ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಿಷನ್‌ ಹೇಗೆ ದೇಣಿಗೆಯಾಗುತ್ತದೆ? ಕಾಂಗ್ರೆಸ್‌ಗೆ ಬಿಜೆಪಿ ಪ್ರಶ್ನೆ

Last Updated 4 ನವೆಂಬರ್ 2022, 16:09 IST
ಅಕ್ಷರ ಗಾತ್ರ

ಬೆಂಗಳೂರು: ರಾಜಕೀಯ ಪಕ್ಷಗಳ ದೇಣಿಗೆ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಟ್ವೀಟ್‌ ಸಮರ ನಡೆದಿದೆ.

ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಟಿಕೆಟ್‌ ಬಯಸಿದವರಿಗೆ ಅರ್ಜಿ ಶುಲ್ಕ ₹5 ಸಾವಿರ ಮತ್ತು ಅರ್ಜಿ ಸಲ್ಲಿಸುವಾಗ ಸಾಮಾನ್ಯ ವರ್ಗದವರು ₹2 ಲಕ್ಷ ಡಿಡಿ ಇಡಬೇಕು ಎಂಬ ವಿಚಾರ ಉಭಯ ಪಕ್ಷಗಳ ಕೆಸರೆರಚಾಟಕ್ಕೆ ಕಾರಣವಾಗಿದೆ

2018ರಲ್ಲಿ ನಾಮಪತ್ರ ಸಲ್ಲಿಸಲು ಕಾರ್ಯಕರ್ತರಿಂದ ಡಿ.ಕೆ. ಶಿವಕುಮಾರ್‌ ಅವರು ₹50-100 ಎಂದು ಭಿಕ್ಷೆ ಬೇಡಿದರು. ಕೋಟಿ ಕೋಟಿ ರೂಪಾಯಿ ಆಸ್ತಿ ಇದ್ದರೂ ಇದೀಗ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಟಿಕೆಟ್‌ ಆಕಾಂಕ್ಷಿಗಳಿಂದ ಕಾಂಗ್ರೆಸ್‌ ಲಕ್ಷ ಲಕ್ಷ ಲೂಟಿ ಮಾಡಲು ಹೊರಟಿದೆ. ಇದರಿಂದ ಆಕಾಂಕ್ಷಿಗಳ ಜೇಬು ಖಾಲಿಯಾಗಲಿದೆಯೇ ಹೊರತು ಖಾಲಿಯಾದ ಜೇಬಿಗೆ ಟಿಕೆಟ್‌ ಬರುವುದಿಲ್ಲ ಎಂದು ಬಿಜೆಪಿ ವ್ಯಂಗ್ಯವಾಡಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌, ಎಲ್ಲಾ ರಾಜಕೀಯ ಪಕ್ಷಗಳೂ ದೇಣಿಗೆ ಪಡೆಯುತ್ತವೆ, ಪಕ್ಷ ನಡೆಸಲು ದೇಣಿಗೆ, ಶುಲ್ಕಗಳು ಸಾಮಾನ್ಯ ಸಂಗತಿ ಎಂದು ತಿರುಗೇಟು ನೀಡಿದೆ.

ಶ್ರೀಮಂತ ಪಕ್ಷ ಬಿಜೆಪಿಯ ಬಳಿ ಶೇ 40 ಕಮಿಷನ್ ಲೂಟಿಯ ಹಣ, ಸಿಎಂ ಹುದ್ದೆಯಿಂದ ₹2,500 ಕೋಟಿ ಹಣ, ಸರ್ಕಾರಿ ಹುದ್ದೆಗಳ ಮಾರಾಟದ ಹಣ, ಚುನಾವಣಾ ಬಾಂಡ್‌ಗಳ ಹಣವಿರಬಹುದು. ನಮಗೆ ದೇಣಿಗೆಯ ಹಣವಷ್ಟೇ ಆಸರೆ, ಭ್ರಷ್ಟ ಹಣವಲ್ಲ ಎಂದು ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ಕಾಂಗ್ರೆಸ್‌ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಕಮಿಷನ್‌ ಹೇಗೆ ದೇಣಿಗೆಯಾಗುತ್ತದೆ? ಎಂದು ಬಿಜೆಪಿ ಪ್ರಶ್ನಿಸಿದೆ.

ಡಿ.ಕೆ. ಶಿವಕುಮಾರ್‌ ಬಳಿ ಅಕ್ರಮವಾಗಿದ್ದ ₹200 ಕೋಟಿ ಇ.ಡಿ ವಶಪಡಿಸಿದ್ದು ದೇಣಿಗೆ ಹಣವೇ? ಸಿದ್ದರಾಮಯ್ಯಗೆ ಹ್ಯೂಬ್ಲೋಟ್‌ ವಾಚ್‌ ಕೊಟ್ಟಿದ್ದೂ ದೇಣಿಗೆಯೇ? ₹2 ಸಾವಿರ ಕೋಟಿ ಮೊತ್ತದ ನ್ಯಾಷನಲ್‌ ಹೆರಾಲ್ಡ್‌ ಆಸ್ತಿಗಳನ್ನು ಸೋನಿಯಾ ಪರಿವಾರಕ್ಕೆ ನೀಡಿದ್ದು ದೇಣಿಗೆಯೇ? ಎಂದು ಬಿಜೆಪಿ ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT