ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ವಿಶೇಷ ವರದಿ | 37 ಎಕರೆ ಗೋಮಾಳ ಪರಭಾರೆ; ಅಧಿಕಾರಿಗೆ ರಕ್ಷಣೆ

ರಂಗನಾಥ್ ವಿರುದ್ಧ ತನಿಖೆಗೆ ಅನುಮತಿ ಕೋರಿದ್ದ ಪ್ರಸ್ತಾವನೆ ತಿರಸ್ಕಾರ
Last Updated 17 ಫೆಬ್ರುವರಿ 2022, 19:25 IST
ಅಕ್ಷರ ಗಾತ್ರ

ಬೆಂಗಳೂರು: ಅಂದಾಜು ‌₹ 200 ಕೋಟಿ ಮೌಲ್ಯದ 37 ಎಕರೆ ಸರ್ಕಾರಿ ಗೋಮಾಳವನ್ನು ಪರಭಾರೆ ಮಾಡಿರುವ ಕೆಎಎಸ್‌ ಹಿರಿಯ ಅಧಿಕಾರಿ (ಹಿಂದಿನ ಉಪವಿಭಾಗಾಧಿಕಾರಿ) ಕೆ.ರಂಗನಾಥ್‌ ವಿರುದ್ಧ ತನಿಖೆ ನಡೆಸಲು ಅನುಮತಿ ಕೋರಿದ್ದ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ.

ಸರ್ಕಾರದ ಈ ನಿಲುವಿಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಯಲಹಂಕ, ಬೆಂಗಳೂರು ಪೂರ್ವ ಮತ್ತು ಬೆಂಗಳೂರು ಉತ್ತರ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ರಂಗನಾಥ್ ಅವರು ಅಲ್ಪಾವಧಿಯಲ್ಲೇ 37 ಎಕರೆಯನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ 15 ಪ್ರಕರಣಗಳ ಬಗ್ಗೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಎನ್‌.ಮಂಜುನಾಥ ಪ್ರಸಾದ್‌ ‌ಸರ್ಕಾರದ ಮುಖ್ಯ ಕಾರ್ಯದರ್ಶಿಗೆ 2020ರ ಜುಲೈ 25ರಂದು ವರದಿ ಸಲ್ಲಿಸಿದ್ದರು. ರಂಗನಾಥ್ ಅವರನ್ನು ಅಮಾನತು ಮಾಡಿ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಅವರು ಶಿಫಾರಸು ಮಾಡಿದ್ದರು.

ಈ ನಡುವೆ, ರಂಗನಾಥ್ ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಲ್ಲೂ ಪ್ರಕರಣ ದಾಖಲಾಗಿತ್ತು. ತನಿಖೆಗೆ ಅನುಮತಿ ನೀಡಲು ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಕೃಷ್ಣರಾಮಯ್ಯ ಎಂಬುವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ 2021ರ ಜನವರಿ 15ರಂದು ವಿಚಾರಣೆನಡೆಸಿದ್ದ ಹೈಕೋರ್ಟ್‌, ಎಸಿಬಿ ಸಲ್ಲಿಸಿರುವ ಪ್ರಸ್ತಾವನೆಸಂಬಂಧ ಒಂದು ತಿಂಗಳೊಳಗೆ ನಿರ್ಧಾರ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಎಸಿಬಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ತಿರಸ್ಕರಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ‘ರಂಗನಾಥ್ ಅವರು ಮೇಲ್ಮನವಿ ಪ್ರಾಧಿಕಾರಿಯಾಗಿದ್ದು, ಅವರು ಯಾವುದೇ ದುರುದ್ದೇಶದಿಂದ ನಿರ್ಣಯ ಕೈಗೊಂಡಿಲ್ಲ’ ಎಂದು ಹೇಳಿದೆ.

ಈ 15 ಪ್ರಕರಣಗಳನ್ನೂ ಭೂ ಕಂದಾಯ ಕಾಯ್ದೆ 1964ರ ಕಲಂ 136 (2) ಅಡಿ ವಿಚಾರಣೆ ನಡೆಸಬೇಕು ಎಂದು ಕಂದಾಯ ಇಲಾಖೆಯು ನಗರ ಜಿಲ್ಲಾಡಳಿತಕ್ಕೆ ಸೂಚಿಸಿತ್ತು. ಎರಡು ಪ್ರಕರಣಗಳ ವಿಚಾರಣೆ ನಡೆಸಿದ್ದ ಈ ಹಿಂದಿನ ವಿಶೇಷ ಜಿಲ್ಲಾಧಿಕಾರಿ ಎಂ.ಕೆ.ಜಗದೀಶ್, ಈ ಜಮೀನುಗಳು ಸರ್ಕಾರಕ್ಕೆ ಸೇರಿದ್ದು ಎಂದು ವರದಿ ಸಲ್ಲಿಸಿದ್ದರು. ಏಳು ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿಲ್ಲ ಎಂದು ನಗರ ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಮಂಜುನಾಥ ಪ್ರಸಾದ್‌ ವರದಿಯ ನಂತರ ರಂಗನಾಥ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿತ್ತು. ಆ ಬಳಿಕ ಬೆಂಗಳೂರು ಉತ್ತರದ ಉಪವಿಭಾಗಾಧಿಕಾರಿಯಾಗಿ ನೇಮಿಸಿತ್ತು. ಕಳೆದ ತಿಂಗಳು ಅವರನ್ನು ಮತ್ತೆ ವರ್ಗಾವಣೆ ಮಾಡಲಾಗಿದೆ. ಇದನ್ನು ಪ್ರಶ್ನಿಸಿ ಅವರು ಕೆಎಟಿ ಮೊರೆ ಹೋಗಿದ್ದಾರೆ.

ಮಂಜುನಾಥ ಪ್ರಸಾದ್‌ ವರದಿಯಲ್ಲಿ ಏನಿತ್ತು:

‘ರಂಗನಾಥ್ ಅವರು 2020ರ ಮಾರ್ಚ್ 26ರಿಂದ ಜೂನ್ 26ರವರೆಗೆ ಬೆಂಗಳೂರು ಉತ್ತರ ವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಏಪ್ರಿಲ್ 3ರವರೆಗೆ ಲಾಕ್‌ಡೌನ್ ಇದ್ದ ಕಾರಣ ಆ ನಂತರ 116 ಆದೇಶಗಳನ್ನು ಅವರು ಹೊರಡಿಸಿದ್ದು, ಅವುಗಳಲ್ಲಿ ಸರ್ಕಾರಿ ಗೋಮಾಳಕ್ಕೆ ಸಂಬಂಧಿಸಿದ 15 ಪ್ರಕರಣಗಳು ಒಳಗೊಂಡಿವೆ. ಉತ್ತರ ತಾಲ್ಲೂಕಿನ ಕನ್ನಲ್ಲಿ, ಲಕ್ಷ್ಮೀಪುರ, ಕೊಡಿಗೇಹಳ್ಳಿ, ಗೌಡಹಳ್ಳಿ, ಪೂರ್ವ ತಾಲ್ಲೂಕಿನ ಬಿದರಹಳ್ಳಿ, ಕ್ಯಾಲಸನಹಳ್ಳಿ, ಭೋಗನಹಳ್ಳಿ, ಯಲಹಂಕ ತಾಲ್ಲೂಕಿನ ಬೆಟ್ಟಹಲಸೂರು ಮತ್ತು ಸಾತನೂರು ಗ್ರಾಮಗಳ ವ್ಯಾಪ್ತಿಯ 37 ಎಕರೆ 10 ಗುಂಟೆ ಜಾಗವನ್ನು ಮಂಜೂರು ಮಾಡಿದ್ದಾರೆ’ ಎಂದು ಮಂಜುನಾಥ ಪ್ರಸಾದ್‌ ವರದಿಯಲ್ಲಿ ವಿವರಿಸಿದ್ದರು.

41 ದಿನಗಳಲ್ಲಿ 1,592 ಪ್ರಕರಣ ವಿಚಾರಣೆ!:

ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿಯಾಗಿದ್ದ ವೇಳೆ ಕೆ.ರಂಗನಾಥ ಅವರು 2020ರ ಮೇ 15ರಿಂದ ಜೂನ್‌ 26ರ ನಡುವೆ ಭೂವ್ಯಾಜ್ಯಕ್ಕೆ ಸಂಬಂಧಿಸಿದ ಒಟ್ಟು 1,592 ಮೇಲ್ಮನವಿ (ಆರ್‌.ಎ) ಪ್ರಕರಣಗಳ ವಿಚಾರಣೆ ನಡೆಸಿದ್ದರು.

ರಂಗನಾಥ್‌ ಅವರು ಮೇ 15ರಿಂದ ಜೂನ್‌ 26ರ ನಡುವೆ ನಿತ್ಯ ಸರಾಸರಿ 39 ಪ್ರಕರಣಗಳ ವಿಚಾರಣೆ ನಡೆಸಿದ್ದರು. ಈ ಅವಧಿಯಲ್ಲಿ 188 ಪ್ರಕರಣಗಳನ್ನು ಆದೇಶಕ್ಕೆ ಕಾಯ್ದಿರಿಸಿದ್ದರು. ಏಳೇ ದಿನಗಳಲ್ಲಿ 100ಕ್ಕೂ ಅಧಿಕ ಪ್ರಕರಣಗಳ ವಿಚಾರಣೆಗಳನ್ನು ನಡೆಸಿದ್ದರು. ಈ ವೇಳೆ ಅನೇಕ ಅಕ್ರಮಗಳು ನಡೆದಿರುವ ಬಗ್ಗೆ ದೂರುಗಳು ಬಂದಿದ್ದರಿಂದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕಡತಗಳನ್ನು ಪರಿಶೀಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT