ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀವು ಎಷ್ಟು ಜನರಿಗೆ ಲಸಿಕೆ ಕೊಡಿಸಿದ್ದೀರಿ: ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ

Last Updated 13 ಮೇ 2021, 11:46 IST
ಅಕ್ಷರ ಗಾತ್ರ

ಬೆಂಗಳೂರು: ನೀವು ಎಷ್ಟು ಜನರಿಗೆ ಲಸಿಕೆ ಕೊಡಿಸಿದ್ದೀರಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರಾಜ್ಯ ಬಿಜೆಪಿ ಪ್ರಶ್ನಿಸಿದೆ.

ಈ ವಿಚಾರವಾಗಿ ಗುರುವಾರ ಸರಣಿ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, 'ಬಾಯಿಬಿಟ್ಟರೆ ಬೊಗಳೆ ಬಿಡುವ ಸಿದ್ದರಾಮಯ್ಯನವರೇ, ಬಾದಾಮಿಯಲ್ಲಿ ಎಷ್ಟು ಜನ ಸೋಂಕಿಗೆ ಒಳಗಾಗಿದ್ದಾರೆ ಎನ್ನುವ ಮಾಹಿತಿಯಿದೆಯೇ? ಆಕ್ಸಿಜನ್ ಹಾಗೂ ವೆಂಟಿಲೇಟರ್ ವ್ಯವಸ್ಥೆ ಇರುವ ಆಸ್ಪತ್ರೆ ಎಷ್ಟಿದೆ? ಎಷ್ಟು ಜನರಿಗೆ ಲಸಿಕೆ ಕೊಡಿಸಿದ್ದೀರಿ? ಶಾಸಕರಾಗಿ ಇದು ನಿಮ್ಮ ಜವಾಬ್ದಾರಿ ಎಂಬುದನ್ನು ಮರೆತಿದ್ದೀರಾ?' ಎಂದು ಕೇಳಿದೆ.

'ಅಧಿಕಾರದಲ್ಲಿದ್ದಾಗ ಬಿಟ್ಟಿ ಭಾಗ್ಯಗಳ ಮೂಲಕ ರಾಜ್ಯದಲ್ಲಿ ಅಸ್ಥಿರತೆ ಮೂಡಿಸಿ, ಈಗ ನಾನು ಅಧಿಕಾರದಲ್ಲಿದ್ದರೆ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆದ್ದಿದ್ದರೆ ಎಂಬ 'ರೆ' ರಾಗ ಎಳೆಯುತ್ತಿದ್ದೀರಿ. ನೀವು ಅಧಿಕಾರದಲ್ಲಿದ್ದಾಗ ಮಾಡಿದ ಅವಾಂತರಗಳನ್ನು ಬಿಚ್ಚಿಡಬೇಕೇ?' ಎಂದು ಬಿಜೆಪಿ ಪ್ರಶ್ನೆ ಮಾಡಿದೆ.

'ಭಯದಿಂದ 'ಯಾರಿಗೂ ಪ್ರವೇಶವಿಲ್ಲ' ಎಂದು ಮನೆ ಮುಂದೆ ಬೋರ್ಡ್ ತಗುಲಿಸಿಕೊಂಡಿರುವ ಸಿದ್ದರಾಮಯ್ಯ ಅವರೇ, ಮನೆ ಒಳಗೆ ಕುಳಿತು ಏನೇನೋ ಬಡಾಯಿ ಕೊಚ್ಚಿಕೊಳ್ಳಬೇಡಿ. ಸಾಧ್ಯವಾದರೆ ನೀವು ಸೋತಿರುವ ಚಾಮುಂಡೇಶ್ವರಿ ಹಾಗೂ ಶಾಸಕರಾಗಿರುವ ಬಾದಾಮಿ ಕ್ಷೇತ್ರಕ್ಕೆ ಒಂದು ಸುತ್ತು ಹೋಗಿ ಬನ್ನಿ. ಆಗ ಜನರ ಕಷ್ಟದ ಅರಿವಾಗುತ್ತದೆ' ಎಂದು ಬಿಜೆಪಿ ಹೇಳಿದೆ.

'ನಮ್ಮ ಈ ಪ್ರಶ್ನೆಗಳಿಗೆ ನಿಜ ಹೇಳುವಿರಾ? ಕೋವಿಡ್ ಎರಡನೇ ಅಲೆ ಬಂದ ನಂತರ ಎಷ್ಟು ಬಾರಿ ನೀವು ಬಾದಾಮಿ ಕ್ಷೇತ್ರಕ್ಕೆ ಭೇಟಿ ನೀಡಿದ್ದೀರಿ? ಎಲ್ಲಿ, ಎಷ್ಟು ಆರೈಕೆ ಕೇಂದ್ರ ಆರಂಭಿಸಿದ್ದೀರಿ? ಬೊಗಳೆ ಬಿಡುವುದನ್ನು ಸಾಕುಮಾಡಿ, ಜನರ ನೆರವಿಗೆ ಧಾವಿಸಿ' ಎಂದು ಸಿದ್ದರಾಮಯ್ಯನವರನ್ನು ಟ್ಯಾಗ್‌ ಮಾಡಿ ರಾಜ್ಯ ಬಿಜೆಪಿ ಟ್ವೀಟ್‌ ಮಾಡಿದೆ.

'ಕೋವಿಡ್ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ಶಾಸಕರು ತಮ್ಮ ಕ್ಷೇತ್ರದಲ್ಲೇ ಬೀಡು ಬಿಟ್ಟಿದ್ದಾರೆ. ಜನರ ಸಂಕಷ್ಟಕ್ಕೆ ಜತೆಯಾಗುತ್ತಿದ್ದಾರೆ. ಆದರೆ ವಲಸೆ ವೀರ ಸಿದ್ದರಾಮಯ್ಯ ಮಾತ್ರ ಬೆಂಗಳೂರಿನಲ್ಲಿ ಮನೆಯ ಗೇಟ್‌ಗೆ ಬೀಗ ಹಾಕಿ ಬೆಚ್ಚಗೆ ಕುಳಿತು ಬಿಟ್ಟಿ ಉಪದೇಶ ನೀಡುತ್ತಿದ್ದಾರೆ. ಬುರುಡೆರಾಮಯ್ಯ, ಜನರು ನಿಮ್ಮನ್ನು ಕ್ಷಮಿಸುವುದಿಲ್ಲ' ಎಂದು ಬಿಜೆಪಿ ಹೇಳಿದೆ.

'ನಾನು ಸಿಎಂ‌ ಆಗಿದ್ದರೆ ಎಂದು ಕಥೆ ಕಟ್ಟುವ ಸಿದ್ದರಾಮಯ್ಯ ಅವರೇ, ನಿಮ್ಮ ಬಿಟ್ಟಿ ಭಾಗ್ಯಗಳ ಅಸಲಿಯತ್ತು ರಾಜ್ಯದ ಜನತೆಗೆ ತಿಳಿದಿದೆ. ಬಿಟ್ಟಿ ಭಾಗ್ಯಗಳಿಗಾಗಿ ಸಾವಿರಾರು ರೂಪಾಯಿಗಳನ್ನು ಜನತೆಯ ಮೇಲೆ‌ ಸಾಲದ ಹೊರೆಯಾಗಿ ಹೊರಿಸಿದ್ದ ನೀವು, ಇನ್ನಷ್ಟು ಸಾಲ‌ ಮಾಡಿ ತುಪ್ಪ ತಿನ್ನುವ ಇರಾದೆಯಲ್ಲಿದ್ದೀರಾ?' ಎಂದು ಬಿಜೆಪಿ ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT