ಬುಧವಾರ, ಸೆಪ್ಟೆಂಬರ್ 22, 2021
29 °C

ಬಿಜೆಪಿ ಆಡಳಿತದಲ್ಲಿ ರಾಜ್ಯ 10 ವರ್ಷ ಹಿಂದಕ್ಕೆ ಹೋಗಿದೆ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಜೆಪಿ ಆಡಳಿತದಲ್ಲಿ ರಾಜ್ಯವು 10 ವರ್ಷಗಳಷ್ಟು ಹಿಂದಕ್ಕೆ ಹೋಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಬಗ್ಗೆ ಮಾತನಾಡಿರುವ ಸಿದ್ದರಾಮಯ್ಯ, ಯಡಿಯೂರಪ್ಪ ಬದಲಾಗುವ ಬಗ್ಗೆ 6 ತಿಂಗಳ ಹಿಂದೆಯೇ ನನಗೆ ಮಾಹಿತಿ ಇತ್ತು. ನಾಲ್ಕು ಬಾರಿ ಮುಖ್ಯಮಂತ್ರಿಯಾದರೂ ಅವರಿಗೆ ಅವಧಿ ಪೂರೈಸಲು ಆಗಲಿಲ್ಲ. ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆಂದು ನನಗೆ ಗೊತ್ತಿಲ್ಲ. ಅದು ನರೇಂದ್ರ ಮೋದಿ, ಅಮಿತ್‌ ಶಾಗೆ ಮಾತ್ರ ಗೊತ್ತು. ಬಿಜೆಪಿಯವರಿಗೂ ಗೊತ್ತಿಲ್ಲ ಎಂದು ಟೀಕಿಸಿದ್ದಾರೆ.

ಹಾಗೆಯೇ, ನಮ್ಮ (ಕಾಂಗ್ರೆಸ್‌) ಸರ್ಕಾರವನ್ನು ಬಿಜೆಪಿಯವರು 10 ಪರ್ಸೆಂಟ್‌ ಸರ್ಕಾರ ಎಂದು ಕರೆದಿದ್ದರು. ಆದರೆ, ಯಡಿಯೂರಪ್ಪ ಸರ್ಕಾರ 30 ಪರ್ಸೆಂಟ್‌ ಸರ್ಕಾರ ಆಗಿತ್ತು. ಬಿಜೆಪಿಯವರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಬಿಜೆಪಿ ಆಡಳಿತದಲ್ಲಿ ರಾಜ್ಯ 10 ವರ್ಷ ಹಿಂದಕ್ಕೆ ಹೋಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: 

ಈ ಬಗ್ಗೆ ಟ್ವಿಟರ್‌ನಲ್ಲಿಯೂ ಗುಡುಗಿರುವ ಸಿದ್ದರಾಮಯ್ಯ ಸರಣಿ ಟ್ವೀಟ್‌ಗಳ ಮೂಲಕ ಬಿಜೆಪಿ ವಿರುದ್ಧ ಚಾಟಿ ಬೀಸಿದ್ದಾರೆ.

'ಪ್ರವಾಹದಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೆಳೆ ನಾಶವಾಗಿದೆ, ಈ ವರೆಗೆ 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, ಜಾನುವಾರುಗಳು ಸಾವಿಗೀಡಾಗಿವೆ. ಜನರ ಕಷ್ಟ ಅರಿತು ಅವರ ನೆರವಿಗೆ ಧಾವಿಸಬೇಕಿದ್ದ ಬಿಜೆಪಿ ನಾಯಕರು ಮುಖ್ಯಮಂತ್ರಿ ಬದಲಾವಣೆ, ಮಂತ್ರಿ ಪದವಿ ಉಳಿಸಿಕೊಳ್ಳುವುದರಲ್ಲಿ ಮಗ್ನರಾಗಿದ್ದಾರೆ' ಎಂದು ಕಿಡಿಕಾರಿದ್ದಾರೆ.

'ಬಿಜೆಪಿ ಪಕ್ಷವೇ ಭ್ರಷ್ಟರ ಪಕ್ಷವಾಗಿರುವುದರಿಂದ ಶಶಿಕಲಾ ಜೊಲ್ಲೆಯವರು ಲಂಚ ಪಡೆದದ್ದನ್ನು ಬಿಜೆಪಿ ನಾಯಕರು ಸಾಧನೆಯಾಗಿ ಪರಿಗಣಿಸಿದಂತಿದೆ. ಇಲ್ಲದಿದ್ದರೆ ದಾಖಲೆ ಸಮೇತ ಸಿಕ್ಕಿಬಿದ್ದಿರುವ ಭ್ರಷ್ಟ ಮಂತ್ರಿಯನ್ನು ಇನ್ನೂ ಸಚಿವ ಸಂಪುಟದಲ್ಲಿ ಇಟ್ಟುಕೊಂಡು ಸುಮ್ಮನೆ ಕೂರುತ್ತಿದ್ದರೆ?' ಎಂದು ಪ್ರಶ್ನಿಸಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, 'ಒಬ್ಬ ಭ್ರಷ್ಟ ಮುಖ್ಯಮಂತ್ರಿಯನ್ನು ತೆಗೆದು ಇನ್ನೊಬ್ಬ ಭ್ರಷ್ಟನನ್ನು ಮುಖ್ಯಮಂತ್ರಿ ಮಾಡಿದರೆ ಸಾಮಾನ್ಯ ಜನರಿಗೇನು ಲಾಭ? ಅದರ ಬದಲು ಅಧಿಕಾರ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿರುವ‌ ಬಿಜೆಪಿ ಪಕ್ಷವೇ ಅಧಿಕಾರ ಬಿಟ್ಟು ತೊಲಗಿದರೆ ಜನ ನೆಮ್ಮದಿಯ ಬದುಕು ನಡೆಸುವಂತಾಗುತ್ತದೆ' ಎಂದಿದ್ದಾರೆ.

ಮುಂದುವರಿದು, 'ಹೆತ್ತವರಿಗೆ ಹೆಗ್ಗಣ ಮುದ್ದು ಎಂಬ ಗಾಧೆ ಮಾತಿನಂತೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಯಡಿಯೂರಪ್ಪ ಅವರೇ ಉತ್ತಮ ಮುಖ್ಯಮಂತ್ರಿಯಾಗಿ ಕಂಡಿದ್ದಾರೆ. ಸ್ವತಃ ಬಿಜೆಪಿ ಶಾಸಕರೇ ಯಡಿಯೂರಪ್ಪನವರ ಕುಟುಂಬ ಸರ್ಕಾರದ ಖಜಾನೆಯನ್ನು ಲೂಟಿ ಮಾಡುತ್ತಿದೆ ಅಂದಿದ್ದಾರೆ. ಇದಕ್ಕಿಂತ ಬೇರೆ ಸಾಕ್ಷಿ ಬೇಕಾ?' ಎಂದು ಕುಟುಕಿದ್ದಾರೆ.

ನ್ನೂ ಓದಿ


ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು