ಭಾನುವಾರ, ಮಾರ್ಚ್ 7, 2021
32 °C
ತೀರ್ಥಹಳ್ಳಿಯ ವಿವಿಧ ಗ್ರಾಮಗಳಲ್ಲಿ ನಕಲಿ ನೋಟು, ಅಕ್ರಮ ಮದ್ಯ, ಓಸಿ ದಂಧೆಗೆ ರಕ್ಷಣೆ ಆರೋಪ

ಮಲೆನಾಡಿನಲ್ಲಿ ಹೆಚ್ಚಿದ ಅಕ್ರಮ ಚಟುವಟಿಕೆ

ಶಿವಾನಂದ ಕರ್ಕಿ Updated:

ಅಕ್ಷರ ಗಾತ್ರ : | |

Prajavani

ತೀರ್ಥಹಳ್ಳಿ: ನಕಲಿ ನೋಟು ಚಲಾವಣೆ, ಓಸಿ ದಂಧೆ, ಅಕ್ರಮ ಮದ್ಯ ಮಾರಾಟ ಮಲೆನಾಡಿನಲ್ಲಿ ಹೆಚ್ಚಾಗುತ್ತಿದ್ದು, ಸಮಾಜದ ಸ್ವಾಸ್ಥ್ಯ ಹಾಳುಮಾಡುವ ಚಟುವಟಿಕೆಗೆ ಕಡಿವಾಣ ಹಾಕಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬಂದಿದೆ.

ತಾಲ್ಲೂಕಿನ ಬೆಜ್ಜವಳ್ಳಿ, ಕನ್ನಂಗಿ, ಹಣಗೆರೆ, ಕೋಣಂದೂರು, ಕಟ್ಟೆಹಕ್ಕಲು ಭಾಗದಲ್ಲಿ ಓಸಿ ದಂಧೆ ಜೀವ ಪಡೆಯುತ್ತಿದೆ. ಪೊಲೀಸರ ನೆರಳಿನಲ್ಲಿ ದಂಧೆ ನಡೆಯುತ್ತಿದೆ ಎನ್ನಲಾಗಿದ್ದು, ದಂಧೆಗೆ ಕಡಿವಾಣ ಹಾಕದಿದ್ದರೆ ಬಡವರ ದುಡಿಮೆ ಹಣ ಜೂಜು ಅಡ್ಡೆಯ ಪಾಲಾಗುವ ಆತಂಕ ಎದುರಾಗಿದೆ.

ಓಸಿ ಚೀಟಿ ಬರೆಯುವವರ ಜಾಲ ಹಳ್ಳಿ ಹಳ್ಳಿಗೂ ವಿಸ್ತರಿಸುತ್ತಿದೆ. ಹೋಬಳಿ ಮಟ್ಟದ ಕೇಂದ್ರಗಳಲ್ಲಿ ಪ್ರತಿ ನಿತ್ಯ ₹ 50 ಸಾವಿರಕ್ಕೂ ಹೆಚ್ಚು ಹಣ ಚಲಾವಣೆಯಾಗುತ್ತಿದೆ. ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ದಂಧೆ ಹೆಚ್ಚಾಗುತ್ತಿದ್ದು, ಓಸಿ ಜೂಜಿನ ಕನಸಿನ ದುಡ್ಡಿಗೆ ಹಣ ಕಟ್ಟಿ ಕಳೆದುಕೊಳ್ಳುವವರ ಸಂಖ್ಯೆ ದಿನೇ ದಿನೇ ಮಿತಿ ಮೀರುತ್ತಿರುವುದರಿಂದ ನೆಮ್ಮದಿಯಲ್ಲಿದ್ದ ಕುಟುಂಬಗಳಲ್ಲಿ ಈಗ ಗಲಾಟೆ, ಹೊಡೆದಾಟಗಳು ಹೆಚ್ಚಿವೆ.

ಅಂತರ್ಜಾಲ ಸಂಪರ್ಕದಿಂದ ಓಸಿ ದಂಧೆ ತೀವ್ರಗೊಳ್ಳುತ್ತಿದೆ. ವಾಟ್ಸ್‌ಆ್ಯಪ್, ಮೆಸೇಜ್‌ಗಳಲ್ಲಿ ಗುಪ್ತ ಸಂಖ್ಯೆಗಳನ್ನು ಕೋಡ್‌ವರ್ಡ್ ಮೂಲಕ ರವಾನೆ ಮಾಡಲಾಗುತ್ತಿದೆ. ₹ 100ಕ್ಕೆ ₹ 8 ಸಾವಿರ ಸಿಗುತ್ತದೆ ಎಂಬ ಆಸೆಗೆ ಓಸಿ ಆಡುವ ಮೂಲಕ ಜನರು ಹಣ ಕಳೆದುಕೊಳ್ಳುತ್ತಿದ್ದಾರೆ. ಸಂಜೆಯಾಗುತ್ತಿದ್ದಂತೆ ಸಣ್ಣ ಪುಟ್ಟ ಹಳ್ಳಿಗಳಲ್ಲಿ, ಹೋಬಳಿ ಕೇಂದ್ರಗಳಲ್ಲಿ ಓಸಿ ಆಡುವವರಿಂದ ಹಣ ಸಂಗ್ರಹಿಸಲಾಗುತ್ತದೆ. ಪೊಲೀಸರಿಗೆ ಓಸಿ ಚಟುವಟಿಕೆಯ ಮಾಹಿತಿ ಇದ್ದರೂ ಜಾಣ ಕುರುಡು ಪ್ರದರ್ಶಿಸುತ್ತಿರುವುದು ಅಚ್ಚರಿ ಮೂಡಿಸಿದೆ.

ಓಸಿ ಜಾಲದ ವ್ಯಾಪ್ತಿ ವಿಸ್ತಾರವಾಗಿದ್ದು, ಓಸಿ ಏಜೆಂಟರಿಗೆ ₹ 1 ಸಾವಿರ ಹಣ ಸಂಗ್ರಹಕ್ಕೆ ₹ 150 ನೀಡಲಾಗುತ್ತಿದೆ. ನಿಗದಿತ ವ್ಯಕ್ತಿ ಓಸಿ ಹಣ ಸಂಗ್ರಹಣೆಯಲ್ಲಿ ತೊಡಗುತ್ತಾನೆ. ಪೊಲೀಸರ ಒಪ್ಪಿಗೆ ಪಡೆದೇ ದಂಧೆ ನಡೆಸಲಾಗುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ಒಬ್ಬರು ಮಾಹಿತಿ ನೀಡಿದ್ದಾರೆ.

ಕಳ್ಳನೋಟಿನ ಜಾಲವೂ ಹೆಚ್ಚಾಗಿದ್ದು, ತೀರ್ಥಹಳ್ಳಿ ಪಟ್ಟಣದಲ್ಲಿ ₹ 200ರ ನಕಲಿ ನೋಟು ಕೆಲ ದಿನಗಳ ಹಿಂದೆ ಪತ್ತೆಯಾಗಿದೆ. ಅಸಲಿ ನೋಟಿಗೂ ನಕಲಿ ನೋಟಿಗೂ ವ್ಯತ್ಯಾಸ ತಿಳಿಯದ ಸ್ಥಿತಿ ಕಂಡುಬಂದಿದ್ದು, ಸಾರ್ವಜನಿಕರು ದೂರು ನೀಡಲು ಹಿಂದೇಟು ಹಾಕುವ ಸನ್ನಿವೇಶ ಉದ್ಭವಿಸಿದೆ. ಅನೇಕರು ಹಣಕಾಸು ಸಂಸ್ಥೆ ಹೆಸರಿನಲ್ಲಿ ಮನೆಬಾಗಿಲಿಗೆ ತೆರಳಿ ಸಾಲದ ಹಣದಲ್ಲಿ ನಕಲಿ ನೋಟು ನೀಡುತ್ತಿರುವ ಅನುಮಾನ ಮೂಡಿದೆ. ಇಂತಹ ಚಟುವಟಿಕೆ ವಿರುದ್ಧ ಬಿಗಿ ಕಾನೂನು ಕ್ರಮ ತೆಗೆದುಕೊಳ್ಳುವ ಮೂಲಕ ಅಕ್ರಮಕ್ಕೆ ಕಡಿವಾಣ ಹಾಕಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು