ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರೋ ಇಂಡಿಯಾ:ರಕ್ಷಣಾ ರಫ್ತು 2024ಕ್ಕೆ 5 ಬಿಲಿಯನ್ ಡಾಲರ್‌ ಗುರಿ ಎಂದ ಪ್ರಧಾನಿ

ಕಳೆದ 9 ವರ್ಷಗಳಲ್ಲಿ ರಕ್ಷಣಾ ಕ್ಷೇತ್ರಕ್ಕೆ ಹೊಸ ಆಯಾಮ: ಪ್ರಧಾನಿ ಮೋದಿ
Last Updated 13 ಫೆಬ್ರುವರಿ 2023, 21:45 IST
ಅಕ್ಷರ ಗಾತ್ರ

ಬೆಂಗಳೂರು: ‘2024-25ರ ವೇಳೆಗೆ ಭಾರತವು 5 ಬಿಲಿಯನ್ ಡಾಲರ್‌ (₹41.34 ಸಾವಿರ ಕೋಟಿ) ಮೌಲ್ಯದ ರಕ್ಷಣಾ ಸರಕುಗಳನ್ನು ರಫ್ತು ಮಾಡುವ ಗುರಿ ಹೊಂದಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ 14ನೇ ಆವೃತ್ತಿಯ ‘ಏರೋ ಇಂಡಿಯಾ–2023’ಕ್ಕೆ ಯಲಹಂಕ ವಾಯು ನೆಲೆಯಲ್ಲಿ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ‘ರಕ್ಷಣಾ ಸರಕುಗಳ ರಫ್ತು ವಲಯಲ್ಲಿ ಜಾಗತಿಕವಾಗಿ ಮುಂಚೂಣಿ ಸ್ಥಾನ ಪಡೆಯುವ ನಿಟ್ಟಿನಲ್ಲಿ ದೇಶವು ಸಾಗುತ್ತಿದೆ. ಸದ್ಯ ₹12.4 ಸಾವಿರ ಕೋಟಿ (1.5 ಬಿಲಿಯನ್‌ ಡಾಲರ್‌) ಮೊತ್ತದಷ್ಟು ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ. ಈ ವಹಿವಾಟು ಹೆಚ್ಚಿಸುವ ನೀತಿಗಳನ್ನು ರೂಪಿಸಲಾಗಿದೆ’ ಎಂದರು.

‘ಕಳೆದ 8-9 ವರ್ಷಗಳಲ್ಲಿ ರಕ್ಷಣಾ ಉತ್ಪಾದನಾ ಕ್ಷೇತ್ರಕ್ಕೆ ಪುನಃಶ್ಚೇತನ ನೀಡುವ ಮೂಲಕ ಹೊಸ ಆಯಾಮ ನೀಡಲಾಗಿದ್ದು, ಜಗತ್ತಿನ ಅತಿ ದೊಡ್ಡ ರಕ್ಷಣಾ ಸಾಮಗ್ರಿಗಳ ತಯಾರಿಕೆಯ ರಾಷ್ಟ್ರವಾಗಲಿದೆ. ದಶಕಗಳ ಕಾಲ ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ದೇಶದಲ್ಲಿತ್ತು. ಆದರೆ, ಈಗ 75 ದೇಶಗಳಿಗೆ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡುತ್ತಿದ್ದೇವೆ. ಕಳೆದ ಐದು ವರ್ಷಗಳಲ್ಲಿ ರಫ್ತು ಪ್ರಮಾಣ ಆರು ಪಟ್ಟು ಹೆಚ್ಚಿದೆ’ ಎಂದರು.

‘ಒಂದು ಕಾಲದಲ್ಲಿ ಏರೋ ಇಂಡಿಯಾ ಕೇವಲ ಪ್ರದರ್ಶನಕ್ಕೆ ಸೀಮಿತವಾಗಿತ್ತು. ಭಾರತಕ್ಕೆ ವಿವಿಧ ರಕ್ಷಣಾ ಉತ್ಪನ್ನಗಳನ್ನು ಮಾರಾಟಕ್ಕೆ ಮಾಡಲು ಈ ವೇದಿಕೆಯನ್ನು ಬಳಸಿಕೊಳ್ಳಲಾಗುತ್ತಿತ್ತು. ಕೆಲವೇ ವರ್ಷಗಳಲ್ಲಿ ಈ ಸನ್ನಿವೇಶ ಸಂಪೂರ್ಣ ಬದಲಾಗಿದೆ. ಏರೋ ಇಂಡಿಯಾ ಕೇವಲ ಪ್ರದರ್ಶನವಲ್ಲ. ಇದು ಭಾರತದ ಶಕ್ತಿ, ಸಾಮರ್ಥ್ಯ ಮತ್ತು ಆತ್ಮವಿಶ್ವಾಸ ಹಾಗೂ ಆಶೋತ್ತರಗಳನ್ನು ಬಿಂಬಿಸುತ್ತಿದೆ’ ಎಂದು ಸಮರ್ಥಿಸಿಕೊಂಡರು.

‘ಈ ಬಾರಿಯ ಏರೋ ಇಂಡಿಯಾದಲ್ಲಿ 100 ದೇಶಗಳು ಭಾಗವಹಿಸುತ್ತಿರುವುದು ಭಾರತದ ಮೇಲೆ ಜಗತ್ತು ಇರಿಸಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ. 800ಕ್ಕೂ ಹೆಚ್ಚು ಪ್ರದರ್ಶಕರು ಸಹ ಭಾಗವಹಿಸುತ್ತಿದ್ದಾರೆ. ಹೀಗಾಗಿ, ಇದು ಹೊಸ ದಾಖಲೆಯಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮಾತನಾಡಿ, ‘ಭಾರತದಲ್ಲಿ ವೈಮಾಂತರಿಕ್ಷ ಕ್ಷೇತ್ರದ ಬೆಳವಣಿಗೆಗೆ ಏರೋ ಇಂಡಿಯಾ ಉತ್ತೇಜನ ನೀಡಲಿದೆ’ ಎಂದರು.

ಜಾಗತಿಕ ನಾಯಕತ್ವಕ್ಕೆ ಕರ್ನಾಟಕದ ಕೊಡುಗೆ: ಬೊಮ್ಮಾಯಿ

‘ಭಾರತವು ಜಾಗತಿಕ ನಾಯಕತ್ವ ವಹಿಸಲು ಕರ್ನಾಟಕ ಅತ್ಯಂತ ದೊಡ್ಡ ಕೊಡುಗೆ ನೀಡಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

‘ಏರೋ ಇಂಡಿಯಾ–2023’ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಏರೋ ಇಂಡಿಯಾ 14ನೇ ಆವೃತ್ತಿಯು ಗಾತ್ರ, ಪ್ರದರ್ಶನ ಮತ್ತು ಕಾರ್ಯವೈಖರಿಯ ದೃಷ್ಟಿಯಿಂದ ಅತ್ಯಂತ ವಿಶೇಷ ಆವೃತ್ತಿಯಾಗಿದ್ದು, ಅಂತರರಾಷ್ಟ್ರೀಯ ಮಟ್ಟದ ಅತಿ ದೊಡ್ಡ ವೈಮಾನಿಕ ಪ್ರದರ್ಶನ’ ಎಂದರು.

ರಕ್ಷಣಾ ವಲಯದ ಶೇ 65ರಷ್ಟು ಉತ್ಪನ್ನಗಳನ್ನು ಬೆಂಗಳೂರಿನಲ್ಲಿ ತಯಾರಿಸಲಾಗುತ್ತಿದೆ. ರಾಜ್ಯದಲ್ಲಿ ರಕ್ಷಣಾ ಹಾಗೂ ಏರೋಸ್ಪೇಸ್ ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸಲು 45 ಸಾವಿರಕ್ಕೂ ಹೆಚ್ಚು ಯುವಕರನ್ನು ತೊಡಗಿಸಿಕೊಳ್ಳಲಾಗುವುದು’ ಎಂದರು.

ಆಗಸದಲ್ಲಿ ಉಕ್ಕಿನ ಹಕ್ಕಿಗಳ ಕಾರುಬಾರು

ಶುಭ್ರ ಆಗಸಕ್ಕೆ ಮಿಂಚಿನ ವೇಗದಲ್ಲಿ ನೆಗೆದ ಲೋಹದ ಹಕ್ಕಿಗಳ ಚಮತ್ಕಾರಿ ಪ್ರದರ್ಶನ, ಧೂಮದ ರಂಗೋಲಿಯ ಬಿಡಿಸುವ ಹೆಲಿಕಾಪ್ಟರ್‌ಗಳು, ಬೆರಗುಗೊಳಿಸುವ ಹಾರಾಟ ಪ್ರದರ್ಶನ....

‘ಏರೋ ಇಂಡಿಯಾ–2023’ರ ಉದ್ಘಾಟನಾ ಸಮಾರಂಭದಲ್ಲಿ ಲೋಹದ ಹಕ್ಕಿಗಳು ಚಿತ್ತಾರ ಬಿಡಿಸಿ, ನೋಡುಗರನ್ನು ಬೆರಗುಗೊಳಿಸಿದವು.

‘ಏರೋ ಇಂಡಿಯಾ’ಗೆ ಚಾಲನೆ ನೀಡಲು ಪ್ರಧಾನಿ ಮೋದಿ ವೇದಿಕೆ ಬಳಿ ಆಗಮಿಸುತ್ತಿದ್ದಂತೆ ರಾಷ್ಟ್ರಧ್ವಜ, ಭಾರತೀಯ ವಾಯು ಪಡೆ ಧ್ವಜ, ಜಿ–20 ಧ್ವಜ ಮತ್ತು ಏರೋ ಇಂಡಿಯಾ ಧ್ವಜಗಳನ್ನು ಸಾಗಿದ ಹೆಲಿಕಾಪ್ಟರ್‌ಗಳು ವೈಮಾನಿಕ ಪ್ರದರ್ಶನದ 14ನೇ ಆವೃತ್ತಿಗೆ ಮುನ್ನುಡಿ ಬರೆದವು. ನಂತರ, ಸೂರ್ಯಕಿರಣ ವಿಮಾನಗಳ ಕಸರತ್ತು ರೋಮಾಂಚನಗೊಳಿಸಿತು. ವಾಯುಪಡೆ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್‌ ವಿ.ಆರ್‌. ಚೌಧರಿ ನೇತೃತ್ವದ ತಂಡ ‘ಗುರು’ ಮತ್ತು ‘ದ್ರೋಣಾಚಾರ್ಯರ ‘ಗುರುಕುಲ’ ರಚನೆಯ ಹಾರಾಟ ಪ್ರದರ್ಶನ ರೋಮಾಂಚನಗೊಳಿಸಿತು.

ಎಚ್‌ಎಎಲ್‌ ನಿರ್ಮಿಸಿದ ಲಘು ಯುದ್ಧ ಹೆಲಿಕಾಪ್ಟರ್‌ ’ಪ್ರಚಂಡ’ ತನ್ನ ಸಾಮರ್ಥ್ಯವನ್ನು ವಿವಿಧ ಆಯಾಮಗಳಲ್ಲಿ ಪ್ರದರ್ಶಿಸಿತು. ಮುಂದೆ ಸಾಗಿದಷ್ಟೇ ವೇಗದಲ್ಲಿ ಹಿಮ್ಮುಖವಾಗಿಯೂ ವಿಂಗ್‌ ಕಮಾಂಡರ್‌ ರಾಜೀವ್‌ ದುಬೆ ಚಲಾಯಿಸಿದರು. ಸುಖೋಯಿ–30, ಮಿಗ್‌ ಯುದ್ಧ ವಿಮಾನಗಳು, ತೇಜಸ್‌ ಯುದ್ಧ ವಿಮಾನಗಳು ಸಹ ಬೆರಗುಗೊಳಿಸಿದವು. ಈ ಎಲ್ಲ ಕಸರತ್ತುಗಳನ್ನು ಪ್ರಧಾನಿ ಅವರು ಮುಂಚೂಣಿಯಲ್ಲಿ ಒಬ್ಬರೇ ಕುಳಿತು ವೀಕ್ಷಿಸಿದರು.

ನಂತರ, ವೇದಿಕೆ ಕಾರ್ಯಕ್ರಮದಲ್ಲಿ ‘ಏರೋ ಇಂಡಿಯಾ–2023’ ಅಂಚೆ ಚೀಟಿಯನ್ನು ಪ್ರಧಾನಿ ಬಿಡುಗಡೆಗೊಳಿಸಿ, ಭಾಷಣ ಮಾಡಿದರು. ಉದ್ಘಾಟನಾ ಸಮಾರಂಭದ ಔಪಚಾರಿಕತೆ ಮುಗಿಯುತ್ತಿದ್ದಂತೆಯೇ ವಾಯುನೆಲೆಯ ಮೇಲಿನ ಆಗಸದಲ್ಲಿ ಮತ್ತೊಮ್ಮೆ ಕಣ್ಣಿಗೆ ಹಬ್ಬವೇ ಸೃಷ್ಟಿಯಾಯಿತು. ನಭಕ್ಕೆ ಮತ್ತೆ ಸುಖೋಯ್‌–30 ವಿಮಾನ ನೆಗೆಯಿತು. ಪೈಲಟ್‌ಗಳು ಹಾರಾಟದ ಕೌಶಲವನ್ನು ಪ್ರದರ್ಶಿಸಿದರು. ವಿವಿಧ ಲೋಹದ ಹಕ್ಕಿಗಳು ಒಂದೇ ಸಮನೆ ಮೇಲಕ್ಕೇರಿ ಆಗಸದ ಗರ್ಭದೊಳಗೆ ನುಸುಳಿ ಅಂಬರದಲ್ಲಿ ಉರುಳಾಡುತ್ತಲೇ ರುದ್ರ ನರ್ತನ ಮಾಡಿದವು. ಯುದ್ಧ ವಿಮಾನಗಳ ಘರ್ಜನೆಯಂತೂ ಪ್ರೇಕ್ಷಕರು ಮೈನವಿರೇಳುವಂತೆ ಮಾಡಿತು. ತುಮಕೂರಿನ ಕಾರ್ಖಾನೆಯಲ್ಲಿ ದೇಶಿಯವಾಗಿ ತಯಾರಿಸಿದ ಲಘು ಬಹುಬಳಕೆಯ ಹೆಲಿಕಾಪ್ಟರ್‌ನ ಚಾಕಚಕ್ಯತೆಯನ್ನು ಪ್ರದರ್ಶಿಸಲಾಯಿತು.

ಸೂರ್ಯಕಿರಣ ವಿಮಾನಗಳ ತಂಡದ ಪ್ರದರ್ಶನ ಪ್ರೇಕ್ಷಕರ ಮೈನವಿರೇಳಿಸಿತು. ಬೋಯಿಂಗ್‌ ಸಿ–17 ಗ್ಲೋಬ್‌ ಮಾಸ್ಟರ್‌ ಮುಂದೆ ಸಾಗಿದರೆ ಒಂಬತ್ತು ಸೂರ್ಯ ಕಿರಣ ವಿಮಾನಗಳು ಅದನ್ನು ಸಮಾನ ವೇಗದಲ್ಲಿ ಹಿಂಬಾಲಿಸಿದ್ದು ಆಕರ್ಷಕವಾಗಿತ್ತು. ನಂತರ, ಈ ವಿಮಾನಗಳು ಆಗಸವನ್ನು ಚುಂಬಿಸಿ ಧರೆಗೆ ಇಳಿಯುವುದು ನೋಡುಗರನ್ನು ಹುಬ್ಬೇರಿಸುವಂತೆ ಮಾಡಿತು. ಕೇವಲ 5 ಮೀಟರ್‌ ಅಂತರದಲ್ಲಿ ಹಾರಾಟ ಪ್ರದರ್ಶನವು ಕಣ್ಮನಸೆಳೆಯಿತು. ಒಂದಕ್ಕೊಂದು ವಿರುದ್ಧ ದಿಕ್ಕಿನಲ್ಲಿ ಸಾಗಿ ಕ್ಷಣಾರ್ಧದಲ್ಲಿ ಮಿಂಚಿ ಮರೆಯಾಗುವ ರೀತಿಯಲ್ಲಿ ನಡೆಸಿದ ಹಾರಾಟ ಪ್ರದರ್ಶನವೂ ಮೈನವಿರೇಳಿಸಿತು. ಇದೇ ವಿಮಾನಗಳು ಹೃದಯಕಾರದ ಚಿತ್ರ ರಚಿಸಿದ್ದು ಕಣ್ಮನಸೆಳೆಯಿತು. ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಪಾಂಡೆ ಅವರು ಲಘು ಯುದ್ಧ ಹೆಲಿಕಾಪ್ಟರ್‌ನಲ್ಲಿ ಹಾರಾಟ ನಡೆಸಿದರು.

ಏರೋ ಇಂಡಿಯಾದಲ್ಲಿ ಅಮೆರಿಕದ ‘ಎಫ್‌–35’

ಅಮೆರಿಕದ ಸೂಪರ್‌ಸಾನಿಕ್‌ ಬಹುಮಾದರಿಯ ‘ಎಫ್‌–35’ ಯುದ್ಧ ವಿಮಾನಗಳು ಇದೇ ಮೊದಲ ಬಾರಿ ಏರೋ ಇಂಡಿಯಾದಲ್ಲಿ ಭಾಗಿಯಾಗಿವೆ.

ಎರಡು ‘ಎಫ್‌–35’ ಯುದ್ಧ ವಿಮಾನಗಳು ಸೋಮವಾರ ಯಲಹಂಕ ವಾಯು ನೆಲೆಗೆ ಬಂದಿಳಿದಿವೆ. ಈ ವಿಮಾನಗಳು ವೈಮಾನಿಕ ಪ್ರದರ್ಶನಕ್ಕೆ ಮತ್ತಷ್ಟು ಮೆರುಗು ತರಲಿವೆ. ಕರಾರುವಕ್ಕಾಗಿ ದಾಳಿ ನಡೆಸುವ ಸಾಮರ್ಥ್ಯಕ್ಕೆ ಈ ವಿಮಾನಗಳು ಖ್ಯಾತಿಪಡೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕದ ಅಲಸ್ಕಾ ಮತ್ತು ಉತಾಹ್‌ ವಾಯು ನೆಲೆಗಳಿಂದ ಇಲ್ಲಿಗೆ ಬಂದಿವೆ. ಎಫ್‌–35 ಯುದ್ಧ ವಿಮಾನವನ್ನು ಲಾಕ್‌ಹೀಡ್‌ ಮಾರ್ಟಿನ್‌ ಕಂಪನಿ ತಯಾರಿಸಿದೆ.

ಇವುಗಳ ಜತೆಗೆ, ಎಫ್‌–16, ಬೋಯಿಂಗ್‌ ಎಫ್‌/ಎ–18ಇ ಮತ್ತು ಎಫ್‌/ಎ–18ಎಫ್‌ ಯುದ್ಧ ವಿಮಾನ ಸಹ ಪ್ರದರ್ಶನದಲ್ಲಿ ಭಾಗಿಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT