ಬುಧವಾರ, ಮಾರ್ಚ್ 29, 2023
26 °C
ಖಾಸಗಿ ಶಾಲೆಯ ಹೆಚ್ಚಿನ ಮಕ್ಕಳೇ ಟ್ಯೂಷನ್‌ಗೆ ಮೊರೆ

ಮೂರನೇ ತರಗತಿಯಲ್ಲಿರುವ ಶೇ 10.5ರಷ್ಟು ಮಕ್ಕಳಿಗೆ ಓದಲು ಬರಲ್ಲ!

ಪ್ರಜಾವಾಣಿ ವಾರ್ತೆ ‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕದಲ್ಲಿ ಮೂರನೇ ತರಗತಿಯಲ್ಲಿರುವ ಶೇ 10.5ರಷ್ಟು ಮಕ್ಕಳಿಗೆ ಒಂದಕ್ಷರವೂ ಓದಲು ಬರುವುದಿಲ್ಲ. ಶೇ 26.9ರಷ್ಟು ಅಕ್ಷರಗಳನ್ನು ಗುರುತಿಸಿ ಓದುತ್ತಾರೆ. ಆದರೆ, ಶಬ್ದಗಳನ್ನು ಓದಲು ಬರುವುದಿಲ್ಲ ಎನ್ನುವುದನ್ನು ರಾಷ್ಟ್ರೀಯ ಮಟ್ಟದಲ್ಲಿ ನಡೆದ ಶಿಕ್ಷಣ ಸ್ಥಿತಿಗತಿ ವಾರ್ಷಿಕ ವರದಿ (ಎಎಸ್‌ಇಆರ್‌) ತಿಳಿಸಿದೆ.

‘ಪ್ರಥಮ ಪ್ರತಿಷ್ಠಾನ’ ಸಹಯೋಗದಲ್ಲಿ ಸಮೀಕ್ಷೆ ಕೈಗೊಂಡು ಈ ವರದಿ ಸಿದ್ಧಪಡಿಸಲಾಗಿದೆ. ಸಮೀಕ್ಷಾ ತಂಡವು ಕರ್ನಾಟಕದಲ್ಲಿ 812 ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಗುಣಮಟ್ಟದ ವರದಿಯನ್ನು ನೀಡಿದೆ.

ಮೂರನೇ ತರಗತಿಯ ಶೇ 37.3 ರಷ್ಟು ಮಕ್ಕಳು ಶಬ್ದಗಳನ್ನು ಓದುತ್ತಾರೆ. ಆದರೆ, ಒಂದನೇ ತರಗತಿಯ ಪಠ್ಯ ಅಥವಾ ಅದಕ್ಕಿಂತ ಹೆಚ್ಚಿನ ತರಗತಿಯ ಪಠ್ಯದಲ್ಲಿನ ಶಬ್ದಗಳನ್ನು ಓದಲು ಬರುವುದಿಲ್ಲ ಎನ್ನುವುದನ್ನು ವರದಿಯಲ್ಲಿ ವಿವರಿಸಲಾಗಿದೆ.

8ನೇ ತರಗತಿಯ ಶೇ 1.7ರಷ್ಟು ಮಕ್ಕಳಿಗೆ ಒಂದಕ್ಷರವನ್ನೂ ಓದಲು ಬರುವುದಿಲ್ಲ. ಇದೇ ತರಗತಿಯ ಶೇ 4.1ರಷ್ಟು ಮಕ್ಕಳು ಮಾತ್ರ ಒಂದೊಂದು ಅಕ್ಷರವನ್ನು ಗುರುತಿಸುತ್ತಾರೆ. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗಿಂತ ಖಾಸಗಿ ಶಾಲೆಯ ಹೆಚ್ಚಿನ ಮಕ್ಕಳೇ ಟ್ಯೂಷನ್‌ ಮೊರೆ ಹೋಗುತ್ತಿದ್ದಾರೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ದಾಖಲಾಗಿರುವ ಕನಿಷ್ಠ ಶೇ 7.8ರಷ್ಟು ಹಾಗೂ ಖಾಸಗಿ ಶಾಲೆಗಳ ಶೇ 13.6ರಷ್ಟು ಮಕ್ಕಳು ಟ್ಯೂಷನ್‌ ಪಡೆಯುತ್ತಿದ್ದಾರೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಒಂದರಿಂದ ಎಂಟನೇ ತರಗತಿ ವಿದ್ಯಾರ್ಥಿಗಳ ಸಮೀಕ್ಷೆಯಲ್ಲಿ ಈ ವಿಷಯ ಗೊತ್ತಾಗಿದೆ. ನಾಲ್ಕನೇ ತರಗತಿಯ ಶೇ 9.2ರಷ್ಟು ಮಕ್ಕಳು ಮತ್ತು ಮೂರನೇ ತರಗತಿಯ ಶೇ 16ರಷ್ಟು ಮಕ್ಕಳು ಟ್ಯೂಷನ್‌ ಪಡೆಯುತ್ತಿದ್ದಾರೆ.

ಕಲಿಕೆಯಲ್ಲಿ ಹಿನ್ನಡೆಯಾಗಿದ್ದರಿಂದ ಕೋವಿಡ್‌ ಬಳಿಕ ಖಾಸಗಿಯಾಗಿ ಟ್ಯೂಷನ್‌ ಪಡೆಯುವುದು ಹೆಚ್ಚಾಗಿದೆ. ಆದರೆ, ರಾಷ್ಟ್ರೀಯ ಮಟ್ಟದಲ್ಲಿ ವಿಶ್ಲೇಷಿಸಿದಾಗ ಕರ್ನಾಟಕದಲ್ಲಿ ಹಣ ಪಾವತಿಸಿ ಟ್ಯೂಷನ್ ಪಡೆಯುವುದು ಕಡಿಮೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು