ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕ ಮನ್ನಣೆ: ‘2023 ಅಂತರ ರಾಷ್ಟ್ರೀಯ ಸಿರಿಧಾನ್ಯಗಳ ವರ್ಷ’ ಘೋಷಣೆ

ರಾಜ್ಯದ ಒತ್ತಾಸೆಗೆ ಸಂದ ಪುರಸ್ಕಾರ
Last Updated 12 ಮಾರ್ಚ್ 2021, 19:22 IST
ಅಕ್ಷರ ಗಾತ್ರ

ಬೆಂಗಳೂರು: ಒಂದುಕಾಲದಲ್ಲಿ ಕಡು ಬಡವನ ಆಹಾರ ಎಂದೇ ಕರೆಯುತ್ತಿದ್ದ ಸಿರಿಧಾನ್ಯಕ್ಕೆ ಈಗ ಜಾಗತಿಕ ಮನ್ನಣೆ ಸಿಕ್ಕಿದೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಒಕ್ಕೂಟ (ಎಫ್‌ಎಒ) 2023 ಅನ್ನು ‘ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ’ವಾಗಿ ಆಚರಿಸುವುದಾಗಿ ಘೋಷಿಸಿದೆ.

ವಿಶ್ವಸಂಸ್ಥೆಯ ಭಾರತದ ರಾಯಭಾರಿ ತಿರುಮೂರ್ತಿ ಟ್ವೀಟ್‌ ಮೂಲಕ ಈ ಮಾಹಿತಿ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಟ್ವೀಟ್‌ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಆದರೆ, ಈ ಘೋಷಣೆಗೆ ಕಾರಣವಾದ ಕರ್ನಾಟಕ ಸರ್ಕಾರದಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಕೃಷಿ ಇಲಾಖೆ, ಸಾವಯವ ಕೃಷಿ ಮಿಷನ್‌ ಕೂಡ ‘ಮೌನ’ವಾಗಿವೆ.

2017–18 ರಲ್ಲಿ ಕೃಷಿ ಸಚಿವರಾಗಿದ್ದ ಕೃಷ್ಣ ಬೈರೇಗೌಡ ಅವರು ಕೇಂದ್ರ ಸರ್ಕಾರಕ್ಕೆ ಈ ಸಂಬಂಧ ಪ್ರಸ್ತಾವನೆ ಕಳಿಸಿದ್ದರು. ಅಲ್ಲದೇ ಆಹಾರ ಮತ್ತು ಕೃಷಿ ಒಕ್ಕೂಟದ ಆಹ್ವಾನದ ಮೇರೆಗೆ ರೋಮ್‌ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ, ಸಿರಿಧಾನ್ಯಗಳ ಮಹತ್ವ ವಿವರಿಸಿ, ಸಿರಿಧಾನ್ಯಗಳ ವರ್ಷಾಚರಣೆಗೆ ಘೋಷಣೆಗೆ ಮನವಿ ಮಾಡಿದ್ದರು. ರಾಜ್ಯದ ಮನವಿ ಪುರಸ್ಕರಿಸಿ ವಿಶ್ವಸಂಸ್ಥೆಯ ಎಫ್‌ಎಒಗೆ ಕೇಂದ್ರ ಸರ್ಕಾರವೂ ಪ್ರಸ್ತಾವನೆ ಸಲ್ಲಿಸಿತ್ತು.

ಕರ್ನಾಟಕಕ್ಕೆ ಸೀಮಿತವಾಗಿದ್ದ ಸಿರಿಧಾನ್ಯಗಳ ಚಟುವಟಿಕೆಯನ್ನು ಹೊರ ರಾಜ್ಯಗಳು ಮತ್ತು ಹೊರ ದೇಶಗಳಿಗೆ ವಿಸ್ತರಿಸುವ ಕೆಲಸ 2016 ರಿಂದ 2018ರ ಅವಧಿಯಲ್ಲಿ ನಡೆಯಿತು. ರಾಷ್ಟ್ರಮಟ್ಟದ ಮತ್ತು ಜಾಗತಿಕ ಸಿರಿಧಾನ್ಯಗಳ ಮೇಳವನ್ನೂ ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು.

ಇಲ್ಲಿನ ಸಿರಿಧಾನ್ಯಗಳನ್ನು ಪರಿಚಯಿಸಲು ವಿಶ್ವದ ಹಲವು ದೇಶಗಳ ವಿಜ್ಞಾನಿಗಳನ್ನು, ವಿದೇಶಿ ಕಂಪನಿಗಳ ಪ್ರತಿನಿಧಿಗಳನ್ನೂ ಆಹ್ವಾನಿಸಲಾಗಿತ್ತು. ಅಲ್ಲದೆ, ಸಿರಿಧಾನ್ಯಗಳನ್ನು ಪರಿಚಯಿಸುವ ಉದ್ದೇಶದಿಂದ ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ, ಹೈದರಾಬಾದ್ ನಗರಗಳಲ್ಲಿಯೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಆಂದೋಲನದ ಸ್ವರೂಪ ನೀಡಲಾಗಿತ್ತು.

ಸೀಮೋಲ್ಲಂಘನ: ಅಮೆರಿಕ, ಜರ್ಮನಿ, ಇಟಲಿ ಮತ್ತು ಕೊಲ್ಲಿ ರಾಷ್ಟ್ರಗಳ ಜನರಿಗೆ ಈ ಸಿರಿಧಾನ್ಯಗಳಿಂದ ತಯಾರಿಸಬಹುದಾದ ಖಾದ್ಯಗಳು ಹಾಗೂ ಅದರಲ್ಲಿರುವ ಪೌಷ್ಟಿಕತೆಯನ್ನು ಪರಿಚಯಿಸಲಾಯಿತು. ಆ ರಾಷ್ಟ್ರಗಳಲ್ಲಿ ಜನರ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಪರ್ಯಾಯ ಪೌಷ್ಟಿಕ ಆಹಾರ ಧಾನ್ಯಗಳತ್ತ ಗಮನ ಹರಿಸುತ್ತಿದ್ದಾರೆ. ಅದರ ಲಾಭ ಪಡೆಯುವ ಮೂಲಕ ರಾಜ್ಯದ ಸಿರಿಧಾನ್ಯಗಳಿಗೆ ಮಾರುಕಟ್ಟೆ ಒದಗಿಸುವುದು ಪ್ರಮುಖ ಉದ್ದೇಶವಾಗಿತ್ತು.

‘ಕರ್ನಾಟಕದ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ರಾಜ್ಯದ ಸಿರಿಧಾನ್ಯಗಳಿಗೆ ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ಕಂಡುಕೊಳ್ಳಲು 2023 ರೊಳಗೆ ಒಂದು ರೂಪುರೇಷೆ ತಯಾರಿಸುವಲ್ಲಿ ನಾವೇ ಮುಂಚೂಣಿಯಲ್ಲಿ ನಿಲ್ಲಬೇಕು. ಕೈಚೆಲ್ಲಿದರೆ ಮತ್ತೆ ಅವಕಾಶ ಸಿಗದು. ‘ಯೋಗ’ವನ್ನು ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಳಿಸಿದ ಮಾದರಿಯಲ್ಲೇ ಸಿರಿಧಾನ್ಯವನ್ನೂ ಜನಪ್ರಿಯಗೊಳಿಸಬೇಕು’ ಎನ್ನುತ್ತಾರೆ ತಜ್ಞರು.

ಕರ್ನಾಟಕಕ್ಕೆ ಹೆಚ್ಚು ಲಾಭ
ಸಿರಿಧಾನ್ಯ ಬೆಳೆಯುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷಾಚರಣೆ ಸಂಬಂಧಿಸಿದಂತೆ ಜಾಗತಿಕ ಮಟ್ಟದಲ್ಲಿ ಭಾರತ ಸರ್ಕಾರ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಬಗ್ಗೆ ಕೇಂದ್ರಕ್ಕೆ ಸಲಹೆಗಳನ್ನು ನೀಡಬೇಕು. ಇದು ಕರ್ನಾಟಕದ ಸಿರಿಧಾನ್ಯ ಆಂದೋಲನಕ್ಕೆ ಸಂದ ಗೌರವ. ಮುಖ್ಯವಾಗಿ, ಸಿರಿಧಾನ್ಯವನ್ನು ವಿದೇಶಿ ಮಾರುಕಟ್ಟೆಯಲ್ಲಿ ಉತ್ತೇಜಿಸುವ ಕಾರ್ಯಕ್ಕೆ ಚಾಲನೆ ನೀಡಿದರೆ, ಇಲ್ಲಿನ ಸಿರಿಧಾನ್ಯಗಳಿಗೆ ವಿದೇಶಗಳಲ್ಲಿ ಬೇಡಿಕೆ ಸೃಷ್ಟಿಯಾಗುತ್ತದೆ ಎನ್ನುತ್ತಾರೆ ಶಾಸಕ ಕೃಷ್ಣ ಬೈರೇಗೌಡ.

190 ರಾಷ್ಟ್ರಗಳ ಪೈಕಿ ಪ್ರಮುಖ 30 ರಿಂದ 40 ರಾಷ್ಟ್ರಗಳಲ್ಲಿ ಸಿರಿಧಾನ್ಯಗಳ ಮೌಲ್ಯದ ಬಗ್ಗೆ ಅರಿವು ಮೂಡಿಸಲು ವಿಚಾರ ಸಂಕಿರಣಗಳು, ಆಹಾರ ಮೇಳಗಳು, ಪೌಷ್ಟಿಕತೆಯ ಕಾರ್ಯಾಗಾರಗಳನ್ನು ವಿಶ್ವಸಂಸ್ಥೆ ನಡೆಸಬೇಕು. ಇದಕ್ಕಾಗಿ ಕೇಂದ್ರ ಸರ್ಕಾರ ವಿಶ್ವ ಸಂಸ್ಥೆಯ ಮೇಲೆ ಒತ್ತಡ ಹೇರಬೇಕು. ಈ ದಿಸೆಯಲ್ಲಿ ಕೇಂದ್ರ ಸರ್ಕಾರ ಕಾರ್ಯಪ್ರವೃತ್ತವಾಗಲು ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಒತ್ತಡ ಹಾಕಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT