ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಮ್‌ಡಿಸಿವಿರ್‌ ಚುಚ್ಚುಮದ್ದಿಗಾಗಿ ರಾಜ್ಯದಾದ್ಯಂತ ಹಾಹಾಕಾರ

Last Updated 23 ಏಪ್ರಿಲ್ 2021, 3:13 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಎರಡನೇ ಅಲೆಯ ಸ್ಫೋಟದ ಬೆನ್ನಲ್ಲೇ ರಾಜ್ಯದಾದ್ಯಂತ ರೆಮ್‌ಡಿಸಿವಿರ್‌ ಚುಚ್ಚುಮದ್ದಿಗೆ (ಇಂಜೆಕ್ಷನ್‌) ಹಾಹಾಕಾರ ಆರಂಭವಾಗಿದೆ. ಖಾಸಗಿಯಾಗಿ ಆಸ್ಪತ್ರೆಗೆ ದಾಖಲಾಗಿರುವ ಕೋವಿಡ್‌ ರೋಗಿಗಳು ಮತ್ತು ಅವರ ಕುಟುಂಬದ ಸದಸ್ಯರು ಇದಕ್ಕಾಗಿ ಅಕ್ಷರಶಃ ಪರದಾಡುತ್ತಿದ್ದಾರೆ.

ವಿವಿಧ ಕಂಪನಿಗಳು ಉತ್ಪಾದಿಸುವ ರೆಮ್‌ಡಿಸಿವಿರ್‌ ಸುಮಾರು 20,000ದಿಂದ 23,000 ಡೋಸ್‌ಗಳು ಕೆಲವು ದಿನಗಳಿಂದ ಪ್ರತಿದಿನ ರಾಜ್ಯಕ್ಕೆ ಲಭಿಸುತ್ತಿವೆ. ಅರ್ಧ ಭಾಗವನ್ನು ಸರ್ಕಾರಿ ಕೋಟಾದಡಿ ದಾಖಲಾದ ರೋಗಿಗಳಿಗೆ ಕಾಯ್ದಿರಿಸುತ್ತಿದ್ದರೆ, ಇನ್ನರ್ಧ ಭಾಗವನ್ನು ವಿತರಕರ ಮೂಲಕ ಖಾಸಗಿ ಆಸ್ಪತ್ರೆಗಳಿಗೆ ಪೂರೈಸಲಾಗುತ್ತಿದೆ. ಆದರೆ, ರಾಜ್ಯದ ಬಹುಪಾಲು ಖಾಸಗಿ ಆಸ್ಪತ್ರೆಗಳಲ್ಲಿ ರೆಮ್‌ಡಿಸಿವಿರ್‌ ಕೊರತೆ ಸೃಷ್ಟಿಯಾಗಿದೆ.

ವೈರಾಣು ಸಂಬಂಧಿ ರೋಗಗಳ ಶಮನಕ್ಕೆ ಬಳಕೆ ಮಾಡುತ್ತಿದ್ದ ರೆಮ್‌ಡಿಸಿವಿರ್‌ ಔಷಧಿಯನ್ನು ತೀವ್ರವಾದ ಅನಾರೋಗ್ಯದಿಂದ ಬಳಲುತ್ತಿರುವ ಕೋವಿಡ್‌ ರೋಗಿಗಳ ಚಿಕಿತ್ಸೆಗೂ ಬಳಕೆ ಮಾಡಲಾಗುತ್ತಿದೆ. ಕೋವಿಡ್‌ ರೋಗಿಗಳಲ್ಲಿ ಶ್ವಾಸಕೋಶದ ಉರಿಯೂತ ತಡೆ ಮತ್ತು ಕೊರನಾ ವೈರಸ್‌ ದ್ವಿಗುಣಗೊಳ್ಳುವ ಪ್ರಮಾಣ ವನ್ನು ನಿಯಂತ್ರಿಸುವಲ್ಲಿ ಈ ಔಷಧಿ ಸಹಕಾರಿಯಾ ಗಲಿದೆ ಎಂಬುದು ಈವರೆಗಿನ ಬಳಕೆಯಿಂದ ಅನುಭವಕ್ಕೆ ಬಂದಿದೆ.

ತೀವ್ರ ಸ್ವರೂಪದ ಅನ್ಯ ಕಾಯಿಲೆಗಳಿಂದ ಬಳಲು ತ್ತಿರುವವರು ಮತ್ತು ಕೋವಿಡ್‌ನಿಂದ ಹೆಚ್ಚು ಅಸ್ವಸ್ಥರಾದವರಿಗೆ ಆರಂಭಿಕ ಹಂತದ ಚಿಕಿತ್ಸೆಯಲ್ಲೇ ರೆಮ್‌ಡಿಸಿವಿರ್‌ ಚುಚ್ಚುಮದ್ದು ನೀಡಲಾಗುತ್ತಿದೆ. ಕೋವಿಡ್‌ನ ಎರಡನೇ ಅಲೆಯಲ್ಲಿ ಇಂತಹ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು,ರೆಮ್‌ಡಿಸಿವಿರ್‌ ಬೇಡಿಕೆಯೂ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ.

ಹೆಚ್ಚಿದ ಪರದಾಟ: ಕೆಲವು ದಿನಗಳಿಂದ ಈಚೆಗೆ ಈ ಚುಚ್ಚುಮದ್ದು ಲಭ್ಯವಾಗದೇ ಪರದಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಕೋವಿಡ್‌ ರೋಗಿಗಳು ಹೆಚ್ಚಿರುವ ಬೆಂಗಳೂರಿನಲ್ಲೇ ಈ ಸಮಸ್ಯೆ ಬೃಹದಾಕಾರವಾಗಿದೆ.

ನಾಲ್ಕರಿಂದ ಆರು ಡೋಸ್‌ ಚುಚ್ಚುಮದ್ದಿಗಾಗಿ ರೋಗಿಗಳು, ಅವರ ಸಂಬಂಧಿಕರು ಕಂಡ ಕಂಡವರ ಬಳಿ ಅಂಗಲಾಚುತ್ತಿದ್ದಾರೆ.

ಎರಡು ದಿನ ಅಲೆದಾಡಿದರೂ ಒಂದು ಡೋಸ್‌ ರೆಮ್‌ಡಿಸಿವಿರ್‌ ಕೂಡ ಪಡೆಯಲಾಗದೆ ಅಸಹಾಯಕ ಸ್ಥಿತಿಗೆ ತಲುಪಿರುವ ನೂರಾರು ಮಂದಿ ಕಾಣಸಿಗುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಬೇಡಿಕೆ ಮಂಡಿಸಿ ಪೋಸ್ಟ್‌ ಹಾಕುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ.

ಎಲ್ಲಿ ಹೋಗುತ್ತಿದೆ ರೆಮ್‌ಡಿಸಿವರ್?: ಆರೋಗ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, ರಾಜ್ಯದಲ್ಲಿ ರೆಮ್‌ಡಿಸಿವಿರ್‌ ಕೊರತೆ ಇಲ್ಲ. ಅಗತ್ಯ ಪ್ರಮಾಣದಷ್ಟು ಒದಗಿಸಲು ವ್ಯವಸ್ಥೆಯನ್ನು ಮಾಡಲಾಗಿದೆ ಎನ್ನುತ್ತಾರೆ ಅವರು.

‘ಸರ್ಕಾರಿ ಕೋಟಾದಡಿ ದಾಖಲಾಗುವ ಕೋವಿಡ್‌ ರೋಗಿಗಳಿಗೆ ಒದಗಿಸುವುದಕ್ಕಾಗಿ 25,000 ಡೋಸ್‌ಗಳಷ್ಟುರೆಮ್‌ಡಿಸಿವಿರ್‌ ಕಾಯ್ದಿರಿಸಲಾಗಿದೆ. ಖಾಸಗಿಯಾಗಿ ದಾಖಲಾಗುವ ರೋಗಿಗಳಿಗೂ ಪೂರೈಸಲು ಆರೋಗ್ಯ ಇಲಾಖೆಯ ಮೂಲಕ ಕ್ರಮ ಕೈಗೊಳ್ಳಲಾಗಿದೆ. ಉತ್ಪಾದಕರು ವಿತರಕರ ಮೂಲಕವೂ ಪೂರೈಕೆ ಮಾಡುತ್ತಿದ್ದಾರೆ. ಖಾಸಗಿ ಬಳಕೆಗಾಗಿ ಗುರುವಾರ 6,500 ಡೋಸ್‌ ಪೂರೈಕೆಯಾಗಿದೆ’ ಎಂದು ಆರೋಗ್ಯ ಇಲಾಖೆ ಆಯುಕ್ತ ಕೆ.ವಿ. ತ್ರಿಲೋಕಚಂದ್ರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಆದರೆ, ಖಾಸಗಿಯಾಗಿ ದಾಖಲಾದ ರೋಗಿಗಳಿಗೆ ಪೂರೈಸುವುದಕ್ಕಾಗಿ ಒದಗಿಸುತ್ತಿರುವ ಅಷ್ಟೊಂದು ಪ್ರಮಾಣದ ರೆಮ್‌ಡಿಸಿವಿರ್‌ ಚುಚ್ಚುಮದ್ದು ಎಲ್ಲಿಗೆ ಹೋಗುತ್ತಿದೆ? ಎಂಬ ಪ್ರಶ್ನೆಗೆ ಆರೋಗ್ಯ ಇಲಾಖೆ, ಔಷಧ ನಿಯಂತ್ರಕರು ಯಾರ ಬಳಿಯೂ ಉತ್ತರ ಸಿಗುವುದಿಲ್ಲ.

ಸಿಪ್ಲಾ, ಝೈಡಸ್‌, ಹೆಟ್ರೋ, ಡಾ. ರೆಡ್ಡೀಸ್‌ ಲ್ಯಾಬೋರೇಟರಿ ಸೇರಿದಂತೆ ಹಲವು ಕಂಪನಿಗಳು ಭಾರತದಲ್ಲಿ ರೆಮ್‌ಡಿಸಿವಿರ್‌ ಉತ್ಪಾದನೆ ಮಾಡುತ್ತಿವೆ. ಪ್ರತಿ ಡೋಸ್‌ಗೆ ₹ 2,800ರಿಂದ ₹ 6,000ದವರೆಗೂ ದರವಿದೆ. ಆದರೆ, ರಾಜ್ಯದಲ್ಲಿ ಹೆಚ್ಚಿದ ಬೇಡಿಕೆಯಿಂದಾಗಿ ಕಾಳಸಂತೆಯಲ್ಲಿ ಪ್ರತಿ ಡೋಸ್‌ಗೆ ₹ 40,000ದವರೆಗೂ ಮಾರಾಟ ಮಾಡುತ್ತಿರುವ ಪ್ರಕರಣಗಳೂ ಪತ್ತೆಯಾಗಿವೆ.

ವೈರಾಣು ಸೋಂಕು ನಿಯಂತ್ರಣಕ್ಕೆ ಸಹಕಾರಿ

‘ರೆಮ್‌ಡಿಸಿವಿರ್‌ ಔಷಧಿಯನ್ನು ವೈರಾಣು ಸೋಂಕು ನಿಯಂತ್ರಣಕ್ಕೆ ಬಳಸಲಾಗುತ್ತದೆ. ಹಿಂದೆ ಹೆಪಟೈಟಸ್‌–ಸಿ, ಎಬೋಲಾ ವೈರಸ್‌ ಸೋಂಕು, ಮಿಡ್ಲ್‌ ಈಸ್ಟ್‌ ರೆಸ್ಪಿರೇಟರಿ ಸಿಂಡ್ರೋಮ್‌ನಂತಹ ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತಿತ್ತು. ಈಗ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಳಕೆ ಆಗುತ್ತಿದೆ’ ಎನ್ನುತ್ತಾರೆ ಬಿಜಿಎಸ್‌ ಗ್ಲೋಬಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ನ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ಬಾಲಚಂದ್ರ ಜಿ.

‘ವೈರಾಣು ನಿಯಂತ್ರಿಸುವ ಅಂಶ ಈ ಔಷಧಿಯಲ್ಲಿದೆ. ಶ್ವಾಸಕೋಶದ ಉರಿಯೂತ ತಡೆಯುವುದು, ಶ್ವಾಸಕೋಶಕ್ಕೆ ಆಗುವ ಹಾನಿ ತಪ್ಪಿಸಲು ಇದು ಸಹಕಾರಿ ಎಂಬುದು ಬಳಕೆಯಿಂದ ಸಾಬೀತಾಗಿದೆ. ಈ ಕಾರಣದಿಂದ ಕೋವಿಡ್‌ ಚಿಕಿತ್ಸೆಯಲ್ಲಿ ರೆಮ್‌ಡಿಸಿವಿರ್‌ ಲಸಿಕೆಗೆ ಬೇಡಿಕೆ ಹೆಚ್ಚಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT