ಬುಧವಾರ, ಜೂನ್ 16, 2021
21 °C
ಹೈಕೋರ್ಟ್‌ ವಿಭಾಗೀಯ ಪೀಠದ ಅಭಿಪ್ರಾಯ

ವಿಚಾರಣೆ ವಿಳಂಬ ಜಾಮೀನಿಗೆ ಆಧಾರವಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

DH File

ಬೆಂಗಳೂರು: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ದಾಖಲಾಗುವ ಪ್ರಕರಣಗಳ ವಿಚಾರಣೆಯಲ್ಲಿನ ವಿಳಂಬವು ಆರೋಪಿಗೆ ಜಾಮೀನು ಮಂಜೂರು ಮಾಡಲು ಪೂರಕವಾದ ಆಧಾರವಲ್ಲ ಎಂದು ಹೈಕೋರ್ಟ್‌ ವಿಭಾಗೀಯ ಪೀಠ ಹೇಳಿದೆ.

‘ಪೋಕ್ಸೊ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳಲ್ಲಿ ಸಾಕ್ಷಿಯ ಹೇಳಿಕೆ ದಾಖಲು ಮತ್ತು ವಿಚಾರಣೆಗೆ ನಿಗದಿಪಡಿಸಿರುವ  ಕಾಲಮಿತಿಯು ಸಂತ್ರಸ್ತ ಮಗುವಿನ ಅನುಕೂಲಕ್ಕಾಗಿ ಮಾತ್ರ ಇರುವ ಅಂಶ’ ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನಾ ನೇತೃತ್ವದ ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ.

ಪೋಕ್ಸೊ ಪ್ರಕರಣಗಳಲ್ಲಿ ಜಾಮೀನು ಕೋರಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಗಳನ್ನು ತಿರಸ್ಕರಿಸಿದ್ದ ಏಕಸದಸ್ಯ ಪೀಠ, ಎರಡು ಪ್ರಮುಖ ವಿಷಯಗಳನ್ನು ಹೆಚ್ಚಿನ ಸ್ಪಷ್ಟನೆಗಾಗಿ ವಿಸ್ತೃತ ಪೀಠಕ್ಕೆ ವರ್ಗಾಯಿಸಿತ್ತು. ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 164ರ ಅಡಿ ದಾಖಲಿಸುವ ಸಾಕ್ಷ್ಯವನ್ನು ಪೋಕ್ಸೊ ಕಾಯ್ದೆಯ ಸೆಕ್ಷನ್‌ 35ರ ಅಡಿಯಲ್ಲೂ ಸಾಕ್ಷ್ಯ ಎಂದು ಪರಿಗಣಿಸಬಹುದೆ? ಮತ್ತು ಪೋಕ್ಸೊ ಕಾಯ್ದೆಯಲ್ಲಿ ನಿಗದಿಪಡಿಸಿರುವ ಕಾಲಮಿತಿ ಪಾಲನೆಯಾಗದ ಸಂದರ್ಭದಲ್ಲಿ ಆರೋಪಿಗೆ ಜಾಮೀನು ನೀಡಬಹುದೆ? ಎಂಬ ಪ್ರಶ್ನೆಗಳನ್ನು ಏಕಸದಸ್ಯ ಪೀಠವು ವಿಭಾಗೀಯ ಪೀಠಕ್ಕೆ ವರ್ಗಾಯಿಸಿತ್ತು.

ನ್ಯಾಯಾಲಯವು ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸಿದ ದಿನದಿಂದ 30 ದಿನಗಳ ಒಳಗಾಗಿ ಸಂತ್ರಸ್ತ ಮಗುವಿನ ಹೇಳಿಕೆ ದಾಖಲಿಸಿಕೊಳ್ಳಬೇಕು. ಒಂದು ವರ್ಷದೊಳಗೆ ವಿಚಾರಣೆ ಪೂರ್ಣಗೊಳಿಸಬೇಕು ಎಂಬ ಅಂಶಗಳು ಪೋಕ್ಸೊ ಕಾಯ್ದೆಯಲ್ಲಿವೆ.

‘ಸಿಆರ್‌ಪಿಸಿ ಸೆಕ್ಷನ್‌ 164ರ ಅಡಿಯಲ್ಲಿ ದಾಖಲಿಸುವ ಹೇಳಿಕೆಯನ್ನು ಪೋಕ್ಸೊ ಕಾಯ್ದೆಯ ಸೆಕ್ಷನ್‌ 35ರ ಅಡಿಯಲ್ಲಿ ಸಮಾನವಾಗಿ ಪರಿಗಣಿಸುವಂತಿಲ್ಲ. ಸಿಆರ್‌ಪಿಸಿ ಅಡಿಯಲ್ಲಿ ತನಿಖೆಯ ವೇಳೆಯಲ್ಲಿ ಹೇಳಿಕೆ ದಾಖಲಿಸಲಾಗುತ್ತದೆ. ಆದರೆ, ಪೋಕ್ಸೊ ಕಾಯ್ದೆಯ ಸೆಕ್ಷನ್‌ 35ರ ಅಡಿಯಲ್ಲಿ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಯ ವೇಳೆ ಹೇಳಿಕೆ ದಾಖಲಿಸಲಾಗುತ್ತದೆ. ಹೇಳಿಕೆ ದಾಖಲು ಮತ್ತು ವಿಚಾರಣಾ ಅವಧಿಯ ಆಧಾರದಲ್ಲಿ ಆರೋಪಿಗೆ ಜಾಮೀನು ಮಂಜೂರು ಮಾಡುವುದು ಸಂತ್ರಸ್ತ ಮಗುವಿನ ಹಿತಾಸಕ್ತಿ ರಕ್ಷಣೆಗೆ ವಿರುದ್ಧವಾದ ನಡೆಯಾಗುತ್ತದೆ’ ಎಂದು ಪೀಠ ಅಭಿಪ್ರಾಯಪಟ್ಟಿದೆ.

‘ಕಾಯ್ದೆಯಲ್ಲಿ ನಿಗದಿಪಡಿಸಿರುವ ಕಾಲಮಿತಿಯನ್ನೇ ಆಧಾರವಾಗಿಟ್ಟುಕೊಂಡರೆ ಎಲ್ಲರೂ ಉದ್ದೇಶಪೂರ್ವಕವಾಗಿ ವಿಚಾರಣೆ ವಿಳಂಬವಾಗುವಂತೆ ಮಾಡಿ ಜಾಮೀನು ಪಡೆದುಕೊಳ್ಳಲು ಯತ್ನಿಸುತ್ತಾರೆ. ಇಂತಹ ಪ್ರಯತ್ನಗಳನ್ನು ಉತ್ತೇಜಿಸಬಾರದು. ಅದು ಪೋಕ್ಸೊ ಕಾಯ್ದೆಯ ಮೂಲ ಉದ್ದೇಶಕ್ಕೆ ವಿರುದ್ಧವಾದುದೂ ಹೌದು’ ಎಂದು ನ್ಯಾಯಪೀಠ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು