ಬುಧವಾರ, ಏಪ್ರಿಲ್ 21, 2021
31 °C

ಇಂದಿರಾನಗರ ಇನ್‌ಸ್ಪೆಕ್ಟರ್‌ಗೆ ನಿರೀಕ್ಷಣಾ ಜಾಮೀನು ನಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಪರಾಧ ಪ್ರಕರಣವೊಂದರಲ್ಲಿ ‘ಬಿ’ ವರದಿ ಸಲ್ಲಿಸಲು ₹ 10 ಲಕ್ಷ ಲಂಚ ಪಡೆದಿರುವ ಆರೋಪ ಎದುರಿಸುತ್ತಿರುವ ಇಂದಿರಾನಗರ ಠಾಣೆಯ ಇನ್‌ಸ್ಪೆಕ್ಟರ್‌ ರಾಮಮೂರ್ತಿ ಬಿ. ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನಗರದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.

ಇಂದಿರಾನಗರ ಕ್ಲಬ್‌ನಲ್ಲಿ ನಡೆದಿದ್ದ ಗಲಾಟೆ ಪ್ರಕರಣವೊಂದರಲ್ಲಿ ಆರೋಪಿಗಳ ಪರದಿ ಸಲ್ಲಿಸಲು ರಾಮ್‌ ಮೋಹನ್‌ ಮೆನನ್‌ ಮತ್ತು ಇತರರಿಂದ ₹ 10 ಲಕ್ಷ ಲಂಚ ಪಡೆದಿರುವ ಆರೋಪ ಇನ್‌ಸ್ಪೆಕ್ಟರ್‌ ರಾಮಮೂರ್ತಿ ಮತ್ತು ಸಬ್‌ ಇನ್‌ಸ್ಪೆಕ್ಟರ್‌ ಚಿದಾನಂದ ಶಿವಾಂಗಿ ಮೇಲಿದೆ. ಇಂದಿರಾನಗರ ಕ್ಲಬ್ ಕಾರ್ಯದರ್ಶಿ ಎಂ. ನಾಗೇಂದ್ರ ನೀಡಿರುವ ದೂರನ್ನು ಆಧರಿಸಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪ್ರಕರಣ ದಾಖಲಿಸಿತ್ತು.

ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ರಾಮಮೂರ್ತಿ ಅರ್ಜಿ ಸಲ್ಲಿಸಿದ್ದರು. ಆಕ್ಷೇಪಣೆ ಸಲ್ಲಿಸಿದ್ದ ಎಸಿಬಿ ಪರ ಪಬ್ಲಿಕ್‌ ಪ್ರಾಸಿಕ್ಯೂಟರ್‌, ಇನ್‌ಸ್ಪೆಕ್ಟರ್‌ ಈಸ್ಟ್ ಕಲ್ಚರಲ್‌ ಅಸೋಸಿಯೇಷನ್‌ ಕ್ಲಬ್‌ನಲ್ಲಿ ಸದಸ್ಯತ್ವ ಪಡೆಯಲು ರಾಮ್ ಮೋಹನ್‌ ಮೆನನ್‌ ಒಡೆತನದ ಕಂಪನಿಯ ಖಾತೆಯಿಂದ ಹಣ ಪಾವತಿಸಿರುವುದನ್ನು ತನಿಖಾ ತಂಡ ಪತ್ತೆ ಮಾಡಿರುವುದನ್ನು ನ್ಯಾಯಾಲಯಕ್ಕೆ ತಿಳಿಸಿದ್ದರು. ಹಲವು ದಾಖಲೆಗಳನ್ನೂ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

‘ಭ್ರಷ್ಟಾಚಾರದ ಆರೋಪ ಹೊತ್ತಿರುವ ಪೊಲೀಸ್‌ ಅಧಿಕಾರಿಗಳಿಗೆ ಜಾಮೀನು ಮಂಜೂರು ಮಾಡುವಾಗ ಉದಾರ ನೀತಿ ಅನುಸರಿಸಿದರೆ ಕ್ರಿಮಿನಲ್‌ ನ್ಯಾಯದಾನ ವ್ಯವಸ್ಥೆಯ ಕುರಿತಂತೆ ಸಾಮಾಜಿಕವಾಗಿ ಕೆಟ್ಟ ಪರಿಣಾಮಗಳು ಉಂಟಾಗುವ ಸಾಧ್ಯತೆ ಇದೆ. ಆರೋಪಿಯು ಇನ್ನೂ ₹ 7.05 ಲಕ್ಷ ಲಂಚದ ಹಣವನ್ನು ಯಾವ ಮಾರ್ಗದಲ್ಲಿ ಪಡೆದಿದ್ದಾರೆ ಎಂಬುದನ್ನು ತನಿಖೆ ನಡೆಸಬೇಕಿದೆ. ಈ ಹಂತದಲ್ಲಿ ಆರೋಪಿಯು ನಿರೀಕ್ಷಣಾ ಜಾಮೀನು ಪಡೆಯಲು ಅರ್ಹನಲ್ಲ’ ಎಂದು ರಾಮಮೂರ್ತಿ ಅವರ ಅರ್ಜಿಯನ್ನು ತಿರಸ್ಕರಿಸಿ ಫೆಬ್ರುವರಿ 16ರಂದು ಹೊರಡಿಸಿರುವ ಆದೇಶದಲ್ಲಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಲಕ್ಷ್ಮೀನಾರಾಯಣ ಭಟ್‌ ಉಲ್ಲೇಖಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು