ಬುಧವಾರ, ಮೇ 25, 2022
24 °C

ಐಟಿಐ ಕಾರ್ಮಿಕರ ಕೂಗು ಕೇಳಿಸಿಕೊಳ್ಳದ ಸರ್ಕಾರ: ಸಿದ್ದರಾಮಯ್ಯ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ತಮ್ಮನ್ನು ಸೇವೆಯಿಂದ ವಜಾಗೊಳಿಸಿರುವುದನ್ನು ಪ್ರಶ್ನಿಸಿ ಐಟಿಐ ಕಾರ್ಮಿಕರು ಸತತ 50 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಕಾರ್ಮಿಕರ ಕೂಗು ಕೇಳಿಸಿಕೊಳ್ಳದಿರುವುದು ವಿಪರ್ಯಾಸ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಸರಣಿ ಟ್ವೀಟ್‌ಗಳ ಮೂಲಕ ಅವರು ಕೇಂದ್ರ ಸರ್ಕಾರದ ವಿರುದ್ಧ ಶುಕ್ರವಾರ ಹರಿಹಾಯ್ದಿದ್ದಾರೆ.

‘ನಿಖರ ಕಾರಣ ನೀಡದೆ 80 ಕಾರ್ಮಿಕರನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಲಾಗಿದೆ. ಈ ಪೈಕಿ ಕೆಲವರು 30 ವರ್ಷಕ್ಕೂ ಅಧಿಕ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರತಿಷ್ಠಿತ ಸಾರ್ವಜನಿಕ ಉದ್ದಿಮೆಯೊಂದರಿಂದ ಇಷ್ಟೊಂದು ಮಂದಿಯನ್ನು ವಜಾಗೊಳಿಸಿರುವುದು ಅಲ್ಲಿ ಹೂಡಿಕೆಯ ಕೊರತೆಯಾಗಿರುವುದಕ್ಕೆ ನಿದರ್ಶನ. ಸಾರ್ವಜನಿಕ ಉದ್ದಿಮೆಗಳಲ್ಲಿನ ವೆಚ್ಚ ಕಡಿತಕ್ಕೆ ಮುಂದಾಗಿರುವ ನರೇಂದ್ರ ಮೋದಿ ಸರ್ಕಾರವು ಅದಕ್ಕಾಗಿ ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡುವ ತಂತ್ರ ಅನುಸರಿಸುತ್ತಿದೆ’ ಎಂದು ಆರೋಪಿಸಿದ್ದಾರೆ.

‘ದುಡಿಯುವ ವರ್ಗದ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರದ ಕೆಲಸ. ಅದು ಪ್ರಜಾಪ್ರಭುತ್ವದ ದ್ಯೋತಕ. ಪ್ರಬುದ್ಧ ಸಮಾಜವೊಂದರ ಸಂಕೇತ. ಐಟಿಐ ಆಡಳಿತ ಮಂಡಳಿ ಕೂಡಲೇ ತನ್ನ ನಿರ್ಧಾರ ಹಿಂಪಡೆಯಬೇಕು. 80 ಕಾರ್ಮಿಕರನ್ನೂ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು