ಶನಿವಾರ, ಸೆಪ್ಟೆಂಬರ್ 25, 2021
22 °C

ಆರೋಗ್ಯ ಇಲಾಖೆಯಲ್ಲಿ ವರ್ಗಾವಣೆಗೆ ಇನ್ನು ಕೌನ್ಸಿಲಿಂಗ್ ಕಡ್ಡಾಯ: ಸಚಿವ ಸುಧಾಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani Photo

ಬೆಂಗಳೂರು: ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ವರ್ಗಾವಣೆ ಪ್ರಕ್ರಿಯೆಯನ್ನು ಇನ್ನು ಮುಂದೆ ಕಡ್ಡಾಯವಾಗಿ ಕೌನ್ಸೆಲಿಂಗ್ ಮೂಲಕವೇ ನಡೆಸಬೇಕು ಎಂದು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಸೂಚಿಸಿದ್ದಾರೆ.

‘ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ಕಾಯ್ದೆ – 2011’ರಲ್ಲಿರುವ ನಿಯಮಗಳ ಪ್ರಕಾರ ಇಲಾಖೆಯ ವ್ಯಾಪ್ತಿಯ ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆಯನ್ನು ಕೌನ್ಸೆಲಿಂಗ್ ಮೂಲಕ ಮಾತ್ರ ಕೈಗೊಳ್ಳಬೇಕು. ಈ ಕಾಯ್ದೆಯಲ್ಲಿರುವ ನಿಯಮಗಳಿಗೆ 2017ರಲ್ಲಿ ತಿದ್ದುಪಡಿ ತರಲಾಗಿದೆ. ಕಾಯ್ದೆಯ ಕಲಂ 5ರಲ್ಲಿ ಆಡಳಿತಾತ್ಮಕ ಹುದ್ದೆಗಳ ವರ್ಗಾವಣೆಗೆ ಮಾತ್ರ ಕೌನ್ಸೆಲಿಂಗ್‌ನಿಂದ ವಿನಾಯಿತಿ ನೀಡಲಾಗಿದೆ.

‘ಈ ಕಾಯ್ದೆಯಲ್ಲಿರುವ ನಿಯಮಗಳ ಅನ್ವಯವೇ ಇನ್ನು ಮುಂದೆ ವರ್ಗಾವಣೆ ಪ್ರಕ್ರಿಯೆ ನಡೆಸಬೇಕು. ಕೌನ್ಸೆಲಿಂಗ್‌ನಿಂದ ವಿನಾಯಿತಿ ನೀಡಿರುವ ವರ್ಗಾವಣೆ ಪ್ರಸ್ತಾವಗಳನ್ನು ಮಾತ್ರ ಸಚಿವರಿಗೆ ಕಳುಹಿಸಬೇಕು. ಇತರೆ ವರ್ಗಾವಣೆ ಪ್ರಸ್ತಾವಗಳನ್ನು ಯಾವುದೇ ಕಾರಣಕ್ಕೂ ಕಳುಹಿಸಬಾರದು. ನಿಯಮ ಉಲ್ಲಂಘಿಸಿ ವರ್ಗಾವಣೆ ಪ್ರಸ್ತಾವನೆ, ಶಿಫಾರಸು ತಂದರೆ ಕಡತ ನಿರ್ವಹಿಸುವ ವಿಷಯ ನಿರ್ವಾಹಕರು ಸೇರಿದಂತೆ ಸಂಬಂಧಿಸಿದ ಎಲ್ಲರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು’ ಎಂದು ಅವರು ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.

‘ಇಲಾಖೆಯ ಆಡಳಿತದಲ್ಲಿ ದಕ್ಷತೆ ತಂದು, ಭ್ರಷ್ಟಾಚಾರ ಮುಕ್ತಗೊಳಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಪಾರದರ್ಶಕ ಹಾಗೂ ನಿಗದಿತ ಕಾಲಮಿತಿಯಲ್ಲಿ ಸಕ್ಷಮ ಪ್ರಾಧಿಕಾರಗಳ ಮೂಲಕವೇ ವರ್ಗಾವಣೆ ಮಾಡುವ ಕಾನೂನನ್ನು ಕಡ್ಡಾಯವಾಗಿ ಜಾರಿಗೊಳಿಸಲು ಉನ್ನತ ಅಧಿಕಾರಿಗಳ ಸಭೆಯಲ್ಲಿ ಸೂಚಿಸಲಾಗಿದೆ. ಈ ಸಂಬಂಧ ಈಗಾಗಲೇ ಆದೇಶ ಹೊರಡಿಸಲಾಗಿದೆ. ಶಿಫಾರಸು, ಲಾಬಿಗಳಿಗೆ ಇದರಿಂದ ತಡೆ ಬೀಳಲಿದೆ’ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಯಾರಿಗೆಲ್ಲ ವಿನಾಯಿತಿ:
‘ಗಂಭೀರ ಹಾಗೂ ಮಾರಣಾಂತಿಕ ರೋಗದಿಂದ ಬಳಲುತ್ತಿರುವವರು, ವಯೋ ನಿವೃತ್ತಿ ಅಂಚಿನಲ್ಲಿದ್ದು, ಇನ್ನು ಎರಡು ವರ್ಷ ಮಾತ್ರ ಸೇವೆ ಬಾಕಿ ಇರುವವರು, ಶೇ 40ಕ್ಕೂ ಹೆಚ್ಚು ಅಂಗವಿಕಲತೆ ಹೊಂದಿರುವವರು, ವಿಧವೆಯರು, ಪತಿ-ಪತ್ನಿ ಪ್ರಕರಣಕ್ಕೆ ಮಾತ್ರ ಕೌನ್ಸೆಲಿಂಗ್‌ನಿಂದ ವಿನಾಯಿತಿ ನೀಡಬೇಕು. ಇಂಥ
ಪ್ರಸ್ತಾವಗಳನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸ್ಪಷ್ಟ ಶಿಫಾರಸಿನೊಂದಿಗೆ ಎರಡು ತಿಂಗಳಿಗೊಮ್ಮೆ ಮಾತ್ರ ಕಡತ ಮಂಡಿಸಿ ಅನುಮೋದನೆ ಪಡೆಯಬೇಕು. ಇದಕ್ಕೆ ಸಂಬಂಧಿಸಿ ಕಾಯ್ದೆಗೆ ಅಗತ್ಯ ತಿದ್ದುಪಡಿ ತರಲು ಕ್ರಮ ಕೈಗೊಳ್ಳಬೇಕು’ ಎಂದೂ ಸಚಿವರು ಸೂಚನೆ ನೀಡಿದ್ದಾರೆ.

ವರ್ಗಾವಣೆ ನಿಯಮದಲ್ಲಿ ಏನಿದೆ?

ಹಿರಿಯ ತಜ್ಞರು, ತಜ್ಞರು, ಉಪ ಮುಖ್ಯ ವೈದ್ಯಾಧಿಕಾರಿ, ಹಿರಿಯ ವೈದ್ಯಾಧಿಕಾರಿ, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ, ಮುಖ್ಯ ದಂತ ವೈದ್ಯಾಧಿಕಾರಿ, ಹಿರಿಯ ದಂತ ವೈದ್ಯಾಧಿಕಾರಿ, ದಂತ ವೈದ್ಯಾಧಿಕಾರಿಗಳನ್ನು  ಆಯುಕ್ತರು ವರ್ಗಾವಣೆ ಮಾಡಬಹುದು. ಗ್ರೂಪ್ ಬಿ, ಸಿ, ಡಿ ನೌಕರರನ್ನು ನಿರ್ದೇಶಕರು ವರ್ಗಾವಣೆ ಮಾಡಬಹುದು.

ಆಯುಷ್ ಇಲಾಖೆಯಡಿಯ ಫಿಸಿಷಿಯನ್ ಗ್ರೇಡ್–1, ಗ್ರೇಡ್– 2ಗೆ ಆಯುಷ್ ಇಲಾಖೆಯ ನಿರ್ದೇಶಕರು, ಆಯುಷ್ ಇಲಾಖೆಯ ಗ್ರೂಪ್ ಬಿ, ಸಿ, ಡಿ, ನೌಕರರನ್ನು ಇಲಾಖೆಯ ಆಯುಕ್ತರು ವರ್ಗಾವಣೆ ಮಾಡಬಹುದು. ಈ ನಿಯಮದಲ್ಲಿ ಗ್ರೂಪ್ ‘ಎ‘ ಗೆ ಮೂರು ವರ್ಷ, ಗ್ರೂಪ್ ‘ಬಿ’ ಗೆ ನಾಲ್ಕು ವರ್ಷ, ಗ್ರೂಪ್ ‘ಸಿ‘ಗೆ ಐದು ವರ್ಷ, ಗ್ರೂಪ್ ‘ಡಿ‘ಗೆ ಏಳು ವರ್ಷ ಒಂದು ಕಡೆ ಕಡ್ಡಾಯವಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು