ಬುಧವಾರ, ಜನವರಿ 20, 2021
25 °C
ಇಂದು 263 ಕಡೆ ಲಸಿಕೆ ವಿತರಣೆ ತಾಲೀಮು

ಜನಾಂದೋಲನ ಮಾದರಿಯಲ್ಲಿ ಲಸಿಕೆ ವಿತರಣೆ: ಡಾ.ಸುಧಾಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ ಲಸಿಕೆ ಬಂದ ನಂತರ ಜನಾಂದೋಲನ ರೀತಿಯಲ್ಲಿ ಲಸಿಕೆ ವಿತರಣೆ ನಡೆಯಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ಶುಕ್ರವಾರ (ಜ.8) ನಡೆಯುವ ಲಸಿಕೆ ವಿತರಣೆ ತಾಲೀಮಿನ (ಡ್ರೈ–ರನ್‌) ಪೂರ್ವ ಸಿದ್ಧತೆ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್‌ ಜತೆಗಿನ ವಿಡಿಯೊ ಸಂವಾದದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ರಾಜ್ಯದ 24 ಜಿಲ್ಲಾ ಆಸ್ಪತ್ರೆ, 20 ಮೆಡಿಕಲ್ ಕಾಲೇಜು, 43 ತಾಲೂಕು ಆಸ್ಪತ್ರೆ, 31 ಸಮುದಾಯ ಆರೋಗ್ಯ ಕೇಂದ್ರ, 87 ಪ್ರಾಥಮಿಕ ಆರೋಗ್ಯ ಕೇಂದ್ರ, 30 ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, 28 ಖಾಸಗಿ ಆರೋಗ್ಯ ಕೇಂದ್ರಗಳು ಸೇರಿದಂತೆ 263 ಕಡೆ ಲಸಿಕೆ ವಿತರಣೆಯ ತಾಲೀಮು ನಡೆಯಲಿದೆ ಎಂದು ತಿಳಿಸಿದರು.

ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 6.30 ಲಕ್ಷ ಸಿಬ್ಬಂದಿ ಲಸಿಕೆ ವಿತರಣೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇನ್ನೂ ಕೂಡ ನೋಂದಣಿ ಮಾಡಿಸಬಹುದು. 1 ಕೋಟಿ ಲಸಿಕೆಗಳನ್ನು ಕೇಂದ್ರ ಸರ್ಕಾರ ವಿವಿಧ ರಾಜ್ಯಗಳಿಗೆ ನೀಡಲಿದೆ. ಪೊಲೀಸರು, ಆರೋಗ್ಯ ಸಿಬ್ಬಂದಿ, ರಕ್ಷಣಾ ಸಿಬ್ಬಂದಿ, ಕೊರೊನಾ ನಿಯಂತ್ರಣದಲ್ಲಿ ತೊಡಗಿರುವವರಿಗೆ ಲಸಿಕೆ ಮೊದಲಿಗೆ ದೊರೆಯಲಿದೆ ಎಂದರು.

ಲಸಿಕೆಯಿಂದ ಯಾವುದೇ ಅಪಾಯವಿಲ್ಲ. ಇದರಿಂದಾಗಿ ಜನರಿಗೆ ಅನುಕೂಲವಾಗುತ್ತದೆ. ಎಲ್ಲರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಲಕ್ಷಾಂತರ ಮಕ್ಕಳು ಶಾಲೆಗೆ ಹೋಗುತ್ತಿರುವ ಸಮಯದಲ್ಲಿ ಕೊರೊನಾ ಬಗ್ಗೆ ವಿನಾಕಾರಣ ಭೀತಿ ಮೂಡಿಸಬಾರದು. ಸರ್ಕಾರ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದೆ ಎಂದು ಹೇಳಿದರು.

ಲಸಿಕೆ ಕಡ್ಡಾಯವಲ್ಲ: ‘ಕೋವಿಡ್ ಲಸಿಕೆಯನ್ನು ಕಡ್ಡಾಯವಾಗಿ ಎಲ್ಲರೂ ಪಡೆಯಬೇಕೆಂದಿಲ್ಲ. ಆದರೆ, ಮುನ್ನೆಚ್ಚರಿಕೆ ಕ್ರಮವಾಗಿ ಸ್ವಯಂಪ್ರೇರಿತರಾಗಿ ತೆಗೆದುಕೊಳ್ಳುವುದು ಉತ್ತಮ’ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕೆಲವೇ ದಿನಗಳಲ್ಲಿ ಲಸಿಕೆ ವಿತರಣೆ ಪ್ರಾರಂಭವಾಗುವ ಕಾರಣ ರಾಜ್ಯದಲ್ಲಿಯೂ ತಾಲೀಮು ನಡೆಯುತ್ತಿದೆ. ಕೋವಿಡ್ ಲಸಿಕೆಯನ್ನು ಯಾರು ಪಡೆಯಬೇಕೆಂಬ ಜನಸಾಮಾನ್ಯರ ಗೊಂದಲಕ್ಕೆ ಇಲಾಖೆ ಉತ್ತರಿಸಿದೆ.

‘ಕೋವಿಡ್ ಲಸಿಕೆ ಪಡೆಯುವುದು ಕಡ್ಡಾಯವಲ್ಲ. ರೋಗದ ವಿರುದ್ಧ ರಕ್ಷಿಸಿಕೊಳ್ಳಲು ಹಾಗೂ ಸೋಂಕು ಬೇರೆಯವರಿಗೆ ಹರಡುವುದನ್ನು ತಡೆಯಲು ಲಸಿಕೆ ಸಹಾಯಕ. ಆದ್ದರಿಂದ ಲಸಿಕೆಯನ್ನು ಪಡೆಯುವುದು ಸೂಕ್ತ ’ ಎಂದು ಇಲಾಖೆ ವಿವರಿಸಿದೆ.

‘ಲಸಿಕೆಗಳ ಲಭ್ಯತೆಯ ಆಧಾರದ ಮೇಲೆ ಹೆಚ್ಚಿನ ಅಪಾಯದಲ್ಲಿರುವವರಿಗೆ ಮೊದಲ ಹಂತದಲ್ಲಿ ನೀಡಲಾಗುತ್ತದೆ. ಪ್ರಥಮ ಆದ್ಯತೆಯ ಗುಂಪಿನಲ್ಲಿ ಆರೋಗ್ಯ ಕಾರ್ಯಕರ್ತರನ್ನು ಗುರುತಿಸಲಾಗಿದೆ. ದ್ವಿತೀಯ ಹಂತದಲ್ಲಿ 50 ವರ್ಷ ಮೇಲ್ಪಟ್ಟವರು ಹಾಗೂ ಅಪಾಯದ ವರ್ಗದಲ್ಲಿರುವವರನ್ನು ಪರಿಗಣಿಸಲಾಗುತ್ತದೆ’ ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು