ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Live Update | ಗ್ರಾಮ ಪಂಚಾಯಿತಿ ಚುನಾವಣೆ ಮತದಾನದ ವೇಳೆ ಘರ್ಷಣೆ; ಕಲ್ಲು ತೂರಾಟ
LIVE

ರಾಜ್ಯದ ಒಟ್ಟು 5,761 ಗ್ರಾಮ ಪಂಚಾಯಿತಿಗಳಿಗೆ ಎರಡು ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಎರಡನೇ ಹಂತದ ಮತದಾನ ಇದೇ 27ರಂದು ನಡೆಯಲಿದೆ. ಡಿ.30ರಂದು ಮತ ಎಣಿಕೆ ನಡೆಯಲಿದೆ. ಮೊದಲ ಹಂತದಲ್ಲಿ 117 ತಾಲ್ಲೂಕುಗಳ 3,019 ಗ್ರಾಮ ಪಂಚಾಯಿತಿಗಳ ಚುನಾವಣೆಗಾಗಿ ಒಟ್ಟು 23,625 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 1,41,750 ಚುನಾವಣಾ ಸಿಬ್ಬಂದಿ ನೇಮಿಸಲಾಗಿದೆ. ಕೋವಿಡ್‌ ಇರುವುದರಿಂದ ಸುರಕ್ಷಿತ ಮತದಾನಕ್ಕಾಗಿ 45 ಸಾವಿರಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯನ್ನೂ ಬಳಸಿಕೊಳ್ಳಲಾಗುತ್ತಿದೆ.
Last Updated 22 ಡಿಸೆಂಬರ್ 2020, 12:57 IST
ಅಕ್ಷರ ಗಾತ್ರ
12:5522 Dec 2020

28 ಕೋವಿಡ್‌ ರೋಗಿಗಳಿಂದ ಮತದಾನ

ಚಾಮರಾಜನಗರ:  ಮೊದಲ ಹಂತದಲ್ಲಿ 28 ಕೋವಿಡ್ ರೋಗಿಗಳಿಂದ ಮತದಾನ. ಚಾಮರಾಜನಗರ ತಾಲ್ಲೂಕಿನಲ್ಲಿ 20 ಹಾಗೂ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಎಂಟು ಮಂದಿ‌ ಹಕ್ಕು ಚಲಾಯಿಸಿದ್ದಾರೆ. ಎರಡೂ ತಾಲ್ಲೂಕುಗಳಲ್ಲಿ 55 ಮಂದಿ ರೋಗಿಗಳಿದ್ದರು.

12:5322 Dec 2020

ಅವಧಿ ಬಳಿಕವೂ ಮತ ಚಲಾವಣೆಗೆ ಅವಕಾಶ

ಕಮಲಾಪುರ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಸೊಂತ ಗ್ರಾಮದಲ್ಲಿ ಮತದಾನದ ಸಮಯ 5 ಗಂಟೆ ಮೀರಿದರೂ ಸುಮಾರು 200ಕ್ಕಿಂತ ಹೆಚ್ಚು ಜನರ ಮತ ಚಲಾವಣೆ ಬಾಕಿ ಉಳಿದಿದ್ದು, ಎಲ್ಲರೂ ಸರತಿಯಲ್ಲಿ ನಿಂತಿದ್ದಾರೆ. ಅವರಿಗೆ ಟೋಕನ್ ವಿತರಿಸಲಾಗಿದೆ.

ವಾರ್ಡ್ ಸಂಖ್ಯೆ 2ರಲ್ಲಿ 3 ಸ್ಥಾನಗಳಿದ್ದು, 15 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ವಾರ್ಡ್ ಸಂಖ್ಯೆ 3ರಲ್ಲಿಯೂ 3 ಸ್ಥಾನಗಳಿದ್ದು, 18 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಈ ಎರಡೂ ವಾರ್ಡುಗಳ ಮತಗಟ್ಟೆಗಳಲ್ಲಿ ಸುಮಾರು 200ಕ್ಕಿಂತ ಹೆಚ್ಚು ಜನ ಮತದಾನಕ್ಕಾಗಿ ಕಾದು ನಿಂತಿದ್ದಾರೆ. ಹೆಚ್ಚು ಜನ ಸ್ಪರ್ಧೆಯಲ್ಲಿರುವುದರಿಂದ ಮತಪತ್ರ ದೊಡ್ಡದಾಗಿದೆ. ತಮ್ಮ ಅಭ್ಯರ್ಥಿಯನ್ನು ಹುಡುಕಿ ಮತ ಚಲಾಯಿಸಲು ಹೆಚ್ಚು ಸಮಯ ಬೇಕಾಗುತ್ತಿದೆ. ಜೊತೆಗೆ ಈ ಗ್ರಾಮದ ಬಹುತೇಕ ಜನ ಜಿಲ್ಲಾ ಕೇಂದ್ರ ಕಲಬುರ್ಗಿಯಲ್ಲಿ ನೆಲೆಸಿದ್ದಾರೆ. ಅವರೆಲ್ಲ ಮಧ್ಯಾಹ್ನದ ನಂತರ ಬರುತ್ತಿರುವುದರಿಂದ ಮತದಾನ ವೇಗ ಪಡೆದ್ದಿಲ್ಲ. ಇವರೆಲ್ಲರ ಮತದಾನ ಪ್ರಕ್ರಿಯೆ ಮುಗಿಯಬೇಕಾದರೆ ರಾತ್ರಿ 8 ಆಗಬಹುದು ಎನ್ನಲಾಗುತ್ತಿದೆ.

ಸ್ವಲ್ಪ ಸಮಯವಾದರೂ ಎಲ್ಲರಿಗೂ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಚುನಾವಣಾಧಿಕಾರಿ ಚಂದ್ರಕಾಂತ ಕಿಣಗಿ ತಿಳಿಸಿದ್ದಾರೆ.

12:3522 Dec 2020

ಮದ್ಯ ವಿತರಣೆ ತಡೆಯಲು ಬಂದ ಪೊಲೀಸರ ಮೇಲೆ ಹಲ್ಲೆ

ಹಾಸನ: ಅರಕಲಗೂಡು ತಾಲ್ಲೂಕಿನ ರುದ್ರಪಟ್ಟಣದ ಉರ್ದು ಶಾಲೆ ಮತಗಟ್ಟೆ ಬಳಿ ಪೊಲೀಸರು ಮತ್ತು ಗ್ರಾಮದ ಕೆಲವರ ಮಧ್ಯೆ ಘರ್ಷಣೆ ಉಂಟಾಯಿತು.

ಕೊಣನೂರು ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಅಜಯ್‌ ಕುಮಾರ್ ಮತಗಟ್ಟೆ ಬಳಿ ಉಪಹಾರ ನೀಡದಂತೆ ವ್ಯಕ್ತಿಯೊಬ್ಬರಿಗೆ ಲಾಠಿಯಿಂದ ಹೊಡೆದಿದ್ದಾರೆ. ಆಕ್ರೋಶಗೊಂಡ ಕೆಲವರು ಪೊಲೀಸ್‌ ಜೀಪ್‌ ಅಡ್ಡಗಟ್ಟಿ ಸಬ್‌ ಇನ್‌ಸ್ಪೆಕ್ಟರ್‌ ಮೇಲೆ ಹಲ್ಲೆ ನಡೆಸಿ, ಪೊಲೀಸರನ್ನು ತಳ್ಳಾಡಿ, ನೂಕಾಡಿದರು. ಪೊಲೀಸ್‌ ಜೀಪ್‌ ಅಡ್ಡಗಟ್ಟಿದ ಗ್ರಾಮದ ಒಂದು ಗುಂಪು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿತು. ‌

‘ಮತಗಟ್ಟೆ ಬಳಿ ಉಪಹಾರ ಮತ್ತು ಮದ್ಯ ಹಂಚುತ್ತಿದ್ದರು. ನೀತಿ ಸಂಹಿತೆ ಉಲ್ಲಂಘಿಸದಂತೆ ಹೇಳಿದ್ದಕ್ಕೆ ಪೊಲೀಸ್‌ ಜೀಪ್‌
ಅಡ್ಡಗಟ್ಟಿ ನನಗೆ ಮತ್ತು ಪೊಲೀಸರ ಮೇಲೆ ಹಲ್ಲೆ ನಡೆಸಿ, ಜೀಪ್‌ ಸುಟ್ಟು ಹಾಕುವುದಾಗಿ ಹೆದರಿಸಿದರು. ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಐವರನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಎಸ್‌ಐ ಅಜಯ್‌ ಕುಮಾರ್ ತಿಳಿಸಿದರು.

ಸಕಲೇಶಪುರ ತಾಲ್ಲೂಕಿನ  ಆಚಂಗಿ ಗ್ರಾಮದಲ್ಲಿ ಕುಡಿದ ಮತ್ತಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದ ಬಾಗೇಶ್‌ ಮತ್ತು ಸ್ನೇಹಿತ ಪ್ರವೀಣ್‌ ಹಾಗೂ ಸಹಚರರ ನಡುವೆ ಸೋಮವಾರ ರಾತ್ರಿ ಗಲಾಟೆ ನಡೆದು, ಪರಸ್ಪರ ಹಲ್ಲೆ ನಡೆಸಿದ್ದಾರೆ. ಬಾಗೇಶ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.

12:1722 Dec 2020

ಮತದಾನದ ವೇಳೆ ಘರ್ಷಣೆ; ಕಲ್ಲು ತೂರಾಟ

ಚಿತ್ರದುರ್ಗ: ತಾಲ್ಲೂಕಿನ ಭರಮಸಾಗರ ಹೋಬಳಿಯ ಆಜಾದ್‌ ನಗರದಲ್ಲಿ ಮತದಾನದ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿದ್ದು, ಕಲ್ಲು ತೂರಾಟ ನಡೆದಿದೆ. ವ್ಯಕ್ತಿಯೊಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ. 

ಮತಗಟ್ಟೆ ಸಮೀಪ ಸೇರಿದ್ದ ಎರಡು ಗುಂಪುಗಳ ನಡುವೆ ಮಂಗಳವಾರ ಮಧ್ಯಾಹ್ನ ವಾಗ್ವಾದ ನಡೆದಿದೆ. ಮತದಾರರನ್ನು ಮತಗಟ್ಟೆಗೆ ಕರೆತರುವ ವಿಚಾರದಲ್ಲಿ ಗಲಾಟೆ ಆರಂಭವಾಗಿದೆ. ಕಲ್ಲು ತೂರಾಟದಲ್ಲಿ ಹಲವರಿಗೆ ಗಾಯಗಳಾಗಿವೆ.

ಏಕಾಏಕಿ ನಡೆದ ಈ ಬೆಳವಣಿಗೆಯಿಂದ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಭರಮಸಾಗರ ಠಾಣೆಯ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ವಾತಾವರಣ ತಿಳಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ.

ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ಹೋಬಳಿ ವ್ಯಾಪ್ತಿಯ ದೊಡ್ಡತೇಕಲವಟ್ಟಿ ಗ್ರಾಮದಲ್ಲಿ ಸಂಜೆ 5 ಗಂಟೆಯ ಬಳಿಕವೂ ಮತದಾನ ನಡೆಯಿತು. ಒಂದೇ ಮತಗಟ್ಟೆಯಲ್ಲಿ 950ಕ್ಕೂ ಹೆಚ್ಚು ಮತದಾರರು ಇದ್ದಾರೆ. ಮಂದಗತಿಯಲ್ಲಿ ಆರಂಭವಾದ ಮತದಾನ ಮಧ್ಯಾಹ್ನದ ನಂತರ ಬಿರುಸು ಪಡೆಯಿತು.

ಸಂಜೆ 5ಕ್ಕೆ ಮತಗಟ್ಟೆ ಸ್ಥಾಪಿಸಿದ್ದ ಶಾಲಾ ಆವರಣದ ಗೇಟ್‌ ಹಾಕಲಾಯಿತು. ಗೇಟಿನ ಒಳಗೆ ಸರತಿ ಸಾಲಿನಲ್ಲಿ ನಿಂತಿದ್ದವರಿಗೆ ಹಕ್ಕು ಚಲಾಯಿಸಲು ಅವಕಾಶ ಕಲ್ಪಿಸಲಾಯಿತು.

12:0322 Dec 2020

ಮತಪತ್ರ ಜಾಲತಾಣದಲ್ಲಿ ಹರಿಬಿಟ್ಟ ವ್ಯಕ್ತಿ

ಕಲಬುರ್ಗಿ: ಗೋಪ್ಯ ಮತದಾನ ನಿಯಮವನ್ನು ಉಲ್ಲಂಘಿಸಿ ತಾಲ್ಲೂಕಿನ ಜಂಬಗಾ (ಬಿ) ಗ್ರಾಮದ ವ್ಯಕ್ತಿಯೊಬ್ಬರು ತಾವು ಮತ ಚಲಾಯಿಸಿದ ಮತಪತ್ರದ ಚಿತ್ರವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಮೊದಲ ಹಂತದ ಗ್ರಾಮ ಪಂಚಾಯಿತಿ ಮತದಾನ ಮಂಗಳವಾರ ನಡೆಯಿತು. ಮತದಾನ ಕೇಂದ್ರದಲ್ಲಿ ಮೊಬೈಲ್ ಕೊಂಡೊಯ್ಯುವುದನ್ನು ನಿಷೇಧಿಸಿದ್ದರೂ ವ್ಯಕ್ತಿ ಮೊಬೈಲ್ ಒಯ್ದು ತಾವು ಮತಹಾಕಿದ ಮತಪತ್ರದ ಚಿತ್ರ ತೆಗೆದಿದ್ದಾರೆ.

12:0022 Dec 2020

ಮಾಲೂರು ತಾಲೂಕಿನ ಕಂಬೀಪುರ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕರ

ಕೋಲಾರ: ಜಿಲ್ಲೆಯ ಮಾಲೂರು ತಾಲ್ಲೂಕಿನ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಬೀಪುರ ಗ್ರಾಮಸ್ಥರು ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಿ ಮಂಗಳವಾರ ಚುನಾವಣೆ ಬಹಿಷ್ಕರಿಸಿದರು.

ಕಂಬೀಪುರ ಗ್ರಾಮದ ಒಂದು ಸದಸ್ಯ ಸ್ಥಾನಕ್ಕೆ 3 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಗ್ರಾಮದಲ್ಲಿ ಸುಮಾರು 380 ಮತದಾರರಿದ್ದಾರೆ. ಮಾಲೂರು–ಭಾವನಹಳ್ಳಿ ಮುಖ್ಯರಸ್ತೆಯಿಂದ ಗ್ರಾಮಕ್ಕೆ 3 ಕಿ.ಮೀ ಸಂಪರ್ಕ ರಸ್ತೆ ನಿರ್ಮಿಸಿ ಕೊಡಬೇಕೆಂದು ಆಗ್ರಹಿಸಿದ ಗ್ರಾಮಸ್ಥರು ಮತಗಟ್ಟೆಯತ್ತ ಸುಳಿಯಲಿಲ್ಲ.

11:3122 Dec 2020

ಹಿರಿಯ ನಟಿ ಲೀಲಾವತಿ ಮತ್ತು ವಿನೋದ್‌ ರಾಜ್‌ ಅವರಿಂದ ಮತದಾನ

ಹಿರಿಯ ನಟಿ ಲೀಲಾವತಿ ಮತ್ತು ನಟ ವಿನೋದ್ ರಾಜ್ ಅವರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನೆಲಮಂಗಲ ತಾಲ್ಲೂಕಿನ ಮೈಲನಹಳ್ಳಿಯ ಮತಗಟ್ಟೆ ಸಂಖ್ಯೆ167ರಲ್ಲಿ ಮತ ಚಲಾಯಿಸಿದರು. ಪ್ರಜಾವಾಣಿ ಚಿತ್ರ -ಬಿ ಎಚ್ ಶಿವಕುಮಾರ್

11:2822 Dec 2020

ಚಳಿಯಿಂದ ಮಂದಗತಿಯಲ್ಲಿ ಆರಂಭವಾದ ಮತದಾನ ಮಧ್ಯಾಹ್ನ ಬಿರುಸು

ಬೀದರ್‌: ಮೊದಲ ಹಂತದ ಗ್ರಾಮ ‍ಪಂಚಾಯಿತಿ ಚುನಾವಣೆ ಶಾಂತಿಯುತವಾಗಿ ನಡೆದಿದೆ. ಬೆಳಿಗ್ಗೆ ಮಂದಗತಿಯಲ್ಲಿ ಆರಂಭವಾದ ಮತದಾನ ಮಧ್ಯಾಹ್ನದ ನಂತರ ಬಿರುಸು ಪಡೆದುಕೊಂಡಿದೆ.

ಜಿಲ್ಲೆಯಲ್ಲಿ ವಿಪರೀತ ಚಳಿ ಇದ್ದ ಕಾರಣ ಬೆಳಿಗ್ಗೆ ಹೆಚ್ಚು ಮತದಾರರು ಮತಗಟ್ಟೆಗಳಿಗೆ ಬರಲಿಲ್ಲ. ಬೆಳಿಗ್ಗೆ 9 ಗಂಟೆಗೆ  ಶೇಕಡ 6.13 ರಷ್ಟು, 11 ಗಂಟೆಗೆ  19.59ರಷ್ಟು ಹಾಗೂ ಮಧ್ಯಾಹ್ನ 3 ಗಂಟೆಗೆ ಶೇಕಡ 50ರಷ್ಟು ಮತದಾನವಾಗಿದೆ.

ಬೀದರ್‌ ಜಿಲ್ಲೆಯಲ್ಲಿ ಅಷ್ಟೇ ಮತಯಂತ್ರ ಬಳಕೆ

‘ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಒಟ್ಟು 818 ಎಲೆಕ್ಟ್ರಾನಿಕ್‌ ಮತ ಯಂತ್ರಗಳನ್ನು ಬಳಸಲಾಗುತ್ತಿದೆ. ಮೊದಲ ಹಂತದ ಚುನಾವಣೆಲ್ಲಿ 344 ಎಲೆಕ್ಟ್ರಾನಿಕ್‌ ಮತ ಯಂತ್ರಗಳನ್ನು  ಬಳಸಲಾಗಿದ್ದು, ಎಲ್ಲವೂ ಸಮರ್ಪಕವಾಗಿ ಕಾರ್ಯನಿರ್ವಹಿಸಿವೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್‌. ತಿಳಿಸಿದರು.

ಚಿಟಗುಪ್ಪ ತಾಲ್ಲೂಕಿನ ನಿರ್ಣಾದ ಮತಗಟ್ಟೆ 7ರಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಮತದಾನ ಎರಡು ತಾಸು ವಿಳಂಬವಾಗಿ ಆರಂಭವಾಯಿತು. ಚುನಾವಾಣಾ ಅಧಿಕಾರಿಗಳು ಹಾಗೂ ತಹಶೀಲ್ದಾರರು ಸ್ಥಳಕ್ಕೆ ಭೇಟಿಕೊಟ್ಟು ಗೊಂದಲ ನಿವಾರಿಸಿದರು. ನಂತರ ಸಂಜೆ ಹೆಚ್ಚುವರಿಯಾಗಿ ಎರಡು ತಾಸು ಮತದಾನ ಮಾಡಲು ಅವಕಾಶ ಕಲ್ಪಸಲಾಗುವುದು ಎಂದು ತಹಶೀಲ್ದಾರರು ಭರವಸೆ ನೀಡಿದರು.

ಹುಮನಾಬಾದ್‌ ತಾಲ್ಲೂಕಿನ ಸಿಂದಬಂದಗಿಯ ಮತಗಟ್ಟೆ ಸಂಖ್ಯೆ 14ರಲ್ಲಿ ಇವಿಎಂ ಬಟನ್‌ನಲ್ಲಿ ಸ್ವಲ್ಪ ತಾಂತ್ರಿ ದೋಷ ಕಾಣಿಸಿಕೊಂಡು 10 ನಿಮಿಷ ವಿಳಂಬವಾಗಿ ಮತದಾನ ಆರಂಭವಾಯಿತು.

ಮತ ಚಲಾಯಿಸಿ ಮೃತಪಟ್ಟ ವೃದ್ಧ 

ಚಿಟಗುಪ್ಪ ತಾಲ್ಲೂಕಿನ ಕರಕನಳ್ಳಿ ಗ್ರಾಮದ ಚಾಂದಪಾಶಾ (99) ಅವರು ಕುಟುಂಬದ ಸದಸ್ಯರೊಂದಿಗೆ ವೀಲಚೇರ್‌ನಲ್ಲಿ ಮತಗಟ್ಟೆಗೆ ಬಂದು ಮತಚಾಲಾಯಿಸಿ ಮನೆಗೆ ತಲುಪಿದ ತಕ್ಷಣ ಮೃತಪಟ್ಟಿದ್ದಾರೆ.

11:2722 Dec 2020

ಹಾವೇರಿ ಜಿಲ್ಲೆಯಲ್ಲಿ ಶೇ 64.97 ಮತದಾನ 

ಹಾವೇರಿ: ಜಿಲ್ಲೆಯ 4 ತಾಲೂಕುಗಳಲ್ಲಿ ಮೊದಲನೇ ಹಂತದ ಮತದಾನ ಆರಂಭಗೊಂಡಿದ್ದು ಎಲ್ಲೆಡೆ ಶಾಂತಿಯುತ ಮತದಾನ ನಡೆಯುತ್ತಿದೆ. 

ಮಧ್ಯಾಹ್ನ 3 ರವರೆಗೆ ಶೇ 64.97 ರಷ್ಟು ಮತದಾನ  ದಾಖಲಾಗಿದೆ.

ಹಾವೇರಿ ತಾಲ್ಲೂಕಿನಲ್ಲಿ ಶೇ 65.98, ರಾಣೆಬೆನ್ನೂರು ತಾಲ್ಲೂಕಿನಲ್ಲಿ ಶೇ 64.06, ಹಿರೇಕೆರೂರು ತಾಲ್ಲೂಕಿನಲ್ಲಿ ಶೇ 65.72, ರಟ್ಟಿಹಳ್ಳಿ ತಾಲ್ಲೂಕಿನಲ್ಲಿ ಶೇ 64.09 ರಷ್ಟು ಮತದಾನವಾಗಿದೆ.

11:2722 Dec 2020

ಚಿಕ್ಕಮಗಳೂರಿನ ಮತದಾನದ ವಿವರ

ಚಿಕ್ಕಮಗಳೂರು: ಜಿಲ್ಲೆಯಲ್ಲಿ  ಮಧ್ಯಾಹ್ನ 3 ಗಂಟೆಗೆ ಶೇ 61.39 ಮತದಾನವಾಗಿದೆ.
ತಾಲ್ಲೂಕುವಾರು ಅಜ್ಜಂಪುರ- ಶೇ 61.4, ಚಿಕ್ಕಮಗಳೂರು-ಶೇ 63.64, ಕಡೂರು- ಶೇ 64.57, ಕೊಪ್ಪ- ಶೇ 55.74, ಮೂಡಿಗೆರೆ- ಶೇ  59.05, ಎನ್.ಆರ್.ಪುರ- ಶೇ 58.65, ಶೃಂಗೇರಿ- ಶೇ 59.45 ಹಾಗೂ ತರೀಕೆರೆ- ಶೇ 61.39 ಮತದಾನವಾಗಿದೆ.