ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಕ್ರಮ ತಡೆಗೆ ಕೆಪಿಎಸ್‌ಸಿ ಪರೀಕ್ಷಾ ಪದ್ಧತಿ ಬದಲು’-ಬಸವರಾಜ ಬೊಮ್ಮಾಯಿ

Last Updated 18 ಮಾರ್ಚ್ 2021, 20:09 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆಯುವ ಅಕ್ರಮ ತಡೆಗಟ್ಟಲು ಪರೀಕ್ಷಾ ಪದ್ಧತಿಯಲ್ಲಿಯೇ ಬದಲಾವಣೆ ತರಲು ಚಿಂತನೆ ನಡೆಯುತ್ತಿದೆ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕೆಪಿಎಸ್‌ಸಿ ನಡೆಸುವ ನೇಮಕಾತಿಯಲ್ಲಿನ ಅಕ್ರಮಗಳು ಮತ್ತು ಇತ್ತೀಚೆಗೆ ನಡೆದ ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ವಿಧಾನಪರಿಷತ್‍ನಲ್ಲಿ ಪ್ರಶ್ನೆ ಕೇಳಿದ ಬಿಜೆಪಿಯ ಪ್ರದೀಪ್ ಶೆಟ್ಟರ್, ‘ಅರ್ಹತೆ ಬಿಟ್ಟು, ಹಣ ಕೊಟ್ಟವರ ನೇಮಕಾತಿ ನಡೆಯುತ್ತಿದೆ. ಈ ಸಂಸ್ಥೆಯನ್ನು ಮುಚ್ಚುವುದೇ ಸೂಕ್ತ’ ಎಂದು ಅಭಿಪ್ರಾಯಪಟ್ಟರು.

ಬೊಮ್ಮಾಯಿ ಮಾತನಾಡಿ, ‘ಇತ್ತೀಚೆಗೆ ನಡೆದ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭದ್ರತೆಯ ಲೋಪ ಇಲ್ಲ. ಕೆಪಿಎಸ್‍ಸಿ ಸಿಬ್ಬಂದಿಯಿಂದಲೇ ಈ ಸೋರಿಕೆ ಆಗಿದೆ. ಗೋಪ್ಯತೆ ಕಾಪಾಡಿಕೊಳ್ಳಲು ಕೋಡ್ ನೀಡಲಾಗುತ್ತದೆ. ಈ ಕೋಡ್ ಕೆಪಿಎಸ್‍ಸಿಯ ಅಧ್ಯಕ್ಷರಿಗಾಗಲಿ, ಕಾರ್ಯದರ್ಶಿಗಾಗಲಿ ಗೊತ್ತಿರುವುದಿಲ್ಲ. ಪ್ರಶ್ನೆ ಪತ್ರಿಕೆ ರಹಸ್ಯ ಕಾಪಾಡಿಕೊಳ್ಳಲು ನಿರ್ದೇಶಿತವಾಗಿರುವ ಸಿಬ್ಬಂದಿಗೆ ನೀಡಲಾಗುತ್ತದೆ. ಈ ಕೋಡ್‍ಗಳು ಬೇರೆಯವರಿಗೆ ಹೇಗೆ ತಿಳಿಯಿತು ಎಂದು ಗೊತ್ತಿಲ್ಲವೆಂದು ಸಿಬ್ಬಂದಿ ಹೇಳುತ್ತಿದ್ದಾರೆ. ಪ್ರಶ್ನೆ ಪತ್ರಿಕೆ ಬಹಿರಂಗಪಡಿಸಿದ ಆರೋಪಿಗಳಿಗೆ ಕೋಡ್‍ನ ಪೆನ್‍ಡ್ರೈವ್ ಸಿಕ್ಕಿದ್ದು ಹೇಗೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರನ್ನು ಅಮಾನತುಗೊಳಿಸಿ ವಿಚಾರಣೆಗೆ ಒಳಪಡಿಸಲಾಗಿದೆ’ ಎಂ‌‌ದರು.

‘ಮಾಹಿತಿ ತಂತ್ರಜ್ಞಾನ ಅಳವಡಿಸಿಕೊಂಡು ಆನ್‍ಲೈನ್ ಮೂಲಕ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಕೇಂದ್ರ ಲೋಕಸೇವಾ ಆಯೋಗದೊಂದಿಗೆ ಚರ್ಚಿಸಿ, ಅಲ್ಲಿನ ವಿಧಾನ ಅಳವಡಿಸಿಕೊಳ್ಳುವ ಬಗ್ಗೆ ಚಿಂತಿಸಲಾಗುತ್ತಿದೆ. ಪರೀಕ್ಷೆ ದಿನ ನಡೆಯುವ ಅಕ್ರಮಗಳನ್ನು ತಡೆಗಟ್ಟಲು ಹಾಲಿ ನಿಯಮಗಳಂತೆ ಕೇವಲ ಓ.ಎಂ.ಆರ್ ಮೂಲಕ ಉತ್ತರಿಸುವ ವಸ್ತುನಿಷ್ಠ ಬಹು ಆಯ್ಕೆ ಮಾದರಿಯಲ್ಲಿ ಪರೀಕ್ಷೆಗಳನ್ನು ನಡೆಸದೆ, ಕೇಂದ್ರ ಲೋಕಸೇವಾ ಆಯೋಗ ಮತ್ತು ಸಿಬ್ಬಂದಿ ಆಯ್ಕೆ ಆಯೋಗದ ಮಾದರಿಯಲ್ಲಿ ಎರಡು ಹಂತದಲ್ಲಿ ಒಂದು ವಸ್ತುನಿಷ್ಠ ಬಹು ಆಯ್ಕೆ ಮಾದರಿ, ಮತ್ತೊಂದು ವಿವರಣಾತ್ಮಕ ಮಾದರಿಯಲ್ಲಿ ನಡೆಸಲು ನಿಯಮ ತಿದ್ದುಪಡಿಗೂ ಪರಿಶೀಲಿಸಲಾಗುತ್ತಿದೆ’ ಎಂದು ಬೊಮ್ಮಾಯಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT