ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ ಅಭ್ಯರ್ಥಿಯ ನಿವೃತ್ತಿ ಪ್ರಶ್ನೆಯೇ ಇಲ್ಲ: ಎಚ್‌.ಡಿ. ಕುಮಾರಸ್ವಾಮಿ

Last Updated 8 ಜೂನ್ 2022, 10:07 IST
ಅಕ್ಷರ ಗಾತ್ರ

ಬೆಂಗಳೂರು: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಕಾಂಗ್ರೆಸ್‌ ನಾಯಕರ ಜತೆ ಚರ್ಚಿಸಿದ ಬಳಿಕವೇ ಕುಪೇಂದ್ರ ರೆಡ್ಡಿ ಅವರನ್ನು ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿದೆ. ಈಗ ಜೆಡಿಎಸ್‌ ಅಭ್ಯರ್ಥಿ ಕಣದಿಂದ ನಿವೃತ್ತರಾಗುವ ಪ್ರಶ್ನೆಯೇ ಇಲ್ಲ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಅವರು, ‘ನಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೊದಲು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ಸೋನಿಯಾ ಗಾಂಧಿ ಜತೆ ಚರ್ಚಿಸಿದ್ದರು. ಆದರೆ, ನಾವೇ ಮೊದಲು ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಎಂಬ ಕಾರಣ ನೀಡಿ, ಜೆಡಿಎಸ್‌ ಅಭ್ಯರ್ಥಿಯನ್ನು ನಿವೃತ್ತಿಗೊಳಿಸುವಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದುರಹಂಕಾರದಿಂದ ವರ್ತಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಜೆಡಿಎಸ್‌ನ 32 ಶಾಸಕರಿದ್ದಾರೆ. ಕಾಂಗ್ರೆಸ್‌ ಬಳಿ ಇರುವುದು 25 ಹೆಚ್ಚುವರಿ ಮತಗಳು ಮಾತ್ರ. 32 ದೊಡ್ಡದೊ? 25 ದೊಡ್ಡದೊ? 32 ಶಾಸಕರ ಮತಗಳನ್ನು ಹೊಂದಿರುವ ಜೆಡಿಎಸ್‌ ಕಾಂಗ್ರೆಸ್‌ ಪಕ್ಷ ಹೇಳಿದಂತೆ ನಡೆದುಕೊಳ್ಳಬೇಕೆ’ ಎಂದು ಪ್ರಶ್ನಿಸಿದರು.

ಈಗಲೂ ಕಾಲ ಮಿಂಚಿಲ್ಲ. ಗುರುವಾರ ಮಧ್ಯಾಹ್ನದವರೆಗೂ ಕಾಲಾವಕಾಶವಿದೆ. ಜೆಡಿಎಸ್‌ನ ಎಲ್ಲ ಶಾಸಕರ ಎರಡನೇ ಪ್ರಾಶಸ್ತ್ಯದ ಮತಗಳನ್ನು ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ನೀಡಲು ಸಿದ್ಧ. ಕಾಂಗ್ರೆಸ್‌ ತನ್ನ ಎಲ್ಲ ಶಾಸಕರ ಎರಡನೇ ಪ್ರಾಶಸ್ತ್ಯದ ಮತಗಳನ್ನು ಜೆಡಿಎಸ್‌ ಅಭ್ಯರ್ಥಿಗೆ ಕೊಡಿಸಲಿ ಎಂದು ಹೇಳಿದರು.

‘ದೇವೇಗೌಡರನ್ನು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ ಮಾಡಿದ್ದ ಕಾರಣಕ್ಕಾಗಿ ಈಗ ಕಾಂಗ್ರೆಸ್‌ಗೆ ಬೆಂಬಲ ನೀಡಬೇಕು ಎಂಬ ವಾದವನ್ನು ಸಿದ್ದರಾಮಯ್ಯ ಮತ್ತು ಅವರ ಪಕ್ಷದವರು ಮಾಡುತ್ತಿದ್ದಾರೆ. ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಬಿಜೆಪಿ ನಾಯಕರ ಒತ್ತಾಸೆಯಂತೆ ದೇವೇಗೌಡರು ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಸಿದ್ದರಾಮಯ್ಯ ಅವರಿಂದ ಅಲ್ಲ’ ಎಂದರು.

‘ಸದ್ದಾಂ ಹುಸೇನ್‌ ಮಾದರಿ ರಾಜಕಾರಣ’: ‘ಜೆಡಿಎಸ್‌ನಲ್ಲಿ ಸಿ.ಎಂ. ಇಬ್ರಾಹಿಂ ನಾಮ್‌ಕೆವಾಸ್ತೆ ಅಧ್ಯಕ್ಷ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ನಮ್ಮ ಪಕ್ಷದಲ್ಲಿ ಎಲ್ಲರಿಗೂ ಗೌರವವಿದೆ. ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷರ ಕುರಿತು ಹಗುರವಾಗಿ ಮಾತನಾಡುವುದನ್ನು ಅವರು ಬಿಡಬೇಕು. ಸಿದ್ದರಾಮಯ್ಯ ಅವರದ್ದು ಸದ್ದಾಂ ಹುಸೇನ್‌ ರೀತಿಯ ರಾಜಕಾರಣ. ಕಾಂಗ್ರೆಸ್‌ನಲ್ಲಿ ಯಾರೂ ಅವರ ವಿರುದ್ಧ ಮಾತನಾಡುವಂತಿಲ್ಲ. ಎಲ್ಲರನ್ನೂ ತುಳಿಯುತ್ತಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT