ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಹಾನಿಯನ್ನು ಭರಿಸಲು ಪ್ರತಿ ವರ್ಷ ಪರಿಸರ ಬಜೆಟ್‌: ಸಿಎಂ ಬಸವರಾಜ ಬೊಮ್ಮಾಯಿ

Last Updated 12 ಸೆಪ್ಟೆಂಬರ್ 2021, 1:27 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಪರಿಸರ ಹಾನಿಯನ್ನು ಭರಿಸಲು ಪರಿಸರ ಬಜೆಟ್‌ ಆರಂಭಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಅಂಗವಾಗಿ ಅರಣ್ಯ ಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಪ್ರತಿವರ್ಷ ನಾಶವಾಗುವ ಒಟ್ಟು ಹಸಿರು ಪ್ರದೇಶ ಎಷ್ಟು ಎಂಬುದನ್ನು ಅಂದಾಜಿಸುವ ವಿಧಾನ ಆರಂಭಿಸಬೇಕಿದೆ. ಆಗ ಮಾತ್ರ ಹಸಿರಿನ ಕೊರತೆ ಎಷ್ಟು ಎಂದು ಗೊತ್ತಾಗುತ್ತದೆ. ಪರಿಸರ ಬಜೆಟ್‌ನಿಂದ ಈ ನಷ್ಟ ತುಂಬಿಸಿಕೊಳ್ಳಬಹುದು’ ಎಂದರು.

‘ನೈಸರ್ಗಿಕ ಸಂಪತ್ತಿನ ವಿಚಾರದಲ್ಲಿ ನಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಬೇಕು. ಕಾಡಿಲ್ಲದೆ ಮಳೆ ಇಲ್ಲ ಎನ್ನುವುದನ್ನು ಅರ್ಥ ಮಾಡಿ
ಕೊಳ್ಳಬೇಕು. ಮನುಷ್ಯನ ಅತಿಯಾಸೆಯಿಂದ ನಿಸರ್ಗ ನಾಶವಾಗುತ್ತಿದೆ. ಎರಡು ಸಾವಿರ ವರ್ಷಗಳಲ್ಲಿ ನಾಶವಾಗುವಷ್ಟು ಅರಣ್ಯವನ್ನು ಕೇವಲ 20 ವರ್ಷಗಳಲ್ಲಿ ನಾಶ ಮಾಡಿದ್ದೇವೆ. ಪರಿಸರ ಹಾನಿಯ ವೇಗ ಅಷ್ಟು ತೀವ್ರಗೊಂಡಿದೆ. ಇದು ನಿಜಕ್ಕೂ ಆತಂಕಕಾರಿ’ ಎಂದರು.

‘ಮುಂದಿನ ಪೀಳಿಗೆಗಾಗಿ ಅರಣ್ಯ ಸಂರಕ್ಷಿಸುವ ಅಗತ್ಯ ಮತ್ತು ಅನಿವಾರ್ಯ ಇದೆ. ಅವಶ್ಯಕ್ಕಿಂತ ಹೆಚ್ಚು ನಿಸರ್ಗವನ್ನು ನಾಶಪಡಿಸಿದರೆ, ಭವಿಷ್ಯದ ಕಳವು ಮಾಡಿದಂತೆ. ನಮ್ಮ ಹಿರಿಯರು ಉಳಿಸಿದ್ದರಿಂದ ಈ ಸಂಪತ್ತನ್ನು ನಾವು ಅನುಭವಿಸುತ್ತಿದ್ದೇವೆ. ಮುಂದಿನ ಜನಾಂಗದ ಪಾಲನ್ನು ನಾವೇ ಬಳಕೆ ಮಾಡಬಾರದು ಎಂಬ ಅರಿವಿನಿಂದ ಇಲಾಖೆ ಕೆಲಸ ಮಾಡಬೇಕು. ಆಗ ಮಾತ್ರ ಹುತಾತ್ಮರ ದಿನಾಚರಣೆಗೆ ಅರ್ಥ ಬರುತ್ತದೆ’ ಎಂದರು.

‘ರಾಜ್ಯದಲ್ಲಿ 43 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯವಿದೆ. ಪ್ರಸ್ತುತ ಶೇ 21.50ರಷ್ಟು ಅರಣ್ಯದ ಕೊರತೆ ಇದೆ. ಕಾಡುಗಳ್ಳರನ್ನು ನಿಯಂತ್ರಿಸಿ, ಕಾಡು ಉಳಿಸಿ ಬೆಳೆಸುವ ಕ್ರಮಗಳನ್ನು ಕೈಗೊಳ್ಳಬೇಕು. ಮನುಷ್ಯ– ಪ್ರಾಣಿಗಳ ನಡುವಿನ ಸಂಘರ್ಷ ಕಡಿಮೆ ಮಾಡ
ಬೇಕು. ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕು. ಇಲಾಖೆಯ ಕಾರ್ಯಚಟುವಟಿಕೆ ವಿಸ್ತರಿಸಿ, ಕಾಡು ಉಳಿಸುವ ಕೆಲಸವನ್ನು ದಕ್ಷತೆಯಲ್ಲಿ ಮಾಡಬೇಕು’ ಎಂದರು.

ಅಧಿಕಾರಿಗಳ ಜೊತೆ ಸಭೆ: ಕಾರ್ಯಕ್ರಮದ ಬಳಿಕ ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಮತ್ತು ಇತರ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಸಭೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT