ಶನಿವಾರ, ಡಿಸೆಂಬರ್ 4, 2021
20 °C

ಚಿಕಿತ್ಸೆ ಸಿಗದೆ ಸಾವು: ಮರು ವಿಚಾರಣೆಗೆ ಹೈಕೋರ್ಟ್ ನಿರ್ದೇಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆಸ್ಪತ್ರೆ ‍ಪ್ರವೇಶ ನಿರಾಕರಿಸಿದ ಆರೋಪದ ಎರಡು ಪ್ರಕರಣಗಳ ಬಗ್ಗೆ ಹೊಸದಾಗಿ ವಿಚಾರಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದ ಕಾರಣ ಕೆ.ಚೇತನ್‌ಕುಮಾರ್ ಎಂಬುವರು ಮೃತಪಟ್ಟಿದ್ದಾರೆ ಎಂದು ಅವರ ಮಾವ ಕಮಲಾನಗರದ ಚಿಕ್ಕನರಸಯ್ಯ ಎಂಬುವರು ಮುಖ್ಯ ನ್ಯಾಯಮೂರ್ತಿ ಕಚೇರಿಗೆ ದೂರು ಸಲ್ಲಿಸಿದ್ದರು. ರಾಮನಗರದ ವೈದ್ಯ ಡಾ. ಎಸ್.ಟಿ.ಮಂಜುನಾಥ್ ಎಂಬುವರು ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ ಎಂದು ವಕೀಲರೊಬ್ಬರು ಅರ್ಜಿ ಸಲ್ಲಿಸಿದ್ದರು. ಎರಡೂ ದೂರುಗಳ ಬಗ್ಗೆ ಮರು ವಿಚಾರಣೆ ನಡೆಸುವಂತೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ಪೀಠ ನಿರ್ದೇಶನ ನೀಡಿತು.

‘ಗಂಭೀರ ಸ್ವರೂಪದ ಆರೋಪಗಳಿದ್ದರೂ ವಿಚಾರಣೆಯನ್ನು ಕಾಟಾಚಾರಕ್ಕೆ ಮಾಡಲಾಗಿದೆ. ಡಾ. ಮಂಜುನಾಥ್ ಸಾವಿನ ಸಂಬಂಧ ದಾಖಲೆಗಳನ್ನು ಸಮರ್ಪಕವಾಗಿ ಸಂಗ್ರಹಿಸಿಲ್ಲ. ಚೇತನ್‌ಕುಮಾರ್ ಸಾವಿನ ಪ್ರಕರಣದಲ್ಲಿ ದೂರುದಾರ ಚಿಕ್ಕನರಸಯ್ಯ ಅವರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸುವ ಬದಲು ದೂರವಾಣಿಯಲ್ಲೇ ವಿಚಾರಣೆ ನಡೆಸಲಾಗಿದೆ’ ಎಂದು ಪೀಠ ಹೇಳಿತು.

‘ವಿಚಾರಣೆಯನ್ನು ಹಿರಿಯ ಪೊಲೀಸ್ ಅಧಿಕಾರಿಗೆ ವಹಿಸಬೇಕಿತ್ತು. ಅದನ್ನು ಸರ್ಕಾರ ಮಾಡಿಲ್ಲ. ಕೂಡಲೇ ಹಿರಿಯ ಪೊಲೀಸ್ ಅಧಿಕಾರಿಯನ್ನು ನೇಮಿಸಿ ಹೊಸದಾಗಿ ವಿಚಾರಣೆ ನಡೆಸಬೇಕು’ ಎಂದು ನಿರ್ದೇಶನ ನೀಡಿದ ಪೀಠ, ವಿಚಾರಣಾ ವರದಿ ಸಲ್ಲಿಸಲು ಮೂರು ವಾರಗಳ ಕಾಲಾವಕಾಶ ನೀಡಿತು.

ರಾಮನಗರ ಜಿಲ್ಲೆಯ ಚಿಕ್ಕಮುದವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ.ಮಂಜುನಾಥ್ ಅವರಿಗೆ ಬೆಂಗಳೂರಿನ ಮೂರು ಆಸ್ಪತ್ರೆಗಳಲ್ಲಿ ಪ್ರವೇಶ ನಿರಾಕರಿಸಲಾಗಿದೆ ಎಂದು ವರದಿಯಾಗಿತ್ತು. ಹಲವು ಆಸ್ಪತ್ರೆಗಳನ್ನು ಸುತ್ತಿದ್ದ ಚೇತನ್‌ಕುಮಾರ್ ಅವರು ಜುಲೈ 2ರಂದು ಮೃತಪಟ್ಟಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು