ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ವರ್ಷದಲ್ಲಿ 5 ಲಕ್ಷ ಮನೆ: ಸಚಿವ ಸಂಪುಟ ಸಭೆಯ ಬಳಿಕ ಬೊಮ್ಮಾಯಿ ಹೇಳಿಕೆ

ವಸತಿ ಯೋಜನೆಗೆ ₹8,000 ಕೋಟಿ ವೆಚ್ಚ *
Last Updated 22 ಜುಲೈ 2021, 17:15 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಮುಂದಿನ ಎರಡು ವರ್ಷಗಳಲ್ಲಿ ₹8,000 ಕೋಟಿ ವೆಚ್ಚದಲ್ಲಿ 5 ಲಕ್ಷ ಮನೆಗಳನ್ನು ನಿರ್ಮಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದೆ.

ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಗ್ರಾಮಾಂತರ ಪ್ರದೇಶದಲ್ಲಿ 4 ಲಕ್ಷ ಮತ್ತು ನಗರ ಪ್ರದೇಶದಲ್ಲಿ 1 ಲಕ್ಷ ಮನೆಗಳನ್ನು ವಿವಿಧ ಯೋಜನೆಗಳಡಿ ನಿರ್ಮಿಸಲಾಗುವುದು. ಇದಲ್ಲದೆ, ಬೆಂಗಳೂರಿನಲ್ಲಿ 1 ಲಕ್ಷ ಬಹುಮಹಡಿ ಫ್ಲಾಟ್‌ಗಳ ನಿರ್ಮಾಣಕ್ಕೆ ಪೂರ್ವಭಾವಿಯಾಗಿ ಅಲ್ಲಿ ಮೂಲಸೌಕರ್ಯವನ್ನು ಕಲ್ಪಿಸಲು ₹500 ಕೋಟಿ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ ಎಂದರು.

ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಕೇಂದ್ರ ಸರ್ಕಾರದ ಹುದ್ದೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಕ್ಕಾಗಿ ಶೇ 10 ರಷ್ಟು ಮೀಸಲಾತಿ ಸೌಲಭ್ಯ ಒದಗಿಸುವ ಸಂಬಂಧ ಪರಿಷ್ಕೃತ ಆದೇಶ ಹೊರಡಿಸಲು ಒಪ್ಪಿಗೆ ನೀಡಲಾಗಿದೆ. ಇದರಲ್ಲಿ ಎಲ್ಲ ಅರ್ಹ ಜಾತಿಗಳನ್ನೂ ಪಟ್ಟಿಗೆ ಸೇರಿಸಲು ಒಪ್ಪಿಗೆ ನೀಡಲಾಗಿದೆ. ವಾರ್ಷಿಕ ಆದಾಯ ₹ 8 ಲಕ್ಷ ಗಳಿಗೂ ಕಡಿಮೆ ಇರುವ ಕುಟುಂಬಗಳಿಗೆ ಇದು ಅನ್ವಯವಾಗುತ್ತದೆ. ಆದಾಯ ಮತ್ತು ಸ್ವತ್ತು ಪ್ರಮಾಣ ಪತ್ರ ಒದಗಿಸಲು ಪರಿಷ್ಕೃತ ಆದೇಶ ನೆರವಾಗಲಿದೆ ಎಂದು ಅವರು ಹೇಳಿದರು.

ನಿಯೋಜನೆ ಮೇಲೆ ವಿವಿಧ ಇಲಾಖೆಗಳಿಗೆ ಹೋಗಿರುವ 43 ತಹಶೀಲ್ದಾರ್‌ಗಳನ್ನು ಮಾತೃ ಇಲಾಖೆಗೆ ಕರೆಸಿಕೊಳ್ಳಲು ಕಂದಾಯ ಇಲಾಖೆಗೆ ಅನುಮತಿ ನೀಡಲಾಗಿದೆ ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆಗಳ ಯೋಜನೆಗಳ ಖರ್ಚು ವೆಚ್ಚಗಳ ಮೇಲ್ವಿಚಾರಣೆ ನೋಡಿಕೊಳ್ಳಲು ಪ್ರತ್ಯೇಕ ಪ್ರಾಧಿಕಾರಗಳನ್ನು ರಚಿಸಲು ತೀರ್ಮಾನಿಸಲಾಗಿದೆ. ಖರ್ಚು ವೆಚ್ಚಗಳ ಆಡಿಟ್‌ ಅನ್ನು ಲೆಕ್ಕಪತ್ರ ಇಲಾಖೆಯೇ ಮಾಡಲಿದೆ ಎಂದು ಬೊಮ್ಮಾಯಿ ವಿವರಿಸಿದರು.

* ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಧರ್ಮಪುರ ಮತ್ತು ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆಗೆ ವೇದಾವತಿ ನದಿಯಿಂದ ಕೆರೆಗಳನ್ನು ತುಂಬಿಸುವ ₹90 ಕೋಟಿ ಮೊತ್ತದ ಕಾಮಗಾರಿಗೆ ಒಪ್ಪಿಗೆ ನೀಡಲಾಗಿದೆ.

* ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲ್ಲೂಕು ಬೇಡರೆಡ್ಡಿಹಳ್ಳಿಯಲ್ಲಿ₹10.56 ಕೋಟಿ ವೆಚ್ಚದಲ್ಲಿ ಪರಿಶಿಷ್ಟ ವರ್ಗದ ಡಾ.ಬಿ.ಆರ್‌.ಅಂಬೇಡ್ಕರ್‌ ವಸತಿ ಶಾಲೆಯ ನಿರ್ಮಾಣಕ್ಕೆ ಒಪ್ಪಿಗೆ.

*ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಗಬ್ಬೂರು ಹಾಗೂ ಅಯೋಧ್ಯ ಗ್ರಾಮಗಳಲ್ಲಿ ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದಿಸುವ ಘಟಕವನ್ನು ಸ್ಥಾಪಿಸಲು 14 ಎಕರೆ ಜಮೀನು ನೀಡಲು ಒಪ್ಪಿಗೆ. ಎನ್‌ಟಿಪಿಸಿಯ ವಿದ್ಯುತ್‌ ವ್ಯಾಪಾರ್‌ ನಿಗಮ್‌ ಲಿಮಿಟೆಡ್‌ಗೆ 30 ವರ್ಷಗಳ ಅವಧಿಗೆ ಉಚಿತವಾಗಿ ಲೀಸ್‌ ಆಧಾರದಲ್ಲಿ ಗುತ್ತಿಗೆ ನೀಡಲಾಗುವುದು.

*ಬೆಂಗಳೂರು ಜಲಮಂಡಳಿಯ ಕೋರಮಂಗಲ ಮತ್ತು ಚೆಲ್ಲಘಟ್ಟ ಕಣಿವೆಯಲ್ಲಿರುವ 2.48 ಕೋಟಿ ಲೀಟರ್‌ ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು ಉನ್ನತೀಕರಿಸುವ ₹718 ಕೋಟಿಗಳ ವಿಸ್ತೃತ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ.

* ಕೊಪ್ಪಳ ಜಿಲ್ಲೆ ಹಿರೇಹಳ್ಳ ಯೋಜನೆಯ ₹507 ಕೋಟಿಗಳ ಪರಿಷ್ಕೃತ ಅಂದಾಜು ಮೊತ್ತಕ್ಕೆ ಘಟನೋತ್ತರ ಅನುಮೋದನೆ.

* ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಪ್ರವಾಹ ಪೀಡಿತ ಹಂಪಿಹೊಳಿ ಗ್ರಾಮದಲ್ಲಿ ಮಲಪ್ರಭಾ ನದಿಗೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ₹126 ಕೋಟಿ ನೀಡಲು ಒಪ್ಪಿಗೆ

ಸರ್ಕಾರಿ ನೌಕರರಿಗೆ ಆರೋಗ್ಯ ಸಂಜೀವಿನಿ

ರಾಜ್ಯ ಸರ್ಕಾರಿ ನೌಕರರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ನೀಡುವ ಯೋಜನೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಇದರಿಂದ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬಗಳ ಸದಸ್ಯರೂ ಸೇರಿ ಒಟ್ಟು 25 ಲಕ್ಷ ಸದಸ್ಯರಿಗೆ ಇದರ ಪ್ರಯೋಜನ ಸಿಗಲಿದೆ. ಇದಕ್ಕಾಗಿ ರಾಜ್ಯ ಸರ್ಕಾರ ವರ್ಷಕ್ಕೆ ₹250 ಕೋಟಿ ನೀಡಲಿದೆ ಎಂದು ಬೊಮ್ಮಾಯಿ ಹೇಳಿದರು.

₹770 ಕೋಟಿ ವೆಚ್ಚದಲ್ಲಿ ಕೃಷಿ ತಂತ್ರಜ್ಞಾನ ಆವಿಷ್ಕಾರ ಕೇಂದ್ರಗಳು

ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ₹770 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಕೃಷಿ ತಂತ್ರಜ್ಞಾನ ಆವಿಷ್ಕಾರ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಸಚಿವ ಬೊಮ್ಮಾಯಿ ಹೇಳಿದರು.

ಇದರ ಅನುಷ್ಠಾನದ ಸಂಪೂರ್ಣ ಹೊಣೆಗಾರಿಕೆ ಹೆಕ್ಸಾಗನ್ ಮ್ಯಾನ್ಯುಫ್ಯಾಕ್ಚರಿಂಗ್‌ ಇಂಟೆಲಿಜೆನ್ಸ್‌ ಇಂಡಿಯಾ ಕಂಪನಿಯದು. ಪ್ರತಿಯೊಂದು ಕೇಂದ್ರಕ್ಕೆ ₹110 ಕೋಟಿ ಹೂಡಿಕೆ ಮಾಡಲಾಗುವುದು ಎಂದು ಹೇಳಿದರು.

ಒಟ್ಟು ಏಳು ಕೃಷಿ ವಿಶ್ವವಿದ್ಯಾಲಯಗಳಲ್ಲಿ ಈ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಇಲ್ಲಿ ಡ್ರೋನ್‌ ಲ್ಯಾಬ್‌, ಅಗ್ರಿ ಲ್ಯಾಬ್‌ ಸೇರಿ ಕೃಷಿಗೆ ಸಂಬಂಧಿಸಿದಂತೆ ವೈವಿಧ್ಯ ಆವಿಷ್ಕಾರ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

ಅಲ್ಲದೆ, ಮಣ್ಣಿನಲ್ಲಿ ಸಾವಯವ ಇಂಗಾಲ ಹೆಚ್ಚಿಸುವ ಅಭಿಯಾನ ಯೋಜನೆ ಐದು ವರ್ಷಗಳ ಅವಧಿಯಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿದೆ. ಇದಕ್ಕೆ ₹75 ಕೋಟಿ ನಿಗದಿ ಮಾಡಲಾಗಿದೆ ಎಂದರು.

ಶಿವಮೊಗ್ಗಕ್ಕೆ ಕೊಡುಗೆ

ಶಿವಮೊಗ್ಗದಲ್ಲಿ ಆಯುಷ್ ವಿಶ್ವವಿದ್ಯಾಲಯ ಸ್ಥಾಪನೆಯ ವಿಧೇಯಕಕ್ಕೆ ಒಪ್ಪಿಗೆ, ಕ್ಯಾನ್ಸರ್‌ ಕೇಂದ್ರ ಸ್ಥಾಪನೆಗೆ ₹50 ಕೋಟಿ ನೀಡಲು ಒಪ್ಪಿಗೆ ನೀಡಲಾಗಿದೆ. ಅಲ್ಲದೇ, ಶಿವಮೊಗ್ಗ ತಾಲ್ಲೂಕಿನಲ್ಲಿ ಖಾಸಗಿ ಸಂಸ್ಥೆಯೊಂದಕ್ಕೆ ಗೋಶಾಲೆ ನಿರ್ಮಾಣಕ್ಕೆ 9.3 ಎಕರೆ ಜಮೀನು ನೀಡಲು ಮತ್ತು ಅಕ್ರಮವಾಗಿ ನಿರ್ಮಿಸಿದ್ದ ಅಟಲ್‌ ಬಡಾವಣೆಯನ್ನು ಸಕ್ರಮಗೊಳಿಸಲು ತೀರ್ಮಾನಿಸಲಾಗಿದೆ.

₹45 ಲಕ್ಷ ಮೌಲ್ಯದವರೆಗಿನ ಫ್ಲಾಟ್‌ ನೋಂದಣಿ ಶುಲ್ಕ ಶೇ 3ಕ್ಕೆ ಇಳಿಕೆ

ಅಪಾರ್ಟ್‌ಮೆಂಟ್‌ ಗಳಲ್ಲಿ ₹35 ರಿಂದ ₹45 ಲಕ್ಷ ಮೌಲ್ಯದ ಫ್ಲಾಟ್‌ಗಳ ನೋಂದಣಿ ವೇಳೆ ಪಾವತಿಸಬೇಕಾದ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಶೇ 5 ರಿಂದ 3 ಕ್ಕೆ ಇಳಿಸುವ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಈ ದರ ಇಳಿಸಿ, ಮಧ್ಯಮ ವರ್ಗದವರಿಗೆ ಅನುಕೂಲ ಮಾಡಿಕೊಡುವ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಈಗ ಸರ್ಕಾರ ನಿರ್ಧಾರ ಕೈಗೊಂಡಿದೆ.

‘ಮಾರ್ಗಸೂಚಿ ದರವನ್ನು ಇಳಿಸಬೇಕು ಎಂಬ ಸಲಹೆ ಬಂದಿದ್ದು, ಅದನ್ನು ಪರಿಶೀಲನಾ ಸಮಿತಿಗೆ ಒಪ್ಪಿಸಲಾಗಿದೆ’ ಎಂದು ಸಚಿವ ಬೊಮ್ಮಾಯಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT