ಭಾನುವಾರ, ಜುಲೈ 3, 2022
27 °C
ಬಿಜೆಪಿ ಕಚೇರಿಯಲ್ಲಿ ಕಸಾಪ ಪ್ರಚಾರ ನಡೆಸಿದ್ದ ಮಹೇಶ್‌ ಜೋಶಿ

ಕಸಾಪ: ಜೋಶಿ ಪರ ಕೆಲಸ ಮಾಡದ ಬಿಜೆಪಿ ನಾಯಕ ಮಹೇಂದ್ರಗೌಡ ವಿರುದ್ಧ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಮುನ್ನಡೆ ಸಾಧಿಸಿರುವ ಮಹೇಶ್‌ ಜೋಶಿ ಅವರನ್ನು ಬೆಂಬಲಿಸದ ಕಾರಣಕ್ಕೆ ಬೆಂಗಳೂರು ದಕ್ಷಿಣಜಿಲ್ಲಾ ಬಿಜೆಪಿ ಘಟಕದ ಕಾರ್ಯಕಾರಿಣಿ ಸದಸ್ಯ ಸ್ಥಾನದಿಂದಲೇ ಎಂ.ಮಹೇಂದ್ರಗೌಡ ಅವರನ್ನು ವಜಾಗೊಳಿಸಲಾಗಿದೆ.

ಅಲ್ಲದೆ, ಚುನಾವಣೆಗೂ ಮುನ್ನ ಜೋಶಿ ಬಿಜೆಪಿ ಕಚೇರಿಗಳಲ್ಲೇ ಚುನಾವಣೆ ಪ್ರಚಾರದ ಸಭೆಗಳನ್ನು ನಡೆಸಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಎಂ.ಮಹೇಂದ್ರಗೌಡ ಅವರನ್ನು ಜವಾಬ್ದಾರಿಯಿಂದ ಮುಕ್ತಗೊಳಿಸಿರುವ ಕುರಿತು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ಆರ್. ರಮೇಶ್‌ ಅವರು ಪತ್ರದ ಮೂಲಕ ಮಾಹಿತಿ ರವಾನಿಸಿದ್ದಾರೆ.

‘ಮಹೇಶ್ ಜೋಶಿ ಅವರಿಗೆ ಪಕ್ಷ ಅಧಿಕೃತವಾಗಿ ಬೆಂಬಲ ನೀಡಿದೆ. ಅದಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿರುವುದಲ್ಲದೇ, ಬೇರೊಬ್ಬ ಅಭ್ಯರ್ಥಿ ಪರವಾಗಿ ಬೆಂಬಲ ಘೋಷಿಸಿ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಸಂದೇಶ ಹಾಕಿದ್ದೀರಿ’ ಎಂದು ತಿಳಿಸಿದ್ದಾರೆ.

‘ಇದಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಪದ್ಮನಾಭನಗರ ಘಟಕದ ಅಧ್ಯಕ್ಷ ರವಿಕುಮಾರ್ ಕೂಡ ದೂರು ಸಲ್ಲಿಸಿದ್ದಾರೆ. ಈ ಎಲ್ಲ ಕಾರಣಗಳಿಂದ ಕಾರ್ಯಕಾರಿಣಿ ಸದಸ್ಯ ಸ್ಥಾನದಿಂದ ತೆಗೆದು ಹಾಕಲಾಗಿದೆ. ಇನ್ನು ಮುಂದೆ ಪಕ್ಷದ ಯಾವುದೇ ಚಟುವಟಿಕೆಗಳಲ್ಲಿ ಅಧಿಕೃತವಾಗಿ ಭಾಗವಹಿಸಲು ಅವಕಾಶ ಇಲ್ಲ’ ಎಂದು ತಿಳಿಸಿದ್ದಾರೆ.

ಮಹೇಂದ್ರಗೌಡ ಅವರನ್ನು ಕಾರ್ಯಕಾರಿಣಿ ಸದಸ್ಯ ಸ್ಥಾನದಿಂದ ತೆಗೆದು ಹಾಕಿರುವ ಪತ್ರದ ಪ್ರತಿಯನ್ನು ಹಲವರು ಫೇಸ್‌ಬುಕ್‌ನಲ್ಲಿ ಟ್ಯಾಗ್‌ ಮಾಡಿ ಟೀಕಿಸಿದ್ದಾರೆ. ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪತ್ರವನ್ನು ಟ್ಯಾಗ್‌ ಮಾಡಿರುವ ಲೇಖಕ ಕೆ.ಪಿ.ಸುರೇಶ, ‘ಮಹೇಶ್ ಜೋಶಿಗೆ ಬಿಜೆಪಿ ಬೆಂಬಲ ನೀಡಿರುವ ಅಧಿಕೃತ ಮಾಹಿತಿ ಇದು’ ಎಂದು ವ್ಯಂಗ್ಯವಾಡಿದ್ದಾರೆ.

‘ಸಾಹಿತ್ಯ ಪರಿಷತ್ತು ಇನ್ನು ಮುಂದೆ ಬಿಜೆಪಿಯ ಅಂಗ ಸಂಸ್ಥೆಯಾಗಿ ಕೆಲಸ ಮಾಡಲಿದೆ. ರಾಜಕೀಯ ಪಕ್ಷವೊಂದು ರಾಜಕೀಯೇತರ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಬೆಂಬಲಿಸುವುದು ಅಸಹ್ಯ, ನೀಚತನ’ ಎಂದು ಫೇಸ್‌ಬುಕ್‌ನಲ್ಲಿ ಗಾಯತ್ರಿ ಎಚ್‌.ಎನ್. ಅವರು ಟೀಕಿಸಿದ್ದಾರೆ.

ಬಿಜೆಪಿ ಕಚೇರಿಗಳಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ಚಿತ್ರಗಳನ್ನೂ ಫೇಸ್‌ಬುಕ್‌ನಲ್ಲಿ ಹಲವರು ಟ್ಯಾಗ್ ಮಾಡಿ ಪ್ರಶ್ನೆಗಳನ್ನು ಎತ್ತಿದ್ದಾರೆ. ‌‌‌‌ಇನ್ನೊಂದೆಡೆ, ಮಹೇಶ್‌ ಜೋಶಿ ಅವರಿಗೆ ಫೇಸ್‌ಬುಕ್‌ನಲ್ಲಿ ಬಿಜೆಪಿ ಮುಖಂಡರು ಅಭಿನಂದನೆಗಳ ಮಹಾಪೂರ ಹರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು