ಬುಧವಾರ, ಮೇ 25, 2022
29 °C
ಕೋವಿಡ್ ತಜ್ಞ ವೈದ್ಯರ ಸಂಖ್ಯೆಯೂ ಕಡಿಮೆ: ಕೆಲ ಹಾಸಿಗೆಗಳು ಮಕ್ಕಳ ಚಿಕಿತ್ಸೆಗಾಗಿ ಮೀಸಲು

ಕೋವಿಡ್‌: ರಾಜ್ಯದ 10 ಜಿಲ್ಲೆಗಳಲ್ಲಷ್ಟೇ ಮಕ್ಕಳಿಗೆ ಪ್ರತ್ಯೇಕ ವಾರ್ಡ್‌

ಸಚ್ಚಿದಾನಂದ ಕುರಗುಂದ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಸೋಂಕಿಗೆ ಒಳಗಾಗುವ ಮಕ್ಕಳಿಗಾಗಿ ಪ್ರತ್ಯೇಕ ಯೋಜನೆಯನ್ನು ಸರ್ಕಾರ ರೂಪಿಸಿಲ್ಲ.  ಮೂರನೇ ಅಲೆಯಿಂದ ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ ಹತ್ತು ಜಿಲ್ಲೆಗಳಲ್ಲಿ ಮಾತ್ರ ಪ್ರತ್ಯೇಕ ವಾರ್ಡ್‌ಗಳನ್ನು ತೆರೆಯಲಾಗಿದೆ. ಉಳಿದೆಡೆ, ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲೂ ಮಕ್ಕಳಿಗೆ ಆಮ್ಲಜನಕ ಸಹಿತ ಹಾಸಿಗೆಗಳನ್ನು ಮೀಸಲಿಡಲಾಗಿದೆ.

ಧಾರವಾಡ, ಹಾವೇರಿ, ಗದಗ, ಬೆಳಗಾವಿ, ಉತ್ತರಕನ್ನಡ, ಬಳ್ಳಾರಿ, ವಿಜಯಪುರ, ವಿಜಯನಗರ, ಬಾಗಲಕೋಟೆ, ಮೈಸೂರು ಜಿಲ್ಲೆಗಳಲ್ಲಿ ಮಕ್ಕಳಿಗಾಗಿ ಕೋವಿಡ್‌ ವಾರ್ಡ್‌ಗಳನ್ನು ಆರಂಭಿಸಲಾಗಿದೆ.

ಕೋವಿಡ್‌ ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿನ ಅನುಭವಗಳ ಆಧಾರದ ಮೇಲೆ ತಜ್ಞರ ಸಮಿತಿಯು ವೈದ್ಯರ ನೇಮಕ, ಸಿಬ್ಬಂದಿಗೆ ತರಬೇತಿ ಮತ್ತು ಆರೋಗ್ಯ ಕ್ಷೇತ್ರದಲ್ಲಿನ ಮೂಲಸೌಕರ್ಯಗಳನ್ನು ಹೆಚ್ಚಿಸುವ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡಿತ್ತು.

ಮೂರನೇ ಅಲೆಗೆ ಸಂಬಂಧಿಸಿದಂತೆ ಡಾ. ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಜ್ಞ ವೈದ್ಯರ ಸಮಿತಿ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಬೆಂಗಳೂರಿನ 45,958 ಮಕ್ಕಳು ಸೇರಿದಂತೆ ರಾಜ್ಯದಲ್ಲಿ 3.4 ಲಕ್ಷ ಮಕ್ಕಳು ಸೋಂಕಿತರಾಗುವ ಬಗ್ಗೆ ಉಲ್ಲೇಖಿಸಿತ್ತು.

‘ಸರ್ಕಾರದ ಸಿದ್ಧತೆಗಳು ಈಗ ದಾಖಲೆಯಲ್ಲಿವೆ. ಪ್ರತಿ ಅಲೆಯು ಪರೀಕ್ಷೆ ಸಮಯ. ಪರೀಕ್ಷಾ ಸಮಯದಲ್ಲಿ ಸಿದ್ಧತೆಗಳ ನಿಜ ಸ್ವರೂಪ ಬಯಲಾಗಲಿದೆ’ ಎನ್ನುವುದು ಮಕ್ಕಳ ತಜ್ಞರ ಅಭಿಪ್ರಾಯ.

ರಾಜ್ಯದಲ್ಲಿ ಸುಮಾರು 3,000 ಮಕ್ಕಳ ತಜ್ಞರಿದ್ದಾರೆ. ಇವರಲ್ಲಿ 1,300 ತಜ್ಞರು ಬೆಂಗಳೂರಿನಲ್ಲೇ ಇದ್ದಾರೆ.  ಎರಡು ಕೋಟಿಗೂ ಹೆಚ್ಚು ಇರುವ ಮಕ್ಕಳ ಸಂಖ್ಯೆಗೆ ಹೋಲಿಸಿದಾಗ ತಜ್ಞರ ಸಂಖ್ಯೆ ಕಡಿಮೆ. ಗ್ರಾಮೀಣ ಪ್ರದೇಶದಲ್ಲಿ ಮಕ್ಕಳ ತಜ್ಞರು ಲಭ್ಯವಾಗುವುದೇ ಕಷ್ಟಸಾಧ್ಯ. ರಾಜ್ಯದ ಪ್ರಮುಖ ಸಂಸ್ಥೆಯಾದ ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ 34 ಮಕ್ಕಳ ತಜ್ಞ ವೈದ್ಯರಿದ್ದಾರೆ.

‘ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲೂ 30ರಿಂದ 35 ಐಸಿಯು ಹಾಸಿಗೆಗಳನ್ನು ಕಾಯ್ದಿರಿಸುವಂತೆ ಎರಡನೇ ಅಲೆಯ ಸಂದರ್ಭದಲ್ಲಿ ಸಮಿತಿ ಶಿಫಾರಸು ಮಾಡಿತ್ತು. ಈ ನಿರ್ದೇಶನವನ್ನೇ ಸದ್ಯ ಪಾಲಿಸಲಾಗುತ್ತಿದೆ. ಜತೆಗೆ ಜನರಲ್‌ ವಾರ್ಡ್‌ ಸೇರಿದಂತೆ ಎಲ್ಲ ರೀತಿಯ ವಾರ್ಡ್‌ಗಳಲ್ಲಿನ ಹಾಸಿಗೆಗಳಿಗೂ ಆಮ್ಲಜನಕದ ವ್ಯವಸ್ಥೆ ಇರಬೇಕು ಎಂದು ತಿಳಿಸಲಾಗಿತ್ತು. ಎರಡನೇ ಅಲೆಯ ರೀತಿಯಲ್ಲಿ ಉತ್ತುಂಗ ಸ್ಥಿತಿಗೆ ತಲುಪಿದರೆ ಪರಿಸ್ಥಿತಿ ಗಂಭೀರವಾಗಬಹುದು. ಹೀಗಾಗಿ, ಮಕ್ಕಳಿಗೂ ಪ್ರತ್ಯೇಕ ವ್ಯವಸ್ಥೆ ಇರಬೇಕು’ ಎಂದು ಮಕ್ಕಳ ತಜ್ಞ ಹಾಗೂ ಕೋವಿಡ್ ತಜ್ಞರ ಸಮಿತಿ ಸದಸ್ಯ ಡಾ. ಯೋಗಾನಂದ ರೆಡ್ಡಿ ಹೇಳುತ್ತಾರೆ.

ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಸೋಂಕಿತರಿಗಾಗಿಯೇ ವಿಶೇಷ ಬ್ಲಾಕ್‌ ಮಾಡಲಾಗಿದೆ. 20 ತೀವ್ರ ನಿಗಾ ಘಟಕ (ಐಸಿಯು) ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. 60 ಎಚ್‌ಡಿಯು ಹಾಸಿಗೆಗಳು 10 ವಿಶೇಷ ನವಜಾತ ಆರೈಕೆಗೆ (ಎಸ್‌ಎನ್‌ಸಿಯು)ಮತ್ತು 20 ಪಿಸಿಯು ಹಾಸಿಗೆಗಳನ್ನು ಮೀಸಲಿರಿಸಲಾಗಿದೆ.

ಎರಡನೇ ಅಲೆಗೆ ಹೋಲಿಸಿದರೆ ಮೂರಲೇ ಅಲೆಯಲ್ಲಿ ಮಕ್ಕಳಿಗಿಂತ ವಯಸ್ಕರಲ್ಲಿ ಸೋಂಕು ಹಬ್ಬುತ್ತಿದೆ ಎಂದು ಕೋವಿಡ್‌ ‘ವಾರ್‌ ರೂಂ’ ವಿಶ್ಲೇಷಿಸಿದೆ.

‘ಮಕ್ಕಳಿಗೆ ರೋಗ ನಿರೋಧಕ ಶಕ್ತಿಯೇ ವರ. ಮೊದಲ ಮತ್ತು ಎರಡನೇ ಅಲೆಯಲ್ಲಿ ಮಕ್ಕಳು ಸೋಂಕಿಗೆ ಒಳಗಾಗಿದ್ದರೂ ಈ ಶಕ್ತಿಯೇ ಅವರನ್ನು ಕಾಪಾಡಿದೆ. ಈಗ ಮೂರನೇ ಅಲೆಯಲ್ಲೂ ಮಕ್ಕಳಲ್ಲಿ ಸೌಮ್ಯ ಸ್ವರೂಪದ ಲಕ್ಷಣಗಳಿವೆ. ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಲಾಕ್‌ಡೌನ್‌ ವಿಧಿಸಲಾಗಿತ್ತು. ಶಾಲೆಗಳನ್ನು ಆರಂಭಿಸಿರಲಿಲ್ಲ. ಹೀಗಾಗಿ, ಮಕ್ಕಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಕಾಣಿಸಿಕೊಂಡಿರಲಿಲ್ಲ. ಈಗ ವಸತಿ ಶಾಲೆಗಳು ಸಹ ಆರಂಭವಾಗಿವೆ. ಆದರೆ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ’ ಎಂದು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಮಕ್ಕಳ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಎಸ್‌. ಶ್ರೀನಿವಾಸ್‌ ವಿವರಿಸಿದ್ದಾರೆ.

‘ಬಿಬಿಎಂಪಿ ವ್ಯಾಪ್ತಿಯ ಪ್ರತಿಯೊಂದು ಆಸ್ಪತ್ರೆಯಲ್ಲಿ ಐಸಿಯು ವ್ಯವಸ್ಥೆ ಹೊಂದಿರುವ ಕನಿಷ್ಠ 10ಹಾಸಿಗೆಗಳನ್ನು ಮಕ್ಕಳಿಗೆ ಮೀಸಲಿಡಲು ನಿರ್ದೇಶನ ನೀಡಲಾಗಿದೆ. ಜತೆಗೆ ಆಸ್ಪತ್ರೆಯ ಸಾಮರ್ಥ್ಯ ಅನುಸಾರ ಸಾಮಾನ್ಯ ವಾರ್ಡ್‌ಗಳಲ್ಲಿಯೂ 30
ರಿಂದ 35 ಮಕ್ಕಳಿಗೆ ಹಾಸಿಗೆಗಳನ್ನು ಮೀಸಲಿಡಲು ನಿರ್ದೇಶನ ನೀಡಲಾಗಿದೆ. ಇದು ಪರಿಸ್ಥಿತಿ ಮೇಲೆ ಅವಲಂಬನೆಯಾಗಿದೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ(ಆರೋಗ್ಯ) ಡಾ. ತ್ರಿಲೋಕ್ ಚಂದ್ರ ವಿವರಿಸಿದ್ದಾರೆ.

‘ಎಲ್ಲ ಮಕ್ಕಳಿಗೆ ಲಸಿಕೆ ನೀಡುವುದು ಅಗತ್ಯ’

‘ಮೊದಲ ಮತ್ತು ಎರಡನೇ ಅಲೆಯಲ್ಲಿ ಮಕ್ಕಳು ಸೋಂಕಿಗೆ ಒಳಗಾಗಿದ್ದರು. ಶೇಕಡ 90ರಷ್ಟು ಮಕ್ಕಳ ತಜ್ಞರು ಸಹ ಸೋಂಕಿಗೆ ಒಳಗಾಗಿದ್ದರು. ಮಕ್ಕಳು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದು ಕಷ್ಟ. ಹೀಗಾಗಿ, ಸೋಂಕಿಗೆ ಒಳಗಾಗುವುದು ಸಹಜ. ಆದರೆ, ಎಲ್ಲ ವಯೋಮಾನದ ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಸರ್ಕಾರ ವಿಳಂಬ ಮಾಡುತ್ತಿದೆ’ ಎಂದು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಮಕ್ಕಳ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಎಸ್‌. ಶ್ರೀನಿವಾಸ್‌ ಅಭಿಪ್ರಾಯಪಟ್ಟಿದ್ದಾರೆ.

‘ಮಕ್ಕಳಿಗೂ ಲಸಿಕೆ ನೀಡಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದಿರುವೆ. ಮಕ್ಕಳಲ್ಲಿ ಸಾವಿನ ಪ್ರಮಾಣ ತೀವ್ರ ಕಡಿಮೆ ಇರುವ ಕಾರಣ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಮೊದಲ ಮತ್ತು ಎರಡನೇ ಅಲೆಯಲ್ಲಿ 60 ವರ್ಷ ಮೇಲ್ಪಟ್ಟವರು ಹೆಚ್ಚು ಬಾಧಿತರಾದರು. ಹೀಗಾಗಿ, ಲಸಿಕೆ ಲಭ್ಯವಾದ ಬಳಿಕ 60 ವರ್ಷದ ಮೇಲ್ಪಟ್ಟವರಿಗೆ ಆದ್ಯತೆ ನೀಡಲಾಯಿತು. ನಂತರ 40–60 ವಯೋಮಾನದವರು ಹೆಚ್ಚು ಸೋಂಕಿಗೆ ಒಳಗಾದರು. ಹೀಗಾಗಿ, ಅವರಿಗೆ ಲಸಿಕೆ ನೀಡಲಾಯಿತು. ಆದರೆ, ಮಕ್ಕಳನ್ನು ಕಡೆಗಣಿಸಲಾಯಿತು’ ಎಂದು ಹೇಳುತ್ತಾರೆ.

0–18 ವಯಸ್ಸಿನ ಮಕ್ಕಳಲ್ಲಿನ ಸೋಂಕು ದೃಢ ಪ್ರಮಾಣದ ವಿವರ

ತಿಂಗಳು;ಪರೀಕ್ಷೆಗಳು;ಸೋಂಕು ದೃಢ ಪ್ರಮಾಣ;ಸೋಂಕು ದೃಢ ಪ್ರಮಾಣ ದರ

2021ರ ಏಪ್ರಿಲ್‌;6.5 ಲಕ್ಷ;57,442;ಶೇ 8.82

2021ರ ಮೇ;4.11ಲಕ್ಷ;1,01314;ಶೇ 24.61

2021ರ ನವೆಂಬರ್‌;5.62 ಲಕ್ಷ;1304;ಶೇ 0.23

2021ರ ಡಿಸೆಂಬರ್‌;10.37ಲಕ್ಷ;2238;ಶೇ 0.22

2022 ಜನವರಿ;7.64ಲಕ್ಷ;43463;ಶೇ 5.69

15–18 ವಯೋಮಾನದ ಮಕ್ಕಳಿಗೆ ಲಸಿಕೆ

*20.92 ಲಕ್ಷ ಮಕ್ಕಳಿಗೆ ಲಸಿಕೆ

* ಶೇ 65.9 ಪ್ರಗತಿ

* ಒಟ್ಟು ಗುರಿ: 31.75 ಲಕ್ಷ ಮಕ್ಕಳು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು