ಸೋಮವಾರ, ಆಗಸ್ಟ್ 15, 2022
22 °C
ಗೊಂದಲದಲ್ಲಿ ವಿದ್ಯಾರ್ಥಿಗಳು, ಪೋಷಕರು l ಉಪನ್ಯಾಸಕರ ಇನ್ನಿಲ್ಲದ ಕಸರತ್ತು

ಪ್ರಥಮ ಪಿಯುಸಿ ಮೌಲ್ಯಾಂಕನ ಗೊಂದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪರೀಕ್ಷೆ ಇಲ್ಲದೆ ಪ್ರಥಮ ಪಿಯುಸಿ ವಿದ್ಯಾರ್ಥಿಗಳೆಲ್ಲ ಪಾಸ್ ಎಂದು ಘೋಷಿಸಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆ, ತಲಾ 100 ಅಂಕಗಳ ಎರಡು  ‘ಅಸೈನ್‌ಮೆಂಟ್’ಗಳ ಮೂಲಕ ಪರೀಕ್ಷೆ ನಡೆಸುತ್ತಿರುವುದು ವಿದ್ಯಾರ್ಥಿಗಳು, ಪೋಷಕರು ಮತ್ತು ಉಪನ್ಯಾಸಕರನ್ನು ಗೊಂದಲಕ್ಕೀಡು ಮಾಡಿದೆ.

ವಿದ್ಯಾರ್ಥಿಗಳ ಕಲಿಕಾ ಪ್ರಕ್ರಿಯೆಯ ನಿರಂತರತೆಯ ಉದ್ದೇಶಕ್ಕಾಗಿ ಅಸೈನ್‍ಮೆಂಟ್‍ಗಳನ್ನು ಬರೆಸಿ ಮೌಲ್ಯಾಂಕನ ನೀಡಿ, ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್ ವ್ಯವಸ್ಥೆಯಲ್ಲಿ (ಎಸ್ಎಟಿಎಸ್) ನಮೂದಿಸುವಂತೆ ಇದೇ 8ರಂದು ಇಲಾಖೆ ಸುತ್ತೋಲೆ ಹೊರಡಿಸಿದೆ.

ಸುತ್ತೋಲೆ ಪ್ರಕಾರ ಎರಡು ಮಾದರಿ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರಿಸಬೇಕು. ಅವುಗಳನ್ನು ಅಸೈನ್‍ಮೆಂಟ್ ಎಂದು ಪರಿಗಣಿಸಿ, ಉಪನ್ಯಾಸಕರು ಮೌಲ್ಯಮಾಪನ ಮಾಡಿ ಅಂಕ ನೀಡಬೇಕು. ಒಟ್ಟು 200 ಅಂಕಗಳಿಗೆ ಪಡೆದ ಅಂಕಗಳನ್ನು ಸ್ಲ್ಯಾಬ್‍ ಆಧರಿಸಿ 60 ಅಂಕಗಳಿಗೆ ಪರಿವರ್ತಿಸಿಕೊಳ್ಳಬೇಕು. ಈ ಅಂಕಗಳಿಗೆ ಉತ್ತೀರ್ಣ ಅಂಕ 35 ಮತ್ತು ಉಪನ್ಯಾಸಕರ ಆಂತರಿಕ ಮೌಲ್ಯಮಾಪನ ಅಂಕ 5 ನೀಡಬೇಕು. ಹೀಗೆ 100 ಅಂಕಗಳಿಗೆ ಎಷ್ಟು ಅಂಕಗಳನ್ನು ವಿದ್ಯಾರ್ಥಿಗಳು ಪಡೆದಿದ್ದಾರೆ ಎಂಬುದನ್ನು ಲೆಕ್ಕ ಮಾಡಿ ಎಸ್‌ಎಟಿಎಸ್‌ನಲ್ಲಿ ನಮೂದಿಸಬೇಕು. ಸುತ್ತೋಲೆಯಲ್ಲಿ 2 ಮಾದರಿ ಪ್ರಶ್ನೆಪತ್ರಿಕೆಗಳು ಎಂದು ಹೇಳಲಾಗಿದೆ. ಆದರೆ, ವಾಸ್ತವವಾಗಿ ಪ್ರತಿ ವಿಷಯಕ್ಕೆ 2 ಮಾದರಿ ಪ್ರಶ್ನೆ ಪತ್ರಿಕೆಗಳಿಗೆ ವಿದ್ಯಾರ್ಥಿಗಳು ಉತ್ತರಿಸಬೇಕಿದೆ. ಅಂದರೆ, 6 ವಿಷಯಗಳಿಂದ ಒಟ್ಟು 12 ಪ್ರಶ್ನೆಪತ್ರಿಕೆಗಳಿಗೆ ವಿದ್ಯಾರ್ಥಿಗಳು ಉತ್ತರಿಸಬೇಕು.

ಮೊದಲ ಪ್ರಶ್ನೆ ಪತ್ರಿಕೆಯ ಅಸೈನ್‍ಮೆಂಟ್‍ಗಳನ್ನು ಇದೇ 20ರೊಳಗೆ ಸಲ್ಲಿಸಬೇಕು. ಬೆಂಗಳೂರಿನ ಕೆಲವು ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಸಂಪರ್ಕಿಸಲು ಉಪನ್ಯಾಸಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

‘ಅತಿಥಿ ಉಪನ್ಯಾಸಕರನ್ನು ಈಗಾಗಲೇ ಇಲಾಖೆ ಬಿಡುಗಡೆ ಮಾಡಿದೆ. ಅವರಿಗೆ ಕೆಲವು ತಿಂಗಳ ವೇತನ ಬಾಕಿ ಬೇರೆ ಇದೆ. ಅತಿಥಿ ಉಪನ್ಯಾಸಕರನ್ನು ಏಕಾಏಕಿ ಬಿಡುಗಡೆಗೊಳಿಸಿರುವುದರಿಂದ ಅವರೆಲ್ಲರೂ ಅಸೈನ್‍ಮೆಂಟ್ ಮೌಲ್ಯಮಾಪನ ಮಾಡದಿರಲು ನಿರ್ಧರಿಸಿದ್ದಾರೆ. ಇದು ಪ್ರಾಂಶುಪಾಲರಿಗೆ ತಲೆನೋವು ತಂದಿದೆ.

‘ವಿದ್ಯಾರ್ಥಿ ವೇತನ ಪಡೆಯಲು ಕೆಲವು ಪ್ರವರ್ಗದ ವಿದ್ಯಾರ್ಥಿಗಳಿಗೆ ಇರಬೇಕಾದ ಕನಿಷ್ಠ ಶೇಕಡ ಅಂಕಗಳನ್ನು ಗೊತ್ತುಪಡಿಸಲಾಗಿದೆ. ವಿದ್ಯಾರ್ಥಿಗಳು ಅಸೈನ್‍ಮೆಂಟ್ ಸಲ್ಲಿಸದಿದ್ದರೆ, ಕನಿಷ್ಠ ಅಂಕ  ಮಾತ್ರ ಸಿಗಲಿದೆ. ಅಂಥವರು ಶಿಷ್ಯವೇತನದಿಂದ ವಂಚಿತರಾಗುವ ಸಾಧ್ಯತೆಗಳಿವೆ. ಆದ್ದರಿಂದ ಈ ಮೌಲ್ಯಾಂಕನ ವಿಧಾನವೇ ವಿರೋಧಭಾಸದಿಂದ ಕೂಡಿದೆ’ ಎಂದೂ ಪ್ರಾಂಶುಪಾಲರೊಬ್ಬರು ಅಭಿಪ್ರಾಯಪಟ್ಟರು.

ಮೌಲ್ಯಾಂಕನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮತ್ತು ದ್ವಿತೀಯ ಪಿಯುಸಿ ತರಗತಿ ಆರಂಭವಾಗುವ ಸಂದರ್ಭದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ನೇರ ಪರೀಕ್ಷೆ ನಡೆಸಲು ಅವಕಾಶ ಕಲ್ಪಿಸುವಂತೆ ಪದವಿ ಪೂರ್ವ ಉಪನ್ಯಾಸಕರ ಸಂಘ ಈಗಾಗಲೇ ಮನವಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು