ ಆಗುತ್ತಿದೆ. ಆ ರೀತಿ ಹಾನಿ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬುದು ನಮ್ಮ ಆಗ್ರಹ. ಈ ಸಹಿ ಸಂಗ್ರಹದ ಹಿಂದೆ ವಿಜಯೇಂದ್ರ ಅವರು ಇದ್ದಾರೆ ಎಂಬ ಮಾತುಗಳಲ್ಲಿ ಹುರುಳಿಲ್ಲ. ವಿಜಯೇಂದ್ರ ಮಾತು ಕೇಳಿ ಮಾಡುವಂತಹದ್ದು ನನಗೇನಿದೆ ಎಂದು ಅವರು ಪ್ರಶ್ನಿಸಿದರು.

ಪರ ವಿರೋಧ ಹೇಳಿಕೆ ನೀಡಬಾರದು: ಆರ್ ಅಶೋಕ್

ಪಕ್ಷದಲ್ಲಿ ಯಾರೂ ಪರ ವಿರೋಧದ ಹೇಳಿಕೆಗಳನ್ನು ನೀಡಬಾರದು. ಸಹಿ ಸಂಗ್ರಹವನ್ನೂ ಮಾಡಬಾರದು. ಮುಖ್ಯಮಂತ್ರಿಯವರ ಬಗ್ಗೆ ಹೇಳಿಕೆ ನೀಡುವುದರಿಂದ ಅನಗತ್ಯ ಗೊಂದಲ ಸೃಷ್ಟಿಯಾಗುತ್ತದೆ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದರು.

ಕೆಲವು ಗೊಂದಲಗಳ ನಿವಾರಣೆಗೆ ಸಮನ್ವಯ ಸಮಿತಿ ಸಭೆಯನ್ನು ರಚಿಸಲಾಗಿದೆ. ಯಾವುದೇ ಅಹವಾಲು ಇದ್ದರೆ ಸಮಿತಿ ಮುಂದೆ ಹೇಳಿಕೊಳ್ಳಬಹುದು. ಬಿಜೆಪಿ ವರ್ಚಸ್ಸಿಗೆ ಅನುಕೂಲ ಮಾಡುವ ದೃಷ್ಟಿಯಲ್ಲಿ ಸಮಿತಿಯನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.

‘ಶಾಸಕರಿಂದ ಸಹಿ ಸಂಗ್ರಹಿಸುವ ವ್ಯವಸ್ಥೆ ಬಿಜೆಪಿಯೊಳಗಿಲ್ಲ’
ಬಳ್ಳಾರಿ: ‘ನಾಯಕತ್ವದ ಬಗ್ಗೆ ಶಾಸಕರಿಂದ ಸಹಿ ಸಂಗ್ರಹಿಸುವ ವ್ಯವಸ್ಥೆ ಬಿಜೆಪಿಯೊಳಗೆ ಇಲ್ಲ. ಶಾಸಕ ರೇಣುಕಾಚಾರ್ಯ ಅವರಿಗೆ ಸಹಿ ಸಂಗ್ರಹದ ಕುರಿತು ಯಾರೂ ಹೇಳಿಲ್ಲ. ಅವರು ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತಾರೆ. ಪಕ್ಷದ ಹೈಕಮಾಂಡ್‌ ತೀರ್ಮಾನವೇ ಅಂತಿಮ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದರು.

ಸೋಮವಾರ ಇಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಶಾಸಕರ ಸಹಿ ಸಂಗ್ರಹಿಸುವ ವ್ಯವಸ್ಥೆ ಪಕ್ಷದಲ್ಲಿಲ್ಲ. ಅಂದಮೇಲೆ ಅದಕ್ಕೆ ಮಹತ್ವ ಕೊಡುವ ಅಗತ್ಯವೂ ಇಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT