ಭಾನುವಾರ, ನವೆಂಬರ್ 29, 2020
25 °C
ಕಡಿಮೆಯಾಗುತ್ತಿರುವ ‘ಮಹಾ’ ನೀರು, ಪರಿಹಾರ ಕಾರ್ಯ ಚುರುಕು

ಭೀಮಾ ನದಿ ತೀರದಲ್ಲಿ ಪ್ರವಾಹ: ಇನ್ನಷ್ಟು ಮಂದಿ ಸ್ಥಳಾಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಭೀಮಾ ಪ್ರವಾಹ ಸೋಮವಾರ ಯಾದಗಿರಿ ಜಿಲ್ಲೆಯಲ್ಲೂ ಅವಾಂತರಕ್ಕೆ ಕಾರಣವಾಗಿದೆ. ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಅಪಾಯದಲ್ಲಿ ಸಿಲುಕಿದ್ದ ನೂರಾರು ಜನರನ್ನು ರಕ್ಷಿಸಿ ಕಾಳಜಿ ಕೇಂದ್ರಗಳಿಗೆ ತಲುಪಿಸಲಾಯಿತು.

ಮೂರು ದಿನಗಳಿಂದ ಬಿಡುವು ನೀಡಿದ್ದ ಮಳೆ ಸೋಮವಾರ ಕಲಬುರ್ಗಿ ಹಾಗೂ ಜೇವರ್ಗಿ ತಾಲ್ಲೂಕಿನ ಹಲವೆಡೆ ಬಿರುಸಿನಿಂದ ಸುರಿದು ಆತಂಕ ಹೆಚ್ಚಿಸಿದೆ.ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲ್ಲೂಕಿನಲ್ಲಿರುವ ಸೊನ್ನ ಬ್ಯಾರೇಜ್‌ ಬಳಿ ಭೀಮಾ ನದಿಯ ಹರಿವಿನ ಮಟ್ಟ ಸೋಮವಾರ ಸಂಜೆಯ ವೇಳೆಗೆ 8 ಲಕ್ಷದಿಂದ 6.30 ಲಕ್ಷ ಕ್ಯುಸೆಕ್‌ಗೆ ತಗ್ಗಿದೆ ಎಂದು ಜಿಲ್ಲಾ ಆಡಳಿತ ಮಾಹಿತಿ ನೀಡಿದ್ದು, ಈ ಬ್ಯಾರೇಜ್‌ ಮೇಲ್ಭಾಗದಲ್ಲಿ ಪ್ರವಾಹ ಇಳಿಮುಖವಾಗುತ್ತಿದೆ. ಮುಂಭಾಗದಲ್ಲಿ ಪ್ರವಾಹ ಯಥಾಸ್ಥಿತಿಯಲ್ಲಿ ಇರುವುದರಿಂದ ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸಲಾಗಿದೆ.

ಯಾದಗಿರಿ ಜಿಲ್ಲೆಯ ಗುರುಸುಣಗಿ ಬ್ರಿಜ್‌ ಕಂ ಬ್ಯಾರೇಜ್‌ ಗೇಟ್‌ಗಳನ್ನು‌ ತೆರೆಯದ ಕಾರಣ ಹಿನ್ನೀರು ಮತ್ತಷ್ಟು ವ್ಯಾಪಿಸಿ, ವಡಗೇರಾ ತಾಲ್ಲೂಕಿನ ನಾಯ್ಕಲ್‌, ಬಲಕಲ್, ತಂಗಡಗಿ, ನಾಲ್ವಡಗಿ‌ ಗ್ರಾಮಗಳಿಗೆ ವ್ಯಾಪಿಸಿ ಅಲ್ಲಿಯ ನಿವಾಸಿಗಳು ಮತ್ತಷ್ಟು ತೊಂದರೆ ಅನುಭವಿಸಬೇಕಾಯಿತು.

ಕಲಬುರ್ಗಿ ತಾಲ್ಲೂಕಿನ ಸರಡಗಿ (ಬಿ), ಫಿರೋಜಾಬಾದ್, ಜೇವರ್ಗಿ ತಾಲ್ಲೂಕಿನ ರಾಸಣಗಿ, ಹಂದನೂರ, ಹರವಾಳ, ಕೋನ ಹಿಪ್ಪರಗಾ ಗ್ರಾಮಗಳಲ್ಲಿ ನದಿ ಸಮೀಪದಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ಎಲ್ಲರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಕೆಲವರು ತಮ್ಮ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಎರಡು ದಿನಗಳ ಹಿಂದೆಯೇ ಕಾಳಜಿ ಕೇಂದ್ರಕ್ಕೆ ಸ್ಥಳಾಂತರವಾದವರು ತೆಪ್ಪಗಳನ್ನು ಬಳಸಿ ಮನೆಯಲ್ಲಿದ್ದ ಸಾಮಗ್ರಿಗಳನ್ನು ಹೊರ ತಂದರು.

‘ಕಲಬುರ್ಗಿ ಜಿಲ್ಲೆಯಲ್ಲಿ ಇದುವರೆಗೆ 73 ಗ್ರಾಮಗಳ 27,378 ಜನರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದೆ. ಕಾಳಜಿ ಕೇಂದ್ರಗಳಲ್ಲಿ ಸಂತ್ರಸ್ತರ ಸಂಖ್ಯೆ ಹೆಚ್ಚುತ್ತಿದ್ದು, ಹೆಚ್ಚುವರಿ ಆಹಾರ ಧಾನ್ಯ ಸಂಗ್ರಹಿಸಲಾಗುತ್ತಿದೆ. ಇಲ್ಲಿಯವರೆಗೆ ಅನ್ನ, ಸಾಂಬಾರ್ ಪೂರೈಕೆಯಾಗುತ್ತಿದ್ದ ಕೇಂದ್ರಗಳಲ್ಲಿ ಚಪಾತಿ, ಪಲ್ಯ, ಮೊಟ್ಟೆ, ಮಕ್ಕಳಿಗೆ ಬಿಸ್ಕತ್ತು ನೀಡಲಾಗುತ್ತಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭೇಟಿ: ವಿಧಾನ ಪರಿಷತ್‌ ಚುನಾವಣಾ ಪ್ರಚಾರಕ್ಕೆ ಬಂದಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌, ಬೀದರ್ ಹಾಗೂ ಕಲಬುರ್ಗಿ ಜಿಲ್ಲೆಯ ಕೆಲ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು. ಆದರೆ, ಇದು ಕಾಟಾಚಾರದ ಭೇಟಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಟೀಕಿಸಿದ್ದಾರೆ.

ಊಟಕ್ಕೆ ಮಾತ್ರ ಬರುತ್ತಿರುವ ಸಂತ್ರಸ್ತರು: ಯಾದಗಿರಿಯ ವಡಗೇರಾ ತಾಲ್ಲೂಕಿನ ನಾಯ್ಕಲ್‌ ಗ್ರಾಮದಲ್ಲಿ ತೆಗೆದಿರುವ ಕಾಳಜಿ ಕೇಂದ್ರಕ್ಕೆ ಸಂತ್ರಸ್ತರು ಕೇವಲ ಊಟಕ್ಕೆ ಮಾತ್ರ ಬರುತ್ತಿದ್ದಾರೆ. ಊಟದ ನಂತರ ಮತ್ತೆ ಸಂಬಂಧಿಕರ ಮನೆಗೆ ತೆರಳುತ್ತಿದ್ದಾರೆ.

‘ಕಾಳಜಿ ಕೇಂದ್ರಲ್ಲಿ ತಂಗಲು ಯಾವುದೇ ಸೌಲಭ್ಯ ಇಲ್ಲ. ಹೀಗಾಗಿ  ಊಟಕ್ಕೆ ಮಾತ್ರ ಈ ಕೇಂದ್ರಕ್ಕೆ ಹೋಗುತ್ತೇವೆ’ ಎಂದು ಸಂತ್ರಸ್ತರೊಬ್ಬರು ಹೇಳಿದರು.

ಕಾದು ಕುಳಿತ ಜಿಲ್ಲಾ ಆಡಳಿತ; ತಪ್ಪು ಲೆಕ್ಕ ಎಂದು ಸವದಿ

ರಾಯಚೂರು: ಭೀಮಾನದಿ ಮೂಲಕ ಕೃಷ್ಣಾನದಿಗೆ 8 ಲಕ್ಷ ಕ್ಯುಸೆಕ್‌ ನೀರು ಸೇರಲಿದೆ ಎನ್ನುವ ಮುನ್ಸೂಚನೆ ಕಾರಣ, ಪರಿಸ್ಥಿತಿ ನಿಭಾಯಿಸುವುದಕ್ಕೆ ರಾಯಚೂರು ಜಿಲ್ಲಾಡಳಿತ ಪೂರ್ವ ಸಿದ್ಧತೆ ಮಾಡಿಕೊಂಡು ಮೂರು ದಿನಗಳಿಂದ ಕಾಯುತ್ತಿದೆ.

ಪ್ರವಾಹ ನಿರ್ವಹಣೆಗಾಗಿ 56 ಯೋಧರು ಇರುವ ಸೇನಾ ತಂಡವು ಶನಿವಾರವೇ ಜಿಲ್ಲೆಗೆ ಬಂದಿದೆ. ಕೃಷ್ಣಾ ನದಿ ತೀರದಲ್ಲಿರುವ ರಾಯಚೂರು ತಾಲ್ಲೂಕಿನ 17 ಗ್ರಾಮಗಳಲ್ಲಿ ಜಿಲ್ಲಾಡಳಿತ ನಿಗಾ ವಹಿಸಿದೆ. ಗುರ್ಜಾಪುರ, ಬೂರ್ದಿಪಾಡ ಹಾಗೂ ಡಿ.ರಾಂಪೂರ ಜನರನ್ನು ಸ್ಥಳಾಂತರಿಸಲು ಬಸ್‌ಗಳನ್ನು ಗ್ರಾಮಗಳಲ್ಲೇ ಇರಿಸಲಾಗಿದೆ.

ಸೋಮವಾರ ಗುರ್ಜಾಪುರ ಬ್ಯಾರೇಜ್‌ಗೆ ಭೇಟಿ ನೀಡಿದ್ದ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ‘ಭೀಮಾನದಿ ಪ್ರವಾಹದ ಕುರಿತು ಮಹಾರಾಷ್ಟ್ರದ ಎಂಜಿನಿಯರ್‌ಗಳಿಂದ ತಪ್ಪು ಮಾಹಿತಿ ಬಂದಿದೆ. 8 ಲಕ್ಷ ಕ್ಯುಸೆಕ್‌ ನೀರು ಹೊರಬಿಟ್ಟಿದ್ದರೆ ಈಗಾಗಲೇ ರಾಯಚೂರಿನ ಕೃಷ್ಣಾನದಿಗೆ ಬಂದು ತಲುಪಬೇಕಿತ್ತು’ ಎಂದರು.

‘ಈ ಬಗ್ಗೆ ಮಹಾರಾಷ್ಟ್ರದ ನೀರಾವರಿ ಸಚಿವರೊಂದಿಗೆ ಚರ್ಚಿಸಿದ್ದು, ಪರಿಶೀಲಿಸುವುದಾಗಿ ಹೇಳಿದ್ದಾರೆ. ಸದ್ಯ ಭೀಮಾನದಿಯಿಂದ 3.5 ಲಕ್ಷ ಕ್ಯುಸೆಕ್‌ ನೀರು ಕೃಷ್ಣಾನದಿ ಸೇರುತ್ತಿದೆ. ಪ್ರತಿವರ್ಷ ಪ್ರವಾಹದಿಂದ ಸಮಸ್ಯೆ ಎದುರಿಸುವ ನಾಲ್ಕು ಗ್ರಾಮಗಳ ಸ್ಥಳಾಂತರಕ್ಕೆ ಕ್ರಮ ವಹಿಸಲಾಗುವುದು’ ಎಂದು ಹೇಳಿದರು.

‘ನಿರೀಕ್ಷಿಸಿದಂತೆ ಕೃಷ್ಣಾನದಿಯಲ್ಲಿ ಪ್ರವಾಹ ಏರಿಕೆ ಆಗಿಲ್ಲ. ಕೃಷ್ಣಾನದಿಯಲ್ಲಿ 4ರಿಂದ 5 ಲಕ್ಷ ಕ್ಯುಸೆಕ್‌ ನೀರು ಪ್ರತಿವರ್ಷವೂ ಸಾಮಾನ್ಯವಾಗಿ ಹರಿಯುತ್ತದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಇದೇ 20ರಿಂದ 22ರವರೆಗೆ ಕಲ್ಯಾಣ ಕರ್ನಾಟಕದ ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಇನ್ನಷ್ಟು ಪ್ರವಾಹ ಉಂಟಾಗುವ ಸಾಧ್ಯತೆ ಇದೆ. ಅದಕ್ಕಾಗಿ ಕಲಬುರ್ಗಿ ಜಿಲ್ಲಾಡಳಿತ ನದಿ ತೀರದ ಗ್ರಾಮಗಳನ್ನು ಸ್ಥಳಾಂತರಿಸಲು ಮುಂದಾಗಿದೆ.

***

ಕಲಬುರ್ಗಿಯ ಕೆಲವು ಪರಿಹಾರ ಕೇಂದ್ರಗಳಲ್ಲಿ ಜಾತಿ ತಾರತಮ್ಯ ಮಾಡುತ್ತಿರುವ ದೂರುಗಳು ಕೇಳಿ ಬಂದಿವೆ. ಆ ರೀತಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು

-ಆರ್. ಅಶೋಕ, ಕಂದಾಯ ಸಚಿವ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು