ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಕೊಲೆಗೂ ಸರ್ಕಾರವೇ ಮುಂದೆ ನಿಂತು ಹೊಸ ಟ್ವಿಸ್ಟ್ ನೀಡುತ್ತಿದೆ: ಕುಮಾರಸ್ವಾಮಿ

ಅಕ್ಷರ ಗಾತ್ರ

ಬೆಂಗಳೂರು: ಮಂಗಳೂರು ನಗರ ಹೊರವಲಯದ ಸುರತ್ಕಲ್‌ನಲ್ಲಿ ನಡೆದಿರುವ ಮಹಮ್ಮದ್ ಫಾಝಿಲ್ ಹತ್ಯೆ ಪ್ರಕರಣವನ್ನು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಸರಣಿ ಹತ್ಯೆ ಪ್ರಕರಣಗಳನ್ನು ಪ್ರಸ್ತಾಪಿಸಿ ರಾಜ್ಯ ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

‘ಶಿಕ್ಷಣ, ಬ್ಯಾಂಕಿಂಗ್, ಕೈಗಾರಿಕೆ, ಸೃಜನಶೀಲತೆ, ಉದ್ಯಮಶೀಲತೆ ತವರು ಕರಾವಳಿ ಈಗ ಕೊಲೆಗಳ ಆಡಂಬೋಲವಾಗಿದೆ. 10 ದಿನಗಳಲ್ಲಿ 3 ಕೊಲೆಯಾಗಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ, ಆಂತರಿಕ ಭದ್ರತೆ ಸಂಪೂರ್ಣವಾಗಿ ಕುಸಿದಿರುವುದಕ್ಕೆ ಇದೇ ಸಾಕ್ಷಿ’ ಎಂದು ಎಚ್‌ಡಿಕೆ ಕಿಡಿಕಾರಿದ್ದಾರೆ.

‘ಮುಖ್ಯಮಂತ್ರಿ ಬೊಮ್ಮಾಯಿ ಅವರು ಮಂಗಳೂರಿನಲ್ಲಿ ಇದ್ದಾಗಲೇ 3ನೇ ಕೊಲೆ ಆಗಿದೆ. ಅಷ್ಟರಲ್ಲಿ ಸಿಎಂ ಸಾಹೇಬರು ಜಿಲ್ಲೆಯಿಂದ ಕಾಲ್ಕಿತ್ತಿದ್ದಾರೆ. ಅಲ್ಲೇ ಉಳಿದು ಪರಿಸ್ಥಿತಿ ಅವಲೋಕಿಸಿ, ಕೊಲೆಗೆಡುಕರನ್ನು ಹಡೆಮುರಿ ಕಟ್ಟುವಂತೆ ಕಟ್ಟಾಜ್ಞೆ ಮಾಡುವ ಧೈರ್ಯವನ್ನು ತೋರಲಿಲ್ಲ. ಅವರ ಅಧೈರ್ಯಕ್ಕೆ ಕಾರಣವೇನು? ಕಾಣದ ಕೈಗಳ ಒತ್ತಡವೇನಾದರೂ ಉಂಟಾ’ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

‘ಕರಾವಳಿ ಶಿಕ್ಷಣದ ಕಾಶಿ, ದೇಗುಲಗಳ ಪುಣ್ಯನೆಲ, ಪ್ರಾಕೃತಿಕ ಸೌಂದರ್ಯದ ಬೀಡು, ಪ್ರವಾಸೋದ್ಯಮದಲ್ಲಿ ಕರ್ನಾಟಕದ ಕೀರ್ತಿಕಳಸ. ಇಂಥ ನೆಲದಲ್ಲಿ ದಿನಕ್ಕೊಂದು ಕೊಲೆ!! ಈ ಕೊಲೆಗಳನ್ನು ಹತ್ತಿಕ್ಕುವ ಬದಲು ಬೊಮ್ಮಾಯಿ ಅವರು ‘ಬುಲ್ಡೋಜರ್’ ಬಗ್ಗೆ ಮಾತನಾಡುತ್ತಿದ್ದಾರೆ. ಕರಾವಳಿ ಮತ್ತು ಕರ್ನಾಟಕವನ್ನು ‘ಜಂಗಲ್ ರಾಜ್’ ಮಾಡುವ ಹುನ್ನಾರವಷ್ಟೇ ಇದು’ ಎಂದು ಎಚ್‌ಡಿಕೆ ಟೀಕಿಸಿದ್ದಾರೆ.

‘ಮನೆ, ಮನಗಳಲ್ಲಿ ಮಾತ್ರ ಇರಬೇಕಿದ್ದ ಧರ್ಮವನ್ನು ‘ವ್ಯಸನ’ವನ್ನಾಗಿಸಿ ಕೈಗೆ ದೊಣ್ಣೆ, ಶೂಲ ಕೊಟ್ಟು ಯುವಕರ ನಿಷ್ಕಲ್ಮಶ ಮುಗ್ಧಮನಸ್ಸಿಗೆ ‘ಕೊಮುಪ್ರಾಶನʼ ಮಾಡಿದ ದುಷ್ಪರಿಣಾಮವೇ ಸರಣಿ ಕೊಲೆಗಳು. ಧರ್ಮನಿರಪೇಕ್ಷತೆ ತತ್ವವನ್ನು ನಿರ್ನಾಮ ಮಾಡಿದ್ದೇ ಇದಕ್ಕೆಲ್ಲ ಮೂಲ ಕಾರಣ’ ಎಂದಿದ್ದಾರೆ.

‘ಮಸೂದ್, ಪ್ರವೀಣ್ ನೆಟ್ಟಾರು; ಈಗ ಫಾಸಿಲ್. ಇನ್ನೆಷ್ಟು ಕೊಲೆಗಳು ನಡೆದರೆ ಸರಕಾರಕ್ಕೆ ತೃಪ್ತಿ? ಸರಣಿ ಕೊಲೆಗಳಿಂದ ಕರಾವಳಿಗೆ ಮಾತ್ರವಲ್ಲ, ಕರ್ನಾಟಕದ ಪ್ರತಿಷ್ಠೆಗೆ ಪೆಟ್ಟು ಬಿದ್ದಿದೆ. ಈ ಅರಾಜಕತೆಯಿಂದ ಇಡೀ ಕರಾವಳಿಯ ಆರ್ಥಿಕತೆಯೇ ಬುಡಮೇಲಾಗುತ್ತಿದೆ. ಆದರೆ, ಬಿಜೆಪಿ ಸರ್ಕಾರ ಸಾವಿನಲ್ಲೂ ‘ಕೊಲೆಗಡುಕ ರಾಜಕಾರಣ’ ಮಾಡುತ್ತಿದೆ ಎಂದು ಎಚ್‌ಡಿಕೆ ಗುಡುಗಿದ್ದಾರೆ.

‘ಕೊಲೆಗಳ ಹಿಂದಿನ ಕಾರಣ ಬೇಧಿಸಿ ಕೊಲೆಗಡುಕರನ್ನು ಹತ್ತಿಕ್ಕುವ ಕೆಲಸ ಮಾಡಬೇಕಿದ್ದ ಬಿಜೆಪಿ ಸರ್ಕಾರ, ಪ್ರತೀ ಕೊಲೆಗೂ ತಾನೇ ಮುಂದೆ ನಿಂತು ಹೊಸಹೊಸ ಟ್ವಿಸ್ಟ್ ನೀಡುತ್ತಿದೆ. ಸರ್ಕಾರ ಕೆಲಸ ಬಿಗಿ ಆಡಳಿತ ನಡೆಸುವುದೇ ಹೊರತು ಬೀದಿಯಲ್ಲಿ ನಿಂತು ಗಂಟಲು ಹರಿದುಕೊಳ್ಳುವುದಲ್ಲ’ ಎಂದು ಎಚ್‌ಡಿಕೆ ಕುಟುಕಿದ್ದಾರೆ.

‘ಕರಾವಳಿಯಲ್ಲಿ ನೆಮ್ಮದಿ ನೆಲಸಬೇಕಾದರೆ, ಪೊಲೀಸ್ ವ್ಯವಸ್ಥೆಗೆ ಶಕ್ತಿ ತುಂಬಬೇಕು. ಕಾಣದ ಕೈಗಳ ಸಂಕೋಲೆಯಿಂದ ಇಲಾಖೆಯನ್ನು ಮುಕ್ತಗೊಳಿಸಿ ಅಧಿಕಾರಿಗಳು ಸ್ವತಂತ್ರವಾಗಿ ಕರ್ತವ್ಯ ನಿರ್ವಹಿಸುವ ವಾತಾವರಣ ನಿರ್ಮಿಸಬೇಕು. ಇಲ್ಲವಾದರೆ, ಡಬಲ್ ಎಂಜಿನ್ ಸರ್ಕಾರಕ್ಕೆ ಜನರೇ ಬೆಂಕಿ ಹಾಕಿವರು’ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT