ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಕ್ಕೆ ಕಾಂಗ್ರೆಸ್‌ ಮಾರಕ: ಯಡಿಯೂರಪ್ಪ ಕಿಡಿ

Last Updated 13 ಜನವರಿ 2021, 11:36 IST
ಅಕ್ಷರ ಗಾತ್ರ

ಬೆಂಗಳೂರು: 'ಕಾಂಗ್ರೆಸ್ ಈ ದೇಶದಲ್ಲಿ ಉಳಿಯಬಾರದು. ಕಾಂಗ್ರೆಸ್ ಪಕ್ಷದ ದೇಶಕ್ಕೆ ಮಾರಕ' ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕಿಡಿಕಾರಿದರು.

ಅರಮನೆ ಮೈದಾನದಲ್ಲಿ ಬಿಜೆಪಿ ವತಿಯಿಂದ ಬುಧವಾರ ನಡೆದ ‘ಜನಸೇವಕ’ ಸಮಾವೇಶದ ಸಮಾರೋಪದಲ್ಲಿ ಮಾತನಾಡಿದ ಅವರು, ‘ಕರ್ನಾಟಕ ಕಾಂಗ್ರೆಸ್‌ ಮುಕ್ತವಾಗಬೇಕು. ಎಲ್ಲರೂ ಸೇರಿ ಮಹಾತ್ಮ ಗಾಂಧಿಯವರ ಕನಸು ನನಸು ಮಾಡಲು ಕೆಲಸ ಮಾಡಬೇಕು. ಸಾಧನೆ ಮಾತಾಗಬೇಕು, ಮಾತು ಸಾಧನೆಯಾಗಬಾರದು’ ಎಂದು ಕಿವಿಮಾತು ಹೇಳಿದರು.

‘ಜಗತ್ತು ಮೆಚ್ಚುವ ಮಹಾನಾಯಕ ಮೋದಿ. ಅವರು ಆಡಳಿತ ಚುಕ್ಕಾಣಿ ಹಿಡಿದ ಬಳಿಕ ದೇಶವಿದೇಶ ಸುತ್ತಿ ಬಂದರೂ ವಿಶ್ರಾಂತಿ ಮಾಡಿಲ್ಲ. ಜಗತ್ತಿಗೇ ಮಾರ್ಗದರ್ಶನ ನೀಡುವ ನಾಯಕರಾಗಿ ಬೆಳೆದರು. ಪ್ರಪಂಚದಲ್ಲೇ ದೊಡ್ಡ ಪಕ್ಷ ಬಿಜೆಪಿ. ಅವರ ಪರಿಶ್ರಮ ಬಹಳ ದೊಡ್ಡದು. ಅವರ ಹೋರಾಟದ ಮುಂದೆ ನಮ್ಮದು ಏನೂ ಇಲ್ಲ’ ಎಂದರು.

‘ಗ್ರಾಮ ಪಂಚಾಯಿತಿಗೆ ಆಯ್ಕೆ ಆಗಿರುವ ಎಲ್ಲ ಸದಸ್ಯರು ಊರಿನ ಹಿರಿಯರ ಆಶೀರ್ವಾದ ಪಡೆಯಬೇಕು. ಪಕ್ಷ ಸಂಘಟನೆಗೆ ಅವರ ಸಹಕಾರ ಪಡೆಯಬೇಕು’ ಎಂದು ಕರೆ ನೀಡಿದರು.

‘ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಪಕ್ಷ ಸಂಘಟನೆ ಮಾಡುತ್ತಿರುವ ರೀತಿಯಲ್ಲಿಯೇ ಪ್ರತಿಯೊಬ್ಬರು ಪಕ್ಷ ಕಟ್ಟುವ ಕೆಲಸ ಮಾಡಬೇಕು. ಚಿಹ್ನೆ ಇಲ್ಲದೆ ಗೆದ್ದ ನಾವು, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯನ್ನೂ ಗೆಲ್ಲಬೇಕು. ಪಕ್ಷ ಸಂಘಟನೆ ಮಾಡಬೇಕು’ ಎಂದರು.

‘ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷ ನಮ್ಮದು. ಅತಿ ಹೆಚ್ಚು ಸಂಸದರು ಹೊಂದಿರುವ ಪಕ್ಷದಲ್ಲಿ ನಾವಿದ್ದೇವೆ. ಗ್ರಾಮ ಪಂಚಾಯತಿ ಸದಸ್ಯರಾಗಿರುವ ನೀವು ಹಳ್ಳಿಗಳಿಗೆ ಸರ್ಕಾರದ ಯೋಜನೆ ತಲುಪಿಸಬೇಕು. ಯಾವುದೇ ಭ್ರಷ್ಟಾಚಾರ ನಡೆಯದಂತೆ ಕೆಲಸ ಮಾಡಬೇಕು. ಹಳ್ಳಿಗಳಲ್ಲಿ ಕೆಲಸ ಮಾಡಿ ಯುವ ಮೋರ್ಚಾ ಗಟ್ಟಿಗೊಳಿಸಬೇಕು. ಪರಿಶಿಷ್ಟ ಜಾತಿ, ಪಂಗಡದವರನ್ನು ಒಗ್ಗೂಡಿಸುವ ಕೆಲಸ ಮಾಡಬೇಕು. ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅಭ್ಯರ್ಥಿಗಳು ಪಕ್ಷದ ಚಿಹ್ನೆ ಮೇಲೆ ಗೆದ್ದಿಲ್ಲ. ಆದರೆ, ಜಿಲ್ಲಾ ಪಂಚಾಯತಿ ಚುನಾವಣೆ ಚಿಹ್ನೆ ಮೇಲೆ ಗೆಲ್ಲುವುದಾಗಿದೆ. ಉತ್ತಮ ಕೆಲಸ ಮಾಡಬೇಕಿರುವ ಹೊಣೆ ನಮ್ಮ ಮೇಲಿದೆ. ಮತದಾರರು ನಮ್ಮ ಪ್ರಭುಗಳು. ಅವರ ಆಶಯದಿಂದ ನಾವು ಇಲ್ಲಿಗೆ ಬಂದಿದ್ದೇವೆ. ಅವರ ಋಣ ತೀರಿಸಬೇಕು’ ಎಂದು ಕರೆ ನೀಡಿದರು.

‘ಇತ್ತೀಚೆಗೆ ನಡೆದ ಎಲ್ಲ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಮುಂದಿನ ದಿನಗಳಲ್ಲಿ ನಮ್ಮೆಲ್ಲರ ಶ್ರಮದಿಂದ 150ಕ್ಕೂ ಹೆಚ್ಚು ಸೀಟು ಗೆಲ್ಲಬೇಕಿದೆ. ಈ ನಾಡು, ರಾಜ್ಯವನ್ನು ಕಟ್ಟುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ’ ಎಂದರು.

ಕಾರ್ಯಕ್ರಮಕ್ಕೆ ಚಾಲನೆ‌ ನೀಡಿದ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ‘ಈ ಬಾರಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಪಕ್ಷದ ಬೆಂಬಕಲಿಗರು ಶೇ 60ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದಿದ್ದಾರೆ. ಬಿಜೆಪಿ ಬೆಂಬಲಿತ 45 ಸಾವಿರಕ್ಕೂ ಹೆಚ್ಚು ಜನ ಆಯ್ಕೆಯಾಗಿದ್ದಾರೆ. ಇದು ಕಾರ್ಯಕರ್ತರ ಗೆಲುವು, ರಾಜ್ಯದ ಜನರ ಗೆಲುವು’ ಎಂದರು.

'ಬಿಜೆಪಿಯ ಗೆಲುವಿನ ಓಟ ಇಲ್ಲಿಗೇ ನಿಲ್ಲುವುದಿಲ್ಲ, ಮುಂದುವರೆಯಲಿದೆ. ಮುಂಬರುವ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಇದೇ ರೀತಿಯ ಗೆಲುವು ಮುಂದುವರೆಯಲಿದೆ’ ಎಂದರು.

ನಳಿನ್ ಕುಮಾರ್ ಕಟೀಲ್ ಮಾತನಾಡಿ, 'ಕಾಂಗ್ರೆಸ್ಸಿಗೆ ಗೋವಿನ ಶಾಪವಿದೆ. ಇಂದಿರಾ ಗಾಂಧಿ ಕಾಲದಲ್ಲಿ ಕಾಂಗ್ರೆಸ್ ಗೆದ್ದಿದ್ದೆ ಹಸು ಮತ್ತು ಕರುವಿನ ಚಿಹ್ನೆ ಮೇಲೆ. ಗೆದ್ದ ಮೇಲೆ ಅವರು ಗೋವನ್ನು ಮರೆತರು. ರಾಜ್ಯದ ಪ್ರತಿಷ್ಠಿತ ವ್ಯಕ್ತಿಯೊಬ್ಬರು ನಾನು ಗೋ ಮಾಂಸ ತಿನ್ಮುತ್ತೇನೆಂದು ಎಂದು ಹೇಳುತ್ತಾರೆ. ಹೀಗಾಗಿ, ರಾಜ್ಯದಲ್ಲಿ ಕಾಂಗ್ರೆಸ್‌ ನೆಲ ಕಚ್ಚಿದೆ’ ಎಂದರು.

‘ಚಿಹ್ನೆ ಇಲ್ಲದೇ ಕಣಕ್ಕಿಳಿದ ಪಕ್ಷದ ಕಾರ್ಯಕರ್ತರು ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಗೆಲುವು ಪಡೆದಿದ್ದಾರೆ. ಮಹಾತ್ಮ ಗಾಂಧಿ ಆಶಯದಂತೆ ಪಕ್ಷದ ವತಿಯಿಂದ ಗ್ರಾಮ ಸ್ವರಾಜ್ಯ ಯಾತ್ರೆ ಮಾಡಿದ್ದೇವೆ. ಗ್ರಾಮ ಪಂಚಾಯಿತಿಗೆ ತೆರಳಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮ ಆಯೋಜಿಸಿದ್ದೆವು. ಬಾದಾಮಿಯಲ್ಲಿ ಅತಿ ಹೆಚ್ಚು ಸ್ಥಾನ ಪಡೆದಿದ್ದೇವೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕನಕಪುರದಲ್ಲಿ ಗೆಲುವು ಪಡೆದಿದ್ದೇವೆ. ಇದಕ್ಕೆಲ್ಲ ಕಾರಣ ಆರೂವರೆ ವರ್ಷ ಪ್ರಧಾನಿ ನರೇಂದ್ರ ಮೋದಿಯವರ ಕೆಲಸ. ಯಡಿಯೂರಪ್ಪ ಅವರ ಉತ್ತಮ ಕೆಲಸ’ ಎಂದರು.

‘ಯಡಿಯೂರಪ್ಪ ದೊಡ್ಡ ಹೋರಾಟ ಮಾಡಿ ಬಂದವರು. ಸಾಮಾನ್ಯ ಪಂಚಾಯತಿ ಚುನಾವಣೆಯಿಂದ ಗೆದ್ದು, ಮುಖ್ಯಮಂತ್ರಿ ಆಗಿದ್ದಾರೆ. ಯಡಿಯೂರಪ್ಪ ಅವರ ಕೆಲಸ, ಅವರ ಹೋರಾಟ ನಮ್ಮ ಹೆಮ್ಮೆ ಮತ್ತು ಆದರ್ಶ. ಚಾ ಮಾರುತ್ತಿದ್ದ ಹುಡುಗ ಪ್ರಧಾನಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲಾ ಮಚಾಯಿತಿ ಚುನಾವಣೆ ಮತ್ತು ಬಿಬಿಎಂಪಿ ಚುನಾವಣೆ ಎದುರಾಗುತ್ತಿದೆ. ಅಲ್ಲಿಯೂ ನಮ್ಮ ಗೆಲುವಿನ ಓಟ ಮುಂದುವರಿಯಬೇಕು’ ಎಂದರು.

ವೇದಿಕೆಯಲ್ಲಿ ಕಾಣಿಸಿಕೊಂಡ ಮುನಿರತ್ನ:
ಮುಖ್ಯಮಂತ್ರಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಆರ್‌.ಆರ್. ನಗರ ಕ್ಷೇತ್ರ ಶಾಸಕ ಮುನಿರತ್ನ ವೇದಿಕೆ ಬಂದರು. ಯಾರೆಲ್ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ವಿಷಯ ಗೊತ್ತಾಗುತ್ತಿದ್ದಂತೆ, ತಮ್ಮ ಹೆಸರು ಇಲ್ಲದಿರುವುದರಿಂದ ಕಂಡು ಮುನಿರತ್ನ ಅಸಮಧಾನಗೊಂಡಿದ್ದರು. ಅಲ್ಲದೆ, ಯಾರ ಕೈಗೂ ಸಿಗದೆ, ಅಜ್ಞಾತ ಸ್ಥಳಕ್ಕೆ ತೆರಳಿದ್ದರು.

ಕೊರೊನಾ ನಿಯಮ ಉಲ್ಲಂಘನೆ:
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾರ್ಯಕರ್ತರ ಪೈಕಿ ಅನೇಕರು ಮಾಸ್ಕ್‌ ಧರಿಸಿರಲಿಲ್ಲ. ಅಲ್ಲದೆ ವೈಯಕ್ತಿಕ ಅಂತರ ಕೂಡಾ ಕಾಪಾಡಲಿಲ್ಲ. ಜನಜಂಗುಳಿ, ಗುಂಪು ಗುಂಪಾಗಿ ಜನರು ಕಾಣಿಸಿಕೊಂಡರು.

ಸಚಿವರಾದ ಆರ್‌. ಅಶೋಕ, ಎಸ್‌.ಟಿ. ಸೋಮಶೇಖರ್, ಕೆ. ಗೋಪಾಲಯ್ಯ, ಎಸ್‌. ಸುರೇಶ್‌ಕುಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ‌ನಾರಾಯಣ, ಸಂಸದರಾದ ಪ್ರತಾಪ್ ಸಿಂಹ, ಪಿ.ಸಿ. ಮೋಹನ್, ಶಿವಕುಮಾರ್ ಉದಾಸಿ, ಬಿ.ವೈ. ವಿಜಯೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT