ಭಾನುವಾರ, ಮೇ 29, 2022
30 °C

’ತಾಂತ್ರಿಕ ಕಾರಣಕ್ಕೆ ವೇತನ ನಿರಾಕರಣೆ ಸಲ್ಲ’: ಹೈಕೋರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ’ವೇತನ ಪಾವತಿಸಲು ನಿರ್ದೇಶಿಸುವಂತೆ ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯಲ್ಲಿ ಸಹಿ ಇಲ್ಲ’ ಎಂಬ ಕಾರಣಕ್ಕೆ ಆ ಅರ್ಜಿಯನ್ನು ವಜಾಗೊಳಿಸಿದ್ದ ಕಾರ್ಮಿಕ ಆಯುಕ್ತರ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿದೆ.

’ವೇತನ ಪಾವತಿಗೆ ಸಂಬಂಧಿಸಿದಂತೆ ಅರ್ಜಿದಾರ ಮಹಿಳೆಯು ಸಲ್ಲಿಸಿರುವ ತಕರಾರು ಅರ್ಜಿಯಲ್ಲಿ ಆ ಕಾರ್ಮಿಕ ಮಹಿಳೆ ಸಹಿ ಮಾಡಲು ಅವಕಾಶ ನೀಡಬೇಕು. ಮುಂದಿನ 6 ತಿಂಗಳಲ್ಲಿ ಅರ್ಜಿಯನ್ನು ಮರು ವಿಚಾರಣೆ ನಡೆಸಿ ಸೂಕ್ತ ಆದೇಶ ಹೊರಡಿಸಬೇಕು’ ಎಂದು ಮೈಸೂರಿನ ಸಹಾಯಕ ಕಾರ್ಮಿಕ ಆಯುಕ್ತರಿಗೆ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ಧ ಏಕಸದಸ್ಯ ನ್ಯಾಯಪೀಠ ನಿರ್ದೇಶಿಸಿದೆ.

’ಇದೊಂದು ಸರಿಪಡಿಸಬಹುದಾದ ಲೋಪ. ತಾಂತ್ರಿಕ ಕಾರಣಗಳಿಗಾಗಿ ಕಾರ್ಮಿಕರ ಕಾನೂನಾತ್ಮಕ ಹಕ್ಕುಗಳನ್ನು ತಿರಸ್ಕರಿಸಲು ಸಾಧ್ಯವಿಲ್ಲ‘ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣವೇನು?: ಮೈಸೂರು ತಾಲ್ಲೂಕಿನ ಕಲ್ಲೂರು ಯಡಹಳ್ಳಿ ನಿವಾಸಿಗಳಾದ ಪಾರ್ವತಮ್ಮ ಹಾಗೂ ಪತಿ ಕೃಷ್ಣೇಗೌಡ ಅರಣ್ಯ ಮತ್ತು ಪರಿಸರ ಇಲಾಖೆಯಲ್ಲಿ ವಾಚರ್ ಆಗಿ ಕೆಲಸ ಮಾಡಿದ್ದರು. ಮೈಸೂರಿನ ಸಾಮಾಜಿಕ ಅರಣ್ಯ ವಿಭಾಗದ ರೇಂಜ್ ಪಾರೆಸ್ಟ್ ಆಫೀಸರ್ ಇವರಿಗೆ ವೇತನ ಪಾವತಿಸದ ಹಿನ್ನೆಲೆಯಲ್ಲಿ 2014ರಲ್ಲಿ ಜಂಟಿಯಾಗಿ ಕಾರ್ಮಿಕ ಆಯುಕ್ತರಿಗೆ ದೂರು ಸಲ್ಲಿಸಿದ್ದರು.

’2012ರ ಏಪ್ರಿಲ್ 3ರ ಬಳಿಕ ನನಗೆ ಪಾವತಿಸಬೇಕಿರುವ ₹ 67,464 ಮೊತ್ತ ನೀಡಬೇಕು‘ ಎಂದು ಪತಿ ಕೃಷ್ಣೇಗೌಡ ಹಾಗೂ ’2012ರ ಜನವರಿ 21ರ ಬಳಿಕ ನನಗೆ ಬರಬೇಕಾದ ₹ 78,708 ಮೊತ್ತವನ್ನು ಪಾವತಿಸಬೇಕು’ ಎಂದು ಪಾರ್ವತಮ್ಮ ಅರ್ಜಿಯಲ್ಲಿ ಕೋರಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಸಹಾಯಕ ಕಾರ್ಮಿಕ ಆಯುಕ್ತರು ಪತಿ ಕೃಷ್ಣಗೌಡರ ಮನವಿ ಪುರಸ್ಕರಿಸಿದ್ದರು. ಆದರೆ, ’ಪಾರ್ವತಮ್ಮ ಅವರ ಅರ್ಜಿಯಲ್ಲಿ ಅವರ ಸಹಿ ಇಲ್ಲ‘ ಎಂಬ ಕಾರಣಕ್ಕೆ ಅವರ ಮನವಿ ತಿರಸ್ಕರಿಸಿ 2015ರ ಜನವರಿ 28ರಂದು ಆದೇಶ ನೀಡಿದ್ದರು. ಈ ಆದೇಶ ಪ್ರಶ್ನಿಸಿ ಪಾರ್ವತಮ್ಮ ಹೈಕೋರ್ಟ್ ಮೆಟ್ಟಿಲೇರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು