ಮಂಗಳವಾರ, ಏಪ್ರಿಲ್ 20, 2021
32 °C
ಪರಿಷತ್ತಿನ ರಾಜ್ಯ ಅಧ್ಯಕ್ಷ ಸ್ಥಾನದ ಅಭ್ಯರ್ಥಿ

ಪುನರ್ವಸತಿಗಾಗಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಬರುತ್ತಿಲ್ಲ: ಮಹೇಶ್‌ ಜೋಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯನಗರ (ಹೊಸಪೇಟೆ): ‘ನಾನು ಪುನರ್ವಸತಿಗೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಬರುತ್ತಿಲ್ಲ’ ಎಂದು ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಮಹೇಶ್‌ ಜೋಶಿ ತಿಳಿಸಿದರು.

‘ನಾನು ರಾಜ್ಯ ಅಧ್ಯಕ್ಷ ಸ್ಥಾನದ ಸೇವಾಕಾಂಕ್ಷಿಯಾಗಿ ಬಂದಿದ್ದೇನೆ. ಅಭ್ಯರ್ಥಿಯಾಗಿ ಬಂದಿಲ್ಲ. ನಾಡಿನ ಸೇವೆಗೆ ಬಂದಿರುವೆ. ಅಧಿಕಾರಿಗಳು ಕೆಲಸದಿಂದ ನಿವೃತ್ತರಾದ ನಂತರ ಹಿಂಬಾಗಿಲಿನ ಮೂಲಕ ಪರಿಷತ್ತಿಗೆ ಬರುತ್ತಿದ್ದಾರೆ ಎಂಬ ಆರೋಪ ಇದೆ. ಆದರೆ, ಪುನರ್ವಸತಿ ಪಡೆಯುವುದು ನನ್ನ ಉದ್ದೇಶವಲ್ಲ’ ಎಂದು ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

‘ನಾನು ಎಡಪಂಥದವನೂ ಅಲ್ಲ, ಬಲಪಂಥದವನೂ ಅಲ್ಲ. ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಹಲವು ಗಣ್ಯರ ಜತೆ ಕೆಲಸ ಮಾಡಿರುವೆ. ನಾನು ಯಾವುದೇ ರಾಜಕೀಯ ಪಕ್ಷಕ್ಕೂ ಸೇರಿಲ್ಲ. ಮಾನವ ಪಂಥ, ಕನ್ನಡ ಪಂಥದವನಾಗಿ ಕೆಲಸ ಮಾಡಲು ಬಂದಿರುವೆ. ಒಂದು ಸಿದ್ಧಾಂತ, ಜಾತಿಯಿಂದ ಮೀರಿ ಪರಿಷತ್ತು ಬೆಳೆಯಬೇಕು. ಎಲ್ಲರಿಗೂ ಪರಿಷತ್ತು ನಮ್ಮದು ಎಂಬ ಭಾವನೆ ಬರಬೇಕು’ ಎಂದರು.

‘ನಾನು ಗೆದ್ದರೆ ಸಾಹಿತ್ಯ ಪರಿಷತ್ತಿನ ಪ್ರತಿನಿಧಿಯಾಗಲು ಈಗಿರುವ ₹500 ಶುಲ್ಕವನ್ನು ₹250ಕ್ಕೆ ಇಳಿಸುವೆ. ಸುಪ್ರೀಂಕೋರ್ಟ್‌ ಅಥವಾ ಹೈಕೋರ್ಟ್‌ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಿ ಪರಿಷತ್ತಿನಲ್ಲಿ ಆಮೂಲಾಗ್ರ ಬದಲಾವಣೆ ತರುವೆ. 1915ರಲ್ಲಿ ಸ್ಥಾಪನೆಯಾದ ಪರಿಷತ್ತಿನಲ್ಲಿ ಸಣ್ಣಪುಟ್ಟ ಬದಲಾವಣೆಗಳಾಗಿವೆ. ಆದರೆ, ಒಟ್ಟು ಸ್ವರೂಪದಲ್ಲಿ ಬದಲಾಗವಣೆ ಆಗಿಲ್ಲ’ ಎಂದು ಹೇಳಿದರು.

‘ಕನ್ನಡ ಅನ್ನದ ಭಾಷೆಯಾಗಬೇಕು. ನನ್ನ ಅವಧಿಯಲ್ಲಿ ಕನ್ನಡದ ಒಂದು ಶಾಲೆ ಕೂಡ ಮುಚ್ಚದಂತೆ ನೋಡಿಕೊಳ್ಳುವೆ. ಮುಚ್ಚಿರುವ ಶಾಲೆಗಳನ್ನು ಪುನರಾರಂಭಿಸಲು ಶ್ರಮಿಸುತ್ತೇನೆ. ಎರಡು ಸಮ್ಮೇಳನಗಳನ್ನು ಮಹಿಳೆಯರ ಸರ್ವಾಧ್ಯಕ್ಷತೆಯಲ್ಲಿ ನಡೆಸುವ ಯೋಜನೆ ಇದೆ’ ಎಂದು ತಿಳಿಸಿದರು.

ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಮಾತನಾಡಿ, ‘ದೂರದರ್ಶನದ ಚಂದನ ವಾಹಿನಿಯ ಮೂಲಕ ಕನ್ನಡ ಕಟ್ಟುವ ಕೆಲಸವನ್ನು ಮಹೇಶ್‌ ಜೋಶಿ ಮಾಡಿದ್ದಾರೆ. ಅನೇಕ ಸ್ತರಗಳಲ್ಲಿ ಕೆಲಸ ನಿರ್ವಹಿಸಿರುವ ಅವರಿಗೆ ಅಪಾರ ಅನುಭವವಿದೆ. ಕನ್ನಡದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಜೋಶಿ ಅವರು ಪರಿಷತ್ತಿನ ಚುಕ್ಕಾಣಿ ಹಿಡಿದರೆ ಅದಕ್ಕೆ ಹೊಸ ಸ್ವರೂಪ ಸಿಗಬಹುದು’ ಎಂದು ಹೇಳಿದರು.

ಪ್ರಚಾರ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ನಬಿ ಸಾಬ್‌ ಕುಷ್ಟಗಿ, ಚನ್ನಬಸವ ಕೊಟಗಿ, ರೇವಣಸಿದ್ದಪ್ಪ, ಸುಜಾತ, ಪ್ರಕಾಶ್‌ ಇದ್ದರು.

‘ವಿಜಯನಗರಕ್ಕೆ ಪ್ರತ್ಯೇಕ ಚುನಾವಣೆ ನಡೆಸಲಿ’
‘ಅಖಂಡ ಬಳ್ಳಾರಿ ಜಿಲ್ಲೆಯಿಂದ ವಿಭಜನೆಗೊಂಡು ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಪ್ರತ್ಯೇಕವಾಗಿ ನಡೆಸಬೇಕು. ಇದು ವಿಜಯನಗರ ಭಾಗದವರ ಅಭಿಪ್ರಾಯವೂ ಆಗಿದೆ’ ಎಂದು ಮಹೇಶ್‌ ಜೋಶಿ ಹೇಳಿದರು.

‘ಅಖಂಡ ಬಳ್ಳಾರಿ ಜಿಲ್ಲೆಗೆ ಚುನಾವಣೆ ನಡೆಸುತ್ತಾರೋ ಅಥವಾ ವಿಜಯನಗರಕ್ಕೆ ಪ್ರತ್ಯೇಕವಾಗಿ ಚುನಾವಣೆ ನಡೆಸುತ್ತಾರೋ ಎನ್ನುವುದರ ಬಗ್ಗೆ ಇದುವರೆಗೆ ಸ್ಪಷ್ಟವಾಗಿಲ್ಲ. ಆಯೋಗ ಗೊಂದಲ ನಿವಾರಿಸಬೇಕು’ ಎಂದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು