ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣನಿಂದ ₹9 ಕೋಟಿ ಮೌಲ್ಯದ ಬಿಟ್ ಕಾಯಿನ್ ಜಪ್ತಿ

ಐಷಾರಾಮಿ ಹೋಟೆಲ್‌ನಲ್ಲಿ ವಾಸ್ತವ್ಯ: ಕೋಟಿ ಕೋಟಿ ಗಳಿಕೆ
Last Updated 15 ಜನವರಿ 2021, 18:03 IST
ಅಕ್ಷರ ಗಾತ್ರ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಅಂತರರಾಷ್ಟ್ರೀಯ ಹ್ಯಾಕರ್ ಎನ್ನಲಾದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (25), ಗೇಮಿಂಗ್ ಆ್ಯಪ್ ಹಾಗೂ ಜಾಲತಾಣಗಳನ್ನು ಹ್ಯಾಕ್‌ ಮಾಡಿ ಕೋಟ್ಯಂತರ ರೂಪಾಯಿ ಹಣ ಸಂಪಾದನೆ ಮಾಡಿರುವ ಸಂಗತಿಯನ್ನು ಸಿಸಿಬಿ ಪೊಲೀಸರೇ ಹೊರಗೆಡವಿದ್ದಾರೆ.

‘ಹ್ಯಾಕಿಂಗ್ ಮೂಲಕ ದತ್ತಾಂಶ ಕದ್ದು ಅಕ್ರಮಕ್ಕೆ ಬಳಸಿಕೊಂಡಿದ್ದ ಹಾಗೂ ಕೆಲವರನ್ನು ಬ್ಲ್ಯಾಕ್‌ಮೇಲ್ ಮಾಡಿ ಗಳಿಸಿದ್ದ ₹ 9 ಕೋಟಿ ಮೌಲ್ಯದ 31 ಬಿಟ್‌ ಕಾಯಿನ್‌ಗಳನ್ನು ಆರೋಪಿಯಿಂದ ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ ಹೇಳಿದರು. ಈತನ ವಿರುದ್ಧ ಕೆಂಪೇಗೌಡ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

‘ಈ ಪ್ರಕರಣದ ಆರೋಪಿಗಳಾದ ಸುನೀಷ್ ಹೆಗ್ಡೆ, ಪ್ರಸಿದ್ ಶೆಟ್ಟಿ, ಸುಜಯ್, ಹೇಮಂತ್, ಮುದ್ದಪ್ಪ, ರಾಬಿನ್ ಖಂಡೇವಾಲ್ ಹಾಗೂ ಇತರರ ಜೊತೆ ಸೇರಿ ಶ್ರೀಕೃಷ್ಣ ಕೃತ್ಯ ಎಸಗುತ್ತಿದ್ದ. ಪ್ರಕರಣದ ತನಿಖೆಯ ಜವಾಬ್ದಾರಿ ವಹಿಸಿಕೊಂಡಿದ್ದ ಸಿಸಿಬಿ ವಿಶೇಷ ತಂಡ, ಆರೋಪಿಯನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದೆ’ ಎಂದೂ ತಿಳಿಸಿದರು.

‘ಐಷಾರಾಮಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡುತ್ತಿದ್ದ ಆರೋಪಿ, ಲ್ಯಾಪ್‌ಟಾಪ್‌ನಿಂದಲೇ ದೇಶ–ವಿದೇಶಗಳ ಗೇಮಿಂಗ್ ಆ್ಯಪ್ ಹಾಗೂ ಜಾಲತಾಣಗಳನ್ನು ಹ್ಯಾಕ್ ಮಾಡುತ್ತಿದ್ದ. ಅದರಿಂದ ಬಿಟ್ ಕಾಯಿನ್‌ಗಳನ್ನು ಗಳಿಸುತ್ತಿದ್ದ. ಅವುಗಳನ್ನು ವ್ಯಾಪಾರಿ ರಾಬಿನ್ ಖಂಡೇವಾಲ್ ಹಾಗೂ ಇತರರಿಗೆ ಮಾರಾಟ ಮಾಡುತ್ತಿದ್ದ.’

‘ಬಿಟ್‌ ಕಾಯಿನ್ ಖರೀದಿಸುತ್ತಿದ್ದ ಖಂಡೇವಾಲ್ ಹಾಗೂ ಇತರರು, ಶ್ರೀಕೃಷ್ಣನ ಸ್ನೇಹಿತರ ಖಾತೆಗೆ ರೂಪಾಯಿ ಮೌಲ್ಯದಲ್ಲಿ ಹಣ ಜಮೆ ಮಾಡುತ್ತಿದ್ದರು. ಅದೇ ಹಣದಲ್ಲಿ ಶ್ರೀಕೃಷ್ಣ ಹಾಗೂ ಇತರೆ ಆರೋಪಿಗಳು, ಐಷಾರಾಮಿ ಜೀವನ ನಡೆಸುತ್ತಿದ್ದರು. ಡ್ರಗ್ಸ್ ಪಾರ್ಟಿಗಳನ್ನೂ ಆಯೋಜಿಸುತ್ತಿದ್ದರು’ ಎಂದೂ ಸಂದೀಪ್ ಪಾಟೀಲ ವಿವರಿಸಿದರು.

ಸರ್ಕಾರದ ಜಾಲತಾಣವೂ ಹ್ಯಾಕ್: ‘ರಾಜ್ಯ ಸರ್ಕಾರದ ಇ–ಪ್ರೊಕ್ಯೂರ್‌ಮೆಂಟ್ ಜಾಲತಾಣವನ್ನೂ ಆರೋಪಿ ಹ್ಯಾಕ್ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ. ಅದರಿಂದ ಬಂದ ಕೋಟ್ಯಂತರ ರೂಪಾಯಿ ಹಣವನ್ನು ತನ್ನ ಹಾಗೂ ಸ್ನೇಹಿತರ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT