ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಿಕ ಸೇವಾ ನಿಯಮಕ್ಕೆ ತಿದ್ದುಪಡಿ: ಜಾತಿ, ಭಾಷೆ ಸಂಘ- ನೌಕರರಿಗೆ ನಿರ್ಬಂಧ

ನಾಗರಿಕ ಸೇವಾ ನಿಯಮಕ್ಕೆ ತಿದ್ದುಪಡಿ ಪ್ರಸ್ತಾವ
Last Updated 8 ಡಿಸೆಂಬರ್ 2022, 3:46 IST
ಅಕ್ಷರ ಗಾತ್ರ

ಬೆಂಗಳೂರು: ಧರ್ಮ, ಜನಾಂಗ, ಪ್ರದೇಶ, ಭಾಷೆ, ಕೋಮು ಭಾವನೆ ಗಳನ್ನು ಕೆರಳಿಸುವ ಸಂಸ್ಥೆ ಮತ್ತು ಸಂಘಟ ನೆಗಳ ಜೊತೆಗೆ ಸರ್ಕಾರಿ ನೌಕರರು ಕೈಜೋಡಿಸದಂತೆ ನಿಷೇಧ ಹೇರಲು ರಾಜ್ಯ ಸರ್ಕಾರ ಮುಂದಾಗಿದೆ. ಅಲ್ಲದೆ,‌ ಅಂಥ ಸಂಘಟನೆಗಳ ಚುನಾವಣೆಗಳಲ್ಲಿ ಸ್ಪರ್ಧಿಸುವ ಅಥವಾ ಭಾಗಿಯಾಗುವ ಚಟುವಟಿಕೆಗೂ ನಿರ್ಬಂಧ ವಿಧಿಸುವ ಪ್ರಕ್ರಿಯೆಗೂ ಚಾಲನೆ ನೀಡಿದೆ.

ಜಾತಿ, ಧರ್ಮ, ಭಾಷೆ ಆಧಾರದಲ್ಲಿ ರಚನೆಗೊಂಡ ಸಂಘಟನೆಗಳು, ತಮ್ಮ ಉದ್ದೇಶಗಳ ಈಡೇರಿಕೆಗಾಗಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತವೆ. ಇದು ವಿವಿಧ ಸಮುದಾಯಗಳ ನಡುವೆ ಕೋಮು‌ದ್ವೇಷ ಮತ್ತು ಅಸೂಯೆಗೆ ಪ್ರಚೋದನೆ ನೀಡುತ್ತದೆ. ಹೀಗಾಗಿ, ಅಂಥ ಸಂಘಟನೆಗಳ ಜೊತೆ ಸರ್ಕಾರಿ ನೌಕರರು ಸೇರಬಾರದೆಂದು ನಿರ್ಬಂಧಿಸುವ ಉದ್ದೇಶದಿಂದ ‘ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು–2021’ಕ್ಕೆ ತಿದ್ದುಪ‍ಡಿ ತರಲು ಸರ್ಕಾರ ನಿರ್ಧರಿಸಿದೆ.

ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿ ಎಆರ್‌) ಸಚಿವ ಸಂಪುಟ ಸಭೆಗೆ ಪ್ರಸ್ತಾವ ಮಂಡಿಸಿದ್ದು, ಡಿಪಿಎಆರ್‌ ಸಿದ್ಧಪಡಿಸಿದ ರಹಸ್ಯ ಟಿಪ್ಪಣಿಯು ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ತಿದ್ದುಪಡಿ ನಿಯಮವು, ಇನ್ನು ಮುಂದೆ ಸರ್ಕಾರಿ ನೌಕರರು ಜಾತಿ, ಸಮುದಾಯ, ಧರ್ಮ, ಭಾಷೆ, ಪ್ರದೇಶ ಇತ್ಯಾದಿಗಳನ್ನು ಆಧರಿಸಿ ನೋಂದಣಿಯಾದ ಅಥವಾ ಆಗದ ಸಂಸ್ಥೆ, ವೇದಿಕೆಯನ್ನು ರಚಿಸದಂತೆ ನಿಷೇಧ ಹೇರಲಿದೆ. ಇಂಥ ಸಂಸ್ಥೆ, ಸಂಘಟನೆಗಳು ಗುಂಪುಗಾರಿಕೆ, ದ್ವೇಷ ಭಾವನೆ, ಪಕ್ಷಪಾತ ಭಾವನೆಯ ಮೂಲಕ ಸಮ ಗ್ರತೆಗೆ ಭಂಗ ತರುತ್ತವೆ ಎಂದೂ ನಿಯಮದಲ್ಲಿ ಉಲ್ಲೇಖಿಸಲಾಗಿದೆ. ಈ ಕಾರಣಕ್ಕೆ ಅಂಥ ಸಂಸ್ಥೆ, ಸಂಘಟನೆಗಳಲ್ಲಿ ಸದಸ್ಯರಾಗದಂತೆ ಕೂಡಾ ನಿರ್ಬಂಧ ವಿಧಿಸಲಿದೆ.

2020–21ನೇ ಸಾಲಿನ ವಿಧಾನ ಮಂಡಲದ ಅಧೀನ ಶಾಸನಾ ರಚನಾ ಸಮಿತಿಯು ತನ್ನ 51ನೇ ವರದಿಯಲ್ಲಿ ‘ಇಲಾಖೇತರ ಜಾತಿ ಸಂಘ–ಸಂಸ್ಥೆಗಳ ಚುನಾವಣೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸದಂತೆ ಮಾಡಲು ಕಠಿಣ ನಿಯಮಗಳನ್ನು ರೂಪಿಸಬೇಕು’ ಎಂದು ಶಿಫಾರಸು ಮಾಡಿತ್ತು. ಈ ವರದಿಯನ್ನು ಸೆ. 21ರಂದು ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸಲಾಗಿದೆ. ಸಮಿತಿ ಶಿಫಾರಸಿನಂತೆ ಸರ್ಕಾರಿ ನೌಕ ರರ ಸೇವಾ (ನಡತೆ) ನಿಯಮಗಳ ಕರಡು ತಿದ್ದುಪಡಿಯನ್ನು ಡಿಪಿಎಆರ್‌ ಸಿದ್ಧಪಡಿಸಿದೆ. ‘ಸರ್ಕಾರಿ ನೌಕರರು ತಮ್ಮ ಜವಾಬ್ದಾರಿಯನ್ನು ನಿರ್ಭೀತಿಯಿಂದ, ಯಾವುದೇ ಪಕ್ಷಪಾತ ಮಾಡದೆ ನಿರ್ವಹಿಸಬೇಕಾಗಿದೆ. ಗುಂಪುಗಾರಿಕೆ, ದ್ವೇಷ ಭಾವನೆ, ಪಕ್ಷಪಾತ ಭಾವನೆಯ ಸಂಘಟನೆಗಳ ಜೊತೆ ಗುರುತಿಸಿಕೊಂಡರೆ ಆತನ ಜವಾಬ್ದಾರಿಯ ಮೇಲೆ ದುಷ್ಪ ರಿಣಾಮ ಉಂಟಾಗಲಿದೆ.

‘ಆಸ್ತಿ ವಿವರ ಸಲ್ಲಿಸಲು ಮಾರ್ಚ್‌ 31 ಗಡುವು’
ಸದ್ಯ ಇರುವ ಸೇವಾ (ನಡತೆ) ನಿಯಮದ ಪ್ರಕಾರ, ಸರ್ಕಾರಿ ನೌಕರರು ತನ್ನ ಮತ್ತು ಕುಟುಂಬದ ಆಸ್ತಿ ಮತ್ತು ಹೊಣೆಗಾರಿಕೆಗಳ ವಾರ್ಷಿಕ ವಿವರಗಳನ್ನು ಪ್ರತಿ ವರ್ಷ ಡಿಸೆಂಬರ್ 31ರ ಒಳಗೆ ಸರ್ಕಾರಕ್ಕೆ ಸಲ್ಲಿಸಬೇಕು. ಆದಾಯ ತೆರಿಗೆ ಪಾವತಿಗೆ ಮಾರ್ಚ್‌ 31ನ್ನು ಪರಿಗಣಿಸುವುದರಿಂದ,ಸರ್ಕಾರಿ ನೌಕರರು ಆಸ್ತಿ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸಬೇಕಾದ ಅವಧಿಯನ್ನೂ ಮಾರ್ಚ್‌ 31ಕ್ಕೆ ಪರಿಗಣಿಸಲು ‘ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು–2021’ಕ್ಕೆ ತಿದ್ದುಪ‍ಡಿಗೆ ಕೂಡಾ ಸರ್ಕಾರ ನಿರ್ಧರಿಸಿದೆ. ಈ ಪ್ರಸ್ತಾವವನ್ನೂ ಸಚಿವ ಸಂಪುಟ ಸಭೆಯ ಅನುಮೋದನೆಗೆ ಮಂಡಿಸಲಾಗಿದೆ ಎಂದು ಡಿಪಿಎಆರ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT