ಗುರುವಾರ , ಏಪ್ರಿಲ್ 22, 2021
22 °C
ತರಬೇತಿ ವಿಮಾನ ಕಿರಣ್‌ ಸ್ಥಾನ ತುಂಬಲಿದೆ ಐಜೆಟಿ

ಜೆಟ್‌ ಟ್ರೈನರ್ ಪರೀಕ್ಷಾರ್ಥ ಹಾರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ತರಬೇತಿ ವಿಮಾನ ಕಿರಣ್‌ ಸ್ಥಾನ ತುಂಬಲು ಅಭಿವೃದ್ಧಿಪಡಿಸಲಾದ ಇಂಟರ್‌ಮೀಡಿಯೆಟ್ ಜೆಟ್ ಟ್ರೈನರ್‌ (ಐಜೆಟಿ) ವಿಮಾನವು ಶುಕ್ರವಾರ ಸುರುಳಿ ಹಾರಾಟ ಪರೀಕ್ಷೆ ಆರಂಭಿಸಿತು. 

ಹಿಂದೂಸ್ತಾನ್ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ವಿನ್ಯಾಸಗೊಳಿಸಿ, ರೂಪಿಸಿದ ವಿಮಾನ ಇದಾಗಿದೆ. ಸುರುಳಿ ಹಾರಾಟ ಪರೀಕ್ಷೆಯು ವಿಮಾನ ಹಾರಾಟ ಪರೀಕ್ಷೆಯ ಅತ್ಯಂತ ಮಹತ್ತರ ಘಟ್ಟ ಎಂದು ಎಚ್‌ಎಎಲ್‌ ಹೇಳಿದೆ. 

‘ವಿಮಾನವು ಹಾರಾಟದ ವೇಳೆ ಹೇಗೆ ವರ್ತಿಸುತ್ತದೆ ಎಂಬುದನ್ನು ಪರಿಶೀಲಿಸಲು ಹಂತ ಹಂತವಾಗಿ ಸುರುಳಿ ಹಾರಾಟ ನಡೆಸಲಾಗುತ್ತದೆ. ವಿಮಾನದ ಅಗತ್ಯಕ್ಕೆ ಅನುಗುಣವಾಗಿ ಎರಡೂ ದಿಕ್ಕಿನಲ್ಲೂ ಸುರುಳಿಯ ಆರು ಆವರ್ತನಗಳನ್ನು ಪೂರ್ಣಗೊಳಿಸಲಾಗುತ್ತದೆ’ ಎಂದು ಎಚ್‌ಎಎಲ್‌ನ ಪ್ರಕಟಣೆ ತಿಳಿಸಿದೆ.

ತಲುಪಬಲ್ಲ ಗರಿಷ್ಠ ವೇಗ, ಎತ್ತರ ಹಾಗೂ ಅದು ಒಯ್ಯ ಬಹುದಾದ ಗರಿಷ್ಠ ತೂಕಕ್ಕೆ ಸಂಬಂಧಿಸಿ ಐಜೆಟಿಯನ್ನು ಈಗಾಗಲೇ ಪರೀಕ್ಷಿಸಲಾಗಿದೆ. ಅದಕ್ಕೆ ಡ್ರಾಪ್‌ ಟ್ಯಾಂಕ್‌ ಹಾಗೂ ಬಾಂಬ್‌ಗಳನ್ನು ಜೋಡಿಸಲಾಗಿದೆ. 

ಸುರುಳಿ ಪರೀಕ್ಷೆ ಸಲುವಾಗಿ ಎಚ್‌ಎಎಲ್‌ ವಿಮಾನವನ್ನು ಬಾಲದ ಹಿಂಭಾಗ ಹಾಗೂ ವಿಮಾನ ಹಾರಾಟ ನಿಯಂತ್ರಣಕ್ಕೆ ಬಳಸುವ ರಡ್ಡರ್‌ ಮೇಲ್ಮೈಗಳನ್ನು ವಿಸ್ತರಿಸಿ ಮರುವಿನ್ಯಾಸಗೊಳಿಸಲಾಗಿದೆ. ಸುರುಳಿ ಸುತ್ತುವ ಹಾರಾಟವನ್ನು ತೃಪ್ತಿದಾಯಕವಾಗಿ ನಡೆಸುವುದನ್ನು ಖಾತರಿಪಡಿಸಿಕೊಳ್ಳಲು ವಿಮಾನದ ಮೈಕಟ್ಟಿನಲ್ಲಿ ಹಾಗೂ ರಡ್ಡರ್‌ನಲ್ಲಿ ಈ ವ್ಯಾಪಕ ಬದಲಾವಣೆ ಮಾಡುವ ಅಗತ್ಯವಿದೆ ಎಂದು ಎಚ್‌ಎಎಲ್‌ ಹೇಳಿದೆ. 

ಎರಡು ವಿಮಾನಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದ್ದು, ಪ್ರತಿ ಹಂತದಲ್ಲೂ ಇದನ್ನು ಪ್ರಮಾಣೀಕರಿಸುವ ಏಜೆನ್ಸಿಗಳ ಅನುಮತಿ ಹಾಗೂ ಸಹಯೋಗವನ್ನು ಪಡೆದುಕೊಳ್ಳಲಾಗಿದೆ. 

ಮರುವಿನ್ಯಾಸದ ಬಳಿಕ ಈ ಎರಡು ವಿಮಾನಗಳ ಸಾಕಷ್ಟು ಬಾರಿ ಪರೀಕ್ಷಾರ್ಥ ಹಾರಾಟ ನಡೆಸಲಾಗಿದೆ. ಅವುಗಳ ರೆಕ್ಕೆ ಹಾಗೂ ರಡ್ಡರ್‌ಗಳ ಬದಲಾವಣೆಯಿಂದ ಅವುಗಳ ಹಾರಾಟ ಮೇಲೇನಾದರೂ ಪರಿಣಾಮ ಉಂಟಾಗಿದೆಯೇ ಎಂಬುದನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಈ ಎರಡು ವಿಮಾನಗಳಲ್ಲಿ ಈಗ ಸುರಕ್ಷತಾ ಸಾಧನಗಳನ್ನು (ಸುರುಳಿ ನಿರೋಧಕ ಪ್ಯಾರಾಚೂಟ್‌ ವ್ಯವಸ್ಥೆ) ಅಳವಡಿಸಲಾಗಿದೆ. 

ಮೊದಲ ಹಾರಾಟದಲ್ಲಿ ವಿಮಾನವು ಆರಂಭದಲ್ಲಿ ಎಡ ಹಾಗೂ ಬಲಕ್ಕೆ ಒಂದು ಸುರುಳಿ ಹಾರಾಟವನ್ನು ನಡೆಸುವ ಮೂಲಕ ಸುರಳಿ ಹಾರಾದ ವೈಖರಿಯನ್ನು ಪರೀಕ್ಷಿಸಲಾಯಿತು. ಎಚ್‌ಎಎಲ್‌ನ ವಿಮಾನಗಳ ಪರೀಕ್ಷಾರ್ಥ ಹಾರಾಟದ ಪೈಲಟ್‌ಗಳಾದ ನಿವೃತ್ತ ಗ್ರೂಪ್ ಕ್ಯಾ.ಎಚ್.ವಿ.ಠಾಕೂರ್‌ ಹಾಗೂ ನಿವೃತ್ತ ವಿಂಗ್ ಕಮಾಂಡರ್‌ ಪಿ.ಅವಸ್ತಿ ಈ ಹಾರಾಟ ನಡೆಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು